ಮಂಗಳವಾರ, ಸೆಪ್ಟೆಂಬರ್ 3, 2013

ಅಳುವ ಕಡಲೊಳು ತೇಲಿ ಬರುತಲಿದೆ



ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ
ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆತೆರೆಗಳೋಳಿಯಲ್ಲಿ
ಜನನ ಮರಣಗಳ ಉಬ್ಬು ತಗ್ಗು ಹೊರಳುರುಳುವಾಟವಲ್ಲಿ

ಆಶೆ ಬೂದಿ ತಳದಲ್ಲು ಕೆರಳುತಿವೆ ಕಿಡಿಗಳೆನಿತೋ ಮರಳಿ
ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ
ಕೂಡಲಾರದೆದೆಯಾಳದಲ್ಲೂ ಕಂಡೀತು ಏಕಸೂತ್ರ
ಕಂಡುದುಂಟು ಬೆಸೆಬೆಸೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ

ಎತ್ತರೆತ್ತರೆಕೆ ಏರುವ ಮನಕೂ ಕೆಸರ ಲೇಪ, ಲೇಪ;
ಕೊಳೆಯ ಕೊಳೆಚೆಯಲಿ ಮುಳುಗಿ ಕಂಡೆನೋ ಬಾನಿನೊಂದು ಪೆಂಪ
ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ
ತಮದಗಾಧ ಹೊನಲಲ್ಲು ಹೊಳೆಯುತಿದೆ ಸತ್ವವೊಂದಖಂಡ

ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ
ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ
ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು

ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ
ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲ

ಬೆಂಗಾಡು ನೋಡು ಇದು ಕಾಂಬ ಬಯಲು ದೊರಕಿಲ್ಲ ಆದಿ ಅಂತ್ಯ
ಅದ ತಿಳಿದೆನೆಂದ ಹಲರುಂಟು ತಣಿದೆನೆಂದವರ ಕಾಣೆನಯ್ಯಾ
ಅರೆಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾವೇಕೋ ಮಲೆತು ಮೆರೆದು
ಕೊನೆಗೆ ಕರಗುವೆವು ಮರಣ ತೀರ ಘನ ತಿಮಿರದಲ್ಲಿ ಬೆರೆದು

ಸಾಹಿತ್ಯ: ಎಂ.ಗೋಪಾಲಕೃಷ್ಣ ಅಡಿಗ


ಪಿ. ಕಾಳಿಂಗರಾವ್ ಅವರ  ಧ್ವನಿಯಲ್ಲಿ

ಶಿವಮೊಗ್ಗ ಸುಬ್ಬಣ್ಣ ಅವರ ಧ್ವನಿಯಲ್ಲಿ



ಬಿ. ಆರ್. ಛಾಯಾ ಅವರ ಧ್ವನಿಯಲ್ಲಿ

Tag: Aluva Kadalolu Teli Saagutide

ಕಾಮೆಂಟ್‌ಗಳಿಲ್ಲ: