ಸೋಮವಾರ, ಸೆಪ್ಟೆಂಬರ್ 23, 2013

ರಾವ್ ಬಹಾದ್ದೂರ್

ರಾವ್ ಬಹಾದ್ದೂರ್

ನಾವೆಲ್ಲಾ 'ಗ್ರಾಮಾಯಣ' ಎಂಬ ಮಹಾನ್ ಕಾದಂಬರಿಯ ಬಗ್ಗೆ ಕೇಳಿದ್ದೇವೆ.  ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕಾದಂಬರಿಗಳಲ್ಲಿ ಒಂದೆಂದು  'ಗ್ರಾಮಾಯಣ' ಜನಜನಿತವಾಗಿದೆ.  ಈ ಶ್ರೇಷ್ಠ ಕೃತಿಯ ಹಿಂದಿರುವ ಶ್ರೇಷ್ಠ ಲೇಖನಿ ಶ್ರೀಯುತ ರಾವ ಬಹದ್ದೂರ ಎಂದು ಪ್ರಖ್ಯಾತರಾದ ಶ್ರೀ ರಾಮಚಂದ್ರ ಕುಲಕರ್ಣಿಯವರದು.

ರಾವ ಬಹಾದ್ದೂರ ಎಂಬ ಹೆಸರಿನಲ್ಲಿ ಅನೇಕ ಕತೆ ಹಾಗು ಕಾದಂಬರಿಗಳನ್ನು ಬರೆದ ಶ್ರೀ ರಾಮಚಂದ್ರ ಕುಲಕರ್ಣಿಯವರು 1910ರ ವರ್ಷದ ಸಪ್ಟಂಬರ 24ರಂದು ವಿಜಾಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ  ಹಿರೆಪಡಸಲಗಿಯಲ್ಲಿ ಜನಿಸಿದರು. ಇವರ ತಾಯಿ ಸುಭದ್ರಾಬಾಯಿ. ತಂದೆ ಭೀಮರಾವ.  ರಾಮಚಂದ್ರ ಕುಲಕರ್ಣಿಯವರು ಧಾರವಾಡದ  ಕರ್ನಾಟಕ ಕಾಲೇಜಿನಲ್ಲಿ ಓದಿ, 1935ರಲ್ಲಿ ಬಿ.ಎ.ಪದವಿ ಗಳಿಸಿದರು. ಅನೇಕ ವರ್ಷ 'ಜಯಂತಿ ಮಾಸಪತ್ರಿಕೆ'ಯನ್ನು ನಡೆಸಿದರು. ಕೆಲ ಕಾಲ ಖಾಸಗಿ ಬ್ಯಾಂಕುಗಳಲ್ಲಿ ಕೆಲಸ ಮಾಡಿದರು. ಸ್ವಾತಂತ್ರ್ಯ ಹೋರಾಟಗಾರ ಕೌಜಲಗಿ ಹನುಮಂತರಾಯರ ಪ್ರೇರಣೆಯಿಂದ 'ಚರಕಾ ಸಂಘ' ಸೇರಿದರು.  1938ರಿಂದ 1946ರವರೆಗೆ ಚರಕಾ ಸಂಘದ ವ್ಯವಸ್ಥಾಪಕರಾಗಿದ್ದರು. ಆ ನಂತರದಲ್ಲಿ  ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಂಪಾದಕೀಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 

ಕರ್ನಾಟಕ ರಾಜ್ಯ ಪುನರ್ರಚನೆಯ ಮೊದಲು, ಆಗಿನ ಮುಂಬಯಿ ಪ್ರಾಂತ್ಯದ ಮುಖ್ಯ ಮಂತ್ರಿಗಳಾಗಿದ್ದ ಭಾರತದ ಪ್ರಧಾನ ಮಂತ್ರಿಗಳೂ ಆಗಿದ್ದ ಮೊರಾರ್ಜಿ ದೇಸಾಯಿಯವರ  ವಿರುದ್ಧ ಇವರು ಬರೆದ ಖಾರವಾದ ಲೇಖನಗಳಿಂದಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಸರಕಾರೀ ಜಾಹೀರಾತುಗಳನ್ನು ನಿಲ್ಲಿಸಲಾಗಿತ್ತು. ಆದರೆ ಚುನಾವಣಾ ಪ್ರಚಾರ ಸಮಯದಲ್ಲಿ ತನ್ನ ತಪ್ಪಿನ ಅರಿವಾದ ಮೊರಾರ್ಜಿ ದೇಸಾಯಿಯವರು ಜಾಹೀರಾತುಗಳನ್ನು ಪುನಃ ನೀಡಲಾರಂಭಿಸಿದರಂತೆ.   ಬಾಂಗ್ಲಾದೇಶ ಉದಯವಾದ ಹೊಸತರಲ್ಲಿ ರಾವಬಹಾದ್ದೂರರು ಸಂಯುಕ್ತ ಕರ್ನಾಟಕದ ಪ್ರತಿನಿಧಿಯಾಗಿ ಅಲ್ಲಿಗೆ ತೆರಳಿ ನಾನು ಕಂಡ ಬಾಂಗ್ಲಾದೇಶಎನ್ನುವ ಪುಸ್ತಕ ಬರೆದರು.

ಸಾಹಿತ್ಯಕವಾಗಿ ರಾವ್ ಬಹಾದ್ದೂರರು ರಚಿಸಿದ ಪ್ರಮುಖ ಕೃತಿಗಳೆಂದರೆ, 'ಗ್ರಾಮಾಯಣ', 'ಅಸುರಾಯಣ', 'ಬಿತ್ತಿ ಬೆಳೆದವರು', 'ಗೌಡರ ಕೋಣ', 'ಸಾಮ್ಯವಾದ', 'ಇತಿಹಾಸ ಭೂತ' 'ವೃಂದಾವನ', 'ಧೂಮಕೇತು', 'ಬಾಳು ಬಂಗಾರ', 'ಮುತ್ತು ಕಟ್ಟಿದಳು', 'ಕಾಂಚನ ಮೃಗ', 'ಮರೆಯದ ನೆನಪುಗಳು' ಮುಂತಾದವು. 

'ಗ್ರಾಮಾಯಣ' ಕಾದಂಬರಿಯು ಕನ್ನಡ ಭಾಷೆಯ ಹತ್ತು ಶ್ರೇಷ್ಠ ಕಾದಂಬರಿಗಳಲ್ಲಿ ಒಂದೆಂದು  ಪರಿಗಣಿತವಾಗಿದೆ. ಈ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿರುವದಲ್ಲದೆ ಭಾರತದ ಬಹುತೇಕ  ಭಾಷೆಗಳಿಗೆ ಅನುವಾದಗೊಂಡಿದೆ.

'ಬಿತ್ತಿ ಬೆಳೆದವರು' ಹಾಗೂ 'ಗೌಡರ ಕೋಣಕಾದಂಬರಿಗಳು ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಗಳಿಸಿವೆ.

ರಾವಬಹಾದ್ದೂರರು 1984ರ ಡಿಸೆಂಬರ್ 31ರಂದು ನಿಧನರಾದರು.  ಸಾಹಿತ್ಯ, ಪತ್ರಿಕಾವಲಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಅವರ ಸೇವೆ ನಿತ್ಯ ಸ್ಮರಣೀಯವೆನಿಸಿದೆ.    ರಾವ್ ಬಹಾದ್ದೂರರ ಅಮರ  ಚೇತನಕ್ಕೆ  ನಮ್ಮ ಗೌರವಪೂರ್ಣ ನಮನಗಳು.

Tag: Rao Bahaddur

ಕಾಮೆಂಟ್‌ಗಳಿಲ್ಲ: