ಮಂಗಳವಾರ, ಸೆಪ್ಟೆಂಬರ್ 3, 2013

ಗಿರೀಶ ಹೊಸನಗರ ನಾಗರಾಜೇಗೌಡ

ಪ್ಯಾರಾ ಒಲಿಂಪಿಕ್ಸ್  ರಜತ ಪದಕ ತಂದ ನಮ್ಮ ಕನ್ನಡಿಗ ಗಿರೀಶ್

ಲಂಡನ್ ಪ್ಯಾರಾಲಿಂಪಿಕ್ಸ್ 2012ರಲ್ಲಿ ಭಾರತಕ್ಕೆ ಮೊದಲ ಪದಕವನ್ನು ಕನ್ನಡಿಗ ಗಿರೀಶ ಹೊಸನಗರ ನಾಗರಾಜೇಗೌಡ ತಂದು ಕೊಟ್ಟಿದ್ದಾರೆ. ಪುರುಷರ ಹೈಜಂಪ್ ಎಫ್ 42 ಸ್ಪರ್ಧೆಯಲ್ಲಿ ಗಿರೀಶ್ ಅವರು ರಜತ ಪದಕ ಗೆದ್ದಿದ್ದಾರೆ.

24 ವರ್ಷದ ಕನ್ನಡ ಕುವರ ಗಿರೀಶ್, ಎಡಗಾಲು ಊನವಾಗಿದ್ದರೂ ಹೈಜಂಪ್ ನಲ್ಲಿ ಹಾರುವ ರೀತಿ ನೋಡಿ ಪ್ರೇಕ್ಷಕರು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಗಿರೀಶ್ ಅವರು ಕತ್ತರಿ ತಂತ್ರಜ್ಞಾನ ಬಳಸಿ 1.74 ಮೀ ಹಾರಿ ಅಂತಿಮ ಹಣಾಹಣಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಸೋಮವಾರ ರಾತ್ರಿ ನಡೆದ ಈ ಪಂದ್ಯಾವಳಿಯನ್ನು ಸುಮಾರು 80,000 ಪ್ರೇಕ್ಷಕರು ವೀಕ್ಷಿಸಿದರು. ಫಿಜಿ ದೇಶದ ಎಲ್ಲಿಸಾ ಡೆಲಾನಾ ಅವರು ಚಿನ್ನ ಗೆದ್ದರೆ, ಪೋಲೆಂಡ್ ನ ಲೂಕಾಸ್ಜ್ ಮಾಮ್ಕಾಕ್ರಾಜ್ ಅವರು ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.

ಗಿರೀಶ್ ಗೆ ಚಿನ್ನದ ಪದಕ ಸ್ವಲ್ಪದರಲ್ಲೇ ಕೈ ತಪ್ಪಿದೆ.ಚಿನ್ನದ ಪದಕ ಗೆದ್ದ ಫಿಜಿ ದೇಶದ ಎಲ್ಲಿಸಾ ಡೆಲಾನಾ ಹಾಗೂ ಗಿರೀಶ್ ಇಬ್ಬರು ಸಮಾನ ಅಂತರ ಎತ್ತರಕ್ಕೆ ಹಾರಿದ್ದರು.  ಸ್ಪರ್ಧೆ ಸುತ್ತು ಮುಗಿದಾಗ ಗಿರೀಶ್ ಹಾಗೂ ಎಲ್ಲಿಸಾ ಇಬ್ಬರು 1.74 ಮೀ ಹಾರಿದ್ದರು.ಆದರೆ, ಎಲ್ಲಿಸಾ ಅವರು ಕಡಿಮೆ ಪ್ರಯತ್ನದಲ್ಲಿ 1.74 ಮೀ ಹಾರಿದ ಕಾರಣ ಅವರಿಗೆ ಚಿನ್ನದ ಪದಕ ಸಿಕ್ಕಿದೆ.

ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ ಸಮರ್ಥನಂ ಸಂಸ್ಥೆಯ ಬೆಂಬಲ ಪಡೆದು ಪ್ಯಾರಾಲಿಂಪಿಕ್ಸ್ ಗೆ ತೆರಳಿದ್ದ ಗಿರೀಶ್ ತಮ್ಮ ಪ್ರತಿಭೆಗೆ ತಕ್ಕ ಪ್ರದರ್ಶನ ನೀಡಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಭಾರತ ಸರ್ಕಾರದ ನೆರವಿನಿಂದ ಬಾಸಿಲ್ಡಾನ್ ಕ್ರೀಡಾ ಗ್ರಾಮದಲ್ಲಿ ಸುಮಾರು ಮೂರು ವಾರಗಳ ಕಾಲ ತರಬೇತಿ ಪಡೆದ ಗಿರೀಶ್ ನೀಡಿದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನಮ್ಮ ಕನ್ನಡದ ಗಿರೀಶ್ ಅವರಿಗೆ ಪದಕ ತಂದುದಕ್ಕೆ ಹರ್ಷಪೂರ್ವಕ ಧನ್ಯವಾದಗಳು ಮತ್ತು ಹೃತ್ಪೂರ್ವಕ ಅಭಿನಂದನೆಗಳು.

Tag: Girisha Hosanagara Nagaraje Gowda

ಕಾಮೆಂಟ್‌ಗಳಿಲ್ಲ: