ಮಂಗಳವಾರ, ಸೆಪ್ಟೆಂಬರ್ 3, 2013

ಧೀರೂಭಾಯಿ ಅಂಬಾನಿ

ಧೀರೂಭಾಯಿ ಅಂಬಾನಿ

'ಧೀರೂಭಾಯಿ' ಎಂದು ಹೆಸರಾದ ಧೀರಜ್‌ಲಾಲ್‌ ಹೀರಾಚಂದ್‌ ಅಂಬಾನಿ ಅವರು 1932ರ ಡಿಸೆಂಬರ್‌ 28ರಂದು ಭಾರತದ ಇಂದಿನ ಗುಜರಾತ್ ರಾಜ್ಯದಲ್ಲಿ ಜಾಮ್‌ನಗರದ ಚೋರವಾಡ್‌ ಹತ್ತಿರದ ಕುಕಸವಾಡದಲ್ಲಿ ಜನಿಸಿದರು. ಹೀರಾಚಂದ್‌ ಗೋವರ್ಧನ್‌ದಾಸ್‌ ಅಂಬಾನಿ ಇವರ ತಂದೆ ಮತ್ತು ಜಮ್‌ನಾಬೆನ್‌ ಇವರ ತಾಯಿ. ಇವರದ್ದು ಮೋಧ್‌ ಪಂಗಡಕ್ಕೆ ಸೇರಿದ ಸಾಮಾನ್ಯ ಕುಟುಂಬವಾಗಿತ್ತು. ಹಳ್ಳಿಯ ಶಾಲಾ ಅಧ್ಯಾಪಕರಾಗಿದ್ದ ಹೀರಾಚಂದ್‌ ಗೋವರ್ದನ್‌ದಾಸ್‌ ಅಂಬಾನಿ ಅವರ ಗಳಿಕೆ ತೀರಾ ಕಡಿಮೆ ಇತ್ತು.

ಬಾಲಕ ಧೀರೂಭಾಯಿ ಅಸಾಧ್ಯ  ಬುದ್ಧಿವಂತನಾಗಿದ್ದ. ಉಸಿರು ಕಟ್ಟಿಸುವಂಥ ಶಾಲಾ ತರಗತಿಯ ವಾತಾವರಣದ ಬಗ್ಗೆ ಈತನಿಗೆ ತೀವ್ರ ಅಸಹನೆ ಇದ್ದು, ತಾಳ್ಮೆ ಕಳೆದುಕೊಂಡಿದ್ದ. ಬಾಯಿಪಾಠ ಮಾಡುವ ಶಾಲಾ ಪಾಠಗಳ ಬದಲಿಗೆ ಗರಿಷ್ಠ ಮಟ್ಟದ ಶಾರೀರಿಕ ಸಾಮರ್ಥ್ಯವನ್ನು ಬಳಸುವಂತಹ ಕೆಲಸ-ಕಾರ್ಯಗಳನ್ನು ಕೈಗೊಳ್ಳಲು ಬಾಲಕ ಧೀರೂಭಾಯಿ ಇಚ್ಛಿಸುತ್ತಿದ್ದ.  ವಾರಾಂತ್ಯಗಳಲ್ಲಿ ಆತ ಹಳ್ಳಿ ಜಾತ್ರೆಗಳಲ್ಲಿ ಈರುಳ್ಳಿ/ಆಲೂಗಡ್ಡೆ ಕರಿಯುವ ಅಂಗಡಿಯನ್ನು ಸ್ಥಾಪಿಸಿ ಹೆಚ್ಚುವರಿ ಹಣಗಳಿಸಿ ಅದನ್ನು ತನ್ನ ತಾಯಿಗೆ ನೀಡುತ್ತಿದ್ದ.

ತಮ್ಮ 16ನೆಯ ವಯಸ್ಸಿನಲ್ಲಿ ಧೀರೂಭಾಯಿ ಯೆಮೆನ್ ದೇಶದ ಆಡೆನ್‌ಗೆ ಹೋದರು. ಅಲ್ಲಿ ಅವರು 300 ರೂಪಾಯಿಗಳ ತಿಂಗಳ ಸಂಬಳಕ್ಕೆ ಎ. ಬೆಸ್ಸೀ  ಎಂಬ ಸಂಸ್ಥೆಯಲ್ಲಿ ಕೆಲಸ ಮಾಡಿದರು. ಎರಡು ವರ್ಷಗಳ ನಂತರ, ಎ. ಬೆಸ್ಸೀ ಅಂಡ್‌ ಕಂಪೆನಿಯು ಷೆಲ್‌ ಉತ್ಪನ್ನಗಳ ಅಧಿಕೃತ ವಿತರಣೆಯ ಹಕ್ಕನ್ನು ಪಡೆಯಿತು. ಅಲ್ಲದೆ ಧೀರೂಭಾಯಿ ಅವರನ್ನು ಆಡೆನ್‌ ಬಂದರಿನಲ್ಲಿರುವ ಸಂಸ್ಥೆಯ ಇಂಧನ ಭರ್ತಿಮಾಡುವ ಕೇಂದ್ರದ ವ್ಯವಸ್ಥಾಪಕನನ್ನಾಗಿ ನೇಮಿಸಿತು.  ರಿಲಾಯನ್ಸ್ ಉದ್ಯಮ ಅವರ ನೇತೃತ್ವದಲ್ಲಿ ಅತ್ಯಂತ ಪ್ರಸಿದ್ಧಿಗೆ ಬಂದ ಸಮಯದಲ್ಲಿ ಒಂದು ಸಂದರ್ಶನದಲ್ಲಿ ಧೀರೂಭಾಯಿ ಹೇಳಿದ್ದರು.  ಅಂದಿನ ದಿನಗಳಲ್ಲಿ ವಾಹನಗಳಿಗೆ ಪೆಟ್ರೋಲ್ ತುಂಬುತ್ತಿದ್ದಾಗ ಅವರಿಗನ್ನಿಸಿತಂತೆ.  ಈ ಪೆಟ್ರೋಲ್ ಬಂಕ್ ಒಡೆಯ ನಾನಾಗಿದ್ದರೆ ಎಷ್ಟು ಚೆನ್ನಿತ್ತು ಅಂತ.  ಅದೊಂದು ನನ್ನಿಂದಾಗಲಿಲ್ಲ ಎಂದಿದ್ದರು ಧೀರೂಬಾಯ್”.  ಆದರೆ ಅವರು ಪೆಟ್ರೋಲಿಯಂ ಉದ್ಯಮವನ್ನೂ ಒಳಗೊಂಡಂತೆ ಎಲ್ಲಾ ಬಹಳಷ್ಟು ಕ್ಷೇತ್ರಗಳ ಸ್ವಾಮ್ಯವನ್ನು ಹೊಂದಿದವರಾದರು.  

ಅಂತಿಮವಾಗಿ, ಧೀರೂಭಾಯಿ ಅಂಬಾನಿ ಭಾರತಕ್ಕೆ ಹಿಂದಿರುಗಿದರು. ಯೆಮೆನ್‌ ದೇಶದ ಆಡೆನ್‌ನಲ್ಲಿ ಧೀರೂಭಾಯಿಯೊಂದಿಗಿದ್ದ ಅವರ ಎರಡನೆಯ ಸೋದರಸಂಬಂಧಿ ಚಂಪಕ್‌ಲಾಲ್‌ ದಮಾನಿಯೊಂದಿಗೆ 'ಮಜಿನ್‌' ಎಂಬ ವಾಣಿಜ್ಯ ಸಂಸ್ಥೆಯನ್ನು ಸ್ಥಾಪಿಸಿದರು. ಮಜಿನ್‌ ಸಂಸ್ಥೆಯು ಪಾಲಿಯೆಸ್ಟರ್‌ ನೂಲುಹುರಿಯನ್ನು ಆಮದು ಮಾಡಿಕೊಂಡು ಮಸಾಲೆ ಪದಾರ್ಥಗಳನ್ನು ರಫ್ತು ಮಾಡುತ್ತಿತ್ತು. ರಿಲಾಯನ್ಸ್‌ ವಾಣಿಜ್ಯ ನಿಗಮದ ಮೊದಲ ಕಾರ್ಯಾಲಯವನ್ನು ಮಸಜಿದ್‌ ಬಂದರ್‌ನ ನರಸೀನಾಥ ಬೀದಿಯಲ್ಲಿ ಸ್ಥಾಪಿಸಲಾಯಿತು. ಅದು ಮೂರು ಕುರ್ಚಿಗಳು, ಒಂದು ಮೇಜು ಮತ್ತು ಒಂದು ದೂರವಾಣಿಯನ್ನು ಹೊಂದಿದ್ದ ಕೊಠಡಿಯಾಗಿತ್ತು.  ಕೇವಲ 350 ಚದರ ಅಡಿ ಜಾಗದಲ್ಲಿ ಪ್ರಾರಂಭವಾದ ಈ ಉದ್ಯಮದಲ್ಲಿ ಅವರಿಗೆ  ಸಹಾಯ ಮಾಡಲು ಇಬ್ಬರು ಸಹಾಯಕ ಸಿಬ್ಬಂದಿಯಿದ್ದರು. ಚಂಪಕ್‌ಲಾಲ್‌ ದಮಾನಿ ಮತ್ತು ಧೀರೂಭಾಯಿ ಅಂಬಾನಿಯವರು ತಮ್ಮ ಪಾಲುದಾರಿಕೆಯನ್ನು 1965ರಲ್ಲಿ ಅಂತ್ಯಗೊಳಿಸಿದ ನಂತರ, ಧೀರೂಭಾಯಿ ತಮ್ಮದೇ ಹಾದಿ ಹಿಡಿದರು. 1968ರಲ್ಲಿ ಅವರು ದಕ್ಷಿಣ ಮುಂಬಯಿಯಲ್ಲಿರುವ ಅಲ್ಟಮೌಂಟ್‌ ರಸ್ತೆಯಲ್ಲಿರುವ ದುಬಾರಿ ವಠಾರದ ಮನೆಗೆ ಸ್ಥಳಾಂತರಗೊಂಡಿದ್ದರು.  1970ರ ದಶಕದ ಉತ್ತರಾರ್ಧದಲ್ಲಿ ಅಂಬಾನಿಯವರ ನಿವ್ವಳ ಮೌಲ್ಯವು 10 ದಶಲಕ್ಷ ರೂಪಾಯಿಗಳಾಗಿದ್ದವು.

ಧೀರೂಭಾಯಿ ಎಂತಹ ಚಾಣಾಕ್ಷರೆಂದರೆಆಗಾಗ್ಗೆ ನಷ್ಟದಲ್ಲಿ ರಫ್ತು ಮಾಡಿ, ನೂಲು ಹುರಿಯನ್ನು ಆಮದು ಮಾಡಿಕೊಳ್ಳಲು ಪುನಃಪುನಹ ಪರವಾನಗಿಯನ್ನು ಬಳಸಿದರು. ಅನಂತರ, ಭಾರತದಲ್ಲಿ ನೂಲುಹುರಿಯ ತಯಾರಿಕೆಯು ಆರಂಭವಾದಾಗ, ಧೀರೂಭಾಯಿ ನೂಲುಹುರಿಯನ್ನು ಪುನಃ ನಷ್ಟದಲ್ಲಿಯೇ ರಫ್ತು ಮಾಡಿ, ನೈಲಾನ್‌ನ್ನು ಆಮದು ಮಾಡಿದರು. ಧೀರೂಭಾಯಿ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಯಾವಾಗಲೂ ಒಂದು ಹೆಜ್ಜೆ ಮುಂದಿದ್ದರು. ಆಮದಾದ ವಸ್ತುಗಳಿಗಾಗಿ ಭಾರೀ ಬೇಡಿಕೆಯಿರುವುದರಿಂದ, ಧೀರೂಭಾಯಿಯವರ ಲಾಭಾಂಶವು ಶೇಕಡಾ 300ಕ್ಕಿಂತ ಕೆಳಗಿಳಿದದ್ದು ತೀರ ವಿರಳ.

ಜವಳಿ ಉದ್ದಿಮೆಯಲ್ಲಿ ಒಳ್ಳೆಯ ಅವಕಾಶವನ್ನು ಕಂಡ ಧೀರೂಭಾಯಿ, ತಮ್ಮ ಮೊದಲ ಜವಳಿ ಗಿರಣಿಯನ್ನು 1977ರಲ್ಲಿ ಅಹ್ಮದಾಬಾದ್‌ನ ನರೋಡಾದಲ್ಲಿ ಆರಂಭಿಸಿದರು. ಪಾಲಿಯೆಸ್ಟರ್‌ ನಾರಿನ ನೂಲುಹುರಿಗಳನ್ನು ಬಳಸಿ ಜವಳಿಗಳನ್ನು ತಯಾರಿಸಲಾಗುತ್ತಿತ್ತು. ಅವರ ಅಣ್ಣ ರಮಣಿಕ್‌ಲಾಲ್‌ ಅಂಬಾನಿಯವರ ಪುತ್ರ ವಿಮಲ್‌ ಅಂಬಾನಿ ಹೆಸರನ್ನಾಧರಿಸಿ ಧೀರೂಭಾಯಿಯವರು 'ವಿಮಲ್' ಎಂಬ ಬ್ರ್ಯಾಂಡ್‌ನ್ನು ಆರಂಭಿಸಿದರು. ಭಾರತ ದೇಶದ ಒಳವಲಯಗಳಲ್ಲಿ 'ವಿಮಲ್‌' ಬ್ರ್ಯಾಂಡ್‌ ಬೃಹತ್ಪ್ರಮಾಣದಲ್ಲಿ ಮಾರಾಟವಾಗಿ ಅದು ಮನೆಮಾತಾಯಿತು. ಅಧಿಕಾರ-ಪ್ರಧಾನ ಚಿಲ್ಲರೆ ವ್ಯಾಪಾರದ ಅಂಗಡಿಗಳನ್ನು ಆರಂಭಗೊಳಿಸಿ, ಅಂಗಡಿಗಳು ಓನ್ಲಿ ವಿಮಲ್‌' ಹೆಸರಿನ ಜವಳಿಗಳನ್ನು ಮಾರುತ್ತಿದ್ದವು. 1975ರಲ್ಲಿ ವಿಶ್ವ ಬ್ಯಾಂಕ್‌ನ ತಾಂತ್ರಿಕ ತಂಡವೊಂದು ರಿಲಾಯನ್ಸ್‌ ಟೆಕ್ಸ್‌ಟೈಲ್ಸ್‌ನ ತಯಾರಿಕೆಯ ಘಟಕಕ್ಕೆ ಭೇಟಿ ನೀಡಿತು. ಈ ಘಟಕಕ್ಕೆ 'ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಟ್ಟದ ಉತ್ತಮ ಸಂಸ್ಥೆಯೆಂಬ ಪ್ರಮಾಣ ಪತ್ರ ಸಂದಿರುವುದು ಆ ಕಾಲದಲ್ಲಿಯೇ ಒಂದು ಅಪರೂಪದ ಹೆಗ್ಗಳಿಕೆಯಾಗಿತ್ತು.'

ಭಾರತದಲ್ಲಿ ಇಕ್ವಿಟಿ ಕಲ್ಟ್‌ ಆರಂಭವಾಗಲು ಧೀರೂಭಾಯಿ ಅಂಬಾನಿಯವರೇ ಕಾರಣ. ಭಾರತದ ವಿವಿಧ ಭಾಗಗಳಿಂದ 58000ಕ್ಕೂ ಅಧಿಕ ಹೂಡಿಕೆದಾರರು 1977ರಲ್ಲಿ ರಿಲಾಯನ್ಸಿನ ಐ.ಪಿ.ಓಗೆ ಚಂದಾದಾರರಾದರು. ತಮ್ಮ ಉದ್ದಿಮೆಯ ಷೇರುದಾರರಾಗುವುದು ಲಾಭದಾಯಕವೆಂದು ಗುಜರಾತ್‌ನ ಗ್ರಾಮಾಂತರ ಪ್ರದೇಶಗಳಲ್ಲಿರುವ ಅಧಿಕ ಸಂಖ್ಯೆಯಲ್ಲಿರುವ ಸಣ್ಣ ಪ್ರಮಾಣದ ಹೂಡಿಕೆದಾರರ ಮನವೊಪ್ಪಿಸಲು ಧೀರೂಭಾಯಿಯವರಿಗೆ ಸಾಧ್ಯವಾಯಿತು.

ವಾರ್ಷಿಕ ಮಹಾಸಭೆಯನ್ನು ಕ್ರೀಡಾಂಗಣಗಳಲ್ಲಿ ನಡೆಸುವುದರಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ ಮೊದಲ ಖಾಸಗಿ ಕ್ಷೇತ್ರ ಉದ್ದಿಮೆಯಾಗಿತ್ತು.  1986ರಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ನ ವಾರ್ಷಿಕ ಮಹಾಸಭೆಯು ಮುಂಬಯಿಯ ಕ್ರಾಸ್ ಮೈದಾನದಲ್ಲಿ ನಡೆಯಿತು. 35,000ಕ್ಕೂ ಹೆಚ್ಚು ಷೇರುದಾರರು ಮತ್ತು ರಿಲಾಯನ್ಸ್‌ ಕುಟುಂಬದವರು ಇದರಲ್ಲಿ ಹಾಜರಿದ್ದರು.  1980ರ ಆರಂಭದಲ್ಲಿ ಅಂಬಾನಿಯವರ ನಿವ್ವಳ ಮೌಲ್ಯವು ಸುಮಾರು ಒಂದು ಶತಕೋಟಿ ರೂಪಾಯಿಗಳೆಂದು ಅಂದಾಜಾಗಿತ್ತು.

ಕಾಲಾಂತರದಲ್ಲಿ, ಧೀರೂಭಾಯಿ ತಮ್ಮ ಉದ್ದಿಮೆಯನ್ನು ವೈವಿಧ್ಯಗೊಳಿಸಿದರು. ಪೆಟ್ರೊರಾಸಾಯನಿಕಗಳು, ದೂರಸಂವಹನ, ಮಾಹಿತಿ ತಂತ್ರಜ್ಞಾನ, ಇಂಧನ, ಶಕ್ತಿ, ಚಿಲ್ಲರೆ ವ್ಯಾಪಾರ, ಜವಳಿಗಳು, ಮೂಲಭೂತ ಸೌಕರ್ಯ ಸೇವೆಗಳು, ಬಂಡವಾಳ ಮಾರುಕಟ್ಟೆಗಳು ಮತ್ತು ಜಾರಿವ್ಯವಸ್ಥೆ ಕ್ಷೇತ್ರಗಳಲ್ಲಿ ಪಸರಿಸಲಾರಂಭಿಸಿದವು. ಇಡೀ ರಿಲಾಯನ್ಸ್‌ ಸಂಸ್ಥೆಯನ್ನು 'ಅಂದಾಜು ವಾರ್ಷಿಕ ವಹಿವಾಟು ಮೊತ್ತ 12 ಶತಕೋಟಿ ಡಾಲರ್ ಮತ್ತು 85ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ವಾಣಿಜ್ಯ ಸಾಮ್ರಾಜ್ಯ' ಎಂದು ಬಿಬಿಸಿ ಬಣ್ಣಿಸಿದೆ.

ತನ್ನ ಸ್ವಂತ ಅಗತ್ಯಗಳಿಗೆ ಸರಿಹೊಂದುವಂತೆ ಸರ್ಕಾರಿ ನೀತಿಗಳನ್ನು ತಿರುಚುವಂತಹ ದಬ್ಬಾಳಿಕೆ ವರ್ತನೆ ಮತ್ತು ಸರ್ಕಾರೀ ಚುನಾವಣೆಗಳಲ್ಲಿ ರಾಜಕೀಯ ಪ್ರಭಾವವನ್ನು ಬಳಸುವ ಆಪಾದನೆಗಳು ಧೀರೂಭಾಯಿಯವರ ವಿರುದ್ಧವಿತ್ತು. ಉದ್ದಿಮೆ-ರಾಜಕೀಯ ನಂಟಿನ ಬಗ್ಗೆ ಬಹಳಷ್ಟು ಮಾಧ್ಯಮ ಮೂಲಗಳು ಗುಲ್ಲೆಬ್ಬಿಸಿದರೂ, ಅಂಬಾನಿ ಮನೆತನವು, ದೇಶದೆಲ್ಲಡೆ ಬೀಸಿದ ಮಾಧ್ಯಮ ಚಂಡಮಾರುತಗಳಿಂದ ಅಧಿಕ ರಕ್ಷಣೆ ಮತ್ತು ಆಸರೆಯನ್ನು ಯಾವಾಗಲೂ ಪಡೆದಿದೆ.

ಧೀರೂಬಾಯಿ 2002ರ ವರ್ಷದಲ್ಲಿ ನಿಧನರಾದರು.  ಅವರಿಬ್ಬರ ಮಕ್ಕಳು ಅನಿಲ್ ಮತ್ತು ಮುಖೇಶ್ ತಮ್ಮ ಅಹಂಮಿಕೆಯ  ಸೋದರ ಜಗಳದಲ್ಲಿ ಒಬ್ಬರನ್ನು ಒಬ್ಬರು ಮೀರಿಸುತ್ತಿದ್ದರೂ ತಮ್ಮದೇ ಕ್ಷೇತ್ರಗಳಲ್ಲಿ ಉದ್ಯಮವನ್ನು ಮತ್ತಷ್ಟು ಪ್ರಾಬಲ್ಯಯುತವಾಗಿ ನಡೆಸುತ್ತಿದ್ದಾರೆ.  

ಒಬ್ಬ ಶಿಕ್ಷಕನ ಮಗನಾದ ಸಾಧಾರಣ ವ್ಯಕ್ತಿ ತನ್ನ ಆಕಾಂಕ್ಷೆ ಮತ್ತು ಪರಿಶ್ರಮದಿಂದ  ವ್ಯಾಪಾರಕ್ಕೆ ಕಟುವಾಗಿದ್ದ ಅಂದಿನ ಭಾರತದ  ವಾತಾವರಣದಲ್ಲಿ ಮೂಡಿಸಿದ ಅಪ್ರತಿಮ ಸಾಧನೆ ಅವಿಸ್ಮರಣೀಯವಾದದ್ದು.  ಈ ನಿಟ್ಟಿನಲ್ಲಿ ಧೀರೂಭಾಯಿ ಅಂಬಾನಿ ಭಾರತದ ಉದ್ಯಮರಂಗದಲ್ಲಿ ಅಚ್ಚಳಿಯದ ಶಾಶ್ವತ ಹೆಸರು.

Tag: Dheerubhai Ambani

ಕಾಮೆಂಟ್‌ಗಳಿಲ್ಲ: