ಭಾನುವಾರ, ಸೆಪ್ಟೆಂಬರ್ 1, 2013

ಬಿ. ಸರೋಜಾದೇವಿ

ಬಿ. ಸರೋಜಾದೇವಿ

ಭಾರತೀಯ ಚಿತ್ರರಂಗಕ್ಕೆ ಕರ್ನಾಟಕದ ಭವ್ಯ ಕೊಡುಗೆ ಡಾ. ಬಿ. ಸರೋಜಾ ದೇವಿ ಅವರು.  ಕನ್ನಡದಲ್ಲಷ್ಟೇ ಅಲ್ಲದೆ ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲಿ ಅಪಾರ ಜನಪ್ರಿಯತೆಗಳಿಸಿದ ಮೇರು ಕಲಾವಿದರಾಕೆ.  ಅವರು ಜನವರಿ 7, 1938ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.  ತಂದೆ ಭೈರಪ್ಪನವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ತಾಯಿ ರುದ್ರಮ್ಮ.  ಅವರಿಗೆ ಅಪಾರ ಮನ್ನಣೆ, ಗೌರವ, ಜನಪ್ರಿಯತೆಗಳನ್ನು ನೀಡಿದ ತಮಿಳು ಚಿತ್ರರಂಗ ಅವರನ್ನು ಕನ್ನಡತ್ತು ಪೈಂಗ್ಕಿಳಿಅಂದರೆ ಕನ್ನಡದ ಮುದ್ದಿನ ಗಿಣಿಎಂದು ಸಂಭೋದಿಸುತ್ತಿತ್ತು.    ತಾವು ಕನ್ನಡ ಚಿತ್ರರಂಗದ ಹೊರಗಡೆ ಇದ್ದಾಗಲೂ ಕನ್ನಡದವರೆಂಬ ಹೆಮ್ಮೆಯನ್ನು ಎಲ್ಲೆಡೆ ಕೊಂಡೊಯ್ಯುತ್ತಿದ್ದರೆಂಬುದಕ್ಕೆ ಇದು ಸ್ಪಷ್ಟ ನಿದರ್ಶನ.

ಡಾ. ಬಿ. ಸರೋಜಾದೇವಿ ಅವರು ಕನ್ನಡದ ಮಹಾನ್ ಕಲಾವಿದರಾಗಿದ್ದ ದಿವಂಗತ ಹೊನ್ನಪ್ಪ ಭಾಗವತರ್ ಅವರ ಮಹಾಕವಿ ಕಾಳಿದಾಸಚಿತ್ರದ ಮೂಲಕ 1955ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.  ಕನ್ನಡ ಚಿತ್ರರಂಗದಲ್ಲಿ ಆ ಚಿತ್ರಕ್ಕೆ ಮಹತ್ವದ ಸ್ಥಾನವಿದೆ.  ಅದೇ ವರ್ಷದಲ್ಲಿ ಬಿ.ಸರೋಜಾದೇವಿ ಅವರು ನಟಿಸಿದ ಶ್ರೀರಾಮ ಪೂಜಾ ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯಿತು.  ಹೀಗೆ ಕನ್ನಡದ ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಬಿ. ಸರೋಜಾದೇವಿ ಅವರು 1957ರಲ್ಲಿ ಎನ್. ಟಿ. ರಾಮರಾಯರ ಚಿತ್ರ ಪಾಂಡುರಂಗ ಮಹಾತ್ಮೆಯಲ್ಲಿ ನಟಿಸಿದರು.   ಅದೇ ವರ್ಷ ಕನ್ನಡ ಚಿತ್ರರಂಗದ ಪ್ರಸಿದ್ಧ ಚಿತ್ರ 'ರತ್ನಗಿರಿ ರಹಸ್ಯ'ದಲ್ಲಿ ಕೂಡಾ ನಟಿಸಿದರು.

1958ರಲ್ಲಿ  ಅಣ್ಣ ತಂಗಿ’, ‘ಭೂ ಕೈಲಾಸಚಿತ್ರಗಳಲ್ಲಿ ನಟಿಸಿದ ಅವರು ತಮಿಳು ಚಿತ್ರರಂಗದಲ್ಲಿ ಜೆಮಿನಿ ಗಣೇಶನ್ ಅಭಿನಯದ ಚಿತ್ರವೊಂದಕ್ಕೆ ಆಹ್ವಾನ ಪಡೆದರು.  ಅದೇ ವರ್ಷದಲ್ಲಿ ತಮಿಳಿನಲ್ಲಿ ಮೇರು ನಟ ಎಂ. ಜಿ. ರಾಮಚಂದ್ರನ್ ಅವರ ನಾಡೋಡಿ ಮನ್ನನ್’, ಶಿವಾಜಿ ಗಣೇಶನ್ ಅವರ ಶಬಾಸ್ ಮೀನಮತ್ತು ಕನ್ನಡದ  ಮೇರು ಚಿತ್ರ  ನಿರ್ಮಾಪಕ-ನಿರ್ದೇಶಕ-ನಟ ಬಿ. ಆರ್. ಪಂತುಲು ಅವರ ಸ್ಕೂಲ್ ಮಾಸ್ಟರ್ಚಿತ್ರದಲ್ಲಿ ಬೆಳಗಿದರು. ಮುಂದಿನ ವರ್ಷದಲ್ಲಿ ಹಿಂದೀ ಚಿತ್ರರಂಗದ ಧ್ರುವ ತಾರೆ ದಿಲೀಪ್ ಕುಮಾರ್ ಅವರೊಂದಿಗೆ   ಪೈಗಮ್’, ತೆಲುಗಿನ ಮತ್ತೋರ್ವ ಮಹಾನ್ ಕಲಾವಿದ ಅಕ್ಕಿನೇನಿ ನಾಗೇಶ್ವರರಾಯರೊಂದಿಗೆ ಪೆಲ್ಲಿ ಸನಾದಿಚಿತ್ರಗಳಲ್ಲಿ ಅಭಿನಯಿಸಿದರು.  ಹಿಂದಿಯಲ್ಲಿ ಅಶೋಕ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಅಜಿತ್, ಭರತ್ ಭೂಷಣ್, ಸುನಿಲ್ ದತ್  ಮುಂತಾದ ಜನಪ್ರಿಯ ನಟರೊಡನೆ ಕೂಡ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದರು.   ಕನ್ನಡದ ಕುಮಾರತ್ರಯರಾದ ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ್ ಕುಮಾರ್ ಅವರೊಡನೆ ನಟಿಸಿದ್ದು ಕೂಡ ನಮಗೆ ತಿಳಿದಿರುವ ವಿಚಾರ.   ಹೀಗೆ ನಿರಂತರ ಯಶಸ್ವೀ ಚಿತ್ರಗಳಿಂದ, ತಮ್ಮ ವಿಶಿಷ್ಟ ಪ್ರತಿಭೆ, ಸೌಂದರ್ಯಪ್ರಜ್ಞೆಗಳಿಂದ, ಉತ್ತಮ ನಡತೆ, ಸೌಜನ್ಯ, ಸುಶೀಲತೆಗಳಿಂದ ಅವರು ಅಪಾರ ಜನಪ್ರಿಯತೆ ಪಡೆದರು.

ಬಿ. ಸರೋಜಾದೇವಿ ಅವರಿಗಿದ್ದ ಇತರ ಚಿತ್ರರಂಗದ ಬೇಡಿಕೆಗಳನ್ನು ಗಮನಿಸಿದಾಗ ಶ್ರೀಮಂತಿಕೆಯ ದೃಷ್ಟಿಯಿಂದ ಹಿರಿಯ ಸ್ಥಾನದಲ್ಲಿದ್ದ ಆ ಭಾಷಾ ಚಿತ್ರರಂಗಗಳಿಗೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುವುದು ಅವರಿಗೆ ಖಂಡಿತ ಸಾಧ್ಯವಿತ್ತು.  ಹೀಗಿದ್ದರೂ ಅವರು ತಮ್ಮ ಮೂಲ ನೆಲೆಯಾದ ಕನ್ನಡ ಚಿತ್ರರಂಗಕ್ಕೆ ಸಮಾನ ಗೌರವ, ಮನ್ನಣೆ ನೀಡಿ ಉತ್ತಮ ಚಿತ್ರಗಳಲ್ಲಿ ನಟಿಸಿದರು. ಜಗಜ್ಯೋತಿ ಬಸವೇಶ್ವರ’, ‘ವಿಜಯನಗರದ ವೀರಪುತ್ರ’, ‘ಕಿತ್ತೂರು ರಾಣಿ ಚೆನ್ನಮ್ಮ’, ‘ಅಮರಶಿಲ್ಪಿ ಜಕಣಾಚಾರಿ’, ‘ಮಲ್ಲಮ್ಮನ ಪವಾಡ’, ‘ಲಕ್ಷ್ಮಿ ಸರಸ್ವತಿ’, ‘ತಂದೆ ಮಕ್ಕಳು’, ‘ಪಾಪ ಪುಣ್ಯ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’, ‘ನ್ಯಾಯವೇ ದೇವರು’, ‘ಸಹಧರ್ಮಿಣಿ’, ‘ಶ್ರೀ ಶ್ರೀನಿವಾಸ ಕಲ್ಯಾಣ’, ‘ಗೃಹಿಣಿ’, ‘ಕಥಾಸಂಗಮ’, ‘ಬಭ್ರುವಾಹನ’, ‘ಭಾಗ್ಯವಂತರುಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡಿಗರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. 

ಬಿ. ಸರೋಜಾದೇವಿ ಅವರ ರಾಷ್ಟ್ರಪಶಸ್ತಿ ವಿಜೇತ ಚಿತ್ರ ಕಿತ್ತೂರು ರಾಣಿ ಚೆನ್ನಮ್ಮ’ , ‘ಅಮರಶಿಲ್ಪಿ ಜಕಣಾಚಾರಿ’, ‘ನ್ಯಾಯವೇ ದೇವರು’  ಚಿತ್ರಗಳಂತೂ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿವೆ.   ತಂತ್ರಜ್ಞರಾದ ಶ್ರೀಹರ್ಷ ಅವರನ್ನು ವಿವಾಹವಾದ ಬಿ. ಸರೋಜಾದೇವಿ ಅವರು ಎಷ್ಟೇ ಜನಪ್ರಿಯರಾಗಿದ್ದ ಸಂದರ್ಭದಲ್ಲೂ ತಮ್ಮ  ಬಗ್ಗೆ ಕಿಂಚಿತ್ತೂ ಗಾಳಿ  ಸುದ್ಧಿ ಹಬ್ಬುವುದಕ್ಕೆ ಆಸ್ಪದ ಕೊಟ್ಟವರಲ್ಲ.  ಚಿತ್ರರಂಗದ ಬಣ್ಣದ ಲೋಕದಲ್ಲಿದ್ದೂ ಹೇಗೆ ಬದುಕುಬೇಕೆಂಬುದಕ್ಕೆ ನಿದರ್ಶನವಾಗಿ ಔನ್ನತ್ಯದಿಂದ ಬದುಕಿದವರು.

ಬಿ. ಸರೋಜಾದೇವಿ ಅವರು ಕನ್ನಡ ಚಲನಚಿತ್ರ ವಾಣಿಜ್ಯ ನಿಗಮ, ಕಂಠೀರವ ಸ್ಟುಡಿಯೋಗಳಿಗೆ ಅಧ್ಯಕ್ಷರಾಗಿ ಕೂಡ ಕೆಲವು ಸಮಯ ಕಾರ್ಯ ನಿರ್ವಹಿಸಿದರು. ದಿವಂಗತರಾದ ಪತಿ ಶ್ರೀಹರ್ಷ, ಮಗಳು ಭುವನೇಶ್ವರಿ  ಮತ್ತು ತಾಯಿಯವರ ಹೆಸರಿನಲ್ಲಿ ಅನೇಕ ಧರ್ಮ ಕಾರ್ಯಗಳನ್ನೂ, ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಗೌರವ ಪ್ರಶಸ್ತಿಗಳನ್ನೂ, ತಮ್ಮ ಪತಿ ಓದಿದ ತಾಂತ್ರಿಕ ಶಿಕ್ಷಣ ಕಾಲೇಜಿನ ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನೂ, ಅಶಕ್ತ ಕಲಾವಿಧರ ಸಹಾಯಾರ್ಥವಾಗಿ ನಿಧಿಯನ್ನೂ ನೀಡಿ ಮಹತ್ವದ ಕೆಲಸವನ್ನು ಸಹಾ ಮಾಡುತ್ತಿದ್ದಾರೆ. 

ಈ ವಯಸ್ಸಿನಲ್ಲಿ ಕೂಡ ಚಿತ್ರರಂಗದಲ್ಲಿ ಪ್ರೀತಿ ಹೊಂದಿರುವ ಅವರು ಚಿತ್ರರಂಗದವರು ಕರೆದರೆ ಹೋಗಿ ಪ್ರೀತಿಯಿಂದ ಅಭಿನಯಿಸಿ ಬರುತ್ತಾರೆ.  ಇತ್ತೀಚಿನ ವರ್ಷದಲ್ಲಿ  ಬಿಡುಗಡೆಯಾದ ತಮಿಳು ಚಿತ್ರ ಆಡವನ್ಚಿತ್ರದಲ್ಲಿ ಕೂಡ ಬಿ. ಸರೋಜಾದೇವಿ ಅವರು  ಭಾಗವಹಿಸಿದ್ದರು.

ಡಾ. ಬಿ. ಸರೋಜಾ ದೇವಿ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ.  ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.  ಆಂಧ್ರಪ್ರದೇಶ ಸರ್ಕಾರ, ತಮಿಳುನಾಡು ಸರ್ಕಾರ ಹಿರಿಯ ಗೌರವ ಪ್ರಶಸ್ತಿಗಳನ್ನು ಅವರಿಗೆ ಸಲ್ಲಿಸಿದೆ.  ಭಾರತದ ಕೇಂದ್ರ ಸರ್ಕಾರ ಸ್ವಾತಂತ್ರ ಬಂದ 60 ವರ್ಷದ ಸಂದರ್ಭದಲ್ಲಿ ಜೀವಮಾನದ ಸಾಧನೆಗಾಗಿ ಬಿ. ಸರೋಜಾದೇವಿ ಅವರನ್ನು  ಸಂಮಾನಿಸಿತು.  ಕರ್ನಾಟಕ ಸರ್ಕಾರ ಕನ್ನಡದ  ಬಹುತೇಕ  ಕಲಾವಿದರಿಗೆ ರಾಷ್ಟ್ರೀಯ ಗೌರವ ಸಲ್ಲುವಂತೆ ಕ್ರಮ ಕೈಗೊಳ್ಳದೆ ಇರುವುದನ್ನು ಹಲವು ಸಂದರ್ಭಗಳಲ್ಲಿ ಬಿ. ಸರೋಜಾ ದೇವಿ ಅವರು ನೇರವಾಗಿ ಮಾತನಾಡಿದ್ದಾರೆ.  ತಮಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಬಂದಿದ್ದು ತಮಿಳುನಾಡು ಸರ್ಕಾರ ಮಾಡಿದ ಶಿಫಾರಿಸ್ಸಿನಿಂದ.  ಕರ್ನಾಟಕದಲ್ಲಿ ಕೂಡ ಉತ್ತಮ ಕೆಲಸ ಮಾಡಿದವರು ಬಹಳಷ್ಟು ಉತ್ತಮ ಕಲಾವಿದರಿದ್ದಾರೆ ಅವರಿಗೆ ಕೂಡ ಗೌರವ ಸಲ್ಲಬೇಕುಎಂಬ ಮಾತಿನಲ್ಲಿ ಖಂಡಿತ ಸತ್ಯವಿದೆ.  ಹಿಂದಿಯ ಚಿತ್ರರಂಗದ ಸಾಧಾರಣ ನಟ ನಟಿಯರೆಲ್ಲ ಪದ್ಮಶ್ರೀ ಪಡೆದರೂ ಕನ್ನಡದ ಮೇರು ನಟರಾದ ವಿಷ್ಣುವರ್ಧನ, ಅನಂತ್ ನಾಗ್, ಭಾರತಿ, ಜಯಂತಿ, ಲೀಲಾವತಿ. ಅಶ್ವಥ್ ಅಂತಹ ಕಲಾವಿದರು ಇಂತಹ ಪ್ರಶಸ್ತಿ ಪಡೆದಿಲ್ಲದಿರುವುದು ಬಿ. ಸರೋಜಾ ದೇವಿ ಅವರ ಮಾತಿಗೆ ಸಾಕಷ್ಟು ಪುಷ್ಟಿ ಕೊಡುತ್ತದೆ. 


ಕಲೆಗಾಗಿ ಬದುಕಿ ತಮ್ಮ ಎಲ್ಲ ಕಾರ್ಯದಲ್ಲೂ ಘನತೆ, ಸೌಂದರ್ಯಗಳನ್ನು ಮೆರೆದಿರುವ ಡಾ. ಬಿ.ಸರೋಜಾ ದೇವಿ ಅವರು ಕಲಾರಸಿಕರ ಮನದಲ್ಲಿ ಎಂದೆಂದೂ ಚಿರಸ್ಥಾಯಿಯಾಗಿರುತ್ತಾರೆ.  ಅವರ ಬದುಕು ಸುಖಮಯವಾಗಿರಲಿ. ಅವರ ಬದುಕಲ್ಲಿ, ಆರೋಗ್ಯ, ನೆಮ್ಮದಿಗಳು ನೆಲೆಸಿರಲಿ ಎಂದು ಆಶಿಸಿ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯ ಹೇಳೋಣ.

Tag: B. Saroja Devi

ಕಾಮೆಂಟ್‌ಗಳಿಲ್ಲ: