ಭಾನುವಾರ, ಸೆಪ್ಟೆಂಬರ್ 1, 2013

ವಿಶ್ವನಾಥನ್ ಆನಂದ್

ವಿಶ್ವನಾಥನ್ ಆನಂದ್

ವಿಶ್ವದ ಮಹಾನ್ ಚದುರಂಗದಾಟಗಾರರಲ್ಲಿ ಒಬ್ಬರಾದ ವಿಶ್ವನಾಥನ್ ಆನಂದ್ ಅವರು ತಮಿಳ್ನಾಡಿನ ಮಯಿಲದುತಿರೈ ಎಂಬ ಪುಟ್ಟ ಗ್ರಾಮದಲ್ಲಿ 1969ರ ಡಿಸೆಂಬರ್ 11ರಂದು ಜನಿಸಿದರು. ಇವರ ತಂದೆ ವಿಶ್ವನಾಥನ್ ಅಯ್ಯರ್ ಮತ್ತು  ತಾಯಿ ಸುಶೀಲಾ. ತಮ್ಮ ತಾಯಿಯಿಂದ ಚೆಸ್ ಬಗ್ಗೆ ಆರಂಭಿಕ ಶಿಕ್ಷಣ ಪಡೆದ ಆನಂದರಿಗೆ ಕುಟುಂಬದ ಮಿತ್ರರಾದ ದೀಪಾ ರಾಮಕೃಷ್ಣನ್ ಎಂಬವರು ಚೆಸ್ ಬಗೆಗೆ ಹೆಚ್ಚಿನ ಪರಿಜ್ಞಾನವನ್ನು ಒದಗಿಸಿದರು.  ಉತ್ತಮ ಚೆಸ್ ಪಟುವಾಗಿದ್ದ ಸೂಸಾನ್ ಪೋಲ್ಗಾರ್ ಎಂಬವರ ಜೊತೆಗೆ ನಡೆಸಿದ ನಿರಂತರ ಮಾತುಕತೆಗಳು  ಚೆಸ್ ಆಟದ ಬಗ್ಗೆ ತಮಗಿರುವ  ಪರಿಣತಿಯನ್ನು ಹೆಚ್ಚಿಸಿತು ಎನ್ನುತ್ತಾರೆ ಆನಂದ್.

ವಿಶ್ವನಾಥನ್ ಆನಂದರು ಆರನೇ ವರ್ಷದಲ್ಲಿಯೇ ಚೆಸ್ ಆಟವಾಡಲು ಪ್ರಾರಂಭಿಸಿದರು.   ಅವರ ಕುಟುಂಬದವರು ಒಂದು ವರ್ಷದ ಮಟ್ಟಿಗೆ  ಫಿಲಿಫೈನ್ಸ್ ದೇಶಕ್ಕೆ ಸ್ಥಳಾಂತರಗೊಂಡಾಗ ಅಲ್ಲಿನ ಟಿವಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದ ಒಂದು ಕಾರ್ಯಕ್ರಮದಲ್ಲಿನ  ವಿವಿಧ ಆಟಗಳು, ಕ್ವಿಜ್ ಮುಂತಾದ  ಸ್ಪರ್ಧೆಗಳು ಬಾಲಕ ಆನಂದರನ್ನು ಬಹುವಾಗಿ ಆಕರ್ಷಿಸಿತು. ಆನಂದ್ ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಅವರ ತಾಯಿ ಈ ಕಾರ್ಯಕ್ರಮದಲ್ಲಿರುತ್ತಿದ್ದ ಕೆಲವು ಪ್ರಶ್ನೆಗಳು, ಒಗಟುಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ಆ ಬಳಿಕ ಸಂಜೆ ಕುಳಿತು ಇಬ್ಬರೂ ಸೇರಿ ಆ ಸ್ಪರ್ಧೆಗಳಿಗೆ ಉತ್ತರ ಹುಡುಕುತ್ತಿದ್ದರು. ಹೀಗೆ ಕಳುಹಿಸಿದ ಉತ್ತರಗಳು ಸರಿಯಾಗಿದ್ದರೆ ಒಂದು ಪುಸ್ತಕವನ್ನು ಬಹುಮಾನವಾಗಿ ನೀಡಲಾಗುತ್ತಿತ್ತು. ಆನಂದರು ಸತತವಾಗಿ ಆ ಸ್ಫರ್ಧೆಗಳನ್ನು ಗೆಲ್ಲುತ್ತಾ ಹೋದರು.  ಹೀಗೆ ನಿರಂತರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಲು ಬರುತ್ತಿದ್ದ ಆನಂದರನ್ನು ಕುರಿತು  ಆ ಸ್ಪರ್ಧೆಯ ಆಯೋಜಕರು ನಮ್ಮಲ್ಲಿರುವ ಎಲ್ಲಾ ಪುಸ್ತಗಳನ್ನೂ ನಿನಗೇ ಕೊಟ್ಟುಬಿಡುತ್ತೇವೆ. ದಯವಿಟ್ಟು ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಬೇಡಎಂದು ತಮಾಷೆ ಮಾಡಿದ್ದನ್ನು ಆನಂದ್ ನಿರಂತರವಾಗಿ ನೆನಪುಮಾಡಿಕೊಳ್ಳುತ್ತಾರೆ.

ಮುಂದೆ  ಚೆನ್ನೈಗೆ ವಾಪಸಾದ ವಿಶ್ವನಾಥನ್ ಆನಂದರು  ಎಗ್ಮೋರ್‌ನಲ್ಲಿರುವ ಡಾನ್ ಬಾಸ್ಕೋ ಮೆಟ್ರಿಕ್ಯುಲೇಶನ್ ಹೈಯರಿ ಸೆಕೆಂಡರಿ ಶಾಲೆಯಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಲೊಯೊಲಾ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲೇ ರಾಷ್ಟ್ರೀಯ ಸಬ್‌ ಜ್ಯೂನಿಯರ್ ಚೆಸ್ ಚಾಂಪಿಯನ್‌ಷಿಪ್ ಪಡೆದ ಆನಂದ್, 1984ರ ವರ್ಷದಲ್ಲಿ ಇನ್ನೂ  ತಮ್ಮ 15ನೆಯ ವಯಸ್ಸಿನಲ್ಲೇ ಚೆಸ್‌ನ ಅಂತರಾಷ್ಟ್ರೀಯ ಮಾಸ್ಟರ್ ಪದವಿ ಪಡೆಯುವ ಮೂಲಕ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 16ರ ಹರೆಯದಲ್ಲೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಪಟ್ಟ ಪಡೆದರು ಹಾಗೂ ಮತ್ತೆರಡು ವರ್ಷ  ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ವೇಗದ ಚೆಸ್ ಆಟಕ್ಕೆ ಹೆಸರಾಗಿರುವ ಆನಂದ್, ತಮ್ಮ ಹದಿನೆಂಟರ ಹರೆಯದಲ್ಲೇ (1987ರಲ್ಲಿ) ವಿಶ್ವ ಕಿರಿಯರ ಚೆಸ್ ಚಾಂಪಿಯನ್ ಪಟ್ಟ ಪಡೆದರು ಮತ್ತು ಈ ಸಾಧನೆ ಮಾಡಿದ ಮೊತ್ತ ಮೊದಲ ಭಾರತೀಯರೆನಿಸಿಕೊಂಡರು. ಅದೇ ವರ್ಷ ಕೊಯಂಬತ್ತೂರಿನಲ್ಲಿ ನಡೆದ ಶಕ್ತಿ ಫೈನಾನ್ಸ್ ಅಂತರಾಷ್ಟ್ರೀಯ ಚೆಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವುದರೊಂದಿಗೆ ಭಾರತದ ಪ್ರಪ್ರಥಮ ಗ್ರಾಂಡ್‌ಮಾಸ್ಟರ್ ಎನಿಸಿಕೊಂಡರು. ಈ ಎಲ್ಲಾ ವಿಶಿಷ್ಟ ಸಾಧನೆಗಳ ಫಲವಾಗಿ ಅವರಿಗೆ 18ರ ಕಿರು ಹರೆಯದಲ್ಲೇ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ಒಲಿದು ಬಂತು.

ತಮ್ಮ 22ರ ಹರೆಯದಲ್ಲಿ ವಿಶ್ವನಾಥನ್ ಆನಂದರು ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪರ ಉತ್ತಮ ಸಾಧನೆ ತೋರಿದರು. 1991ರಲ್ಲಿ ನಡೆದ ರೆಗಿಯೋ ಎಮಿಲಾ ಚೆಸ್ ಪಂದ್ಯಗಳಲ್ಲಿ  ಕ್ಯಾಸ್ಪರೋವ್, ಕಾರ್ಪೋವ್‌ರಂತಹ ಘಟಾನುಘಟಿಗಳನ್ನು ಮಣಿಸಿ ಪ್ರಶಸ್ತಿ ಗೆದ್ದರು.  1993ರಲ್ಲಿ ವಿಶ್ವಚೆಸ್ ಚಾಂಪಿಯನ್‌ಷಿಪ್‌ನ ಕ್ಯಾಂಡಿಡೇಟ್ ಪಂದ್ಯಾವಳಿಯ  ಕ್ವಾರ್ಟರ್ ಫೈನಲ್ ಹಂತದಲ್ಲಿ ಅನಾಟೊಲಿ ಕಾರ್ಪೋವ್ ಎದುರು ಸೆಣಸಿ, ಕೂದಲೆಳೆಯ ಅಂತರದಲ್ಲಿ ಸೋತರು. 1996ರಲ್ಲಿ  ವಿಶ್ವಚೆಸ್ ಚಾಂಪಿಯನ್‌ಷಿಪ್‌ನ ಕ್ಯಾಂಡಿಡೇಟ್ ಪಂದ್ಯಾವಳಿಯ  ಕ್ವಾರ್ಟರ್ ಫೈನಲ್ ಹಂತದಲ್ಲಿ  ಗಾಟಾ ಕಾಮ್‌ಸ್ಕಿ ಎದುರು ಸೋತರು.

ಪಿಸಿಎ ವಿಶ್ವಚೆಸ್ ಚಾಂಪಿಯನ್‌ಷಿಪ್ ಟೂರ್ನಿಯ 1995ರ ಆವೃತ್ತಿಯಲ್ಲಿ ಆನಂದರ ಸಾಧನೆ ಅಮೋಘವಾಗಿತ್ತು. ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಒಲೆಗ್ ರೊಮಾಶಿನ್, ಮೈಕೆಲ್ ಆಡಮ್ಸ್ ಅವರೆದುರು ಒಂದೂ ಪಂದ್ಯ ಸೋಲದ ದಾಖಲೆಯೊಂದಿಗೆ ಫೈನಲ್ ಹಂತದ ಅರ್ಹತಾ ಪಂದ್ಯಕ್ಕೆ ಏರಿ ಬಂದರು. ಫೈನಲ್ ಪಂದ್ಯದಲ್ಲಿ ಗಾಟಾ ಕಾಮ್‌ಸ್ಕಿ ಎದುರು ಅದ್ಭುತ ಜಯ ಸಾಧಿಸುವುದರೊಂದಿಗೆ ತಾವು ಈ ಹಿಂದೆ ಕಾಮ್‌ಸ್ಕಿ ಎದುರು ಅನುಭವಿಸಿದ್ದ ಸೋಲಿನ ನೆನಪನ್ನು ಅಳಿಸಿಹಾಕಿದರು.

1995ರಲ್ಲಿ ಪಿಸಿಎ ವಿಶ್ವಚಾಂಪ್ಯನ್‌ಷಿಪ್ ಫೈನಲ್ ಹಂತದ ಪಂದ್ಯ ಹಾಲಿ ಚಾಂಪಿಯನ್ ಕ್ಯಾಸ್ಪರೋವ್ ಮತ್ತು ವಿಶ್ವನಾಥನ್ ಆನಂದರ ನಡುವೆ ನಡೆಯಿತು. ಆರಂಭದ ಎಂಟು ಪಂದ್ಯಗಳೂ ಸತತ ಡ್ರಾದಲ್ಲಿ ಅಂತ್ಯಗೊಂಡು ಹೊಸತೊಂದು ದಾಖಲೆಗೆ ಕಾರಣವಾಯಿತು. ಒಂಬತ್ತನೇ ಪಂದ್ಯದಲ್ಲಿ ತಮ್ಮ ಮಿಂಚಿನ ನಡೆಗಳಿಂದ ಕ್ಯಾಸ್ಪರೋವ್‌ರನ್ನು ಚಕಿತಗೊಳಿಸಿದ ಆನಂದ್ ಗೆದ್ದೇ ಬಿಟ್ಟರು. ಆದರೆ ಸಾವರಿಸಿಕೊಂಡ ಕ್ಯಾಸ್ಪರೋವ್, ಮುಂದಿನ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ 10.5-7.5ರ ಅಂತರದ ಮುನ್ನಡೆಯೊಂದಿಗೆ ತಮ್ಮ ವಿಶ್ವಚಾಂಪಿಯನ್ ಪಟ್ಟವನ್ನು  ಉಳಿಸಿಕೊಂಡರು.  1996ರಲ್ಲಿ ನಡೆದ ಶೀಘ್ರಗತಿಯ ರಾಪಿಡ್ ಚೆಸ್‌ ಸ್ಪರ್ಧೆಗಳಲ್ಲಿ ಅದೇ ಕ್ಯಾಸ್ಪರೋವ್ ಅವರು ವಿಶ್ವನಾಥನ್ ಆನಂದರ ಚಾತುರ್ಯದೆದುರು  ಮಣಿಯಬೇಕಾಯಿತು. 1997ರಲ್ಲಿ ಜರುಗಿದ  ಹ್ಯಾಂಬರ್ಗ್ ರಾಪಿಡ್ ಚೆಸ್ ಪಂದ್ಯಾವಳಿಯಲ್ಲಿ  ವಿಶ್ವನಾಥನ್ ಆನಂದರ ಬಳಿ ಸೋಲುವ ಸರದಿ ಅನಾತೋಲಿ ಕಾರ್ಪೋವ್ ಅವರದ್ದಾಯಿತು!

1999ರ ವರ್ಷದಲ್ಲಿ  ವಿಶ್ವವಿಖ್ಯಾತ ಸಾಫ್ಟ್ವೇರ್  ಚೆಸ್ ಪ್ರೋಗ್ರಾಮ್ ‘Fritz’ ಹೊಂದಿದ್ದ ಕಂಪ್ಯೂಟರ್ ಕೂಡ ವಿಶ್ವನಾಥನ್ ಆನಂದರಿಗೆ ಮಣಿಯಿತು. 2000ದ ವರ್ಷದಲ್ಲಿ ಆನಂದರು  ಸ್ಪೇನಿನ ಅಲೆಕ್ಸಿ ಶಿರೋವ್ ವಿರುದ್ಧ ಗೆದ್ದು ವಿಶ್ವಚಾಂಪಿಯನ್ ಶಿಪ್ ಜಯಿಸಿದ ಮೊದಲ ಏಷ್ಯನ್ ಎಂಬ ಖ್ಯಾತಿ ಪಡೆದರು.   ಆಗ ವಿಶ್ವ ಚೆಸ್,  ‘ಫಿಡೆ(FIDE) ಹಾಗೂ ಪಿಸಿಎ’(ಪ್ರೊಫೆಶನಲ್ ಚೆಸ್ ಅಸೋಸಿಯೇಶನ್) ಎಂಬ ಎರಡು ಭಾಗಗಳಾಗಿತ್ತು,   ಕ್ಯಾಸ್ಪರೋವ್ ಹಾಗೂ ಕಾರ್ಪೋವ್ ಎಂಬ ಇಬ್ಬರು ಪ್ರತ್ಯೇಕ ಚಾಂಪಿಯನ್‌ಗಳಿದ್ದರು. ಹೀಗಾಗಿ ಆನಂದ್ ಅವರು ವಿಶ್ವಚಾಂಪಿಯನ್ ಎಂದು ಎಲ್ಲರಿಂದಲೂ ಕರೆಸಿಕೊಳ್ಳಲಾಗಲಿಲ್ಲ. ಮುಂದೆ  ಫಿಡೆ ಹಾಗೂ ಪಿಸಿಎ ವಿಲೀನವಾಗುವುದರೊಂದಿಗೆ ಸಮಸ್ಯೆ ಪರಿಹಾರವಾಗುವುದರ ಜೊತೆಗೆ  ಸವಾಲೂ ದೊಡ್ಡದಾಯಿತು. ವಿಶ್ವಚಾಂಪಿಯನ್ ಎನಿಸಿಕೊಳ್ಳಬೇಕಾದರೆ ಗ್ಯಾರಿ ಕ್ಯಾಸ್ಪರೋವ್, ಅನಾತೋಲಿ ಕಾರ್ಪೋವ್, ವ್ಲಾದಿಮಿರ್ ಕ್ರಾಮ್ನಿಕ್, ಗಾಟಾ ಕಾಮ್‌ಸ್ಕಿಯಂತಹ ದಿಗ್ಗಜರನ್ನು ಮಣಿಸಬೇಕಾಯಿತು. 2002ರಲ್ಲಿ ಫಿಡೆ ವಿಶ್ವಚಾಂಪಿಯನ್‌ಶಿಪ್ ಮೆಕ್ಸಿಕೋದಲ್ಲಿ ನಡೆಯಿತು. ಎಲ್ಲರನ್ನೂ ಮಣಿಸಿದ ಆನಂದ್ ವಿಶ್ವನಾಥನಾದರು. ಮುಂದೆ ಈ ಪ್ರಶಸ್ತಿಗಳನ್ನು ನಿರಂತರವಾಗಿ ಗೆಲ್ಲುತ್ತಾ ಬಂದ ಆನಂದ್2012ರ ವರ್ಷದ ಮೇ ತಿಂಗಳಿನಲ್ಲಿ ಮಾಸ್ಕೋದಲ್ಲಿ ನಡೆದ ಪಂದ್ಯದಲ್ಲಿ ಇಸ್ರೇಲಿನ ಬೋರಿಸ್ ಗೆಲ್ಫಾಂಡ್ ವಿರುದ್ಧ ಜಯ ಸಾಧಿಸುವುದರ ಮೂಲಕ  5ನೆಯ ಬಾರಿ ಈ ಕಿರೀಟ ಧರಿಸಿದರು.  ಇಂದಿನ ದಿನಗಳಲ್ಲಿ ಈ ವಿಶ್ವಚಾಂಪಿಯನ್ ಶಿಪ್ 3 ವಿವಿಧ ಮಾದರಿಗಳಲ್ಲಿ ನಡೆಯುತ್ತದೆ-ನಾಕೌಟ್, ಟೂರ್ನಮೆಂಟ್ ಹಾಗೂ ಮ್ಯಾಚ್ ಫಾರ್ಮ್ಯಾಟ್. ಈ ಮೂರು ಮಾದರಿಗಳಲ್ಲೂ ಜಯಿಸಿರುವ ಏಕೈಕ ಆಟಗಾರ ವಿಶ್ವನಾಥನ್ ಆನಂದ್.

ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಷ್ಯಾದ ನೆಹರೂ ಪ್ರಶಸ್ತಿಗಳನ್ನು  ವಿಶ್ವನಾಥನ್ ಆನಂದ್ ಹದಿನೆಂಟು ವಯಸ್ಸು ತಲುಪುವ ಮುಂಚೆಯೇ ಸ್ವೀಕರಿಸಿದ್ದರು.  1992ರಲ್ಲಿ ಪ್ರಾರಂಭವಾದ ರಾಜೀವ್ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಕ್ರೀಡಾ ತಾರೆ ಆನಂದ್.  2000ದಲ್ಲಿ ಪದ್ಮವಿಭೂಷಣ ಪ್ರಶಸ್ತಿಯೂ ಅರಸಿಕೊಂಡು ಬಂತು. ಅಂತಹ ಗೌರವಕ್ಕೆ ಪಾತ್ರರಾದ ಮೊದಲ ಕ್ರೀಡಾತಾರೆ  ಆನಂದ್.  ಅವರು ಬರೆದ ’My Best Games of Chess’  ಪುಸ್ತಕಕ್ಕೆ 1998ರಲ್ಲಿ ಬ್ರಿಟಿಷ್ ಚೆಸ್ ಫೆಡರೇಶನ್ ವರ್ಷದ ಪುಸ್ತಕಪ್ರಶಸ್ತಿ ಸಂದಿತು.  ವಿಶ್ವದ ಪ್ರಮುಖ ಚೆಸ್ ವಿಮರ್ಶಕರು ಹಾಗೂ ರಷ್ಯಾದ 64ಮ್ಯಾಗಝಿನ್ ವರ್ಷದ ಅತ್ಯುತ್ತಮ ಚೆಸ್ ಆಟಗಾರನಿಗೆ ನೀಡುವ ಚೆಸ್ ಆಸ್ಕರ್ಪ್ರಶಸ್ತಿಯನ್ನು ಆನಂದ್ ಆರು ಬಾರಿ ಪಡೆದಿದ್ದಾರೆ.


ಹೀಗೆ ವಿಶ್ವಮಾನ್ಯರಾಗಿರುವ ವಿಶ್ವನಾಥ ಆನಂದರು ತಮ್ಮ 46ನೆಯ ವರ್ಷದಲ್ಲೂ ತಮ್ಮ ಚದುರಂಗದಾಟದಲ್ಲಿನ ಪ್ರೀತಿಯನ್ನು ಉಳಿಸಿಕೊಂಡು ಮುನ್ನಡೆದಿದ್ದಾರೆ. ಐದು ಬಾರಿಯ ವಿಶ್ವಚಾಂಪಿಯನ್ ಆಗಿದ್ದ ಚಾಂಪಿಯನ್ ವಿಶ್ವನಾಥನ್ ಆನಂದ್ ಕಳೆದ ವರ್ಷಗಳಲ್ಲಿ   ಮ್ಯಾಗ್ನಸ್ ಕಾರ್ಲ್ಸನ್ಗೆ ಪಟ್ಟ ಬಿಟ್ಟುಕೊಟ್ಟಿದ್ದಾರೆ.  ಕ್ರೀಡೆಯಲ್ಲಿ ಸೋಲು ಎಂಬುದು ಎಂತಹವರಿಗೂ ಒಂದು ದಿನ ಅನಿವಾರ್ಯ.  ಆದರೆ ವಿಶ್ವದ ಸರ್ವಶ್ರೇಷ್ಠ ಮೂವರು ಆಟಗಾರರ ಹೆಸರಲ್ಲಿ ಆನಂದರ ಹೆಸರು ವಿಜ್ರಂಭಿತ.  ಸರಳ ಸಜ್ಜನಿಕೆ ಸಾಂಸ್ಕೃತಿಕ ಭಾರತೀಯತೆಯ ರಾಯಭಾರಿಯಂತೆ ಎದ್ದುಕಾಣುವ ವಿಶ್ವನಾಥರ ವರ್ಚಸ್ಸು ಸಹಾ ಗೌರವಯುತವಾದದ್ದು.  ಈ ಶ್ರೇಷ್ಠತೆಯ ಹಿರಿಮೆಗೆ ನಮ್ಮ ನಮನ ಮತ್ತು ವಿಶ್ವನಾಥನ್ ಆನಂದರ ವ್ಯಕ್ತಿತ್ವಕ್ಕೆ ಹುಟ್ಟುಹಬ್ಬದ ಆತ್ಮೀಯ ಶುಭಹಾರೈಕೆಗಳು.

Tag: Viswanathan Anand, Vishvanathan Anand

ಕಾಮೆಂಟ್‌ಗಳಿಲ್ಲ: