ಭಾನುವಾರ, ಸೆಪ್ಟೆಂಬರ್ 1, 2013

ಅವಿನಾಶ್

ಅವಿನಾಶ್

ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಅವಿನಾಶ್ ಒಬ್ಬರು.  ಬಹುಷಃ ಅವರು ಇಲ್ಲದ ಚಿತ್ರಗಳೇ ಇಲ್ಲ ಎನ್ನುವಷ್ಟು ಅವರು ಪ್ರಮುಖರು.  ಪೋಷಕ ಪಾತ್ರಗಳು, ಖಳ ನಟ ಪಾತ್ರಗಳಲ್ಲಿ ಒಂದು ರೀತಿಯ ಹೊಸ ಭಾಷ್ಯ ಬರೆದು ತಮ್ಮ ಹೊಸ ರೀತಿಯ ಅಭಿನಯ, ಶಿಸ್ತು, ಸೌಜನ್ಯ, ಅತ್ಮೀಯತೆಗಳಿಂದ ಚಿತ್ರರಂಗದಲ್ಲಿನ ಉದ್ಯಮಿಗಳು, ಸಹೋದ್ಯೋಗಿಗಳು ಜೊತೆಗೆ ಪ್ರೇಕ್ಷಕರು ಎಲ್ಲರಿಗೂ ಮೆಚ್ಚಿನವರಾಗಿ ಚಿತ್ರರಂಗದಲ್ಲಿ ಅಪಾರ ಬೇಡಿಕೆಯ ನಟರಾಗಿದ್ದಾರೆ.

ಡಿಸೆಂಬರ್ 22 ಅವಿನಾಶ್ ಅವರ ಜನ್ಮದಿನ.  ಅವಿನಾಶ್ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.  ಅವರು ಓದುತ್ತಿದ್ದ ದಿನಗಳಲ್ಲಿ ಡಾ. ಯು. ಆರ್. ಅನಂತಮೂರ್ತಿ ಮುಂತಾದ ಗಣ್ಯರು ಅವರ ಗುರುಗಳಾಗಿದ್ದರು.  ಓದಿನ ನಂತರದಲ್ಲಿ ಹಲವು ಕಾಲ ಮೈಸೂರಿನ ಶಾರದಾ ವಿಲಾಸ್ ಕಾಲೇಜು, ಬೆಂಗಳೂರಿನ ಬಿ.ಇ.ಎಸ್ ಕಾಲೇಜು, ಬಿ.ಇ.ಎಲ್ ಕಾಲೇಜು, ಎಂ.ಇ.ಎಸ್ ಕಾಲೇಜು ಮುಂತಾದೆಡೆ ಅಧ್ಯಾಪಕ ವೃತ್ತಿ ನಡೆಸಿದರು.  ಆದರೆ ಅವರು ಹೆಚ್ಚು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದ ಅಧ್ಯಾಪಕ ವೃತ್ತಿಗೆ ವಿದಾಯ ಹೇಳಬೇಕಾಗಿ ಬಂತು.  ಬಿ. ಜಯಶ್ರೀ ಅವರ ಸ್ಪಂದನ, ಶಂಕರನಾಗ್ ಅವರ ಸಂಕೇತ್, ಪ್ರಸನ್ನರ ಜನಪದ ಮುಂತಾದ ಪ್ರಖ್ಯಾತ ನಾಟಕ ತಂಡಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. 

ಶಂಕರನಾಗ್ ಅವರ ಸಂಕೇತ್ ತಂಡದಲ್ಲಿದ್ದಾಗ ಒಮ್ಮೆ ತ್ರಿಶೂಲ ಎಂಬ ಚಿತ್ರದಲ್ಲಿ ಒಂದು ಪಾತ್ರ ವಹಿಸಿದರು.  ಆ ಚಿತ್ರ ಬಿಡುಗಡೆ ಕಾಣದಿದ್ದರೂ ಕೆ.ವಿ. ರಾಜು ಅವರು ತಮ್ಮ ಹಲವಾರು ಚಿತ್ರಗಳಲ್ಲಿ ಅವಿನಾಶ್ ಅವರಿಗೆ ಅವಕಾಶಗಳನ್ನು ನೀಡಿದರು.  ನಂತರದಲ್ಲಿ ನಿರಂತರವಾಗಿ ಅವರಿಗೆ ಅವಕಾಶಗಳು ಹರಿದು ಬರಲಾರಂಭಿಸಿದವು. 

ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಗಿರೀಶ್ ಕಾಸರವಳ್ಳಿ ಅವರ ದ್ವೀಪಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಬಂತು.   ದ್ವೀಪ’, ‘ಮತದಾನ’, 'ಚಿನ್ನಾರಿ ಮುತ್ತಮತ್ತು ಸಿಂಗಾರವ್ವಅಂತಹ ಪ್ರಶಸ್ತಿ ವಿಜೇತ ಚಿತ್ರಗಳಲ್ಲಿ ಅವರ ಅಭಿನಯ ವಿಮರ್ಶಕ ಮತ್ತು ಪ್ರೇಕ್ಷಕ ವಲಯಗಳೆರಡರಲ್ಲೂ ಅಪಾರ ಮೆಚ್ಚುಗೆ ಪಡೆಯಿತು. 

ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಅಪಾರ ಜನಪ್ರಿಯತೆ ತಂದು ಕೊಟ್ಟ ಪಾತ್ರವೆಂದರೆ ಅತ್ಯಂತ ಯಶಸ್ವೀ ಚಿತ್ರಗಳಾದ ಆಪ್ತಮಿತ್ರಮತ್ತು ಆಪ್ತ ರಕ್ಷಕಪಾತ್ರಗಳಲ್ಲಿ ಅವರು ಅಭಿನಯಿಸಿದ ರಾಮಚಂದ್ರ ಆಚಾರ್ಯರ ಪಾತ್ರ.  ಇವರ ಆಪ್ತಮಿತ್ರಚಿತ್ರದ ಅಭಿನಯ ಕಂಡ ರಜನೀಕಾಂತ್ ಅವರು ಅದರ ತಮಿಳು ಅವತರಣಿಕೆಯಾದ ಚಂದ್ರಮುಖಿಯಲ್ಲೂ ಅವರೇ ಇರಬೇಕೆಂದು ಅಭೀಷ್ಟೆ ವ್ಯಕ್ತಪಡಿಸಿದರು.  ಅವಿನಾಶ್ ಅವರು ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರ ಚಿತ್ರದಲ್ಲಿ ಸಹಾ ಅಭಿನಯಿಸಿದ್ದಾರೆ.  ಇದುವರೆವಿಗೂ ಅವಿನಾಶ್ ಸುಮಾರು 400 ಕನ್ನಡ, 12 ತೆಲುಗು ಮತ್ತು 20 ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.

ದೂರದರ್ಶನದಲ್ಲಿ ಕೂಡ ಸೀತಾರಾಂ ಅವರ ಪ್ರಖ್ಯಾತ ಧಾರವಾಹಿ ಮಾಯಾಮೃಗದಲ್ಲಿ ನಟಿಸಿದ್ದ ಅವಿನಾಶ್ ಆ ಧಾರವಾಹಿಯಲ್ಲಿ ಅವರ ಪತ್ನಿ ಪಾತ್ರ ವಹಿಸಿದ್ದ ಮಾಳವಿಕ ಅವರನ್ನು ನಿಜ ಜೀವನದಲ್ಲೂ ವರಿಸಿದ್ದುಈ ದಂಪತಿಗಳು ಪುತ್ರೋತ್ಸವ  ಆಚರಿಸಿದ್ದಾರೆ.  ಮಾಳವಿಕ ಕೂಡ ಕನ್ನಡ ಚಿತ್ರರಂಗ, ಕನ್ನಡ ದೂರದರ್ಶನಗಳಲ್ಲದೆ ದಕ್ಷಿಣ ಭಾರತದ ಪ್ರಖ್ಯಾತ ದಾರವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ಕೂಡ ನಟಿಸಿ ಅಪಾರ ಹೆಸರು ಮಾಡಿದ್ದಾರೆ.

ಸಿನಿಮಾದಲ್ಲಿ ಖಳ ಪಾತ್ರ, ಪೋಷಕ ಪಾತ್ರ ಅಂದರೆ ಹೇಗಿದ್ದರೂ ನಡೆಯುತ್ತದೆ ಎಂಬ ಕಾಲವಲ್ಲ ಇದು.  ಅವಿನಾಶ್ ಅಂಗಸೌಷ್ಟವ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಿಸಲು ದಿನಕ್ಕೆ ಐದಾರು ಕಿಲೋ ಮೀಟರ್ ಓಡುವುದಲ್ಲದೆ ಸಾಕಷ್ಟು ದೈಹಿಕ ವ್ಯಾಯಾಮ ಮಾಡುತ್ತಾರೆ. 

ಉತ್ತಮ ಶಾರೀರ, ಧ್ವನಿ, ಸಾಮರ್ಥ್ಯ ಎಲ್ಲಾ ಇದ್ದು ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಎಲ್ಲ ಶಕ್ತಿ ಇರುವ ಅವಿನಾಶ್ ಅಂತಹ ಉತ್ತಮ ನಟರನ್ನು ಚಿತ್ರರಂಗ ಇನ್ನೂ ಉತ್ತಮ ರೀತಿಯಲ್ಲಿ ಬಳಸುವ ಸಾಧ್ಯತೆಗಳಿವೆ ಎನಿಸದಿರಲಾರದು.  ಸಿನಿಮಾ ಕೇವಲ ವ್ಯಾಪಾರೀ ಮಾಧ್ಯಮವಾಗಿ ಬದಲಾಗುತ್ತಿರುವ ದಿನಗಳಲ್ಲಿ ಅಂತಹದ್ದನ್ನು ಅಪೇಕ್ಷಿಸುವುದು ಕಷ್ಟ ಸಾಧ್ಯವೇನೋ.  ಅವಿನಾಶ್ ಅವರೇ ಬಹಳಷ್ಟು ಸಂದರ್ಭಗಳಲ್ಲಿ ಹೇಳುವಂತೆ, ಇಂದಿನ ಚಿತ್ರರಂಗದಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿರುವವರು ಕೂಡ ಬಂದು ಏನು ಪಾತ್ರ, ಏನು ಕಥೆ ಎಂದು ಮಾತನಾಡುವ ಮುಂಚೆ ನಾನೊಂದು ಸಿನಿಮಾ ಮಾಡ್ಬೇಕು ಅಂತಿದ್ದೀನಿ ನಿನ್ನ ರೇಟು ಎಷ್ಟು?’ ಎಂದು ಕೇಳುವಂತ ಕಾಲವಿದು.  ಅಂತಹ ಪ್ರವೃತ್ತಿಯ ಬಗ್ಗೆ ಜಿಗುಪ್ಸೆ ತಾಳುವ ಅವಿನಾಶ್ ಹೇಳುತ್ತಾರೆ, “ನನಗೆ ಈಗ ಹಣಕ್ಕಿಂತ ಮುಖ್ಯ ಸಂತೋಷ ಕೊಡುವ ಪಾತ್ರ, ನನ್ನ ಪಾತ್ರ ಏನು ಎಂದು ಮಾತನಾಡದೆ ನನ್ನ ರೇಟ್ ಕೇಳುವ ಯಾರನ್ನೇ ಆಗಲಿ ನಾನು ತಿರಸ್ಕರಿಸುತ್ತೇನೆಎಂದು.  


ಅವಿನಾಶ್ ಅಂತಹ ಉತ್ತಮ ಪ್ರತಿಭೆಗಳು ಈ ಚಿತ್ರರಂಗದಲ್ಲಿ ಸಂತಸದಿಂದ ಉತ್ತಮ ರೀತಿ ಕಲಾ ಸೇವೆ ಕೈಗೊಳ್ಳುವಂತಾಗಲಿ, ನಮ್ಮಲ್ಲಿರುವ ಎಲ್ಲ ಕಲಾ ಮಾಧ್ಯಮಗಳೂ ಕಲೆಯಾಗಿಯೂ ಉಳಿಯುವಂತಾಗಲಿ ಎಂದು ಹಾರೈಸೋಣ.

Tag: Avinash

ಕಾಮೆಂಟ್‌ಗಳಿಲ್ಲ: