ಸೋಮವಾರ, ಸೆಪ್ಟೆಂಬರ್ 2, 2013

ಬಿ. ಆರ್. ಲಕ್ಷ್ಮಣರಾವ್

ಬಿ. ಆರ್.  ಲಕ್ಷ್ಮಣರಾವ್

"ಕವಿತೆ ಎಂಬುದು ಒಬ್ಬೊಬ್ಬರಿಗೆ ಒಂದೊಂದು ಅರ್ಥದಲ್ಲಿ ನಿಲುಕುವ ಇಲ್ಲವೇ ನಿಲುಕದ ನಕ್ಷತ್ರ."  ನಾನು ಹೇಳುತ್ತಿರುವುದು ಕವಿತೆಯನ್ನು ನೋಡುವವನ ಮತ್ತು ಕೇಳುವವನ ದೃಷ್ಟಿಯಿಂದ.  ಕವಿತೆಯ ಸೃಷ್ಟಿಕರ್ತನಾದ ಕವಿ ಮಾತ್ರ ಬಹಳಷ್ಟು ಸಮಯದಲ್ಲಿ ಆತನ ಕವಿತೆಯಷ್ಟೇ ನಿಗೂಢ.  ಆತನನ್ನು ಸಮೀಪಿಸಲು ಆತ ಹೋದ ದಾರಿಯಲ್ಲೇ ನಡೆಯಬೇಕಾಗುತ್ತದೆ!  ಇಂತಹ ಕವಿತಾ   ಆಗಸದಲ್ಲಿ  ಅಷ್ಟೊಂದು ನಕ್ಷತ್ರಗಳಿದ್ದರೂ ಅವುಗಳ ಮಧ್ಯೆ ನಮ್ಮನ್ನು ಯಾವುದೋ ಫಳ ಫಳ ಎನ್ನುವ ಹೆಸರು ಗೊತ್ತಿಲ್ಲದ ನಕ್ಷತ್ರವೊಂದು  ಕರೆಯುವಂತೆ, ಕೆಲವೊಂದು ಕವಿತೆಗಳು ನಮ್ಮನ್ನು  ಹತ್ತಿರ ಹತ್ತಿರ ಮಾಡಿಕೊಳ್ಳುತ್ತವೆ.  ಹಾಗಾಗಿ ಅವು ನಮ್ಮಲ್ಲಿ ಅರಳುವ ಪ್ರೀತಿಯ ಹೂಗಳಾಗಿರುತ್ತವೆ.  ಅಂತಹ ಮುದದ  ಕವಿತೆಗಳನ್ನು ನೀಡಿರುವವರಲ್ಲಿ ಬಿ. ಆರ್. ಲಕ್ಷಣರಾವ್ ಒಬ್ಬರು.

ಲಕ್ಷ್ಮಣರಾವ್‌ರವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮಂಗಲದಲ್ಲಿ 1946ರ ಸೆಪ್ಟಂಬರ್ 9ರಂದು. ತಂದೆ ಬಿ.ಆರ್. ರಾಜಾರಾವ್‌ ಅವರು ಸಂಗೀತಾಸಕ್ತರಾಗಿದ್ದು ವಾದ್ಯಸಂಗೀತ ಹಾಗೂ ಹಾಡುಗಾರಿಕೆಯಲ್ಲಿ ಪರಿಶ್ರಮವಿದ್ದವರು. ತಾಯಿ ವೆಂಕಟಲಕ್ಷ್ಮಮ್ಮನವರು.  ಲಕ್ಷ್ಮಣರಾವ್ ಅವರ ಪ್ರಾರಂಭಿಕ ಶಿಕ್ಷಣ ಚಿಂತಾಮಣಿಯಲ್ಲಿ ನೆರವೇರಿತು. ಬೆಂಗಳೂರು ವಿಶ್ವವಿದ್ಯಾಲಯದಿಂದ  ಬಿ.ಎ. ಮತ್ತು ಬಿ.ಎಡ್‌ ಪದವಿಗಳನ್ನೂ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ  ಎಂ.ಎ. ಪದವಿಯನ್ನೂ ಪಡೆದರು.

ಲಕ್ಷ್ಮಣರಾವ್ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಬರೆದ ಹಲವಾರು ಕವನಗಳು ಲಹರಿ, ಗೋಕುಲ, ಸಂಕ್ರಮಣ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು

ಕೆಂಪು ಸಾಗರವೀಜಿ, ಕಾಡುಮೇಡು ದಾಟಿ
ದಣಿದು ಕುಸಿಯದೆ ಮುಂದೆ ಸಾಗಿ ಬರಬೇಕು,
ಸುಲಭವಲ್ಲ!

ಎಂದು ಬರೆದ ಕವಿ ಕಾವ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ನವ್ಯ ಸಾಹಿತ್ಯದ ಚಳವಳಿ ಮೊದಲ್ಗೊಂಡು  ಚುಟುಕು, ವಿಡಂಬನೆ, ಸ್ವಗತ, ಭಾವಗೀತೆ ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಈಜಿ ಬಂದಿದ್ದಾರೆ.

ಬಿ. ಆರ್. ಲಕ್ಷಣರಾಯರು ಅಂದಿನ ದಿನಗಳಲ್ಲಿ, ಕನ್ನಡ ಕನ್ನಡ ಎಂದು ಕನ್ನಡ ಪ್ರೀತಿಯ ಭಾವದಿಂದ  ಅಡ್ಡಾಡುತ್ತಿದ್ದಮೀಸೆ ಮೊಳೆಯುತ್ತಿದ್ದ ನಮ್ಮಂತಹ ಹುಡುಗರಿಗೆ ಕಾವ್ಯವಾಚನ ಕಾರ್ಯಕ್ರಮಗಳನ್ನು  ಅಥವಾ ದೂರದರ್ಶನದ ಕಾವ್ಯ ಕಾರ್ಯಕ್ರಮಗಳನ್ನು ನೋಡುವಾಗ, ಇವರು ಯಾವಾಗ ಕವನ ಹಾಡುತ್ತಾರಪ್ಪ ಎಂದು ಕಾಯುವಂತೆ ಮಾಡುತ್ತಿದ್ದವರು.  ಅವರ ಸುಬ್ಭಾಭಟ್ಟರ ಮಗಳೇ’, ‘ನಾನು ಚಿಕ್ಕವನಿದ್ದಾಗ ಅಪ್ಪಾ ಹೇಳುತ್ತಿದ್ದರು, ನೀ ನಿಂಬೆಯ ಗಿಡದಿಂದೊಳ್ಳೆಯ ಪಾಠವ ಕಲೀ ಮಗುಅಂತಹ ಅವರ ಕವನ ವಾಚನದಲ್ಲಿ ನಮಗೆ ಅದೆಂತದ್ದೋ ಪ್ರೀತಿ.  ಕಾವ್ಯದ ಹಾದಿಯಲ್ಲಿ ಸವೆಯದ ನಮ್ಮ  ಭಾಷಾ ಹೃದಯಕ್ಕೆ, ಕಾವ್ಯದ ಅಂತರಾತ್ಮಕ್ಕೆ ತಲುಪಲು ಬೇಕಾದ ಹಾದಿ ಹೇಗೆ ಎಂದು ತಿಳಿಯದಿದ್ದರೂ, ಎಲ್ಲೋ ಸುಲಭವಾಗಿ ಇಲ್ಲಿ ಬಂದುಬಿಟ್ಟಿದ್ದೇನೆ ಎಂದು  ಲಕ್ಷಣರಾಯರ ಸವಿ ಗೀತವಾಚನಗಳು.  ಆತ್ಮೀಯವಾಗಿಬಿಟ್ಟವು.   ಈ ಪದ್ಯಗಳು   ಕೆ.ಎಸ್.ನ ಅವರ ಶ್ಯಾನುಭೋಗರ ಮಗಳು’, ‘ರಾಯರು ಬಂದರು ಮಾವನ ಮನೆಗೆಅಂಥಹ ನೇರಸುಖ ಸ್ಪರ್ಶಗಳಿಗೆ ನಮ್ಮನ್ನು ಕೈ ಹಿಡಿದು ಕರೆದಂತಹವು. 

ಕನ್ನಡ ಕಾವ್ಯಲೋಕದಲ್ಲಿ ಪ್ರಮುಖ ಹೆಜ್ಜೆ ಎನಿಸಿದ ಲಂಕೇಶರು ಸಂಪಾದಿಸಿದ ಅಕ್ಷರ ಹೊಸ ಕಾವ್ಯದಲ್ಲಿನ  ಪರಿಚಯ ವಿಭಾಗದಲ್ಲಿ ತಾವು ಕಾವ್ಯ ರಚಿಸಲು ಕಾರಣ ಸಾವು ಮತ್ತು ಬಾಳಿನ ನಿರರ್ಥಕತೆಯ ಬಗ್ಗೆ ಭಯಎಂಬ ಲಕ್ಷ್ಮಣರಾಯರ  ಮಾತಿದೆ.  ತುಂಟನಾಗಿ ಬರೆಯುತ್ತಿದ್ದ  ಒಬ್ಬ ಕವಿಯ ಹೃದಯದಲ್ಲಿ ಇಂಥದ್ದೊಂದು ಆಳವೂ ಇತ್ತು ಎಂಬುದು ನಮಗೆ ತೋಚುವುದಿಲ್ಲ. ಅಥವಾ ಕವನದ ಒಂದೆರಡು ಸಾಲು ಅಥವಾ ಅದು ಹಾಡಿನಲ್ಲಿ ಮೂಡಿದಾಗ ಅದರ ರಾಗಕ್ಕೆ ಸಿಕ್ಕ ತಾಳದಲ್ಲೇ ನಾವು ನಮ್ಮ ಗ್ರಾಹ್ಯತೆಯನ್ನು ಕಟ್ಟಿಹಾಕಿಕೊಂಡುಬಿಡುತ್ತೇವೆ.  ಎಂದೋ ಓದಿದ ಅವರ ಫೋಟೋಗ್ರಾಫರ್ ಕವನ ನೆನಪಾಗಿ ಅದರ ಕೊನೆಯ ಪ್ಯಾರಾವನ್ನು ಹುಡುಕಿ ಬರೆಯುತ್ತಿದ್ದೇನೆ:

ಕೊನೆಗೆ
ಮಾರನೆ ಸಂಜೆ,
ಅವರವರ ಫೋಟೋಗಳನ್ನು ಅವರವರಿಗೆ
ಒಪ್ಪಿಸಿ,
ಮೆಚ್ಚಿಗೆಯ ಕಣ್ಣಾಡಿ ಪರಸ್ಪರ,
ಬಿಕ್ಕಿ, ನಕ್ಕು,
ಅವರವರ ಊರುಗಳಿಗೆ ಅವರೆಲ್ಲಾ ಹೊರಟು
ಬಿಟ್ಟಮೇಲೆ,
ನನ್ನ ಬಳಿ ಉಳಿಯುವುದು
ಅದರೆಲ್ಲರ ಮಾಸುವ ನೆನಪು
ನೆಗೆಟಿವ್ ಗಳು
ಮಾತ್ರ”.

ಹೀಗೆ ಹಲವು ಚಿಂತನೆ, ನೆನಪುಗಳ ನಡುವೆ ಅಡ್ಡಾಡುತ್ತಿದ್ದಾಗ, ರವಿ ಬೆಳಗೆರೆ ಅವರ ನನ್ನನ್ನು ಮೀಟಿದ ಒಂದು ಲೇಖನ ಕೂಡ ದೊರಕಿತು.  ಇವೆಲ್ಲವನ್ನೂ ನಮ್ಮಲ್ಲಿ ಕವಿತೆಯ ಭಾವವನ್ನು ಪ್ರೀತಿಯಾಗಿ ಅರಳಿಸಿದ ಬಿ. ಆರ್. ಲಕ್ಷ್ಮಣರಾಯರ ಕುರಿತಾದ ಆತ್ಮೀಯ ಭಾವದಲ್ಲಿ ನಿಮ್ಮಲ್ಲಿ ನಿವೇದಿಸುತ್ತಿದ್ದೇನೆ.

-----------------------

ಬಿ.ಆರ್. ಲಕ್ಷಣರಾಯರ ಕುರಿತ ರವಿ ಬೆಳಗೆರೆಯವರ ಒಂದು ಬರಹ

------------------------

ಯಾಕೋ ಗೊತ್ತಿಲ್ಲ : ನನ್ನನ್ನು ಬಿ.ಆರ್‌. ಲಕ್ಷ್ಮಣರಾವ್‌ ಬರಹಗಳು ಮೊದಲಿಂದಲೂ ಬೆನ್ನುಬಿದ್ದು ಓದಿಸಿಕೊಂಡಿವೆ.  ಅವರ ಮತ್ತು ಎಚ್‌.ಎಸ್‌.ವೆಂಕಟೇಶಮೂರ್ತಿಯವರ ಕವಿತೆಗಳ ಸಿಡಿ. ಹಾಡೇ ಮಾತಾಡೇಕೈಗೆ ಬಂದಾಗಲೂ ಅಷ್ಟೆ : ಬಿ.ಆರ್‌.ಎಲ್‌. ತುಂಬ ಹಿತವೆನ್ನಿಸಿದರು. ಸ್ವಭಾವತಃ ತುಂಬ ವಾಚಾಳಿಯಲ್ಲದ ಲಕ್ಷ್ಮಣರಾವ್‌ ತಮ್ಮ ಕವಿತೆಗಳಿಗಿಂತ ಡಿಫರೆಂಟು. ಕೊಂಚ ಗಂಭೀರ. ಆದರೆ ಲಕ್ಷ್ಮಣರಾವ್‌ಗೆ ಇತರೆ ಯೂನಿವರ್ಸಿಟಿ ಕವಿಗಳ, ಅಕಡೆಮೀಷಿಯನ್‌ಗಳ, pseudo intellectual ವಿನಾಕಾರಣದ ಶ್ರೀಮದ್ಗಾಂಭೀರ್ಯವಿಲ್ಲ. ಅವರ ಕನ್ನಡಕದ ಹಿಂದಿನ ಕಣ್ಣುಗಳಲ್ಲಿ ಜೀವನಾನುಭವ ಥಳ್ಳೆನ್ನುತ್ತದೆ. ಲಕ್ಷ್ಮಣರಾವ್‌ಗೆ ಉಳಿದ ಅನೇಕ ಕನ್ನಡ ಕವಿಗಳಿಗಿದ್ದಂತಹ secured life ಇರಲಿಲ್ಲ. ಅವರು ಎಲ್ಲೂ ನೌಕರಿ ಮಾಡಲಿಲ್ಲ. ಬೆಂಗಳೂರಿನ ವ್ಯಾಮೋಹಕ್ಕೆ ಬೀಳಲಿಲ್ಲ. ಚಿಂತಾಮಣಿಯಲ್ಲೇ ಉಳಿದರು. ಹೊಟ್ಟೆಪಾಡಿಗಾಗಿ ಫೊಟೋಗ್ರಫಿ, ಟ್ಯೂಷನ್ನು, ಟುಟೋರಿಯಲ್ಲು - ಅದರಲ್ಲೇ ದೊಡ್ಡ ಸಂಸಾರಭಾರ ತೂಗಿಸಿ ಗೆದ್ದ ಜೀವ ಅದು.

ಬಹುಶಃ ನಾನು ಲಕ್ಷ್ಮಣರಾಯರ ಗೋಪಿ ಮತ್ತು ಗಾಂಡಲೀನಮೊದಲ ಬಾರಿಗೆ ಓದಿದಾಗ ಪಿಯುಸಿಯಲ್ಲಿದ್ದೆ . ಅನಂತರದ ದಿನಗಳಲ್ಲಿ ಅವರ ಕವಿತಾಸಂಕಲನ ಟುವಟಾರಓದಿದೆ. He sounded very different. ಅವರ ಪದ್ಯಗಳಲ್ಲಿ ಅವತ್ತಿನ ನವ್ಯ ಕಾವ್ಯಕ್ಕೆ ಇದ್ದ ಭಯ ಹುಟ್ಟಿಸುವಂತಹ ಗಾಂಭೀರ್ಯವಿರಲಿಲ್ಲ. ತುಂಟ ಸಂವೇದನೆಗಳಿದ್ದವು. ನಿಜಕ್ಕೂ ಫ್ರೆಶ್‌ ಅನ್ನಿಸುವಂತಹ ಪ್ರತಿಮೆಗಳಿದ್ದವು. ಆಗಿನ್ನೂ ನಾವು ಕೆ.ಎಸ್‌.ನರಸಿಂಹಸ್ವಾಮಿಯವರ ಶಾನುಭೋಗರ ಮಗಳ, ಸಿರಿಗೆರೆಯ ಕೆರೆ ನೀರಿನ, ಪದುಮಳ ಮುಟ್ಟಿನ-ಮುನಿಸಿನ ಹ್ಯಾಂಗೋವರ್‌ನಲ್ಲಿದ್ದವರು. ನರಸಿಂಹಸ್ವಾಮಿಗಳು ಪಕ್ಕಾ ಬೆಂಗಳೂರಿನಲ್ಲಿದ್ದುಕೊಂಡು, ಹಳ್ಳಿಯ, ನಿಸರ್ಗದ, ಅಗೋಚರಗಳ ನಡುವೆಯ ಪ್ರತಿಮೆಗಳನ್ನು ಹುಡುಕುತ್ತಿದ್ದರೆ ಲಕ್ಷ್ಮಣರಾವ್‌ ಏಕ್ದಂ ನಗರದ ಇಮೇಜಸ್‌ ತಂದು ಎದುರಿಗಿಡತೊಡಗಿದರು. ನಪೋಲಿ ಬಾರು, ಕ್ಯಾಬರೆ ನರ್ತಕಿ ಗಾಂಡಲೀನಾ, ಮದುವೆ ಮನೆಯ ಹುಡುಗಿಯರು, ಅವರ ಮಧ್ಯೆ ಖುದ್ದು ಬಿ.ಆರ್‌.ಎಲ್ ಅವರೇ ಫೊಟೋಗ್ರಾಫರು- ಹೀಗೆ ನಾವು ಕಂಡ, ನಮ್ಮ ಸುತ್ತಲಿನವೇ ಆದ ಇಮೇಜಸ್‌ ಬಳಸಿ ಪದ್ಯ ಬರೆದದ್ದರಿಂದಲೋ ಏನೋ, ಬಿ.ಆರ್‌.ಎಲ್‌. ನನ್ನ ವಯಸ್ಸಿನ ತುಂಟರಿಗೆ ತುಂಬ ಇಷ್ಟವಾಗಿ ಹೋದರು. ಬಹುಶಃ ಆ ದಿನಗಳಲ್ಲಿ ಅವರು ಫೊಟೋಗ್ರಫಿಯನ್ನು ಆ ಪರಿ ಹಚ್ಚಿಕೊಂಡಿದ್ದರಿಂದಲೋ ಏನೋ, ಫೊಟೋಗ್ರಫಿಕ್‌ ಪ್ರತಿಮೆಗಳೇ ಅವರಿಗೆ ದಕ್ಕುತ್ತಿದ್ದವು. ಇವತ್ತಿಗೂ ನನಗೆ ನೆನಪಿದೆ: ಪಿ.ಲಂಕೇಶ್‌ ತಮ್ಮ ಸಂಕಲನದ ಅಕ್ಷರ ಹೊಸ ಕಾವ್ಯದಲ್ಲಿ ಲಕ್ಷ್ಮಣರಾಯರ ಬಗ್ಗೆ ತುಂಬ ಒಳ್ಳೆಯ ಮಾತು ಬರೆದಿದ್ದರು.  ಅದನ್ನು ನಾನು ಮತ್ತು ಅಶೋಕ್‌ ಶೆಟ್ಟರ್‌ ಧಾರವಾಡದ ಕರ್ನಾಟಕ ಯೂನಿವರ್ಸಿಟಿಯ ರಸ್ತೆ ಪಕ್ಕದ ಕಲ್ಲು ಬೆಂಚಿನ ಮೇಲೆ ಕುಳಿತು ಓದಿಕೊಂಡಿದ್ದೆವು.

ಮುಂದೆ ಅದೇ ಲಂಕೇಶರು ಆಲನಹಳ್ಳಿ ಕೃಷ್ಣನ ಪ್ರತಿಭೆಯ ಮುಂದೆ  insecure ಆದಂತೆಯೇ ಲಕ್ಷ್ಮಣರಾಯರ ಪದ್ಯಗಳ ಬಗ್ಗೆಯೂ ಸಿಡಿಮಿಡಿಗುಟ್ಟತೊಡಗಿದರು. ತಮ್ಮ ಕಾವ್ಯಕ್ಕಿಲ್ಲದ sense of humor ಲಕ್ಷ್ಮಣರಾವ್‌ ಕಾವ್ಯಕ್ಕಿದೆ ಎಂಬುದೇ ಲಂಕೇಶರ ಸಿಡಿಮಿಡಿಗೆ ಕಾರಣವಾಗಿತ್ತೇನೋ? ಗೊತ್ತಿಲ್ಲ . ಲಕ್ಷ್ಮಣರಾವ್‌ಗೆ ತುಂಟತನ, ಪೋಲಿತನ- ಎರಡನ್ನೂ ಸಭ್ಯರಿಗೆ ರುಚಿಸುವಂತೆ ಬರೆದು ಓದಿಸುವ ತಾಕತ್ತಿತ್ತು : ಈಗಲೂ ಇದೆ.  ಅವತ್ತಿನ ನವ್ಯರ ಮಧ್ಯದಲ್ಲಿ ಬಿಳಿಗಿರಿ ಶುದ್ಧ ಕಾಮದ ಪದ್ಯ ಬರೆದರು. ಆದರೆ ಬಿ.ಆರ್‌.ಎಲ್‌. undiluted ಕಾಮವನ್ನು ಬದಿಗಿಟ್ಟು, ಆದರ ಜಾಗಕ್ಕೆ ತುಂಟತನ, ಅದರಲ್ಲೇ ಒಂದು ಗೇಲಿ, ಕೈಕೊಟ್ಟ ಹುಡುಗಿಗೆ ಸಣ್ಣ ಛಡಿಯೇಟು, ತಮ್ಮ ಮಧ್ಯಮ ವರ್ಗದ ನಿಸ್ಸಹಾಯಕತೆಗಳ ಬಗ್ಗೆ ತಾವೇ ಮಾಡಿಕೊಳ್ಳುವ ತಮಾಷೆ, ಹೆಂಡತಿಯನ್ನು ಓಲೈಸುವ ಬೇರೆಯದೇ ವಿಧಾನ, ಓಲೈಸುವ ಮಧ್ಯದಲ್ಲೇ ಆಕೆಗೊಂದು ಬುದ್ಧಿವಾದದ ಮಾತು- ಎಲ್ಲವನ್ನೂ ತಮ್ಮ ಕಾವ್ಯಕ್ಕೆ ಬಳಸಿಕೊಂಡರು.

ಮನೆಯ ಬಾಗಿಲಲ್ಲಿ ಒಣಗಿದ್ದರೆ ತೋರಣ
ನಾನೊಬ್ಬನೇ ಅಲ್ಲ ಅದಕ್ಕೆ ನೀನೂ ಕಾರಣ
ಅಕ್ಷಯ ಪಾತ್ರೆಯಲ್ಲಿ ದಾಂಪತ್ಯದ ಒಲವು
ತಂದು ತುಂಬಬೇಕು ನಾನೇ ಪ್ರತಿಸಲವೂ!

ಈ ಸಾಲುಗಳನ್ನು ಯಾರ ಮನೆಯ ಒಳಬಾಗಿಲಲ್ಲಿ ಬರೆದು ತೂಗುಹಾಕಿದರೂ ತಪ್ಪಾಗಲಾರದು: ಲಕ್ಷ್ಮಣರಾವ್‌ ಇದನ್ನು ಯಾವ ಕವಿಸಮಯದಲ್ಲಿ ಬರೆದರೋಅವರ ಪದ್ಯಗಳಲ್ಲಿ ಭಾಷೆ ಜರೀಪೇಟ ಕಿತ್ತೆಸೆದು ಸರಳವಾಯಿತು.  ಸುಬ್ಬಾಭಟ್ಟರ ಮಗಳೇ, ಇದೆಲ್ಲಾ ನಂದೇ ತಗೊಳ್ಳೇಅಂದಾಗ ಕವಿತೆ ನಮ್ಮ ಮನೆಯದಾಯಿತು.  ಬಿಡಲಾರೆ ನಾ ಸಿಗರೇಟು/ಹುಡುಗಿ, ಅದು ನಿನ್ನಂತೆಯೇ ಥೇಟು/ಬಿಡಬಲ್ಲೆನೇ ನಾ ನಿನ್ನಾ/ ಚಿನ್ನಾ, ಹಾಗೆಯೇ ಸಿಗರೇಟನ್ನಅಂತ ಓದಿಕೊಂಡಾಗಲೆಲ್ಲ ಹೊಸ ಸಿಗರೇಟು ಹಚ್ಚಿದ ಹುಡುಗರು ನಾವು. ಆದರೆ ಕೈಬಿಟ್ಟು ಹೋದ ಹುಡುಗಿಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ನಿಡುಸುಯ್ಯುವ, ಅವಳನ್ನು ಶಪಿಸುವ, ಪ್ರೀತಿಸುತ್ತಲೇ ಅವಳ ವಂಚನೆಯನ್ನು ಅವಳಿಗೆ ನೆನಪು ಮಾಡಿಕೊಡುವ ಪದ್ಯವೆಂದರೆ, ಬಿ.ಆರ್‌.ಎಲ್‌. ಬರೆದ ಆಟ’.

ಸೋತಳು ನಿನಗೆ ಪಿ.ಟಿ.ಉಷಾ
ಅಡೆತಡೆಗಳ ದಾಟಿ
ಓಡುವ ವೇಗದಲಿ
ನನ್ನ ಕೂಡುವ ತವಕದಲಿ
ಮೀರಿದೆ ನಾನು ಗವಾಸ್ಕರನ
ನೂರುಗಳ ದಾಖಲೆ
ನಿನಗಿತ್ತ ಮುತ್ತಿನಲಿ
ಪಡೆದ ಸಂಪತ್ತಿನಲಿ

ಎಲ್ಲ ಆಟಗಳು ತೀರಿದವು
ಈಗ ಕಣ್ಣಾಮಚ್ಚಾಲೆ
ಎಲ್ಲಡಗಿದೆ ನಲ್ಲೇ?
ಇನ್ಯಾರ ತೆಕ್ಕೆಯಲ್ಲೇ ?
ಉಳಿಸಿ ಹೋದೆಯಾ ನನಗೆ
ಮುಗಿಯದ ಹುಡುಕಾಟ
ಒಲವೇ ನೀನೆಲ್ಲಿ
ಇನ್ಯಾವ ಹೆಣ್ಣಿನಲ್ಲಿ ?

ಬಹುಶಃ ಲಕ್ಷ್ಮಣರಾವ್‌ ಮಾತ್ರ ಹೀಗೆ ಬರೆಯಬಲ್ಲರೇನೋಅವರು ಆಫೀಸಿಗೆ ಬಂದು ಕೂತ ತಕ್ಷಣ ಒಂದು ಸಲ ಆ ಹಾಡು ಹಾಡಿ ಬಿಡಿ’  ಅಂತ ಗಂಟುಬೀಳುತ್ತೇನೆ. ಬರೆದಷ್ಟೇ ಅದ್ಭುತವಾಗಿ ಲಕ್ಷ್ಮಣರಾವ್‌ ಹಾಡುತ್ತಾರೆ.  ಹೇಗೆ ಅವರಲ್ಲಿ ಅನವಶ್ಯಕ ಶ್ರೀಮದ್ಗಾಂಭೀರ್ಯಒಣ ಜಂಭಗಳಿಲ್ಲವೋ, ಹಾಗೆಯೇ ಅವರಲ್ಲಿ ಗುರುವಿನ ಹೆಣಕ್ಕೆ ಹೆಗಲು ಕೊಡುವ ದೈನೇಸಿತನವೂ ಇಲ್ಲ. ಅವರಿಗೆ ಯಾವುದೇ ಕವಿಯ, ಗುಂಪಿನ, ಲಾಬಿಯ ಹಂಗುಗಳಿಲ್ಲ. ಲಕ್ಷ್ಮೀನಾರಾಯಣ ಭಟ್ಟರು, ವೆಂಕಟೇಶಮೂರ್ತಿ, ಈ ಹಿಂದೆ ಗೋಪಾಲಕೃಷ್ಣ ಅಡಿಗರು- ಮುಂತಾದ ಹಿರಿಯರ ಸಾಹಚರ್ಯವಿತ್ತೇ ಹೊರತು, ಲಕ್ಷ್ಮಣರಾವ್‌ ಯಾರದೇ ಕೈ ಹಿಡಿದುಕೊಂಡು ಬೆಳೆದವರಲ್ಲ. ತಮ್ಮ ಕಾವ್ಯದ ಕಸುವೊಂದನ್ನೇ ನಂಬಿಕೊಂಡು ಬೆಳೆದವರು.

ಈಗ ಲಕ್ಷ್ಮಣರಾಯರಿಗೂ ಐವತ್ತೆಂಟಾಗಿದೆಯಂತೆ (ಇದನ್ನು ರವಿಬೆಳಗೆರೆಯವರು ಬರೆದದ್ದು 2004ರ ವರ್ಷದಲ್ಲಿ). ಹೀಗಾಗಿ ಕಾವ್ಯದಲ್ಲೂ ಮೊದಲಿನ ಪೋಲಿತನ ಕಡಿಮೆಯಾಗಿದೆ. ದೇವರಿಗೆ ನಮಸ್ಕಾರದಂತಹ ಕವಿತೆ ಬರೆದವರು ದೇವರೇ ಅಗಾಧ ನಿನ್ನ ಕರುಣೆಯ ಕಡಲು...ತರಹದ ಪ್ರಖರ ವೇದಾಂತದ, ಜೀವನಾನುಭವ ಸೂಸುವ ಕವಿತೆಗಳನ್ನೂ, ಭಾವಗೀತೆಗಳನ್ನೂ ಬರೆಯುತ್ತಿದ್ದಾರೆ. ಅವೆಲ್ಲವುಗಳನ್ನೂ ಮೀರಿ ನನ್ನನ್ನು ತಾಕಿದ್ದು , ತಾಯಿಯ ಬಗ್ಗೆ ಅವರು ಬರೆದಿರುವ ಗೀತೆ. ನೀವೊಮ್ಮೆ ,

ಅಮ್ಮಾ . ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು

- ಕೇಳಿಸಿಕೊಂಡು ನೋಡಿ. ತಾಯಿಯ ಬಗ್ಗೆ ಈತನಕ ಬಂದಿರುವ ಕನ್ನಡ, ತೆಲುಗು, ಹಿಂದಿ ಕವಿತೆ-ಗೀತೆಗಳನ್ನೆಲ್ಲ ನಾನು ಕೇಳಿದ್ದೇನೆ. ಓದಿದ್ದೇನೆ, ಎಲ್ಲ ಬರಹಗಳಲ್ಲೂ ತಾಯಿಯ ಬಗ್ಗೆ ಒಂದು ಧನ್ಯಭಾವ, ಮೆಚ್ಚುಗೆ, ‘ಅಮ್ಮ ಬೇಕುಅನ್ನುವಿಕೆ ಇದ್ದೇ ಇರುತ್ತದೆ. ಆದರೆ ಉಳಿದ್ಯಾವ ಭಾಷೆಯ ಕವಿಗಳ ಅನಿಸಿಕೆಗೂ ನಿಲುಕದ ಒಂದು ಭಾವ ಲಕ್ಷ್ಮಣರಾವ್‌ಗೆ ನಿಲುಕಿದೆ ಈ ಪದ್ಯದಲ್ಲಿ.  ಇಲ್ಲಿ ಕವಿ, ಅಮ್ಮನನ್ನು ಇನ್ನು ನನ್ನ ಕೈ ಬಿಡು, ನಾನು ಹೊಸ ಎತ್ತರಗಳಿಗೇರುತ್ತೇನೆ ಅಂತ ವಿನಂತಿಸುತ್ತಾನೆ. ಬೇಕೆನ್ನಿಸಿದಾಗ ಮತ್ತೆ ನಿನ್ನ ಮಡಿಲಿಗೆ ಹಿಂತಿರುಗುತ್ತೇನೆ ಅನ್ನುತ್ತಾನೆ. ಇದೆಲ್ಲ ಮಾತು ಒತ್ತಟ್ಟಿಗಿರಲಿ:

ಹಾಡೆ- ಮಾತಾಡೆಕೇಳಿದ ಮೇಲೆ ಅವರ ಚಿಂತಾಮಣಿಯ ಮನೆಗೆ ಫೋನು ಮಾಡಿ ಹೇಳಿದೆ:

ರಾಯರೇ, ಈ ಸಲ ಬೆಂಗಳೂರಿಗೆ ಬಂದಾಗ ಕಾಣದೆ ಹೋಗಬೇಡಿ. ಒಂದಿಷ್ಟು ಪದ್ಯ ನಿಮ್ಮದು, ಒಂದಷ್ಟು ಮದ್ಯ ನಮ್ಮದು. ನಿಮ್ಮೊಂದಿಗೆ ನಕ್ಕು, ಅದರ ನೆನಪು ಉಳಿಸಿಕೊಳ್ಳಲಿಕ್ಕೆ ನಮಗೂ ಅವಕಾಶ ಕೊಡಿ’.

ಆಗಲಿ ಅಂದರು ಲಕ್ಷ್ಮಣರಾವ್‌.

-------------------------
ವಯಸ್ಸು ಎಪ್ಪತ್ತೇ ಆದರೂ  ಯುವ ಕವಿ ಎಂದೇ ಕರೆಸಿಕೊಳ್ಳುವ ಲಕ್ಷ್ಮಣರಾವ್‌ರವರಿಗೆ ಸಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡಾ.ಪು.ತಿ.ನ. ಕಾವ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದವುಗಳು. ಅಭಿಮಾನಿಗಳು, ಗೆಳೆಯರು ಅರ್ಪಿಸಿದ ಅಭಿನಂದನ ಗ್ರಂಥ ಚಿಂತಾಮಣಿ2006ರಲ್ಲಿ.


ಈ ಹಲವು ಸವಿಭಾವಗಳೊಂದಿಗೆ ನಮ್ಮ ಪ್ರೀತಿಯ ಬಿ. ಆರ್. ಲಕ್ಷಣರಾಯರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.  ನಿಮ್ಮಲ್ಲಿನ ಪ್ರೀತಿ, ನಿಮ್ಮ ಸವಿ ಸಿಂಚನದಿಂದ ನಿಮ್ಮಲಿರುವ ತುಂಟ ಕವಿತನದ  ಸವಿಯನ್ನೇ ನಮ್ಮ ಮನಸ್ಸುಗಳೂ  ತುಂಬಿ ನಲಿಯುತ್ತಿರುವಂತಾಗಲಿ.  ನಿಮ್ಮ ಬದುಕು  ಸುಖ, ಸಂತಸಗಳಿಂದ ಶ್ರೀಮಂತವಾಗಿರಲಿ.

Tag: B. R. Lakshmana Rao

ಕಾಮೆಂಟ್‌ಗಳಿಲ್ಲ: