ಮಂಗಳವಾರ, ಸೆಪ್ಟೆಂಬರ್ 3, 2013

ಸುದರ್ಶನ ದೇಸಾಯಿ ಇನ್ನಿಲ್ಲ

ಸುದರ್ಶನ ದೇಸಾಯಿ ಇನ್ನಿಲ್ಲ

ಖ್ಯಾತ ಪತ್ತೇದಾರಿ ಕಾದಂಬರಿಕಾರ ಸುದರ್ಶನ ದೇಸಾಯಿ ಧಾರವಾಡದಲ್ಲಿ  ನಿನ್ನೆಯ ದಿನ ನಿಧನರಾಗಿದ್ದಾರೆ.   ಸಾಹಿತ್ಯ ಕ್ಷೇತ್ರದಲ್ಲಿ 'ಸುದರ್ಶನ ದೇಸಾಯಿ' ಎಂದೇ ಚಿರಪರಿಚಿತರಾದ ಸುದರ್ಶನ ಕೃಷ್ಣರಾವ್‌ ಮುತಾಲಿಕ ದೇಸಾಯಿ, 1945ರ ಜವವರಿ 14ರಂದು ಕೃಷ್ಣರಾವ್‌ ಹಾಗೂ ರಾಧಾಬಾಯಿ ದೇಸಾಯಿ ದಂಪತಿಯ ಎರಡನೇ ಮಗನಾಗಿ ಜನಿಸಿದರು. ಧಾರವಾಡದಲ್ಲಿಯೇ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಟಿ.ಸಿ.ಎಚ್‌. ತರಬೇತಿ ಮುಗಿಸಿ, 'ಹಿಂದಿ ವಿಶಾರದ' ಪದವಿ ಪಡೆದರು. ಧಾರವಾಡ ವಲಯದ ಗುಲಗಂಜಿಕೊಪ್ಪದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಆರಂಭಿಸಿ 39 ವರ್ಷ ಸೇವೆ ಸಲ್ಲಿಸಿ, ಹುಬ್ಬಳ್ಳಿ ಉಣಕಲ್ಲ ಮಾದರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು.

ಮೂಲತಃ ಸಣ್ಣಕಥೆಗಾರರಾದ ಸುದರ್ಶನ ದೇಸಾಯಿ  ಅವರು, ಹಾಸ್ಯ ಲೇಖನ, ಬಾನುಲಿ ನಾಟಕ,  ಸಾಮಾಜಿಕ, ವೈಜ್ಞಾನಿಕ, ಮನೋವೈಜ್ಞಾನಿಕ ಕಾದಂಬರಿಗಳನ್ನು ರಚಿಸಿದ್ದಾರೆ.  ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ರಚಿಸಿದ್ದ ಅವರ ನೂರನೇ ಕೃತಿ  ‘ಸಾಂವಿ' ಇತ್ತೀಚಿಗೆ ಬಿಡುಗಡೆಗೊಂಡಿತ್ತು. ಅವರ ಹಳದಿ ಚೇಳು, ಲೆದರ್‌ ಸೂಟ್‌ಕೇಸ್‌, ಎಂಟೆದೆ ಭಂಟ (ಚಲನಚಿತ್ರವಾಗಿದೆ) ಸೇರಿದಂತೆ ಅನೇಕ ಪತ್ತೇದಾರಿ ಕಾದಂಬರಿಗಳು ಪ್ರಸಿದ್ಧಿ ಪಡೆದಿವೆ. ಇವುಗಳಲ್ಲಿ  'ಹಳದಿ ಚೇಳು' ಕಾದಂಬರಿಯಂತೂ  ಅಪಾರ ಜನಪ್ರಿಯತೆ ಗಳಿಸಿತ್ತು. ಹೀಗಾಗಿ ಅವರು  ತಮ್ಮ ನಿವಾಸಕ್ಕೆ ಅವರು 'ಹಳದಿ ಚೇಳು' ಎಂದೇ ಹೆಸರಿಟ್ಟಿದ್ದರು.

ಟಿವಿ ಹಾವಳಿಯಿಂದಾಗಿ ಪತ್ತೇದಾರಿ ಸಾಹಿತ್ಯ ಬಡವಾಗುತ್ತಿದೆ. ಇದನ್ನು ಪ್ರಸಿದ್ಧಗೊಳಿಸಬೇಕು ಎನ್ನುವ ತುಡಿತ ಅವರಿಗಿತ್ತು. ಇದಕ್ಕಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪತ್ತೇದಾರಿ ಸಾಹಿತ್ಯ ಕುರಿತು ಗೋಷ್ಠಿ ಯೋಜಿಸಬೇಕು ಎನ್ನುವ ಬೇಡಿಕೆಯನ್ನು ಸದಾ ಕಾಲ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಒತ್ತಾಯಿಸುತ್ತಿದ್ದರು. ಇದು  ಈಡೇರದಾಗ ತಾವೇ ಪತ್ತೇದಾರಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದರು.

 ಸಾಹಿತಿಯಾಗಿ ಪ್ರಸಿದ್ಧಿಯಾಗುವುದರ ಜೊತೆಗೆ 1965ರಿಂದ 1988ರ ವರೆಗೆ ಸುದರ್ಶನ ದೇಸಾಯಿಯವರು  ಸುಮಾರು 200 ನಾಟಕಗಳಲ್ಲಿ ಅಭಿನಯಿಸಿದ್ದರು.  1974ರಲ್ಲಿ ಭಾಗ್ಯೋದಯ ನಾಟ್ಯ ಸಂಘ ಹಾಗೂ ಸರಸ್ವತಿ ಕಲಾ ನಿಕೇತನ ಸಂಘಗಳನ್ನು ಕಟ್ಟಿ, ಎಲ್ಲೆಡೆಯಲ್ಲಿ ನಾಟಕ ಆಡಿದರು. ಉತ್ತರ ಕರ್ನಾಟಕದ ರಂಗಭೂಮಿ ಸಂಗತಿಗಳನ್ನು ನಾಡಿಗೆ ತಿಳಿಸಬೇಕೆಂದು `ರಂಗತೋರಣ` ಮಾಸಿಕ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸುತ್ತಿದ್ದರು.

ಕೇಂದ್ರ ಸರ್ಕಾರದಿಂದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು  ಪಡೆದಿದ್ದ ಸುದರ್ಶನ ದೇಸಾಯಿ ಅವರು ಸಾಹಿತ್ಯ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದರು.  ಅವರ ಸಾಧನೆಯನ್ನು ಗುರುತಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಧಾರವಾಡದ ನಗರದ ಸಾರಸ್ವತಪುರ ಬಳಿಯ ಕಾಲೋನಿಗೆ 'ಸುದರ್ಶನ ದೇಸಾಯಿ ಕಾಲೋನಿ' ಎಂದೇ ನಾಮಕರಣ ಮಾಡಿದೆ.

ಅಗಲಿದ ಸುದರ್ಶನ ದೇಸಾಯಿ ಅವರ ಆತ್ಮಕ್ಕೆ ಶಾಂತಿಕೋರುತ್ತಾ, ಅವರ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದೇವೆ.

ಚಿತ್ರಕೃಪೆ: ಪ್ರಜಾವಾಣಿ

Tag: Sudarshana Desai

ಕಾಮೆಂಟ್‌ಗಳಿಲ್ಲ: