ಭಾನುವಾರ, ಸೆಪ್ಟೆಂಬರ್ 1, 2013

ಸೈಯ್ಯದ್ ಕಿರ್ಮಾನಿ


ಸೈಯ್ಯದ್ ಕಿರ್ಮಾನಿ

ಕರ್ನಾಟಕ ತಂಡ ಮತ್ತು ಭಾರತೀಯ ಕ್ರಿಕೆಟ್ ತಂಡದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಪರಿಗಣಿಸಲ್ಪಟ್ಟಿರುವವರು ಸೈಯದ್ ಕಿರ್ಮಾನಿ ಅವರು.  ಅವರು ಜನಿಸಿದ್ದು ಡಿಸೆಂಬರ್ 29, 1949ರಲ್ಲಿ.  ಪ್ರಾರಂಭಿಕ ಹಲವು ವರ್ಷಗಳಲ್ಲಿ ಅವರ ಆಟ ಅಷ್ಟು ಚೆನ್ನಾಗಿರಲಿಲ್ಲವಾಗಿ ತಂಡದಿಂದ ಹೊರಗೆ ಉಳಿದರಾದರೂ ಮುಂದೆ ಬಂದ ವರ್ಷಗಳಲ್ಲಿ ವಿಕೆಟ್ ಕೀಪಿಂಗ್ ಮತ್ತು ಕೆಳ ಹಂತದ ಬ್ಯಾಟಿಂಗ್ ಸ್ಥಾನದಲ್ಲಿ ನೀಡಿದ ಅಪೂರ್ವ ಕೊಡುಗೆಗಳು ಅವರಿಗೆ ಅಪಾರ ಕೀರ್ತಿ ತಂದವು.

ಅವುಗಳಲ್ಲಿ ಪ್ರಮುಖವೆಂದರೆ, ಒಂದು ಇನ್ನಿಂಗ್ಸ್ ನಲ್ಲಿ ಆರು ಜನ ಔಟ್ ಆಗಲು ಕಾರಣವಾಗಿ ವಿಶ್ವ ದಾಖಲೆ ಸಮಗಟ್ಟಿದ್ದು; ಕಪಿಲ್ ದೇವ್ ಅವರ ಪ್ರಸಿದ್ಧ ಜಿಂಬಾವ್ವೆ ವಿರುದ್ದದ  ವಿಶ್ವಕಪ್ ಪಂದ್ಯದ ಆಟದಲ್ಲಿ ಅವರೊಂದಿಗೆ 126 ರನ್ನುಗಳ ಅಭೇದ್ಯ ಸಹಯೋಗದಲ್ಲಿ ಪಾಲ್ಗೊಂಡಿದ್ದು; 1983ರ ವಿಶ್ವ ಕಪ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ವಿಕೆಟ್ ಕೀಪರ್ ಪ್ರಶಸ್ತಿಗೆ ಪಾತ್ರರಾಗಿದ್ದು; ಟೆಸ್ಟ್ ಪಂದ್ಯವೊಂದರಲ್ಲಿ ಒಂಬತ್ತನೇ ವಿಕಟ್ ಜೊತೆ ಆಟದಲ್ಲಿ ಸುನಿಲ್ ಗಾವಸ್ಕರ್ ಅವರ ಜೊತೆ 143ರನ್ನುಗಳ ಸಹಯೋಗದಲ್ಲಿ ಪಾಲ್ಗೊಂಡಿದ್ದು; ರವಿ ಶಾಸ್ತ್ರಿ ಅವರೊಂದಿಗೆ ಏಳನೆ ವಿಕೆಟ್ಟಿಗೆ ವಿಶ್ವದಾಖಲೆಯಾದ 235 ರನ್ನುಗಳ ಸಹಯೋಗದಲ್ಲಿ ಬಾಗಿಯಾದದ್ದು;  1981-82 ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಮೂರು ಟೆಸ್ಟ್ಗಳಲ್ಲಿ ಗಳಿಸಿದ 1964 ರನ್ನುಗಳಲ್ಲಿ ಒಂದೇ ಒಂದು ಬೈ ಕೂಡ ನೀಡದೆ ಇದ್ದದ್ದು ಇತ್ಯಾದಿ ಹೆಸರಿಸಬಹುದು.

ಅವರು ವಿಕೆಟ್ ರಕ್ಷಕರಾಗಿ ಹಿಡಿದ ಹಲವು ಅದ್ಭುತ ಕ್ಯಾಚುಗಳು ಬಹಳಷ್ಟು ಮಹತ್ವದ ಪಂದ್ಯಗಳನ್ನು ಭಾರತದ ಪರವಾಗಿಸಿದ್ದವು.  ಆಸ್ಟ್ರೇಲಿಯಾ ತಂಡದ ಡೆನ್ನಿಸ್ ಲಿಲ್ಲಿ ತಾವು ಬೌಲ್ ಮಾಡುವಾಗ  ವಿಕೆಟ್ ಹಿಂದೆ ವಿಕೆಟ್ ಕೀಪರ್ ಬಿಟ್ಟು ಉಳಿದ ಥರ್ಡ್ ಮ್ಯಾನ್ ಪೊಸಿಷನ್ ಅಂತಹ  ಕ್ಷೇತ್ರ ರಕ್ಷಕರನ್ನು ಇಟ್ಟುಕೊಳ್ಳುವುದು ಅವಮಾನ ಎಂಬ ಭಾವ ಹೊಂದಿದವರಾಗಿದ್ದರು.  ಅಷ್ಟು ಕರಾರುವಾಕ್ಕು ಬೌಲಿಂಗ್ ಮಾಡುತ್ತಿದ್ದರು ಕೂಡ.  ಅಲ್ಲಿ ನಡೆದ ಒಂದು ಸರಣಿಯಲ್ಲಿ ಕಿರ್ಮಾನಿ ಚಾಕಚಕ್ಯತೆಯಿಂದ ಲಿಲ್ಲಿ ಅವರ ಬೌಲಿಂಗಿನ  ಬಹಳಷ್ಟು ಚೆಂಡುಗಳನ್ನು  ಥರ್ಡ್ ಮ್ಯಾನ್ ಪೊಸಿಷನ್ನಿಗೆ ತಳ್ಳಿ ರನ್ ಗಳಿಸಿದ್ದುದು ಲಿಲ್ಲಿ ಅವರಿಗೆ ಅಂದಿನ ದಿನಗಳಲ್ಲಿ ನುಂಗಲಾರದ ಬಿಸಿ ತುಪ್ಪವಾಗಿ ಪರಿಗಣಿತವಾಗಿ, ಕ್ರಿಕೆಟ್ ಪಂಡಿತರನ್ನು ಅಚ್ಚರಿಯಲ್ಲಿ ತಳ್ಳಿತ್ತು.  ಆ ಸರಣಿಯಲ್ಲಿ ಭಾರತ ತಂಡ ಸಶಕ್ತ  ಆಸ್ಟ್ರೇಲಿಯ ತಂಡವನ್ನು ಆಸ್ಟ್ರೇಲಿಯಾ ನೆಲದಲ್ಲೇ ಮಣಿಸಿತ್ತು ಎಂಬುದು ಕಿರ್ಮಾನಿ ನೀಡಿದ ಮಹತ್ವದ ಕೊಡುಗೆಗೆ ಸಾಕ್ಷಿ.  ಮುಂದೆ ಕಿರ್ಮಾನಿಯವರು ಕಾಲಿಗೆ ಪೆಟ್ಟು ಮಾಡಿಕೊಂಡು ಅವರು ಕಿರಿಯರಿಗೆ ಸ್ಥಾನ ಬಿಟ್ಟು ಕೊಡುವುದು ಅನಿವಾರ್ಯವಾಯಿತು. 


ಭಾರತದ ಪರ 88 ಟೆಸ್ಟ್ ಪಂದ್ಯಗಳನ್ನೂ 49 ಒಂದು ದಿನದ ಪಂದ್ಯಗಳನ್ನೂ ಆಡಿದ ಸಾಧನೆಯಿಂದ ಕಿರ್ಮಾನಿ  ಕ್ರಿಕೆಟ್ ವಲಯದಲ್ಲಿ ತಮ್ಮ ಹೆಸರನ್ನು ಪ್ರತಿಷ್ಟಾಪಿಸಿದ್ದಾರೆ. ಪದ್ಮಶ್ರೀ, ಅರ್ಜುನ ಪ್ರಶಸ್ತಿಗಳು ಅವರಿಗೆ ಸಂದಿವೆ.

Tag: Syed Kirmani

ಕಾಮೆಂಟ್‌ಗಳಿಲ್ಲ: