ಮಂಗಳವಾರ, ಸೆಪ್ಟೆಂಬರ್ 3, 2013

ಬರಾಕ್ ಒಬಾಮ

ಬರಾಕ್ ಒಬಾಮ

ಒಂದಿಪ್ಪತ್ತೈದು ವರ್ಷಗಳ ಹಿಂದೆ ಯಾವುದೇ ಆಫ್ರಿಕಾದ ಹಳ್ಳಿಯಲ್ಲಿ ತನ್ನಜ್ಜಿಯ ಮನೆಯಲ್ಲಿ ಹೀಗೆ ಫೋಟೋದಲ್ಲಿ ಕಾಣಿಸಿಕೊಂಡವ ಬರಾಕ್ ಒಬಾಮ.  ಹವಾಯಿ ದ್ವೀಪದ ಹೊನಲುಲು ಎಂಬ ಗ್ರಾಮದಲ್ಲಿ ಐವತ್ತು ವರ್ಷಗಳ ಹಿಂದೆ ಜನಿಸಿದ ಈ ಆಫ್ರಿಕಾದ ಕರಿ ಹುಡುಗ ಮುಂದೆ ವಿಶ್ವದ ದೊಡ್ಡಣ್ಣನಾದ ಅಮೆರಿಕಾದ ಅಧ್ಯಕ್ಷನಾಗಿದ್ದು ಇತಿಹಾಸ.

ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಕಾನೂನು ಪದವಿಗಳನ್ನು ಪಡೆದು ಹಲವು ಮೆಟ್ಟಿಲು ಮೆಟ್ಟಿಲುಗಳನ್ನು ಏರಿ ಇಲಿನಾಯ್ಸ್ ಸೆನೆಟರ್ ಆಗಿ ಹಲವು ರಾಜಕೀಯ ಪರೀಕ್ಷೆಗಳಲ್ಲಿ ಮಿಂದು ರಾಷ್ಟ್ರಾಧ್ಯಕ್ಷರೂ ಆಗಿಬಿಟ್ಟರು.  ತಮ್ಮ ವಿರುದ್ಧ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲೇರಿ ಕ್ಲಿಂಟನ್ ಅವರನ್ನು ಗೌರವದಿಂದ ನಡೆಸಿಕೊಂಡು ತಮ್ಮ ವಿದೇಶಾಂಗ ಖಾತೆಯ ಮುಖ್ಯಸ್ಥರನ್ನಾಗಿಸಿದ್ದು ಆತನ ರಾಜಕೀಯ ಮುತ್ಸದ್ದಿತನ ಮತ್ತು ಉತ್ತಮ ನಡವಳಿಕೆಗಳಿಗೆ ಸಾಕ್ಷಿ ಎಂಬಂತಿತ್ತು.

ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷನಾಗಿದ್ದು ಅತ್ಯಂತ ಕಷ್ಟಕಾಲದಲ್ಲಿ.  ಬುಶ್ ಎಂಬ ಹಿಂದಿನವ ತೊಘಲಕ್ ಅಂತೆ ರಾಜ್ಯಭಾರ ಮಾಡಿ ಆಫ್ಘನ್ ಮತ್ತು ಇರಾಕ್ ಯುದ್ಧದಲ್ಲಿ ಅಮೇರಿಕಾದ ಜೊತೆಗೆ ವಿಶ್ವದ ಇತರ ದೇಶಗಳನ್ನೂ ಸೈನ್ಯ ಕಳುಹಿಸುವಂತೆ ಮಾಡಿ ಇಲಿ ಹಿಡಿಯಲು ಹೋಗಿ ಗುಡ್ಡವನ್ನೆಗೆದ ಭೂಪನಂತೆ ಅಮೆರಿಕವನ್ನು ಹಾಸ್ಯಾಸ್ಪದ ಸ್ಥಾನಕ್ಕೆ ತಂದು ನಿಲ್ಲಿಸಿದ್ದ.  ವಿಶ್ವವೆಲ್ಲ ಮಾಯೆಯೆಂಬ ಷೇರು ಮಾರುಕಟ್ಟೆಗೆ ಸಿಲುಕಿ ಅದರ ಯಶಸ್ಸಿಗಾಗಿ ನಿರ್ಮಿಸಿದ್ದ ಕುಹಕಗಳ ಬಣ್ಣ ಒಂದೊಂದಾಗಿ ಕಳಚಿ ಅದೆಲ್ಲಾ ನಡೆಯುತ್ತಿರುವುದು ಕೃತ್ರಿಮತೆಯಿಂದ ಎಂದು ವಿಶ್ವವೆಲ್ಲಾ ಅರಿತುಕೊಂಡಾಗ ಉಂಟಾದ 'ವಿಶ್ವ ಮಾರುಕಟ್ಟೆಯಲ್ಲಿನ ಡಿಪ್ರೆಶನ್' ಎಂಬ ಕುಸಿತದಲ್ಲಿ ಪ್ರಧಾನವಾಗಿ ಏಟು ತಿಂದದ್ದು ತನ್ನ ಸೋಗಿನ ಧಿಮಾಕಿನಲ್ಲಿ ವಿಶ್ವವನ್ನೆಲ್ಲಾ ಭ್ರಮೆಗೆ ಸಿಲುಕಿಸಿದ್ದ ಅಮೇರಿಕ.    ಇಂತಹ ಪರಿಸ್ಥಿತಿಯಲ್ಲಿ ದಿನ ಬೆಳಗಾದರೆ ಬರಾಕ್ ಒಬಾಮಾ ಅವರ ಜನಪ್ರಿಯತೆ ಎಷ್ಟು ಇಂಚು ಎಷ್ಟು ಸೆಂಟಿ ಮೀಟರು ಕುಸಿಯಿತು ಎಂದು ಸುದ್ಧಿ ಮಾಧ್ಯಗಳು ಅಳೆಯತೊಡಗಿದವು.

ಇವೆಲ್ಲವುಗಳ ಮಧ್ಯೆ ಬರಾಕ್ ಒಬಾಮ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಆತನಿಗೆ ನೊಬೆಲ್ ಶಾಂತಿ ಪುರಸ್ಕಾರ ಕೊಟ್ಟದ್ದು ಬೇರೆಯವರಿಗಿರಲಿ ಒಬಾಮಾಗೇ ಆಶ್ಚರ್ಯ ತಂದಿತ್ತು.

ತನ್ನ ಹಾವ ಭಾವಗಳಲ್ಲಿ, ಆಡಳಿತದಲ್ಲಿ ಅತೀವ ಪ್ರಚಾರ ತಂತ್ರವಿಲ್ಲದೆ, ವಿಧೇಯತೆಯ ಜೊತೆಗೆ, ಸನ್ನಿವೇಶಕ್ಕೆ ಅಗತ್ಯವಾದ ದೃಢ ಮನೋಭಾವ ತಳೆಯುತ್ತಾ ಸಾಗಿದ ಬರಾಕ್ ಒಬಾಮ ವಿವಿಧ ಸನ್ನಿವೇಶಗಳನ್ನು ಅದಕ್ಕನುಗುಣವಾದ ಕ್ರಮಗಳಿಂದ ಗಂಭೀರವಾಗಿ ಸಾಗುತ್ತಿರುವುದು ಕಾಣ ಬರುತ್ತಿದೆ.  ಅದರಲ್ಲೂ ಒಸಾಮಾ ಬಿನ್ ಲಾಡೆನ್ ಅನ್ನು ಮುಗಿಸುವಲ್ಲಿ ಆತ ತೋರಿದ ಗಾಂಭೀರ್ಯಪೂರ್ಣ ತಂತ್ರಗಾರಿಕೆ ವಿಶ್ವವನ್ನೆಲ್ಲಾ ಅಚ್ಚರಿಗೆ ಸಿಲುಕಿಸಿ ಆತನ ಜನಪ್ರಿಯತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ.

ಅಮೆರಿಕಕ್ಕೆ ತನ್ನದೇ ಆದ ಸವಾಲುಗಳಿವೆ.  ದಿನೇ ದಿನೇ ನಮ್ಮ ರೂಪಾಯಿ ಬೆಲೆ ಕುಸಿಯುತ್ತಿರುವುದು ಡಾಲರ್ ಮೌಲ್ಯದ ಹೆಚ್ಚಳದ ಭ್ರಮೆ ನಮ್ಮಲ್ಲಿ ಆವರಿಸಿದ್ದರೂ ಅಮೆರಿಕ ತನ್ನ ಹಿಂದಿನ ಆರ್ಥಿಕ ಪುನಃಚೇತನವನ್ನು ಗಳಿಸಲು ಸಾಧ್ಯವಾಗಿಲ್ಲ.  ಶೇಕಡಾ 8ನ್ನು ಮೀರಿದ ನಿರುದ್ಯೋಗ ಒಬಾಮಾ ಅವರ ಸರ್ಕಾರದ ಮುಂದೆ ನಿತ್ಯ ಸವಾಲಾಗಿ ಬಾಧಿಸುತ್ತಿದೆ.  ಹೀಗಿದ್ದಾಗ್ಯೂ ಒಬಾಮಾ ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಳಲ್ಲಿ ಗೆಲ್ಲುವುದು ಬಹುತೇಕವಾಗಿ ಖಚಿತವಾದಂತಿದೆ.

ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ.  ದುರದೃಷ್ಟವಶಾತ್ ರಾಜಕಾರಣಿಗಳಲ್ಲಿನ ಒಳ್ಳೆಯ ಗುಣಗಳೂ ಶಾಶ್ವತವಾಗಿರುವಂತೆ ಕಾಣಬರುತ್ತಿಲ್ಲ.  ಮಹಾತ್ಮ ಗಾಂಧಿ, ಅಬ್ರಹಾಂ ಲಿಂಕನ್ ಅವರನ್ನು ತನ್ನ ಆರಾಧ್ಯ ದೈವ ಎಂದು ಹೇಳುವ ಬರಾಕ್ ಒಬಾಮ ಇದುವರೆಗೆ ಒಳ್ಳೆಯ ಭಾವಗಳನ್ನೇ ಮೂಡಿಸಿದ್ದಾರೆ.  ಮುಂದೆಯೂ ಹಾಗೆಯೇ ಇರಲಿ ಅವರಿಂದ ವಿಶ್ವದೆಲ್ಲೆಡೆ ಶಾಂತಿ ಸ್ಥಾಪನೆಯಾಗುವ ನಿಟ್ಟಿನಲ್ಲಿ ಅವರ ಕೊಡುಗೆ ಮಹತ್ವದ್ದಾಗಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ.

Tag: Barak Obama

ಕಾಮೆಂಟ್‌ಗಳಿಲ್ಲ: