ಸೋಮವಾರ, ಸೆಪ್ಟೆಂಬರ್ 2, 2013

ಸಂತೋಷ್ ಕುಮಾರ್ ಗುಲ್ವಾಡಿ

ಸಂತೋಷ್ ಕುಮಾರ್ ಗುಲ್ವಾಡಿ

ಸಂತೋಷ್ ಕುಮಾರ್ ಗುಲ್ವಾಡಿ ಕನ್ನಡಿಗರಿಗೆ ಚಿರಪರಿಚಿತ ಹೆಸರು.  ಅಂದಿನ ದಿನಗಳಲ್ಲಿ ಮುಂಬೈನಿಂದ ಚಿತ್ರರಂಗದ ಬಗ್ಗೆ  ಬಣ್ಣ ಬಣ್ಣದ ಸುದ್ಧಿ ಕೊಡುತ್ತಿದ್ದ ಗುಲ್ವಾಡಿ ಅವರು ತರಂಗದಸಂಪಾದಕಾರಾಗಿ ಕನ್ನಡ ವಾರಪತ್ರಿಕೆಯ ಚರಿತ್ರೆಯನ್ನೇ ಬದಲಾಯಿಸುವಂತೆ ಅಪಾರ ಕೆಲಸ ಮಾಡಿದರು.  ಅವರ ಅಂತರಂಗ ಬಹಿರಂಗಓದುವುದು ಮತ್ತು ಚರ್ಚಿಸುವುದು ಅಂದಿನ ಯುವಜನರಲ್ಲಿ ವಿಶೇಷ ವಾತಾವರಣ ನಿರ್ಮಿಸುವಂತದ್ದಾಗಿತ್ತು. 

'ಗುಲ್ವಾಡಿಯವರು' ಒಂದು ಸುಸಂಸ್ಕೃತ ಕುಟುಂಬದಲ್ಲಿ  1938ರ ಅಕ್ಟೋಬರ್ 2ರಂದು, 'ಉಡುಪಿ'ಯಲ್ಲಿ ಜನಿಸಿದರು. ಅವರ ತಂದೆ ರತ್ನಾಕರ ಭಟ್ ಬಹುಮುಖ ಪ್ರತಿಭೆಯ ವ್ಯಕ್ತಿ. ಹಿಂದೂಸ್ಥಾನಿ ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಿದವರು. ಇವರು ಆಸಕ್ತರಿಗೆ ಹಿಂದೂಸ್ಥಾನಿ ಸಂಗೀತ ಕಲಿಸುತ್ತಿದ್ದರು. ಜೊತೆಗೆ ಬುಕ್ ಬೈಂಡಿಂಗ್, ಸಂಗೀತ ವಾದ್ಯಗಳ ರಚನೆ, ನಾಟಕದ ಪರದೆಗಳನ್ನ ಬರೆಯುವುದು, ರಂಗಮಂದಿರ ನಿರ್ಮಾಣ, ಮೇಕಪ್ ಎಂದೆಲ್ಲ ಹಲವು ಕೆಲಸಗಳಲ್ಲಿ ಪರಿಣಿತರು. ಇವರ ಮನೆ ಸದಾ ಕಲಾವಿದರಿಂದ ಸಾಹಿತಿಗಳಿಂದ ತುಂಬಿಕೊಂಡಿರುತ್ತಿತ್ತು. ಗುಲ್ವಾಡಿಯವರ ಬಾಲ್ಯವನ್ನ ರೂಪಿಸಿದ್ದು ಈ ಸಂಸ್ಕಾರ. ಮೈಸೂರು ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ, ಮುಂಬೈ ವಿಶ್ವವಿದ್ಯಾಲಯದಿಂದ  ಕಾನೂನು ಪದವಿ  ಹಾಗೂ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದರು. ಅವರು ಪತ್ರಿಕೋದ್ಯಮ ವಿಷಯದಲ್ಲಿ ಸ್ವರ್ಣಪದಕ ಗಳಿಸಿದ್ದರು.

ಹತ್ತು ಹಲವು ಆಸಕ್ತಿಗಳನ್ನು ಹೊಂದಿದ್ದ ಗುಲ್ವಾಡಿಯವರಿಗೆ ಪತ್ರಿಕೋದ್ಯಮ ಇವೆಲ್ಲಕ್ಕೂ ಉತ್ತಮ ಅಭಿವ್ಯಕ್ತಿಯುಳ್ಳ ವೃತ್ತಿ ಅನಿಸಿತ್ತು. ರಾತ್ರಿಹೊತ್ತಿನಲ್ಲಿ ತಮಗೆ ಬಿಡುವಾದಾಗ, ’ನವಭಾರತವೆಂಬ ಪತ್ರಿಕೆಯಲ್ಲಿ ಮೊದಲು ವೇತನವಿಲ್ಲದೆ ಸಹಾಯಕರಾಗಿ ಕೆಲಸಮಾಡಿದರು. 3 ತಿಂಗಳನಂತರ ಆವರ ಸಾಮರ್ಥ್ಯದಿಂದ ಪ್ರಭಾವಿತರಾದ ಪತ್ರಿಕೆಯವರು  ವೇತನವನ್ನು ನಿಗದಿಮಾಡಿದರು. ಮುಂದೆ ಗುಲ್ವಾಡಿಯವರು  ಮುಂಬೈನಲ್ಲಿ ಬರವಣಿಗೆಯನ್ನು ಮುಂದುವರೆಸಿದರು. ವ್ಯಂಗ್ಯ ಚಿತ್ರಗಳನ್ನು ರಚಿಸುವ ಗೀಳು ಮೊದಲಿಂದಲೂ ಅವರಿಗೆ ರೂಢಿಸಿತ್ತು. ಅದನ್ನು ಹೆಚ್ಚಾಗಿ ಬೆಳೆಸಲು ಪ್ರಯತ್ನಿಸಿದಾಗ ಅದಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಸಿಂಗರ್ ಕಂಪೆನಿಯಲ್ಲಿ ಸ್ವಲ್ಪದಿನ ಕೆಲಸಮಾಡಿದರು.   ಮುಂಬೈನಲ್ಲಿ ಪತ್ರಿಕೋದ್ಯಮ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ಫ್ರಿಲ್ಯಾನ್ಸರ್ ಆಗಿಯೂ ದುಡಿದಿದ್ದರು. ಆ ಸಮಯದಲ್ಲಿ ಅವರು ಪ್ರಜಾವಾಣಿಮತ್ತು ಸುಧಾಪತ್ರಿಕೆಗಳಿಗೂ ಅರೆಕಾಲಿಕ ವರದಿಗಾರರಾಗಿ ಕೆಲಸ ಮಾಡಿದ್ದರು. 1982ರಿಂದ 1999ರ ವರೆಗೂ ತರಂಗವಾರಪತ್ರಿಕೆ ಸಂಪಾದಕರಾಗಿ ಮಣಿಪಾಲದಲ್ಲಿ ದುಡಿದರು. ಕನ್ನಡದಲ್ಲಿ ಒಂದು ಕಾಲದಲ್ಲಿ ಎಲ್ಲ ವಾರಪತ್ರಿಕೆಗಳನ್ನೂ ಮೀರಿ ಬೆಳೆವಂತೆ ತರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದ ಕೀರ್ತಿ ಗುಲ್ವಾಡಿಯವರದ್ದು.  ಇವರ ಸಂಪಾದಕೀಯ ಅಂತರಂಗ ಬಹಿರಂಗ ಓದುಗರಿಗೆ ಮೋಡಿ ಮಾಡಿತ್ತು.

ತಮ್ಮ ಆತ್ಮೀಯ ಗೆಳೆಯರು ಹುಟ್ಟುಹಾಕಿದ ಕನ್ನಡ ಸಾಹಿತ್ಯ ಕೂಟದಲ್ಲಿ ಗುಲ್ವಾಡಿಯವರು ಕ್ರಿಯಾಶೀಲರಾಗಿದ್ದರು. ಬರಹಗಾರರನ್ನೆಲ್ಲಾ ಕಲೆಹಾಕಿ, ಸಾಹಿತ್ಯದ ಬಗ್ಗೆ ಚರ್ಚೆ, ವಿಚಾರ ವಿನಿಮಯ, ವಿಮರ್ಶೆ, ಮೊದಲಾದ ಶ್ಲಾಘನೀಯ ಕಾರ್ಯಗಳನ್ನು ರೂಢಿಸಿಕೊಂಡು ಬಂದಿದ್ದರು.

'ತರಂಗದ ಸಂಪಾದಕತ್ವ'ವನ್ನು ಒಂದು ನೆಲೆಗೆ ತಂದುಬಿಟ್ಟ ನಂತರ, ಗುಲ್ವಾಡಿಯವರು ಬೆಂಗಳೂರಿನಲ್ಲಿ  ನೆಲೆಸಿದರು. ಕೆಲಕಾಲ  ನೂತನಎಂಬ ಪತ್ರಿಕೆಗೆ ಸಂಪಾದಕರಾದರು. ಆದರೆ ಕಾರಣಾಂತರಗಳಿಂದ ಈ ಪತ್ರಿಕೆ ಹೆಚ್ಚು ಸಮಯ ನಡೆಯಲಿಲ್ಲ. ನಂತರ ಗುಲ್ವಾಡಿ ತಮ್ಮನ್ನು  ಲೇಖನಗಳನ್ನು  ಬರೆಯುವ ಕಾಯಕಕ್ಕೆ ತೊಡಗಿಸಿಕೊಂಡರು. ಕಥಾ ಸಂಕಲನ, ಕಾದಂಬರಿ, ಜೀವನ ಚೆರಿತ್ರೆಗಳನ್ನೂ ಅವರು ಬರೆದರು.   ಹಲವು ಸಂಶೋಧನಾತ್ಮಕ ಲೇಖನಗಳನ್ನೂ ಬರೆದಿದ್ದರು. ಕೊಂಕಣಿ ಮಕ್ಕಳ ಹಾಡುಗಳ ಒಂದು ಸಂಕಲನ ಹೊರತಂದಿದ್ದರು. ಕೇಂದ್ರಸಂಗೀತ ನಾಟಕ ಅಕಾಡೆಮಿಗಾಗಿ 'ಬಸರೂರು ದೇವದಾಸಿಯರುಎಂಬ ಸಾಕ್ಷ್ಯ ಚಿತ್ರವನ್ನು  ಪ್ರಸ್ತುತಪಡಿಸಿದ್ದರು. ಅವರ ತರಂಗದ ಸಂಪಾದಕೀಯ, 'ಅಂತರಂಗ ಬಹಿರಂಗ' ಪುಸ್ತಕ ರೂಪದಲ್ಲಿಯೂ  ಜನಪ್ರಿಯತೆಯನ್ನು ಗಳಿಸಿತ್ತು. 'ಗಂಜೀಫ ಕಲೆ', 'ಮಹಾಪತ್ರಿಕಾಕರ್ತ ಮಹಾತ್ಮಾ ಗಾಂಧಿಯವರು' ಮುಂತಾದ ಹಲವಾರು ಪುಸ್ತಕಗಳನ್ನೂ ಅವರು ಪ್ರಸ್ತುತಪಡಿಸಿದ್ದರು. ಗುಲ್ವಾಡಿಯವರು 1965ರಲ್ಲಿ 'ಹೃದಯದ ಶಸ್ತ್ರಚಿಕಿತ್ಸೆ'ಗೆ ಒಳಗಾಗಿದ್ದ ತಮ್ಮ ಅನುಭವವನ್ನು 'ನಾನು ಹೃದಯ ಚಿಕಿತ್ಸೆ ಮಾಡಿಸಿಕೊಂಡೆ' ಎಂಬ ಕೃತಿಯಾಗಿಸಿದರು.  ಅದು  ಅಪಾರ ಜನಮನ್ನಣೆ ಗಳಿಸಿಕೊಂಡಿತು.

ಗುಲ್ವಾಡಿಯವರಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'. 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ', 'ಆಳ್ವಾಸ್ ನುಡಿಸಿರಿ ಪ್ರಶಸ್ತಿ',  ವಿಶ್ವೇಶ್ವರಯ್ಯ ಪ್ರಶಸ್ತಿ, ವೀರ ಸಾವರ್ಕರ್ ಪ್ರಶಸ್ತಿ, ಭಾರ್ಗವ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿದ್ದವು.


ಗುಲ್ವಾಡಿಯವರು ಡಿಸೆಂಬರ್ 7, 2010 ವರ್ಷದಲ್ಲಿ ಈ ಲೋಕವನ್ನಗಲಿದರು.  ಗುಲ್ವಾಡಿಯವರ ಕೊಡುಗೆಗಳು ಇಂದಿಗೂ ಜನರ  ನೆನಪಿನಾಳದಲ್ಲಿ ಹಸಿರಾಗಿವೆ.

Tag: Santosh Kumar Gulvadi

ಕಾಮೆಂಟ್‌ಗಳಿಲ್ಲ: