ಭಾನುವಾರ, ಸೆಪ್ಟೆಂಬರ್ 1, 2013

ನಗೆ ಬರಹದ ಮಾ೦ತ್ರಿಕ ನವರತ್ನ ರಾಮ್

ನವರತ್ನ ರಾಮ್ 

ನವರತ್ನ ರಾಮ್ ಕನ್ನಡದ ನಗೆ ಬರಹದ ಮಾಂತ್ರಿಕರೆಂದೇ ಪ್ರಸಿದ್ಧರು. ಅವರು ಜನಿಸಿದ್ದು ಡಿಸೆಂಬರ್ 3, 1932ರಲ್ಲಿ.  ನವರತ್ನ ರಾಮ್ ರಾಯರನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅವರ ಮೆಕ್ಯಾನಿಕ್ ಮಂಜಣ್ಣನವರನ್ನು ನೀವು ನೋಡಬೇಕು ಎನ್ನುತ್ತಿದ್ದರು ಎಚ್ಚೆಸ್ಕೆ.  ಹಾಗಾಗಿ ನಾವು ಕೂಡಾ ಮೆಕಾನಿಕ್ ಮಂಜಣ್ಣನನ್ನು ಹುಡುಕೋಣ.

ಮೆಕ್ಯಾನಿಕ್ ಮಂಜಣ್ಣವರನ್ನು ನೋಡಿದ್ದೀರಾ ನೀವು? ನೀವು ಅವರನ್ನು ನೋಡಬೇಕು, ನೋಡಲೇಬೇಕಾದ ವಸ್ತು ಅವರು. ಅವರನ್ನು ಅರ್ಥ ಮಾಡಿಕೋಳ್ಳಬೇಕಾದರೆ ಅವರ ಮನೆಯನ್ನು ನೋಡಬೇಕು. ಅವರ ಮನೆ ಅರ್ಥವಾಗಬೇಕಾದರೆ ಅವರನ್ನೇ ನೋಡಬೇಕು...... ಅವರ ಮಾತುಗಳನ್ನು ಕೇಳಬೇಕು!.

ದ್ವಿಚಕ್ರ ‍ ನಾಲ್ಕು ಚಕ್ರ ವಾಹನಗಳೇ ಎಲ್ಲೆಲ್ಲೂ ತುಂಬಿರುವ ಈ ಕಾಲದಲ್ಲಿ ಮೆಕ್ಯಾನಿಕ್‌ಗಳಿಗೇನೂ ಕೋರತೆಯಿಲ್ಲ. ಬೀದಿ ಬೀದಿಗೂ ಕ್ಲಿನಿಕ್ಕುಗಳೂ, ನರ್ಸಿಂಗ್ ಹೋಮುಗಳೂ, ಹೈಟೆಕ್ ಆಸ್ಪತ್ರೆಗಳೂ ತುಂಬಿರುವಂತೆ ಮೆಕ್ಯಾನಿಕ್ಕುಗಳ ದವಾಖಾನೆಗಳಿಗೂ ಕೊರತೆಯಿಲ್ಲ. ಇತರ ವೃತ್ತಿಗಳಿಗಿರುವಂತೆ ಯಂತ್ರ ವೈದ್ಯ ವೃತ್ತಿಗೂ ಅದರದೇ ಆದ ಒಂದು ಗತ್ತು ಗೈರತ್ತು, ಗಮ್ಮತ್ತು ಉಂಟು. ಹಾಗೆ ನೋಡುವುದಾದರೆ ಎಲ್ಲಾ ವೃತಿಗಳವರಿಗೂ ಸಮಾನವಾದ ಒಂದು ಲಕ್ಷಣವೆಂದರೆ, ಆಯಾ ವೃತ್ತಿಗಳ ಸುತ್ತ ಬೆಳೆದ ಒಂದು ಬಗೆಯ  ಗೀಳು. ಅದೇ ಅವರ ಜೀವನ ದರ್ಶನ. ಆ ವೃತ್ತಿ ಅವರ ಹುಟ್ಟಿನೊಂದಿಗೇ ಅಂಟಿ ಬಂದಿರುತ್ತದೆ. ವೃತ್ತಿ ಯಾವುದೇ ಇರಲಿ, ಅದರ ಓಡನಾಟವೇ ಅವರವರ ಜೀವನದ ತಿರುಳು. ಅದೇ ಅವರ ಸಾರ ಸರ್ವಸ್ವ.

"ಸ್ವಧರ್ಮೇನಿಧನಂ ಶ್ರೇಯಃ ಪರಧರ್ಮೋ ಭಯಾವಹಃಎಂದು ಹೇಳುವುದಿಲ್ಲವೇ ಭಗವದ್ಗೀತೆ?  ತಂತಮ್ಮ ಧರ್ಮದಲ್ಲೇ, ಅಂದರೆ ವೃತ್ತಿ ಜೀವನದ ಸಹದೂರ ರೀತಿ ರಿವಾಜಿನಲ್ಲೇ ತಲ್ಲೀನರಾಗಬೇಕು. ಅದರಲ್ಲೇ ಮುಳುಗೇಳಬೇಕು.  ಕೊನೆಯ  ತನಕವೂ ಅದಕ್ಕೇ ಅಂಟಿಕೊಂಡಿರಬೇಕು. ತನ್ನದು ಚೆನ್ನಿಲ್ಲ. ಇನ್ನೊಬ್ಬನ ವೃತ್ತಿ ಚೆನ್ನ. ಅದನ್ನು ನಾನು ಅನುಸರಿಸಬೇಕಾಗಿತ್ತು ಎಂದು ಕೊರಗುವವನು ಎಂದಿಗೂ ಸುಖವನ್ನು ಕಾಣಲಾರ. ಹೀಗೆ ಮೆಕ್ಯಾನಿಕ್  ಮಂಜಣ್ಣನ ಚಿತ್ರದ ಮೂಲಕ ನವರತ್ನ ರಾಮ್ ಅವರು ಜೀವನ ವೇದಾಂತವನ್ನೇ ಧ್ವನಿಸುತ್ತಾರೆ.

ಕಾವ್ಯದಲ್ಲಿ ‍ ಸೃಜನಶೀಲ, ಬರಹದಲ್ಲಿ ಸಾಧಾರಣ ಎನಿಸುವಂಥದನ್ನೇ ಒಕ್ಕಣಿಸುತ್ತಾ ವಾಚ್ಯವಾಗಿರುವ  ಬೇರೆ ಯಾವುದೋ ಮಹತ್ವದ ಸತ್ಯದ ಎಡೆಗೆ ಬೆಟ್ಟು ಮಾಡಿ ತೋರಿಸುವುದೇ ಉತ್ತಮ ಸಾಹಿತ್ಯದ ಲಕ್ಷಣ. ಅದೇ ಕಾವ್ಯ ಅಥವಾ ಸೃಜನಾತ್ಮಕ ಸಾಹಿತ್ಯ. ಅದಿಲ್ಲದ್ದು ಕೇವಲ ವರದಿ. ಅದು ಸಾಹಿತ್ಯವೆನಿಸದು. ನಗೆ ಬರಹದ ಮೂಲಕವೇ ಜೀವನ ದರ್ಶನವನ್ನು ಅಭಿವ್ಯಕ್ತಿಸುವುದು ನವರತ್ನರಾಮ್ ಅವರ ಸಾಹಿತ್ಯದ ಸಲ್ಲಕ್ಷಣ. ನಗೆ ಬರಹವನ್ನೂ ಆ ಎತ್ತರದ ಸ್ತರಕ್ಕೇರಿಸಿರುವುದು ನವರತ್ನ ರಾಮ್  ಕೃತಿಗಳ ವೈಶಿಷ್ಠ್ಯ.

ಮಂಜಣ್ಣನ ಇತಿಹಾಸವನ್ನು ನವರತ್ನರಾಮ್ ಅವರ ಮಾತುಗಳಲ್ಲೇ ಕೇಳೋಣ.  "ಹುಟ್ಟು ಕಲಾವಿದ, ಹುಟ್ಟು ಸಂಗಿತಗಾರರಾಗುವಂತೆ ಮಂಜಣ್ಣನವರೂ ಸಹ ಹುಟ್ಟು ಮೆಕ್ಯಾನಿಕ್ ಆದರು. ಯಾವ ಜನ್ಮದ ಬಾಂಧವ್ಯವೋ? ಹುಟ್ಟಿನೊಂದಿಗೇ ಅಂಟಿ ಬಂದಿತು ಮೋಟಾರಿನ ಮೈತ್ರಿ.   ಅವರು ಮಗುವಾಗಿದ್ದಾಗ ಮೋಟಾರ್ ಹಾರನ್ನಿನಂತೆಯೇ ಅಳುತ್ತಿದ್ದರಂತೆ. ಜೋಗುಳದ ಹಾಡು, ಗಿಲಿಕೆ ಸದ್ದು ಯಾವುದಕ್ಕೂ ಜಗ್ಗದ ಮಗು ಮಂಜಣ್ಣನವರು ಕಾರಿನ ಹಾರನ್ನಿನ ಸದ್ದು ಕೇಳಿದೊಡನೆಯೇ ಅಳುವಿಗೆ  ಬ್ರೇಕ್ ಹಾಕಿ ನಿಶ್ಚಿಂತರಾಗಿ ನಿದ್ದೆ ಮಾಡುತ್ತಿದ್ದರಂತೆ. ಕೈಗೆ ಸ್ಪ್ಲ್ಯಾನರ್ ಕೊಟ್ಟರೆ ಅದರೊಂದಿಗೇ ಆಡುತ್ತ ಗಂಟೆಗಟ್ಟಲೆ ಕುಳಿತು ಬಿಡುವರು. ಸ್ಕ್ರೂಡ್ರೈವರ್ ಸಿಕ್ಕಿ ಬಿಟ್ಟರಂತೂ ಹೆತ್ತವರ ತಲೆಯ ಮೇಲೇ ಮೃದುವಾಗಿ ಆಡಿಸುತ್ತ ತಲೆಯಲ್ಲಿ ಸ್ಕ್ರೂ ಹುಡುಕುತ್ತಿದ್ದ ಮಗುವನ್ನು ನೋಡಿ ಈ ಮಗುವಿಗೆ ಪ್ರಚಂಡ ಭವಿಷ್ಯವಿದೆ ಎಂದು ನಂಬಿದರಂತೆ ಹೆತ್ತವರು.

ಇಂಥವರನ್ನು ನೋಡಿ ತಮ್ಮ ಮದುವೆಯ ಕರೆಯೋಲೆಯನ್ನು ಖುದ್ದಾಗಿ ಕೊಡಲು ಹೋದವರೊಂದಿಗೆ ಮಂಜಣ್ಣ ವಿವಾಹ ಜೀವನದ ಆಗುಹೋಗುಗಳ, ಸುಖ ‍ ದುಃಖಗಳ ಮಾತಾಡದೆ, ಅವರಿಗೆ ಶುಭ ಹೇಳದೆ, ಅವರು ವಾಹನವೊಂದನ್ನು ಕೊಂಡುಕೊಳ್ಳುವರೆಂದು ಭಾವಿಸಿ ಅದರ ಬಗ್ಗೆಯೇ  ವಿವರಿಸುತ್ತಕ್ರಮೇಣ ತಮ್ಮ ಜೀವನ ದರ್ಶನವನ್ನು ಬಿತ್ತರಿಸುತ್ತ ವಾಹನವೇ ಅವರ ಬಾಳಿನ ಹಾಸುಹೋಕ್ಕಾಗಿದೆಯೆಂದು ಕೊರೆಯುತ್ತಾರೆ, ಕೊನೆಗೆ ಆ ಮಿತ್ರರು ಮದುವೆ ಆಮಂತ್ರಣ ನೀಡಿದಾಗ, ಅದುವರೆಗೆ ಹೇಳಿದ್ದೆಲ್ಲಾ ಅವರ ವಿವಾಹ ಜೀವನ ಕುರಿತದ್ದೇ ಎಂದು ಷರಾ ಬರೆದು ಬಿಡುತ್ತಾರೆ.

ಒಂದು ಸುಂದರ ಸುದೀರ್ಘ ಕವನದಂತೆ ಓದಿಸಿಕೋಳ್ಳುತ್ತದೆ ಈ ಲಘು ಬರಹ. ಇದು ಲಘುವಾದರೂ ಲಾಘವವಿಲ್ಲ. ಗಾಂಭೀರ್ಯದ ಸೊಗಸಿದೆ. ಇದು ನವರತ್ನ ರಾಮ್ ಅವರ ಬಹುತೇಕ ಎಲ್ಲ ಬರಹಗಳ ಲಕ್ಷಣ.

ನವರತ್ನ ರಾಮ್ ಅವರದು (1932-1991) ಸುಸ೦ಸ್ಕೃತ ಮನೆತನ. ತಂದೆ ನವರತ್ನ ರಾಮರಾಯರು ಹಿಂದಿನ ಮೈಸೂರು ಸಂಸ್ಥಾನದ ಸರ್ಕಾರದಲ್ಲಿ ಆಡಳಿತ ಸೇವೆಗೆ ಸೇರಿ ಅಧಿಕಾರಿಯಾಗಿ ಹಲವೆಡೆ ಕೆಲಸ ಮಾಡಿ ಹೆಸರು ಗಳಿಸಿದವರು, ಜನಸಾಮಾನ್ಯರ ಪ್ರೀತಿ ‍ ವಿಶ್ವಾಸ ಸಂಪಾದಿಸಿದವರು. ಅವರು ಕೆಲಸ ಮಾಡಿದ ಎಡೆಯಲ್ಲೆಲ್ಲ ಅವರನ್ನು ಜನ ಮುಂದೆಯೂ  ನೆನಪಿಸಿಕೊಳ್ಳುತ್ತಿದ್ದರುಮುಂದಿನ  ತಲೆಮಾರಿನವರು ಅವರನ್ನು ನೋಡದಿದ್ದರೂ ಕೂಡ. ಮಾಸ್ತಿಯವರ ಸಮಕಾಲೀನರಾಗಿದ್ದ ನವರತ್ನ ರಾಮರಾಯರು ಮಾಸ್ತಿಯವರ ಮೇಲೂ ಪ್ರಭಾವ ಬೀರಿದವರು. ಅವರ ಜೀವನದ ನೆನಪುಗಳನ್ನು ಕುರಿತ ‘ಕೆಲವು ನೆನಪುಗಳು’ ಪುಸ್ತಕ ಉತ್ತಮ ಬರಹಕ್ಕೆ ಒಂದು ಉದಾಹರಣೆ. ಅವರು "ರಾಜಸೇವಾ ಪುಸ್ತಕ" ಎಂಬ ಬಿರುದನ್ನು ಆಗಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಪಡೆದಿದ್ದರು. ನವರತ್ನ ರಾಮ್ ಅವರ ತಾಯಿ ಪುಟ್ಟಮ್ಮ.

ನವರತ್ನ ರಾಮ್ ಮತ್ತು ಲಕ್ಷ್ಮಣ ಅವಳಿಜವಳಿಗಳು. ಅವರಲ್ಲಿ ಒಬ್ಬರು ಇನ್ನೊಬ್ಬರನ್ನು ಎಷ್ಟರ ಮಟ್ಟಿಗೆ ಹೋಲುತ್ತಿದ್ದರೆಂದರೆನವರತ್ನ ರಾಮ್ ಅವರನ್ನು ಮದುವೆಯಾದ  ಪ್ರಖ್ಯಾತ ಲೇಖಕಿ ಉಷಾ ನವರತ್ನರಾಮ್ ಅವರಿಗೇ ತಮ್ಮ ಗಂಡ ಯಾರು, ಅವರ ತಮ್ಮ ಯಾರು ಎಂಬುದು ಮೊದಮೊದಲು ಗೊತ್ತಾಗದೆ ಕಷ್ಟವಾಗುತ್ತಿತ್ತಂತೆ.  "ಅಪೂರ್ವ ಸಹೋದರರು" ಎನ್ನಿ ಬೇಕಾದರೆ!  ಇಬ್ಬರೂ ಬಲು ತುಂಟರು, ವಾನರ ವೀರರೆಂದೇ ಅವರ ಬಾಲ್ಯದ ಖ್ಯಾತಿ!  ನವರತ್ನರಾಮ್ ಎಸ್. ಎಸ್. ಎಲ್. ಸಿ ವರೆಗೆ ಓದಿದ್ದು ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ. ಸಂಗೀತ, ನಾಟಕ, ಸಾಹಿತ್ಯ, ಚಿತ್ರಕಲೆಗಳಲ್ಲಿ ಚಿಕ್ಕಂದಿನಿಂದಲೂ ಪ್ರೀತಿ. ಕಲಾ ಮಂದಿರದ ಅ. ನ. ಸುಬ್ಬರಾಯರ ಪ್ರೋತ್ಸಾಹದಿಂದಾಗಿ ಈ ಪ್ರೀತಿ ಹೆಮ್ಮರವಾಗಿ ಬೆಳೆಯಿತು. ಬೀಳಲು ಬಿಟ್ಟು ಹರಡಿಕೊಂಡಿತು.

ಬೆಂಗಳೂರಿನ ಸರ್ಕಾರಿ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಓದಿದ ಮೇಲೆ ತಂದೆಯ ಇಚ್ಛೆಯಂತೆ ರಾಮ್ ಕೃಷಿ ಕಾಲೇಜು ಸೇರಿ ಪದವೀಧರರಾದರು. ವಿದ್ಯಾರ್ಥಿ ದೆಸೆಯಿಂದಲೇ ನಾಟಕ ರಚನೆ, ಅಭಿನಯ, ಸಂಗೀತ, ನೀಲಕಮಲ್ ಆರ್ಕೇಸ್ಟ್ರಾ, ಕಲಾ ಮಂದಿರದ ಗೆಳೆಯರೊಂದಿಗೆ ಸೇರಿ "ಚಿತ್ರ ಕಲಾವಿದರು" ನಾಟಕ ತಂಡ, "ಅಕ್ಕ ‍ ಪಕ್ಕ", "ಕೆಂಬೂತ", "ಕನಸು ‍ ನನಸು" ಮುಂತಾಗಿ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದ ನವರತ್ನ ರಾಮ್ ಅವರ ಮೇಲೆ ಪ್ರಭಾವ ಬೀರಿದ ಸಾಹಿತಿಗಳು ಕುವೆಂಪು, ಮಾಸ್ತಿ, ರಾಜರತ್ನಂ ಮತ್ತು ತ. ರಾ. ಸು.

ತಂದೆ ನವರತ್ನ ರಾಮರಾಯರ ಹೆಸರಿನ ಬಲದಿಂದ ತಮ್ಮನ್ನು ಲೋಕ ಗುರುತಿಸಬಾರದು ಎಂಬುದು ನವರತ್ನರಾಮ್ ಅವರ ಇಚ್ಛೆ.  ಹೀಗಾಗಿ ಅವರು "ಎನ್. ರಾಮ್" ಎಂಬ ಹೆಸರಿನಿಂದಲೇ ಬರೆಯುತ್ತಿದ್ದರಾದರೂ ಕ್ರಮೇಣ "ನವರತ್ನರಾಮ್" ಎಂಬ ಹೆಸರೇ ಸ್ಥಿರವಾಗಿ ಹೋಯಿತು. ಆದರೂ ನವರತ್ನ ರಾಮರಾಯರ ಬೆಳಕಿನಲ್ಲಿ ಬೆಳಗಿದವರೆಂದು ಅವರ ಕೃತಿಗಳನ್ನೋದಿದ ಯಾರೂ ಭಾವಿಸಲಾರರು. ಅವುಗಳಲ್ಲಿ ಸ್ವೋಪಜ್ಞತೆಯಿದೆ, ನವಿರಾದ ಹಾಸ್ಯವಿದೆ, ಸಮಾಜ ದರ್ಶನವಿದೆ, ಸಾಹಿತ್ಯದ ಗುಣವಿದೆ, ಆಕರ್ಷಕ ಶೈಲಿ ಇದೆ. ಇದನ್ನೆಲ್ಲಾ ಯಾರಾದರೂ ಸ್ವಂತ ಪರಿಶ್ರಮ, ಸತತವಾದ ವ್ಯಾಸಂಗ, ಸುತ್ತಣ ಜನ ಜೀವನದ ಅವಲೋಕನ, ಜೊತೆಗೆ ಪ್ರತಿಭೆ ಇವುಗಳಿಂದಲೇ ಪಡೆಯಬೇಕು. ಶಿಫಾರಸ್ಸಿನಿಂದ ಅಥವಾ ಇನ್ನೊಬ್ಬರ ಹೆಸರಿನಿಂದ ದಕ್ಕುವಂಥದಲ್ಲ.

ನವರತ್ನರಾಮ್ ಅವರ ವೃತ್ತಿ ಜೀವನವೂ ಬಹಳ ಸ್ವಾರಸ್ಯವಾದದ್ದು. ಅದು ಸಾಹಿತ್ಯದಿಂದಲೇ ಹಣೆದುಕೊಂಡಿದ್ದು. ಕೃಷಿ ವಿಷಯದಲ್ಲಿ ಸ್ನಾತಕರಾದ ಮೇಲೆ ನವರತ್ನ ರಾಮ್‌ ಅವರಿಗೆ ವ್ಯವಸಾಯ ಇಲಾಖೆಯಲ್ಲೇ ಉದ್ಯೋಗ ಲಭಿಸಿತ್ತು. ಹೆಚ್ಚಿನ ವ್ಯಾಸಂಗಕ್ಕಾಗಿ ಅವರಿಗೆ ಫ್ರಾನ್ಸಿಗೆ ಹೋಗುವ ಅವಕಾಶ ಲಭ್ಯವಾಯಿತು. ಅವರು ಫ್ರೆಂಚ್ ಭಾಷೆ ಕಲಿಯಬೇಕಾಗಿ ಬಂತು.  ಫ್ರೆಂಚ್ ಭಾಷೆ ತಿಳಿದಿದ್ದ ಉಷಾ ಅವರಿಂದ ಅವರು ಆ ಭಾಷೆ ಕಲಿತರು. ಜೊತೆಗೆ ನವರತ್ನ ರಾಮ್ ತಮ್ಮ ಗುರುವಿಗೇ ತಿರುಮಂತ್ರ ಹೇಳಿದರು. ಇಬ್ಬರೂ ಪರಸ್ಪರ ಪ್ರೇಮಿಸಿದರು. ವಿವಾಹವಾದರು. ಆಗ ರಾಮ್‌ಗೆ ಮೂವತ್ತೊಂದು ವರ್ಷ. ಉಷಾ ಅವರು ಉಷಾ ನವರತ್ನ ರಾಮ್ ಆದರು. ನಮಗೆಲ್ಲಾ ತಿಳಿದಿರುವಂತೆ ಉಷಾ ನವರತ್ನರಾಂ ಅವರು ಪ್ರಸಿದ್ಧ  ಲೇಖಕಿ, ಕಲಾವಿದೆ.

ಪ್ಯಾರಿಸಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ರಾಮ್ ಉಷಾಗೆ ಬರೆದ ಪತ್ರಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ.  ಆ ಕೃತಿಯ ಹೆಸರು "ಪ್ಯಾರಿಸಿನಿಂದ ಪ್ರೇಯಸಿಗೆ".  ಈ ಕೃತಿಗೆ ಇದಕ್ಕಿಂತ ಬೇರೆ ಹೆಸರು ಇಡುವುದು ಹೇಗೆ ತಾನೇ ಸಾಧ್ಯ? ನವರತ್ನ ರಾಮ್ ಅವರ ಆಸಕ್ತಿಗಳು ಒಂದೆರಡಲ್ಲ. ಹಲವಾರು. ವ್ಯವಸಾಯ ಇಲಾಖೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ ರಾಮ್ ಅವರು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರೂ ಆಗಿದ್ದರು. ವಿಶ್ವ ಕನ್ನಡ ಸಮ್ಮೇಳನದಲ್ಲೂ ಪಾತ್ರ ವಹಿಸಿದ್ದರು. ಚಲನಚಿತ್ರದಲ್ಲೂ ಅವರಿಗೆ ಅಪಾರ ಆಸಕ್ತಿ. ಪುಟ್ಟಣ್ಣ ಕಣಗಾಲ್ ಅವರ "ಗೆಜ್ಜೆಪೂಜೆ" ಮತ್ತು ಇನ್ನೂ ಹಲವು ಚಿತ್ರಗಳಿಗೆ ಕಥೆ, ಸಂಭಾಷಣೆ ಬರೆದ ರಾಮ್  ಇದಕ್ಕಾಗಿ ರಾಜ್ಯ  ಪ್ರಶಸ್ತಿ ಪಡೆದರು. "ನವರತ್ನ ರಾಮಾಯಣ", "ಹೂವೊಂದು ದುಂಬಿ ನೂರೊಂದು", "67 ಹ್ಯಾರಿಸ್ ರಸ್ತೆ" "ಜಗವೆಲ್ಲ ಒಂದೇ ಸಿವ", "ನೆರೆಹೊರೆಯವರ ಹೊರೆ", "ಹಾಲು ಹಾಲಾಹಲ" "ಕಲ್ಲರಳಿ ಹೂವಾಯಿತು", "ಜೀವ ಯಾವ ಕುಲ, ಆತ್ಮ ಯಾವ ಕುಲ" ಇವು ಪ್ರಸಿದ್ಧ ಕೃತಿಗಳು.

"ಸುಧಾ"ದ "ನೀವು ಕೇಳಿದಿರಿ" ವಿಭಾಗದ ಪ್ರಶ್ನೆಗಳಿಗೆ ಉತ್ತರ ಬರೆಯುತ್ತಿದ್ದ ಬೀಚಿ ಅವರು ನಿಧನರಾದ ಮೇಲೆ "ಚಿತ್ತಾ" ಎಂಬ  ಹೆಸರಿನಲ್ಲಿ ಅದನ್ನು ನವರತ್ನ ರಾಮ್ ಮುಂದುವರಿಸಿದರು. "ಚಿತ್ತಾ" ಗಂಡೋ ಹೆಣ್ಣೋ ಎಂಬುದು ಅನೇಕರಿಗಿದ್ದ ಕುತೂಹಲ. ಕೊನೆಯವರೆಗೂ ಗುಟ್ಟು ಬಿಟ್ಟು ಕೊಡದ ನೀವು, ಅದು  ನಿಧನರಾದಾಗ ಗೊತ್ತಾಗದೆ? ಎಂಬ ಓದುಗರೊಬ್ಬರ ಪ್ರಶ್ನೆಗೆ ಅವರು ಹೇಳಿದ್ದರು, "ನನ್ನ ನಿಧನ ನಿಧಾನ" ಎಂದು. ಆದರೆ ಬೇಗನೆ  ಅವರು ನಿರ್ಗಮಿಸಿದರು (ಐವತ್ತೊಂಬತ್ತು ವರ್ಷ – ಅಕ್ಟೋಬರ್ 17, 1991) ಮಕ್ಕಳು "ಥ್ರೀ ಏಸ್"  ಆರತಿ, ಅಂಜಲಿ ಮತ್ತು ಆಶ್ರಮಿ. ಈ ಮಹಾನ್ ನವರತ್ನ ರಾಮ್ ಅವರಿಗೆ ನಮ್ಮ ನಮನ. 


(ಎಚ್ ಎಸ್ ಕೆ ಅವರ ಬರಹವನ್ನು ಕಿರು ಮಾರ್ಪಾಡಿನೊಂದಿಗೆ ಪ್ರಕಟಿಸಿದ್ದೇನೆ.  ಎಚ್ ಎಸ್ ಕೆ ಅವರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು.  ಕೃಪೆ:  www.ourkarnataka.com)

Tag: Navaratnaram, Navaratna Ram

ಕಾಮೆಂಟ್‌ಗಳಿಲ್ಲ: