ಶನಿವಾರ, ಸೆಪ್ಟೆಂಬರ್ 28, 2013

ಕೃಷ್ಣಾನಂದ ಕಾಮತ್

ಕೃಷ್ಣಾನಂದ ಕಾಮತ್

(ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಛಾಯಾಗ್ರಾಹಕರಾದ ಕೃಷ್ಣಾನಂದ ಕಾಮತ್ ಅವರ ಬಗ್ಗೆ ನನ್ನ ಮೆಚ್ಚಿನ ಲೇಖಕಿ ನೇಮಿಚಂದ್ರರು ಉದಯವಾಣಿಯಲ್ಲಿ ಬರೆದ ಆತ್ಮೀಯ ಲೇಖನವನ್ನು ಇಲ್ಲಿ ನಿಮ್ಮ ಮುಂದಿರಿಸಿದ್ದೇನೆ).

ಸೆಪ್ಟಂಬರ್‌ 29, 1934 ಕನ್ನಡದ ಅದ್ಭುತ ಪ್ರವಾಸ ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ ದಿನ. ಕಾಮತರು ನಮ್ಮನ್ನಗಲಿ ಹದಿಮೂರು  ವರ್ಷಗಳಾದರೂ, ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ನಗುವಿನ ಕಾಮತರು ಸದಾ ನನ್ನ ನೆನಪಿನ ಅಂಗಳದಲ್ಲಿ ನೂರು ಚಿತ್ತಾರ ಬಿಡಿಸುತ್ತಾರೆ. ಕಾಮತರಿಂದ ನಾನು ಕಲಿತದ್ದು ಬಹಳವಿತ್ತು, ಕಲಿಯಬೇಕಾದ್ದು ಅನಂತವಿತ್ತು.

ಕಾಮತರು ನನ್ನ ಬದುಕಿನ ಮೇಲೆ ಅವರು ತಿಳಿದದ್ದಕ್ಕಿಂತ ಹೆಚ್ಚು ಪ್ರಭಾವ ಬೀರಿದ್ದರು. ಅವರ ಉನ್ನತ ವ್ಯಕ್ತಿತ್ವ , ಪ್ರಶಂಸೆ-ಪ್ರಶಸ್ತಿಗಳ ತಹತಹವಾಗಲಿ, ಅತೃಪ್ತಿಯಾಗಲಿ ಇಲ್ಲದ ಶಾಂತ ಸ್ವಭಾವ, ಸರಳ ಬದುಕು, ಸದಾ ಮುಖದ ತುಂಬಾ ಹರಡಿದ ಮಗುವಿನ ನಗು, ಪುಟಿವ ಉತ್ಸಾಹ  ಇವೆಲ್ಲವೂ ನನ್ನನ್ನು ಪ್ರಭಾವಿಸಿದ್ದವು. ಅದೆಲ್ಲಿಯದು ಆ ನಿರಂತರ ಹುಮ್ಮಸ್ಸು, ದಣಿಯದ ದೇಹ-ಮನಸ್ಸು. ತಮ್ಮ ಬರವಣಿಗೆ, ಚಿತ್ರಗಳ ಅದ್ಭುತ ಜಗತ್ತನ್ನು ಎಲ್ಲಿಲ್ಲದ ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದ ಅವರ ಪರಿ, ನನಗೆ ತತ್ ಕ್ಷಣದ ಸ್ಫೂರ್ತಿ ಒದಗಿಸುತ್ತಿತ್ತು. "ಬೇಕು'ಗಳ ಅಗತ್ಯವೇ ಇಲ್ಲದೆ ಬದುಕಿದ ಅವರ ಜೀವನ ಕ್ರಮ ನನಗೆ ಅಪ್ಯಾಯಮಾನವಾಗಿತ್ತು, ಕಾರಣ ಅವೆಲ್ಲವೂ ನನ್ನ ಆದರ್ಶವಾಗಿದ್ದವು- ನಾನು ತಲುಪಲು ಬಯಸಿದ, ತಲುಪುವ ಹಾದಿಯಲ್ಲಿ ಬಲು ದೂರ ನಿಂತ ಆದರ್ಶಗಳು. ಹಣ, ಅಧಿಕಾರ, ಆರಾಮ, ಐಷಾರಾಮ ಯಾವುದನ್ನೂ ಬಯಸದೆ, ಸಂತಸದಿಂದ ಬದುಕಿ ಬಾಳಿದ ವ್ಯಕ್ತಿ  ಕಾಮತರು.

ಕಾಮತರು ಒಂದು ವಿಧದಲ್ಲಿ ನನಗೆ ಮಾದರಿಯಾಗಿದ್ದರು. "ಅತ್ಯಂತ ಶ್ರಮ ಮತ್ತು ಉತ್ಕಟತೆಯಿಂದ ಬರೆದ ಪುಸ್ತಕ ಯಾರ ಗಮನಕ್ಕೂ ಬರಲಿಲ್ಲ' ಎಂದು ಒಮ್ಮೊಮ್ಮೆ ಮನಸ್ಸಿನ ಮೂಲೆಯಲ್ಲೆಲ್ಲೋ ಇರುಸು ಮುರುಸು ಉಂಟಾದಾಗ, ತಟ್ಟನೆ ಕಾಮತರು ನೆನಪಾಗುತ್ತಿದ್ದರು. "ತಮ್ಮ ಅಗಾಧ ಪರಿಶ್ರಮ, ತಿರುಗಾಟ ಮತ್ತು ಹಣ ತೊಡಗಿಸಿ ಬರೆದ ಪುಸ್ತಕಗಳಿಗೆ ಸಿಗಬೇಕಾದ ಪುರಸ್ಕಾರ ಸಿಗಲಿಲ್ಲ, ಹಾಕಿದ ಹಣವೂ ಹಿಂತಿರುಗಲಿಲ್ಲ' ಎಂದು ಕಾಮತರು ವಿಷಾದಿಸಿದ್ದನ್ನು ನಾನು ಎಂದೂ ಕಂಡಿರಲಿಲ್ಲ. ಅವರು ತಮ್ಮ ಬರೆಯುವ ಮತ್ತು ಚಿತ್ರಗಳನ್ನು ತೆಗೆಯುವ ಆ ಕ್ರಿಯೆಯಲ್ಲಿ ಎಷ್ಟು ಹುಮ್ಮಸ್ಸಿನಿಂದ ಉಲ್ಲಾಸದಿಂದ ತೊಡಗಿದ್ದರೆಂದರೆ, ಅದರಾಚಿನ ಮತ್ತಾವ ಪ್ರತಿಫ‌ಲದ ನಿರೀಕ್ಷೆ ಇಲ್ಲದಷ್ಟು ಅವರು ತಮ್ಮ ಕೆಲಸದಲ್ಲಿ ತೃಪ್ತರಿದ್ದರು.

ಕಾಮತರು ಕಂಡ ಜಗತ್ತನ್ನು ನಾವು ಯಾರೂ ಕಂಡಿಲ್ಲ ಎಂದು ನನಗನಿಸುತ್ತಿತ್ತು. ನಾನು ದೇಶ ವಿದೇಶಗಳನ್ನು ಸುತ್ತಿ ಬಂದಿದ್ದೆ, ಆದರೆ ಕಾಮತರು ತಮ್ಮ ಬಾಲ್ಕನಿಯಲ್ಲಿ ಕುಳಿತು ನೋಡಿದಷ್ಟು ಜಗತ್ತನ್ನು ನಾನು ನೋಡಿರಲಿಲ್ಲ. ಕಾಮತರು ತಾವು ತೆಗೆದ ಛಾಯಾಚಿತ್ರಗಳನ್ನು ತೆರೆದು ತೋರಿಸುವಾಗ, ನಾನು ಮಲ್ಲೇಶ್ವರಂ ಕೂಡಾ ಸರಿಯಾಗಿ ನೋಡಿಲ್ಲ, ಮುವತ್ತು ವರ್ಷಗಳಿಂದ ನೆಲೆಸಿರುವ ಬೆಂಗಳೂರನ್ನು ಕಂಡೇ ಇಲ್ಲ ಅನಿಸುತ್ತಿತ್ತು. ನಾನು ನೋಡದ ಅದೆಷ್ಟು ದೊಡ್ಡ ಜಗತ್ತಿತ್ತು, ನನ್ನ ಸುತ್ತ-ಮುತ್ತ! ನಮ್ಮ ಕಣ್ಣಿಗೆ ಕಾಣದ ಅದ್ಭುತಗಳು ಕಾಮತರಿಗೆ, ಅವರ ಕ್ಯಾಮರಾ ಕಣ್ಣಿಗೆ ಕಾಣುತ್ತಿತ್ತು. ನಾನು ಕಾಮತರಿಂದ ಕಲಿತ ಮತ್ತೂಂದು ವಿಷಯವೆಂದರೆ - ಅವಲೋಕನ.

ನನಗೆ ನೆನಪಿದೆ, ಇಸವಿ 2002, ಜನವರಿ ತಿಂಗಳ ಆ ಹಿಂದಿನ ದಿನ ಕಾಮತರ ಮನೆಗೆ ಹೋಗಿದ್ದೆ. ಅವರು, ಮನೆಯಿಲ್ಲದೆ ಫುಟ್‌ಪಾತಿನಲ್ಲಿ ವಾಸಿಸುವ ಬೀದಿ ಬದಿಯ ಜನರ ಇಡೀ ಬದುಕನ್ನು ನೂರಾರು ಚಿತ್ರಗಳಲ್ಲಿ ಹಿಡಿದಿಟ್ಟಿದ್ದರು, ನನಗೆ ಅಂದು ಸಮಾರು ಐವತ್ತು ಚಿತ್ರಗಳನ್ನಾದರೂ ತೋರಿಸಿದ್ದರು. ಮರುದಿನ ಪ್ರತಿ ಮುಂಜಾವಿನಂತೆ, ರಾತ್ರಿಯ ಅರೆನಿದ್ರೆಯ ನಂತರ, ಬೆಳಗ್ಗೆ ಆರು ಗಂಟೆಗೆ ಕಾರ್ಖಾನೆಗೆ ಹೊರಟಂತೆ, "ಇಂದೆಂಥಾ ಕೆಲಸ ನನ್ನದು, ಜಗತ್ತೆಲ್ಲ ಮಲಗಿದ್ದಾಗ ಎದ್ದು ಹೊರಡುವುದು' ಎಂದು ನನ್ನ ಬಗ್ಗೆ ನನಗೇ ಸ್ವಯಂಮರುಕ ಹುಟ್ಟಿ ಮನಸ್ಸಿನಲ್ಲಿ ಬೇಸರ, ಖಿನ್ನತೆ ಮೂಡಿತ್ತು. ಎದ್ದಂತೂ ಕಛೇರಿಗೆ ಹೋಗಲೇಬೇಕಿತ್ತು, ಒಂದು ಗಂಟೆ ಕಾರಲ್ಲಿ ನಿದ್ದೆ ಮಾಡುವ ಬದಲು, ಕಾಮತರಂತೆ ಜಗತ್ತು ನೋಡೋಣ ಎಂದು ಆ ದಿನ ಕಣ್ಣು ತೆರೆದು, ಹೊರಗೆ ಕಣ್ಣಿಟ್ಟು ಕುಳಿತೆ. ದಿನವೂ ಬೆಳಗ್ಗೆ ಹಾದ ಈ ಹಾದಿಯಲ್ಲಿ ಬದುಕು ಬಿಡಿಸಿದ ಚಿತ್ರಗಳು, ದೃಶ್ಯಗಳು ಕಾಣತೊಡಗಿದವು. ಬೆಳಗಿನ ಆ ಚಳಿಯಲ್ಲಿ ಒರಟು ಶಾಲು ಹೊದ್ದು ಸೀಮೆಎಣ್ಣೆಗೆ ಡಬ್ಬಿ ಇಟ್ಟು ಕಾದು ಕುಳಿತ ಜನ ಕಂಡರು. ಮೈಸೂರು ರಸ್ತೆಯಲ್ಲಿ ಮುಂಜಾವಿನ ಚಳಿ ಗತ್ತಲಲ್ಲಿ, ರಾತ್ರಿ ಇಡೀ ರಸ್ತೆಗೆ ಡಾಂಬರು ಹಾಕುವ ಕೆಲಸ ಮಾಡುತ್ತಿದ್ದ ಮುಸುಕು ವ್ಯಕ್ತಿಗಳು ಕಂಡಿದ್ದರು.

"ಮೇಲು ಸೇತುವೆ' ದಾಟಿದಂತೆ, ರಸ್ತೆ ಬದಿಯಲ್ಲಿ ಕೇಬಲ್‌ಗ‌ಳ ತುಂಡನ್ನೇ ಕಮಾನಾಗಿ ಬಾಗಿಸಿ, ಪ್ಲಾಸ್ಟಿಕ್‌ ಹೊದಿಸಿ ಕಟ್ಟಿದ ಡೇರೆಯೊಳಗಿಂದ, ಚಳಿಯ ಮುಂಜಾನೆ ಅಳುವ ಕಂದನ ಕಿರುಕಂಠ ಕೇಳಿಸಿತ್ತು.

ಎಷ್ಟೊಂದು ಕಂಡಿದ್ದೆ, ಕಂಡಿಲ್ಲದ್ದು. ನನ್ನೊಳಗಿನ ಖಿನ್ನತೆ ಮರೆಯಾಗಿತ್ತು. ಏನೆಲ್ಲವನ್ನು ಬದುಕು ಕೊಟ್ಟಿರುವಾಗ, ಕಳೆದುಕೊಂಡ ಮುಂಜಾನೆಯ ಸಕ್ಕರೆ ನಿದ್ರೆಗಾಗಿ ದೂರುವುದು ಅಸಂಬದ್ಧವಾಗಿ ಕಂಡಿತ್ತು. ಕಾಮತರಿಂದ ನಾನು ಜಗತ್ತು ವೀಕ್ಷಿಸುವ ಬಗೆಯನ್ನು ಕಲಿತೆ. ಬದುಕನ್ನು ಸ್ವೀಕರಿಸುವ ಬಗೆಯನ್ನೂ ಅರಿತೆ. ಇವೆಲ್ಲವನ್ನೂ ನಾನು ಪ್ರಜ್ಞಾಪೂರ್ವಕವಾಗಿ ಕಲಿತದ್ದಲ್ಲ, ಅವರು ಕಲಿಸಿದ್ದಲ್ಲ. ಆದರೆ ಅವರೊಡನೆ ಗಂಟೆ ಗಂಟೆಗಳು ಹರಟಿ ಹೊರಟಾಗ, "ರಿಚಾರ್ಜ್‌' ಆದ ಅನುಭವ. ಅವರ ಉತ್ಸಾಹ, ಉಲ್ಲಾಸ, ತಮ್ಮ ಆಸಕ್ತಿಗಳ ಬೆನ್ಹತ್ತಿ ಹೋಗುವ ಆ ಹುಮ್ಮಸ್ಸು, ಸಾಂಕ್ರಾಮಿಕವಾಗಿ ನನ್ನನ್ನು ಆವರಿಸುತ್ತಿತ್ತು.

ಕಾಮತರಲ್ಲಿ ಇದ್ದ ಆಸಕ್ತಿ ಹವ್ಯಾಸಗಳ ಲೆಕ್ಕ ನನಗೆ ಸಿಕ್ಕಿರಲಿಲ್ಲ. ಅವರ ಮನೆಯ ಕುರ್ಚಿಯ ದಿಂಬುಗಳೆಲ್ಲ, ಅವರ ಬಣ್ಣದ ಚಿತ್ರಗಳ ಸ್ಪರ್ಶ ಪಡೆದಿದ್ದವು.

ಪತ್ನಿ ಡಾ. ಜ್ಯೋತ್ಸ್ನಾ ಸೀರೆಯ ಅಂಚನ್ನು, ಸೆರಗನ್ನು ಅಲಂಕರಿಸಿತ್ತು ಅವರ ಕುಂಚದ ಕಲೆ. ಛಾಯಾಚಿತ್ರಗಳನ್ನಂತೂ ಅವರು ರೀಲುಗಟ್ಟಲೆ ತೆಗೆಯುತ್ತಿದ್ದರು. ಅವನ್ನು ಪ್ರಕಟಿಸಿ ಹಣ ಮಾಡುವ ಉದ್ದೇಶದಿಂದ ಅಲ್ಲ, ಅವರು ಬದುಕನ್ನು "ಹಿಡಿಯ'ಹೊರಟವರು. ರಸ್ತೆ ಬದಿಯ ಕಾರ್ಮಿಕರು, ಮನೆಯಿಲ್ಲದ ನಿರ್ಗತಿಕರು, ಮರಕ್ಕೆ ನೇತು ಹಾಕಿದ್ದ ಹಳೆಯ ಸೀರೆಯ ತೊಟ್ಟಿಲಲ್ಲಿ ಕಿಲಕಿಲ ನಗುವ ಮಗು, ಇಟ್ಟಿಗೆಯ ಭಾರ ತಲೆಯ ಮೇಲೆ ಹೊತ್ತಂತೇ ಇಷ್ಟಗಲ ಮುಗುಳ್ನಕ್ಕು ನೋಡಿದ ಹೆಂಗಳೆಯರು - ತಮ್ಮ ರೀಲು ರೀಲುಗಳಲ್ಲಿ ಬದುಕನ್ನು ಹಿಡಿದವರು. ಅವರ ಕಣ್ಣ ಹೊಳಪು, ಮುಖದ ಭಾವ ಒಂದೊಂದನ್ನೂ ವಿವರಿಸಿ ತೋರಿಸುತ್ತಿದ್ದರು. ಬದುಕನ್ನು ಸ್ವೀಕರಿಸಿದ ಮುಖಗಳು, ಬದುಕುಳಿದ ಜೀವಂತಿಕೆ -ಎಲ್ಲವೂ ಕಾಮತರ ಕ್ಯಾಮರಾದಲ್ಲಿ ದಾಖಲು.

ಅದೆಷ್ಟು ರೇಖಾ ಚಿತ್ರಗಳನ್ನು ಕಾಮತರು ಬಿಡಿಸಿದ್ದರು. ಅದೆಷ್ಟು ಊರು ಸುತ್ತಿ ಬಂದಿದ್ದರು. ತಿರುಗಾಟದ ಚಟದವರು. ಅವರ ಬರವಣಿಗೆ ಕೂಡಾ ಎಷ್ಟು ಬಗೆಯದು. ಕೀಟಗಳ ವಿಷಯವೆ, ಸರೀಸೃಪಗಳೆ, ಪ್ರಾಣಿಗಳೆ, ಸಸ್ಯಗಳೆ, ಚಿತ್ರಕಲೆಯೆ, ಕಾವಿಕಲೆಯೆ, ಪರಿಸರವೆ, ಪ್ರವಾಸವೆ, ಆದಿವಾಸಿಗಳ ಅಧ್ಯಯನವೆ -ಎಲ್ಲವೂ ಅವರ ಬರಹದ ವ್ಯಾಪ್ತಿಗೆ ಬರುತ್ತಿದ್ದವು. ಒಬ್ಬ ವ್ಯಕ್ತಿಗೆ ಇಷ್ಟು ಬಗೆಯ ಆಸಕ್ತಿಗಳು ಇರಲು ಸಾಧ್ಯ ಎನ್ನುವುದೇ ನನಗೆ ಅಚ್ಚರಿ ಆಗುತ್ತಿತ್ತು. ಅವು ಕೇವಲ ಅವರ ಹವ್ಯಾಸಗಳಾಗಿರಲಿಲ್ಲ, ಉತ್ಕಟ ಅಭಿರುಚಿಯಾಗಿ ಬದುಕಿನ ಭಾಗವಾಗಿದ್ದವು. ವಿಜ್ಞಾನ, ಕಲೆ ಮತ್ತು ಸಾಹಿತ್ಯ ಮೂರಕ್ಕೂ ಮನಸೋತ ನನ್ನ ಮನಸ್ಸು ಕಾಮತರನ್ನು ಈ ಕಾರಣಕ್ಕಾಗಿ ತುಂಬಾ ಮೆಚ್ಚಿಕೊಂಡಿತ್ತು. ಎಲ್ಲವನ್ನೂ ನಿಭಾಯಿಸಬಲ್ಲ, ಮೂರೂ ರಂಗಗಳಲ್ಲಿ ದುಡಿಯಬಲ್ಲ ಅವರ ತಾಕತ್ತು ನನಗೆ ಮೆಚ್ಚುಗೆಯಾಗುತ್ತಿತ್ತು.

ಅವರಿಗೆ ಎಲ್ಲಕ್ಕೂ ಸಮಯ ಹೇಗೆ ಸಿಗುತ್ತಿತ್ತು ಎಂದು ಅನೇಕರಿಗೆ ಅಚ್ಚರಿಯಾಗಬಹುದು. ಅವರು ಒಮ್ಮೆ ಹೇಳಿದ್ದರು - "ನಿಮಗೆ ಇದಕ್ಕೆಲ್ಲ ಸಮಯ ಹೇಗೆ ಸಿಗುತ್ತೆ ಎಂದು ಜನ ಕೇಳುತ್ತಾರೆ. ನಾನು ಹೇಳುತ್ತೇನೆ, ನಮ್ಮ ಮನೆಯಲ್ಲಿ ಟಿವಿ ಇಲ್ಲ, ಅದಕ್ಕೆ ಅಂತ.' ದಿಟವಾದ ಮಾತಾಗಿತ್ತು. ಅವರ ಮನೆಯಲ್ಲಿ ಟಿವಿ ಇರಲಿಲ್ಲ, ಫ್ರಿಜ್‌ ಇರಲಿಲ್ಲ, ಕಂಪ್ಯೂಟರ್‌ ಆಗಲಿ, ಇಂಟರ್ನೆಟ್‌ ಆಗಲಿ ಇರಲಿಲ್ಲ. ನಾವು ಅನಿವಾರ್ಯ ಅಂದುಕೊಳ್ಳುವುದಾವುದೂ ಕಾಮತರಿಗೆ ಅಗತ್ಯವಾಗಿ ಕಂಡೇ ಇರಲಿಲ್ಲ.

ಹಣವಿದ್ದೂ, ಕೈಗೆಟಕುವಂತಿದ್ದೂ, ಆರಾಮ, ಐಷಾರಾಮದ ಯಾವ ವಸ್ತುವಿನ ಮೋಹಕ್ಕೆ ಬೀಳದೆ, ಚಟವಿಲ್ಲದೆ ಬದುಕಿದ ವ್ಯಕ್ತಿ -ಕಾಮತ್‌. ಅವರಿಗಿದ್ದ ಚಟ ಒಂದೇ ಒಂದು - ಫೋಟೋ ತೆಗೆಯುವ ಚಟ. ಜನವರಿಯಲ್ಲಿ ಅವರ ಮನೆಗೆ ಹೋದಾಗ, ಕಛೇರಿಯಿಂದ ಸುಸ್ತಾಗಿ ಎಣ್ಣೆ ಸುರಿವ ಮುಖದಲ್ಲಿ, ಕೆದರಿದ ತಲೆಯಲ್ಲಿ ಅವರ ಮನೆಗೆ ತಲುಪಿ ಯಾವುದರ ಪರಿವೆ ಇಲ್ಲದೆ ಹರಟುತ್ತಿದ್ದರೆ, ಕಾಮತರು ಒಂದೇ ಸಮನೆ ಕ್ಯಾಮರಾ ಹಿಡಿದು ನನ್ನ ಮುಖವನ್ನು "ಕ್ಲಿಕ್‌' ಮಾಡತೊಡಗಿದರು. "ಬೇಡಿ ಸರ್‌, ಬೆವರು ಸುರಿಯೋ ಮುಖದ ಫೋಟೋ ಹೊಡೆಯಬೇಡಿ' ಎಂದರೂ ಕೇಳದೆ ಇಡೀ ರೀಲು ಮುಗಿಸಿದ್ದರು. ನಂತರ ಅವರೇ ಹೇಳಿಕೊಂಡು ನಕ್ಕಿದ್ದರು -ಯಾರೋ ಹಿತೈಷಿಗಳು ಒಮ್ಮೆ ಕೇಳಿದ್ದರಂತೆ, "ಅಲ್ಲ ಕಾಸು ಬರಲ್ಲ ಏನಿಲ್ಲ, ಯಾಕಿಷ್ಟು ಊರು ಅಲೀತೀರಾ, ರೀಲು ಖರ್ಚು ಮಾಡ್ತೀರಾ?' ಅಂತ. ಅದಕ್ಕೆ ಕಾಮತರು ಕೊಟ್ಟ ಉತ್ತರ "ಕೆಲವರಿಗೆ ಕುಡಿಯುವ ಚಟ, ಕೆಲವರಿಗೆ ಇಸ್ಪೀಟು ಚಟ. ನನಗೆ ನೋಡಿ ಈ ಫೋಟೋ ಹೊಡೆಯುವ ಚಟ'. ಅದು ನಿಜಕ್ಕೂ ಚಟವಾಗಿಯೇ ಇತ್ತು. ಕಾಮತರು ತೆಗೆದ ಕೆದರಿದ ತಲೆಯ ಎಣ್ಣೆ ಸುರಿದ ಮುಖದ ನನ್ನ ಛಾಯಾಚಿತ್ರಗಳು ನನಗೆ ಅತಿಪ್ರಿಯವಾಗಿವೆ, ಕಾರಣ ಅವು ನನ್ನ ಮುಖಭಾವವನ್ನು, ಜ್ಯೋತ್ಸ್ನಾ ಮತ್ತು ಕಾಮತರೊಡನೆ ಕಳೆದ ಆ ಸಂಜೆಗಳ ಗೆಲುವನ್ನು ಸದಾ ಕಾಲಕ್ಕೂ ಹಿಡಿದು ನಿಲ್ಲಿಸಿವೆ.

ಕಾಮತರಲ್ಲಿದ್ದದ್ದು ತುಂಬು ಹಾಸ್ಯ ಪ್ರಜ್ಞೆ, ತಮ್ಮ ಬಗ್ಗೆಯೇ ಹೇಳಿಕೊಂಡು ಭಿಡೆಯಿಲ್ಲದೆ ನಗಬಲ್ಲ ವ್ಯಕ್ತಿ ಅವರು. ಕಾಮತರು ಸದಾ ಕೈಚೀಲ ಹಿಡಿದು ಹೊರಡುತ್ತಿದ್ದರು. ಅವರಿಗೆ ಇಡೀ ಮಲ್ಲೇಶ್ವರವೇ ಪರಿಚಯವಿತ್ತು. ಒಂದು ಅಂಗಡಿಯಲ್ಲಿ ಸೀಳಿದ ತೆಂಗಿನ ಕಾಯಿ ತೆಗೆದುಕೊಳ್ಳುವ ಪರಿಪಾಠ ಅವರದು. ದಿನಾ ಬಂದು "ಸೀಳು ಕಾಯಿ' ತೆಗೆದುಕೊಂಡು ಹೋಗುವ ಇವರ ಬಗ್ಗೆ ಆತನಿಗೆ ಹೆಚ್ಚೇನೂ ತಿಳಿದಿರಲಿಲ್ಲ. ಆದರೆ ಒಂದು ಮುಂಜಾನೆ ಟಿವಿಯಲ್ಲಿ ಕಾಮತರ ಸಂದರ್ಶನ, ಅವರ ಬಗ್ಗೆ ದೀರ್ಘ‌ ವಿವರ ಪ್ರಸಾರವಾಗಿತ್ತು. ಮರುದಿನ ಅಂಗಡಿಗೆ ಹೋದರೆ, ಆತನ ಉತ್ಸಾಹವೇನು, "ಅರೆ ಸೀಳ್‌ ಕಾಯಿ ಸ್ವಾಮಿಗಳು ಟಿವಿನಲ್ಲಿ ಬಂದಿದ್ದರು', ಸುತ್ತಲಿನ ಜನಕ್ಕೆಲ್ಲ ಪರಿಚಯ ಮಾಡಿಕೊಟ್ಟ! ಹೇಳಿಕೊಂಡು ಕಾಮತರು ಬಿದ್ದು ಬಿದ್ದು ನಕ್ಕರು.

ನಾನು ಕಾಮತರನ್ನು ಆಗಾಗ್ಗೆ ಕೇಳುವ ಮಾತಿತ್ತು "ಅಮೆರಿಕಗೆ ಹೋದವರು ಹಿಂತಿರುಗಿ ಬರುವುದು ಅಪರೂಪ. ನಾಲ್ಕು ವರ್ಷ ನ್ಯೂಯಾರ್ಕ್‌ ನಗರದಲ್ಲಿದ್ದವರು ನೀವು, ಹಿಂತಿರುಗಿ ಭಾರತಕ್ಕೆ ಬಂದ ಬಗ್ಗೆ ನಿಮಗೆ ವಿಷಾದವಿಲ್ಲವೆ?' ಎಂದು. ಅಮೆರಿಕದಲ್ಲಿ ನೆಲೆಸುವುದಿರಲಿ, ಮತ್ತೂಮ್ಮೆ ಭೇಟಿ ಕೊಡಲೂ ಅವರು ಹೋಗಿರಲಿಲ್ಲ. "ವಿದ್ಯಾರ್ಥಿ ದೆಸೆಯಲ್ಲಿ, ಕಿಸೆಯಲ್ಲಿ ಕಾಸಿಲ್ಲದೆ ಅಷ್ಟೆಲ್ಲ ಕಷ್ಟಪಟ್ಟು ಅಮೆರಿಕ ಸುತ್ತಿ ಅಲೆದು ಬಂದಿದ್ದೀರಿ. ಹಣ ಅನುಕೂಲ ಎಲ್ಲಾ ಇದ್ದು, ಮಗನೂ ಅಲ್ಲೇ ನೆಲೆಸಿರುವಾಗ ಒಂದೆರಡು ತಿಂಗಳಿಗೆ ಸುತ್ತಲಾದರೂ ಯಾಕೆ ಹೋಗಿಲ್ಲ?' ಕೇಳಿದ್ದೆ. ಅದಕ್ಕೆ ಅವರ ಉತ್ತರ ಸದಾ ಒಂದೇ ಇರುತ್ತಿತ್ತು. "ಏನಿದೆ ಅಮೆರಿಕದಲ್ಲಿ? ಇಲ್ಲಿ ಬದುಕು ಇದೆ. ಅಲ್ಲಿ ಆಸೆ ಅತಿಯಾಸೆ ಕೊನೆಯೇ ಇಲ್ಲದ ಆಕಾಂಕ್ಷೆ, ಬೇಕು ಬೇಕುಗಳ ಜಗತ್ತಿದೆ' ಎನ್ನುತ್ತಿದ್ದರು. ಅದು ನಿಜವಿತ್ತು. "ನನಗೆ ಬೇಕು, ಇನ್ನಷ್ಟು, ಮತ್ತಷ್ಟು' ಮನುಷ್ಯನ ದುರಾಸೆ, ಕೊಳ್ಳುಬಾಕತನದ ಅಪಾಯಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದೆವು. "ನಮ್ಮ ಅಪ್ಪಅಜ್ಜರಿಗೆ ವರ್ಷಕ್ಕೆ ಒಂದೆರಡು ಜೋಡಿ ಧೋತರ ಅಂಗಿ ಬೇಕಿದ್ದರೆ, ಮೊಮ್ಮಗನಿಗೆ ಕೊನೆಯ ಪಕ್ಷ ಇಪ್ಪತ್ತು ಜೋಡಿ ಬಟ್ಟೆಗಳಾದರೂ ಬೇಕೇ ಬೇಕು' ಎನ್ನುತ್ತಿದ್ದ ಕಾಮತರು "ಬೇಕು'ಗಳನ್ನೆಲ್ಲ ಜಯಿಸಿದ ವ್ಯಕ್ತಿ. ಅವರಿಗೆ ಯಾವುದೂ "ಬೇಕು' ಅನಿಸಿರಲಿಲ್ಲ, ಅಗತ್ಯವೆನಿಸಿರಲಿಲ್ಲ. ಏನಿಲ್ಲದೆಯೂ ಖುಷಿಯಾಗಿ ಬದುಕಬಲ್ಲ ವ್ಯಕ್ತಿ, ತನ್ನೊಳಗೆ, ತನ್ನೊಡನೆ ಸಂತಸವನ್ನು, ನಗುವನ್ನೂ ಸದಾ ಕೊಂಡೊಯ್ದ ವ್ಯಕ್ತಿ.

"ಜಗತ್ತಿನಲ್ಲಿ ಅತಿ ಅತೃಪ್ತ ಜೀವಿಯೆಂದರೆ ಮಾನವನೊಬ್ಬನೇ. ಆತನ ಸಕಲ ಸಮಸ್ಯೆಗಳು ತನ್ನ ಹಾಗೂ ತನ್ನ ಪೀಳಿಗೆಯ ಸುಖಲೋಲುಪತೆಯ ಮೇಲೆ ಆಧರಿಸಿದ್ದು' ಎಂದು ಹೇಳುತ್ತಿದ್ದ ಕಾಮತರು ನಮ್ಮ ಪರಿಸರದ ಬಗ್ಗೆ ಅತ್ಯಂತ ಕಾಳಜಿ ವಹಿಸಿದವರು. ಅವರು ವೇದಿಕೆಯ ಮೇಲೆ ಮೆರೆದ ಪರಿಸರವಾದಿಯಲ್ಲ, ಆದರೆ ನಿಜ ಬದುಕಿನಲ್ಲಿ ಪರಿಸರ ಪ್ರೇಮಿಯಾಗಿ ಬದುಕಿದವರು. ಸದಾ ಕೈಯಲ್ಲಿ ಒಂದು ಬಟ್ಟೆಯ ಕೈಚೀಲ ಹಿಡಿದು ಮನೆಯಿಂದ ಹೊರಡುತ್ತಿದ್ದ ಕಾಮತರು ಎಂದೂ ಪ್ಲಾಸ್ಟಿಕ್‌ ಚೀಲವನ್ನು ಹೊತ್ತು ತಂದವರಲ್ಲ. "ಬಳಸಿದಷ್ಟು ಅರಣ್ಯ ಬೆಳೆಸಬೇಕು, ಮಳೆ ಬೀಳುವಷ್ಟೇ ನೀರು ಬಳಸಬೇಕು. ಲಾಭಕ್ಕಾಗಿ ಸಹಜೀವಿಗಳ ಪಾಲನ್ನು ಕಸಿದುಕೊಳ್ಳಲೇ ಬಾರದು' ಎಂದು ನಂಬಿದ ಕಾಮತರದು ಮಿತ ಬಳಕೆ, ಮಿತ ಬದುಕು. ಸರಳ ಜೀವನ ಮತ್ತು ಉನ್ನತ ವಿಚಾರಗಳಲ್ಲಿ ಬದುಕಿದವರು.

ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ನಾಲ್ಕು ವರ್ಷ ಕಳೆದು, ಅಲ್ಲಿಯ ಅವಕಾಶಗಳನ್ನು ತೊರೆದು, ಅವರ ಪ್ರತಿಭೆಯನ್ನಾಗಲಿ, ಪಾಂಡಿತ್ಯವನ್ನಾಗಲಿ ಗುರುತಿಸದ, ಅವರ ಓದು-ವಿದ್ಯಾಭ್ಯಾಸಕ್ಕೆ ಸರಿಯಾದ ಒಂದು ಕೆಲಸ ಕೂಡಾ ನೀಡದ ಭಾರತವನ್ನು ಆರಿಸಿ ಹಿಂತಿರುಗಿ ಬಂದು, ಏನೊಂದೂ ಕಹಿ ಇಲ್ಲದೆ ಬದುಕಿದವರು ಕಾಮತರು.

ಕಾಮತರಿಗೆ ಭಾರತ ತಮ್ಮ ಪ್ರತಿಭೆಯನ್ನು ಗುರುತಿಸಲಿಲ್ಲ ಎಂಬ ವ್ಯಥೆ ಇರಲಿಲ್ಲ. ಹೇರಳವಾಗಿ ಹಣ ಗಳಿಕೆಯ ದೇಶವನ್ನು ಬಿಟ್ಟು ಬಂದ ಬಗ್ಗೆ ವಿಷಾದವಿರಲಿಲ್ಲ. ಪತ್ನಿ ತಮ್ಮ ಉದ್ಯೋಗದಲ್ಲಿ ತುತ್ತ ತುದಿಗೇರಿದ ಬಗ್ಗೆ ಅಸೂಯೆ ಇರಲಿಲ್ಲ. ಅವರ ಬದುಕು ನಿಜಕ್ಕೂ ನನಗೆ ಆದರ್ಶವಾಗಿತ್ತು.

ಕಾಮತರು ಹೆಜ್ಜೆ ಮೂಡದ ಹಾದಿಯಲ್ಲಿ ನಡೆದವರು. ಭಾರತದ ಜನಸಾಮಾನ್ಯರ ಕತೆಯನ್ನು ಹೇಳಿದವರು. ಇದುವರೆಗೂ ಜಗತ್ತಿಗೆ ತಿಳಿದಿರದ ಭಾರತದ ವೈವಿಧ್ಯವನ್ನು ಇವರಷ್ಟು ಸೊಗಸಾಗಿ ರೇಖಾ ಚಿತ್ರಗಳಲ್ಲಿ, ಛಾಯಾಚಿತ್ರಗಳಲ್ಲಿ, ನುಡಿಚಿತ್ರಗಳಲ್ಲಿ ಮೂಡಿಸಿದ ಮತ್ತೂಬ್ಬ ಭಾರತೀಯ ನನಗೆ ಕಂಡಿಲ್ಲ. ಕಾಮತರು ಶಾಶ್ವತವಾಗಿ ನಮ್ಮ ಕೈಗೆ ಸಿಗುವಂತೆ ಮಾಡಿರುವುದು ಅವರ ಮಗ ವಿಕಾಸ್‌ ಕಾಮತ್‌. ಕಾಮತರ ಚಿತ್ರಗಳ, ಫೋಟೋಗಳ, ಲೇಖನಗಳ ಬೃಹತ್‌ ಸಂಕಲನವನ್ನು ವಿಕಾಸ್‌ ಅವರು "ಕಾಮತ್‌ ಪಾಟ್‌ಪುರಿ'(www.kamat.com) ವೈಬ್‌ಸೈಟ್‌ನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಸಂಶೋಧನೆ ಮತ್ತು ಅಧ್ಯಯನ ಮಾಡುವವರಿಗೆ "ಕಾಮತ್‌ ಪಾಟ್‌ಪುರಿ' ಸಂಭ್ರಮದ ಹುಡುಕುತಾಣವಾಗಿದೆ. ಸಿಹಿ ಮನಸ್ಸಿನ ನಗು ಮುಖದ ಅದ್ಭುತ ಪ್ರತಿಭೆಯ ಕಾಮತರು ಸದಾ ನನ್ನ ನೆನಪಿನಲ್ಲಿ ಹಸಿರಾಗಿ ಉಳಿದಿದ್ದಾರೆ.

---

(ಕೃಷ್ಣಾನಂದ ಕಾಮತರ ಕೆಲವು ಕೃತಿಗಳು: ಪ್ರವಾಸಕಥನ- ನಾನೂ ಅಮೆರಿಕೆಗೆ ಹೋಗಿದ್ದೆ, ವಂಗ ದರ್ಶನ, ನಾ ರಾಜಾಸ್ಥಾನದಲ್ಲಿ, ಬಸ್ತರ ಪ್ರವಾಸ (ಗಿರಿಜನರ ಪರಿಚಯ) ಮಧ್ಯಪ್ರದೇಶದ ಮಡಿಲಲ್ಲಿ, ಕಾಲರಂಗ, ಪ್ರೇಯಸಿಗೆ ಪತ್ರಗಳು, ಪ್ರವಾಸ ಪ್ರಬಂಧ, ಮರು ಪಯಣ. ಕಾದಂಬರಿ-ಭಗ್ನಸ್ವಪ್ನ. ಪರಿಸರ ವಿಜ್ಞಾನ ಕೃತಿಗಳು-ಪ್ರಾಣಿ ಪರಿಸರ, ಪಶುಪಕ್ಷಿ ಪ್ರಪಂಚ, ಕೀಟ ಜಗತ್ತು, ಸಸ್ಯಪ್ರಪಂಚ, ಸಸ್ಯ ಪರಿಸರ, ಇರುವೆಯ ಇರವು, ಕಾಗೆಯ ಕಾಯಕ, ಸರ್ಪ ಸಂಕುಲ. ಕಲೆ- ಕಾವಿಕಲೆ, ಕೊಂಕಣ್ಯಾಲಿ ಕಾವಿಕಲಾ (ಕೊಂಕಣಿ ಭಾಷೆ) ಇತ್ಯಾದಿ)

ಕೃಷ್ಣಾನಂದ ಕಾಮತರು ಫೆಬ್ರುವರಿ 20, 2002ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ. 

ಲೇಖನ ಕೃಪೆ: ನೇಮಿಚಂದ್ರರ ಲೇಖನ ಉದಯವಾಣಿಯಲ್ಲಿ
ಫೋಟೋ ಕೃಪೆ: www.kamat.com

Tag: Krishnand Kamat

ಕಾಮೆಂಟ್‌ಗಳಿಲ್ಲ: