ಮಂಗಳವಾರ, ಸೆಪ್ಟೆಂಬರ್ 3, 2013

ಶಾರುಕ್ ಖಾನ್

ಶಾರುಕ್ ಖಾನ್

ಪ್ರಸಿದ್ಧ ನಟ ಶಾರುಕ್ ಖಾನ್ ಅವರು ಹುಟ್ಟಿದ್ದು ನವೆಂಬರ್ 2, 1965ರಲ್ಲಿ.  ಶಾರುಕ್ ಖಾನ್ ತನ್ನ ಮುಗುಳ್ನಗೆಯಿಂದ ತನ್ನ ಹುಡುಗಾಟಿಕೆಯಂತಹ ಸಹಜತೆಯಿಂದ ಹಲವು ಪಾತ್ರಗಳಲ್ಲಿ, ದೂರದರ್ಶನದ ಪ್ರದರ್ಶನಗಳಲ್ಲಿ, ಹಲವಾರು ಮಾತುಕತೆಗಳಲ್ಲಿ ನಮ್ಮನ್ನು ಮುದ್ದು ಮಗುವೊಂದು ನಮ್ಮನ್ನು ಆಕರ್ಷಿಸುವಂತೆ ಆಕರ್ಷಿಸಿಬಿಡುತ್ತಾನೆ.

ತೊಂಬತ್ತರ ದಶಕದಲ್ಲಿ ಫೌಜಿ, ಸರ್ಕಸ್, ಇಂತಜಾರ್ ಅಂತಹ ದೂರದರ್ಶನದ ಹಲವಾರು ಸರಣಿ ಧಾರವಾಹಿಗಳಲ್ಲಿ ಅಭಿನಯಿಸಿ ತನ್ನ ನಗೆ, ಹುಡುಗತನ, ಸ್ನೇಹಪರ ಕಣ್ಣುಗಳಿಂದ ಗಮನಸೆಳೆದ ಶಾರುಕ್  ಚಿತ್ರರಂಗಕ್ಕೆ ಬಂದದ್ದು 1991ರ ವರ್ಷದಲ್ಲಿ.  ಅಮಿತಾಬರ ವರ್ಚಸ್ಸು, ಅಮೀರ್ ಖಾನನ ಗಾಂಭೀರ್ಯ ಇವೆಲ್ಲಾ ಇಲ್ಲದಿದ್ದರೂ ಶಾರುಕ್ ತನ್ನ ಹುಡುಗುತನದ ಸಹಜ ಗುಣಗಳನ್ನೇ  ತನ್ನ ಶಕ್ತಿಯನ್ನಾಗಿಸಿಕೊಂಡು ತನ್ನ ನಿರಂತರ ಪರಿಶ್ರಮದಿಂದ ಗಣನೀಯ ಯಶ್ಸಸ್ಸನ್ನು ಗಳಿಸಿಕೊಂಡಿದ್ದಾರೆ.

ಒಂದು ರೀತಿಯಲ್ಲಿ ಆತನ ಯಶಸ್ವಿಯಾದ ಪಾತ್ರಗಳೂ ಸಹಾ ಆತನ ಸಹಜತನದ ಹುಡುಗಾಟಿಕೆಯನ್ನೇ ಬಿಂಬಿಸಿವೆ.  ಅದನ್ನು ಮೀರಿ ಗಾಂಭೀರ್ಯದಲ್ಲೋ, ಡಾನ್ ಅಂತಹ ಬಿರುಸಿನಲ್ಲೋ ಆತ ಪ್ರಯತ್ನಮಾಡಿದಾಗ ಅಷ್ಟೊಂದು ಸಹಜನೆನಿಸುವುದಿಲ್ಲ ಎಂಬುದು ಕೂಡಾ ಅಷ್ಟೇ ನಿಜ.  ಆದರೆ, ಆತನ ಅಭಿನಯದ ಸಾಮರ್ಥ್ಯಗಳನ್ನು ಮೀರಿ ಆತನ ಕುರಿತಾದ ಆಕರ್ಷಣೆ ಮತ್ತು ನಿರೀಕ್ಷೆಗಳು ಆತನ ಬಹುತೇಕ ಚಿತ್ರಗಳನ್ನು ಯಶಸ್ವಿಯಾಗಿಸಿವೆ.

‘ದಿಲ್ವಾಲೆ ದುಲ್ಹನಿಯ ಲೆ ಜಾಯೇಂಗೆ’, ‘ಪರದೇಶ್’, 'ಕುಚ್ ಕುಚ್ ಹೋತಾ ಹೈ’, ‘ದಿಲ್ ತೊ ಪಾಗಲ್ ಹೈ’,  ‘ಚಕ್ ದೆ ಇಂಡಿಯಾ’, ‘ಕಲ್ ಹೋ ನ ಹೋ’, ‘ಓಂ ಶಾಂತಿ ಓಂ’, ‘ಕಭಿ ಖುಷಿ ಘಂ’, ‘ಸ್ವದೇಶ್’ ಮುಂತಾದ ಚಿತ್ರಗಳಲ್ಲಿ ಶಾರುಕ್ ಖಾನ್ ಸುಂದರವಾಗಿ ಮಿಂಚಿದ್ದಾರೆ.  ಹಲವು ಹೊಸ ಪ್ರತಿಭೆಗಳ ಜೊತೆ ಅಭಿನಯಿಸುವುದರೊಂದಿಗೆ ತೆರೆದ ಹೃದಯ ಕೂಡಾ ಪ್ರದರ್ಶಿಸಿದ್ದಾರೆ.

ಶಾರುಕ್ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ.  ಹೋದೆಡೆಯಲ್ಲಿ ಕುಣಿದು ಕುಪ್ಪಳಿಸಿ ಸ್ನೇಹಪರತೆ ತೋರುವ ಶಾರುಕ್ ಖಾನ್ ಬದುಕಿನಲ್ಲಿ ಎಲ್ಲ ರೀತಿಯಲ್ಲಿ ಯಶಸ್ವಿಯಾಗಲಿ, ಆತನ ಬದುಕು ಸುಂದರವಾಗಿರಲಿ ಎಂದು ಹಾರೈಸೋಣ.

Tag: Sharukh Khan

ಕಾಮೆಂಟ್‌ಗಳಿಲ್ಲ: