ಮಂಗಳವಾರ, ಸೆಪ್ಟೆಂಬರ್ 3, 2013

ಭಗವಾನ್ ಬುದ್ಧ


ಭಗವಾನ್ ಬುದ್ಧ

ಬುದ್ಧ ಪೂರ್ಣಿಮೆಯಂದು  ಚಂದ್ರನನ್ನು ದಿಟ್ಟಿಸುವಾಗ, ಇದು ಬುದ್ಧಪೂರ್ಣಿಮೆಯ ಸಂದರ್ಭ ಎಂದು ನೆನಪಾದಾಗ, ಸುಂದರಚಂದ್ರನ ಪ್ರತಿಬಿಂಬ ಮನದಲ್ಲೂ ಹರಿದಂತಹ ಪ್ರಶಾಂತತೆ ತುಂಬಿ ಬಂದಂತೆನಿಸುತ್ತದೆ.   ಬುದ್ಧ ಭಗವಾನರೇ ಒಂದು ಹುಣ್ಣಿಮೆ.  ಜಗತ್ತಿನಲ್ಲಿ ಹಲವು ಮಹನೀಯರು ಮನುಕುಲಕ್ಕೆ ಬೆಳಕು ತೋರಿದ್ದಾರೆ ನಿಜ.  ಬುದ್ಧ ಭಗವಾನರಾದರೋ ತಾವೇ ಬೆಳಕಾದವರು.

ನಮ್ಮ ಪ್ರಭುಶಂಕರರ "ಪ್ರೇಮ ಭಿಕ್ಷು" ಕಥಾನಕದ ಪ್ರಾರಂಭದ ವರ್ಣನೆ ನೆನಪಿಗೆ ಬರುತ್ತಿದೆ. "ಆ ಹೂಬನದ ಸೌಂದರ್ಯ ಸಿರಿಯೆಲ್ಲಾ ಪ್ರಶಾಂತವಾಗಿತ್ತು.  ಗೌತಮ ಬುದ್ಧರ ಒಳಗಿನ ಆಂತರ್ಯಕ್ಕೂ ಆ ವ್ಯಕ್ತಿತ್ವದ ಹೊರಗಿನ ಪ್ರಶಾಂತವಾದ ಹೂಬನದ ಚೆಲುವಿನ ಪ್ರಶಾಂತತೆಗೂ ಯಾವುದೇ ಭಿನ್ನತೆ ಇರಲಿಲ್ಲ" ಎಂಬರ್ಥದ ಮಾತುಗಳನ್ನು  ನೆನೆದಾಗಲೆಲ್ಲಾ ಪ್ರೇಮ ಸಿಂಚನವನ್ನು ಪ್ರೋಕ್ಷಿಸುತ್ತಿರುವ ಹೃದ್ಭಾವ ನಮ್ಮನ್ನು ತಣಿಸುತ್ತಿರುವಂತೆನಿಸುತ್ತದೆ.

ಬುದ್ಧ ಭಗವಾನನ ಸಾನ್ನಿಧ್ಯವನ್ನನುಭವಿಸಿದ ಒಬ್ಬ ಭಾಗ್ಯವಂತ, ಆ ದಿವ್ಯ ಸನ್ನಿಧಾನದಲ್ಲಿ ಭಿನ್ನವಿಸಿದನಂತೆ:

"ಭಗವಾನ್ ತಾವು ದೇವರೇ?"

ಬುದ್ಧರು ನುಡಿದರು.  "ಉಹುಂ, ಅಲ್ಲ"

"ತಾವು ಮಹಾ ಪುರುಷರೇ, ಯಕ್ಷರೇ, ತಪೋ ನಿರತರೆ, ಆ ದಿವ್ಯ ತೆಜಸ್ಸೇ ಧರೆಗಿಳಿದ ಮಹಾ ಶಕ್ತಿಯೇ?"  ಹೀಗೆ ಒಂದಾದ ಮೇಲೊಂದು ಪ್ರಶ್ನೆಗಳ ಸುರಿಮಳೆ ಬಂತು.

ಬುದ್ಧರದು ಎಲ್ಲಕ್ಕೂ ಒಂದೇ ಉತ್ತರ.  "ಅಲ್ಲ".

ಆ ಭಕ್ತ ಉಲಿದ.  "ಪೂಜ್ಯರೇ, ತಾವು ಯಾರೆಂದು ದಯವಿಟ್ಟು ಕೃಪೆ ಮಾಡಿ ತಿಳಿಸೋಣವಾಗಲಿ"

ಬುದ್ಧರು ಸಾವಧಾನವಾಗಿ ನುಡಿದರು, "ಮಗು, ನಾನು ಒಂದು ಕನ್ನಡಿ".

ಕನ್ನಡಿಯ ಮುಂದೆ ಏನನ್ನೇ ಇಟ್ಟರೂ ಅದರ ಪ್ರತಿಫಲನವಿರುತ್ತದೆ. ಯಾವುದನ್ನೂ ತಿರಸ್ಕರಿಸುವುದಿಲ್ಲ.  ಎಲ್ಲವನ್ನೂ ಸ್ವೀಕರಿಸುತ್ತದೆ.  ಯಾವುದನ್ನೂ ತನ್ನೊಳಗೆ ಇಟ್ಟುಕೊಳ್ಳುವುದಿಲ್ಲ.  ಅದು ಯಾವಾಗಲೂ ಸ್ವಚ್ಛ, ನಿರ್ಮಲ.   ಕನ್ನಡಿಯಲ್ಲಿ ಕಂಡುಕೊಳ್ಳುವಂತೆ ನಾವು ಏನೋ ಅದನ್ನು ಬುದ್ಧರಲ್ಲಿ ಕಂಡುಕೊಳ್ಳಬಹುದು. ಅಂತಹ ಶುದ್ಧ ವ್ಯಕ್ತಿತ್ವ ಬುದ್ಧರದು.

ಬುದ್ಧರಿಗೆ ಹಲವಾರು ಶಿಷ್ಯರಂತೆ.  ಅನೇಕರು ಬುದ್ಧ ಭಗವಾನರ ಆಕರ್ಷಣೆಗೆ ಮನಸೋತು ಮನೆ, ಮಠ ಬಿಟ್ಟು ಓಡಿ ಬಂದದ್ದಿರಬೇಕು.  ಹೀಗೆ ಬುದ್ಧರ ಬಳಿ ಓಡಿ ಬಂದಿದ್ದ ಒಬ್ಬ ಹುಡುಗನ ಸೋದರಮಾವ ಬುದ್ಧರಲ್ಲಿಗೆ ಬಂದು ಅವರನ್ನು ತನ್ನ ಗಂಟಲೆಲ್ಲಾ ಹರಿಯುವಂತೆ ನಿಂದಿಸತೊಡಗಿದನಂತೆ.

ಆತ ಸಾಕಷ್ಟು ಕಾಲ ನಿಂದಿಸುತ್ತಲೇ ಇದ್ದ.  ಆದರೆ ಬುದ್ಧರು ಆ ವ್ಯಕ್ತಿಯನ್ನು ತಮ್ಮ ಕರುಣಾಪೂರಿತ ಪ್ರೇಮಭಾವದಿಂದಲೇ ನೋಡುತ್ತಿದ್ದಾರೆ.  ಕೊನೆಗೆ ಈ ನೋಟವನ್ನು ಕಂಡು ದಿಗಿಲುಗೊಂಡ ಆ ವ್ಯಕ್ತಿ ಕೇಳಿದ, "ನಾನು ಇಷ್ಟು ನಿಂದಿಸಿದರು ನಿನಗೆ ಹೇಗೆ ತಾನೇ ಇಷ್ಟು ಸೌಮ್ಯವಾಗಿರಲು ಸಾಧ್ಯ?"

ಬುದ್ಧರು ಸಾವಧಾನವಾಗಿ ನುಡಿದರು, "ಮಿತ್ರ, ನಿಮ್ಮ ಮನೆಗೆ ಅತಿಥಿಗಳು ಬಂದಾಗ ಅವರಿಗೆ ಆತಿಥ್ಯಕ್ಕೆ ಏನಾದರೂ ನೀಡುವುದು ಉಂಟೋ?"

"ಹೌದು, ಹಣ್ಣು ಹಂಪಲು, ಭಕ್ಷ್ಯ ಭೋಜನಗಳನ್ನು ನೀಡುವುದುಂಟು", ಆಗಂತುಕ ಬುದ್ಧರ ಮಾತಿಗೆ ಪ್ರತಿನುಡಿದ.

ಬುದ್ಧರೆಂದರು, "ಅವುಗಳನ್ನು ನೀನು ನೀಡಿದಾಗ ಅವರು ಸ್ವೀಕರಿಸುವುದಿಲ್ಲವಾದರೆ ಅವುಗಳನ್ನು ಏನು ಮಾಡುತ್ತೀ?".

ಆಗಂತುಕನೆಂದ, "ಇನ್ನೇನು ಮಾಡುವುದು ನಾನೇ ತಿನ್ನುತ್ತೇನೆ".

ಬುದ್ಧರು ಪ್ರೇಮಭಾವದಲ್ಲಿ ನುಡಿದರು, "ಮಿತ್ರ, ನೀನು ಇಷ್ಟು ಸಮಯ ನೀಡಿದ ಈ ಆತಿಥ್ಯವನ್ನು ನಾನು ಸ್ವೀಕರಿಸಿಲ್ಲ!"

ಬುದ್ಧರ ಶಿಷ್ಯ ಆನಂದ ಪ್ರಶ್ನಿಸಿದರು.  "ಭಗವನ್, ಇಷ್ಟೊಂದು ವಿಸ್ಮಯ ಸೃಷ್ಠಿಯಿರುವಾಗ ಆ ಸೃಷ್ಠಿಕರ್ತನನ್ನು ನಾವೇಕೆ ಅಲ್ಲಗೆಳೆಯಬೇಕು?"

ಭಗವಾನರು ನುಡಿದರು, "ಮಗು, ಹಲವು ಜನ್ಮಗಳ ಪಾಪ ಸ್ಮರಣೆಗಳನ್ನು ಹೊತ್ತುಕೊಂಡು ಬಂದಿರುವ ನಮಗೆ ಆ ದೇವರುಗಳು ಇದ್ದರೂ, ಇಲ್ಲದಿದ್ದರೂ  ಆಗಬೇಕಾದ್ದು ತಾನೇ ಏನಿದೆ. ನಾವು ನಮ್ಮ ಪಾಪದ ಹೊರೆಗಳಿಂದ ಮುಕ್ತವಾಗುವ ಬದುಕನ್ನು ಬದುಕುವುದರತ್ತ ನಮ್ಮ ಗಮನಹರಿಸೋಣ".

ಕರ್ಮಯೋಗದ  ಕುರಿತಾಗಿ ಮನಮುಟ್ಟುವಂತೆ ಹೇಳುವ ಸ್ವಾಮಿ ವಿವೇಕಾನಂದರು ಹೇಳುತ್ತಾರೆ.  ಕರ್ಮಯೋಗದ ಉಪದೇಶವನ್ನು ಜೀವನದಲ್ಲಿ ಆಚರಿಸಿದ ವ್ಯಕ್ತಿಯೊಬ್ಬನನ್ನು ಕುರಿತು, ಒಂದೆರಡು ಮಾತುಗಳನ್ನು ಹೇಳುತ್ತೇನೆ.  ಆತನಾರೆಂದರೆ ಬುದ್ಧದೇವ. ನಿಶ್ಚಿತವಾಗಿಯೂ ಅದನ್ನು ಪೂರ್ಣ ರೀತಿಯಲ್ಲಿ ಸರ್ವದಾ ಆಚರಿಸಿದವನು ಅವನೊಬ್ಬನೇ. ಪ್ರಪಂಚದಲ್ಲಿ ಬುದ್ಧನನ್ನುಳಿದು ಇತರ ಪ್ರವಾದಿಗಳೆಲ್ಲರೂ ಬಾಹ್ಯಪ್ರೇರಣೆಯ ಮೂಲಕ ನಿಸ್ವಾರ್ಥ ಕರ್ಮವನ್ನಾಚರಿಸಿದವರು.  ಏಕೆಂದರೆ ಪ್ರಪಂಚದಲ್ಲಿ ಈತನನ್ನು ಬಿಟ್ಟು ಉಳಿದ ಪ್ರವಾದಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು.  ಒಂದು ಗುಂಪಿನವರ ಮತ ತಾವು ಈ ಭೂಮಿಗೆ ಇಳಿದುಬಂದ ಈಶ್ವರನ ಅವತಾರಗಳೆಂಬುದು.  ಮತ್ತೊಂದು ಗುಂಪಿನವರು ತಾವು ದೇವದೂತರು ಮಾತ್ರವೇ ಎಂದರು.  ಈ ಉಭಯವರ್ಗದವರೂ, ಅವರ ಮಾತು ಎಷ್ಟೇ ಆಧ್ಯಾತ್ಮಿಕತೆಯಿಂದ ಕೂಡಿದುದಾಗಿರಲಿ, ಬಾಹ್ಯಪ್ರೇರಣೆಯ ಮೂಲಕ ಕರ್ಮಮಾಡಿ, ಬಾಹ್ಯಫಲವನ್ನು ಅಪೇಕ್ಷಿಸಿದವರು.  ಮುಂದೆ ಹೇಳುವಂತೆ ನುಡಿದವನು ಬುದ್ಧನೊಬ್ಬನೇ”: 'ಈಶ್ವರ ವಿಷಯಕವಾದ ನಿಮ್ಮ ವಿವಿಧ ಸಿದ್ಧಾಂತಗಳನ್ನು ನಾನು ಗಣನೆಗೆ ತಾರೆನು. ಆತ್ಮವಿಷಯಕವಾದ ನಿಮ್ಮ ಸೂಕ್ಷ್ಮ ಸಿದ್ಧಾಂತಗಳನ್ನು ವಿಚಾರಮಾಡುವುದರಿಂದ ಪ್ರಯೋಜನವೇನು?  ಒಳ್ಳೆಯದನ್ನು ಮಾಡಿರಿ.  ಒಳ್ಳೆಯವರಾಗಿರಿ.  ಇದರಿಂದ ಸತ್ಯವೇನುಂಟೋ ಅದನ್ನೂ ಮುಕ್ತಿಯನ್ನೂ ಪಡೆಯುವಿರಿ.'  ಆತನ ಸ್ವಂತ ಜೀವನದಲ್ಲಿ ವೈಯಕ್ತಿಕ ಬಯಕೆಗಳು ಒಂದೂ ಇರಲಿಲ್ಲ.  ಆತನಿಗಿಂತ ಹೆಚ್ಚಾಗಿ ಕರ್ಮವನ್ನು ಆಚರಿಸಿದ ವ್ಯಕ್ತಿ ಯಾರು?  ಎಲ್ಲರಿಗಿಂತಲೂ ಅಷ್ಟು ಉನ್ನತ ಸ್ಥಾನವನ್ನು ಮುಟ್ಟಿದ ವ್ಯಕ್ತಿಯನ್ನು ಇತಿಹಾಸದಲ್ಲಿ ತೋರಿಸಿ ನೋಡೋಣ!  ಒಟ್ಟು ಈ ಮಾನವಕುಲದಲ್ಲಿ ಅಂತಹ ಉಚ್ಚತತ್ವವನ್ನೂ, ಅಂತಹ ವಿಶಾಲವಾದ ಸಹಾನುಭೂತಿಯನ್ನೂ ತನ್ನಲ್ಲಿ ಕೂಡಿಸಲು ಸಮರ್ಥನಾದ ಪುರುಷನು ಆತನೊಬ್ಬನು ಮಾತ್ರವೇ.  ಏಕೆಂದರೆ ಅತ್ಯಂತ ಉಚ್ಚ ತತ್ವೋಪದೇಶವನ್ನು ಮಾಡುವಕಾಲದಲ್ಲಿಯೇ ಪರಮ ಕ್ಷುದ್ರಜಂತುಗಳ ವಿಷಯದಲ್ಲಿ ಕೂಡಾ ಅಗಾಧವಾದ ಸಹಾನುಭೂತಿಯನ್ನು ಅವನು ತೋರಿಸಿದ.  ಆದರೆ ತನಗಾಗಿ ಏನನ್ನೂ ಅಪೇಕ್ಷಿಸಲಿಲ್ಲ. ಪೂರ್ಣರೀತಿಯಲ್ಲಿ ಅಹೇತುಕವಾಗಿ ಕರ್ಮಮಾಡಿದ ಆದರ್ಶಪ್ರಾಯನಾದ ಕರ್ಮಯೋಗಿ ಅವನೇ.  ಈ ಭೂಮಿಯಲ್ಲಿ ಜನ್ಮವೆತ್ತಿದವವರಲ್ಲಿ ಆತನೊಬ್ಬನೇ ಎಣೆಯಿಲ್ಲದ ಮಹಾಪುರುಷನೆಂದು ಮಾನವ ಇತಿಹಾಸದಿಂದ ಕಂಡುಬರುತ್ತದೆ.  ಹೃದಯ ಬುದ್ಧಿಗಳ ಅತ್ಯುನ್ನತ ಸಂಗಮವು ನಡೆದದ್ದು ಅವನೊಬ್ಬನಲ್ಲಿಯೇ.  ಆತ್ಮಶಕ್ತಿಯ ಅತ್ಯುಚ್ಚ ಅಭಿವ್ಯಕ್ತಿ ನಡೆದದ್ದು ಅವನೊಬ್ಬನಲ್ಲಿಯೇ.  ಜಗತ್ತು ಕಂಡ ಪ್ರಥಮ ಮಹಾಸುಧಾರಕನು ಅವನೇ. ಕೆಲವು ಹಳೆಯ ಓಲೆಗರಿಗಳಲ್ಲಿ ಹೀಗೆ ಹೇಳಿದೆ, ಆದ್ದರಿಂದ ಅದನ್ನು ನಂಬಿ ಎಂದು ಹೇಳಿದ ಮಾತ್ರಕ್ಕೆ ಯಾವುದನ್ನೂ ನಂಬಬೇಡಿ.  ಅದು ನಿಮ್ಮ ರಾಷ್ಟೀಯ ನಂಬಿಕೆ ಎಂಬ ಕಾರಣಕ್ಕೆ ಯಾವುದನ್ನೂ ನಂಬಬೇಡಿ.  ಬಾಲ್ಯದಿಂದಲೂ ಯಾವುದನ್ನೋ ನೀವು ನಂಬುವಂತೆ ಮಾಡಲಾಗಿದೆ ಎಂಬ ಕಾರಣಕ್ಕಾಗಿಯೇ ಯಾವುದನ್ನೂ ನಂಬಬೇಡಿ.  ಎಲ್ಲವನ್ನೂ ವಿಚಾರಮಾಡಿ.  ಅದನ್ನು ವಿಶ್ಲೇಷಣೆ ಮಾಡಿ ಅದು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆ ಎಂದು ನೀವು ಕಂಡುಕೊಂಡರೆ ಅದರಂತೆ ಬಾಳಿ, ಇತರರು ಅದರಂತೆ ಬಾಳಲು ನೆರವು ನೀಡಿ” – ಹೀಗೆ ಹೇಳುವ ಧೈರ್ಯವನ್ನು ಮೊತ್ತಮೊದಲಿಗೆ ತಾಳಿದವನು ಅವನೊಬ್ಬನೇ.  ಧನ, ಕೀರ್ತಿ ಮತ್ತು ಇನ್ಯಾವ ಆಶೆಯೂ ಇಲ್ಲದೆ ಅಹೇತುಕವಾಗಿ ಕರ್ಮಮಾಡಲು ಸಮರ್ಥನಾವನೋ, ಆತನೇ ನಿಶ್ಚಿತವಾಗಿಯೂ ಅತ್ಯಂತ ಉತ್ಕೃಷ್ಟವಾಗಿ ಕರ್ಮಮಾಡಬಲ್ಲವನು.  ಹಾಗೆ ಮಾಡಬಲ್ಲವನಾದಾಗ ಅವನು ಬುದ್ಧನಾಗುವನು.  ಪ್ರಪಂಚವನ್ನು ಮಾರ್ಪಡಿಸುವ ಕಾರ್ಯ ಶಕ್ತಿ ಆತನಲ್ಲಿ ಉದ್ಭವಿಸುವುದು. ಆದುದರಿಂದ ಆತನೇ ನಿಶ್ಚಿತವಾಗಿಯೂ ಆದರ್ಶ ಪ್ರಾಯನಾದ ಕರ್ಮಯೋಗಿ”. (ಆಧಾರ: ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಭಾಗ 1 ಪುಟ 122-123)

ಬುದ್ಧರ ಒಂದು ಪ್ರಾರ್ಥನೆ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಒಳಿತು.

"ಸಬ್ಬ ಪಾಪಸ್ಸ ಅಕರಣಂ,
ಕುಸಲಸ್ಸ ಉಪಸಂಪದಾ,
ಸಚ್ಚಿತ್ತಾ ಪರಿಯೋದಪನಂ
ಏತಂ ಬುದ್ಧಾನುಶಾಸನಂ"

ಇದರ ಅರ್ಥ ಹೀಗಿದೆ.  "ಎಲ್ಲಾ ಪಾಪ ಕಾಯಕಗಳನ್ನೂ ಬಿಡಬೇಕು.  ಒಳ್ಳೆಯ ಕೆಲಸವನ್ನೇ ಮಾಡಬೇಕು.  ಮನಸ್ಸನ್ನು ಶುದ್ಧವಾಗಿಟ್ಟು ಕೊಳ್ಳಬೇಕು.  ಇದು ಎಲ್ಲಾ ಬುದ್ಧರಿಗೂ ಇರುವ ಅನುಶಾಸನ.

ಬುದ್ಧ ಭಗವಾನರ ಕತೆಗಳು ಅಸಂಖ್ಯಾತ.  ಇಂದಿನ ದಿನದ ಬಹುತೇಕ ವಿಶ್ವಪ್ರಸಿದ್ಧ ವ್ಯಕ್ತಿ ವಿಕಾಸ, ಮನೋವಿಕಾಸ, ಮನೋನಿಗ್ರಹ ಪರಿಣಿತ - ಬೋಧಕ-ಶಿಕ್ಷಕರುಗಳಿಗಲ್ಲಾ ಬುದ್ಧ ಭಗವಾನರ ಬದುಕು, ಮಾತು ಮತ್ತು ಕಥೆಗಳು ಸಾಕಷ್ಟು ಬಂಡವಾಳವನ್ನು ಒದಗಿಸಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಸಚ್ಚಾರಿತ್ರರಾಗಿ ಬದುಕು ಸವೆಸಿದ  ಬೌದ್ಧರ ಅಭಿಮತದಲ್ಲಿ ಒಂದು ಮಾತಿದೆ.  "ಬುದ್ಧ ಎದುರು ಬಂದರೆ ಆತನನ್ನು ಶಿರಚ್ಚೇಧಗೊಳಿಸು" ಎಂದು.  ಇಂತಹ ಮಾತನ್ನು ತಾವು ನಂಬಿರುವ ಧಾರ್ಮಿಕ ಶ್ರೇಷ್ಠರ ಬಗ್ಗೆ ಯಾವುದೇ ಧರ್ಮೀಯನಿರಲಿ ಉಸುರಿಸಲಿಕ್ಕೆ ಸಾಧ್ಯ ಉಂಟೆ?  ಹಾಗೆ ಆಡಿದವರ ತಲೆ ಉಳಿದೀತೆ?  ಆದರೆ ಇದರರ್ಥ ವಿಶಾಲವಾದದ್ದು.  ಬುದ್ಧ ಎಂಬುದು ಕೇವಲ ಒಂದು ವಿಗ್ರಹವಾಗಿ ಪೂಜನೀಯ ಪ್ರತಿಮೆಯಾಗಿ ಉಳಿಯುವುದಕ್ಕಿಂತ ಮೇಲಾಗಿ ಪ್ರತಿಯೋರ್ವನೂ ತಾನೂ ಬುದ್ಧತ್ವವನ್ನು ಗಳಿಸಬೇಕೆಂಬ ಔನ್ನತ್ಯ ಅಲ್ಲಿ ಅಡಗಿದೆ.  ಸ್ವಾಮಿ ವಿವೇಕಾನಂದರ ಮಾತು ಕೂಡಾ ಇಲ್ಲಿ ಉಲ್ಲೇಖನಾರ್ಹ.    ಅಚಾರ್ಯರುಗಳಿಂದ ಸಂಪೂರ್ಣವಾಗಿ ಮುಕ್ತರಾಗಬೇಕೆಂಬುದು ನನ್ನ ನಂಬಿಕೆ.  ಅವರಿಗೆ ಗೌರವವನ್ನೆಲ್ಲಾ ತೋರಿ, ಆದರೆ ಧರ್ಮವನ್ನು ಒಂದು ಸ್ವತಂತ್ರ ಸಂಶೋಧನೆಯಿಂದ ಭಾವಿಸಿ.  ಅವರು ತಮ್ಮ ಬೆಳಕನ್ನು ಕಂಡಂತೆ ನಾನು ನನ್ನ ಬೆಳಕನ್ನು ಕಾಣಬೇಕಾಗಿದೆ.  ಅವರಿಗೆ ಸಿಕ್ಕಿದ ಬೆಳಕು ನಮಗೆ ತೃಪ್ತಿ ತರಲಾರದು”.

ಇಂದಿನ ನಮ್ಮ ಬದುಕಿನಲ್ಲಿ ಸಹಾ ನಾವು ಕೇವಲ ರಾಮ, ಕೃಷ್ಣ, ಬುದ್ಧ, ಕ್ರಿಸ್ತ, ಮಹಮ್ಮದ, ಗಾಂಧೀ ಹೀಗೆ ಹೆಸರು ಹೇಳುತ್ತಾ ಆ ಹೆಸರನ್ನೇ ನಮ್ಮ ಬಂಡವಾಳವಾಗಿ 'ಭಂಡ' ಬದುಕನ್ನು ಬಾಳುವುದೇ ಹೆಚ್ಚು.  ಭಗವಾನ್ ಬುದ್ಧರ ಆದರ್ಶವೆಂದರೆ "ಅವರು ಗಳಿಸಿದ ಬುದ್ಧತ್ವವನ್ನು ಪ್ರತಿಯೋರ್ವನೂ ಗಳಿಸಬೇಕು, ಈ ಜಗತ್ತಿನಲ್ಲಿ ಔನ್ನತ್ಯದೆಡೆಗೆ ಸಾಗದ ಒಂದೇ ಒಂದು ಕಲ್ಲು ಕೂಡಾ ಉಳಿಯದ ಹಾಗೆ ನಾವು ನಿರಂತರ ಪ್ರಯತ್ನಶೀಲರಾಗಿ ಎಲ್ಲರೊಡನೆ ಭವಸಾಗರವನ್ನು ದಾಟುವ  ಶ್ರದ್ಧಾವಂತರಾಗಬೇಕು.  ಮತ್ತೊಂದು ವಿಷಯ ನೆನಪಿರಲಿ.  ಆಚೆ ದಡ, ಔನ್ನತ್ಯದ ತಾಣ, ಅಥವಾ ನಿರ್ವಾಣ ಎಂಬುದು ಯಾವುದೂ ಕೂಡಾ ಇಲ್ಲ.  ಅದು ಆಗಬೇಕಿರುವುದು ನಾವೇ.  ಬುದ್ಧರೇ ಸ್ವಯಂ ತೇಜೋಮಯವಾದ ಹುಣ್ಣಿಮೆ ಆದಂತೆ".  ಆ ಒಂದು ಪರಮ ಕಲ್ಪನೆಯೇ ಬುದ್ಧ.  ಅದೇ ಬುದ್ಧ ಪೂರ್ಣಿಮೆ.

ನಾವೆಲ್ಲಾ ಬುದ್ಧರಾಗುವ ಒಂದು ಅಪೂರ್ವ ಕಲ್ಪನೆಯೇ ಸುಂದರ.  ಆ ಭವ್ಯತೆಯ ಕನಸನ್ನು ವಿಶ್ವಕ್ಕೆ ನೀಡಿ ಅದರ ಸಾಧ್ಯತೆಗಳು ನಿರಂತರ ನಮ್ಮೊಂದಿಗಿವೆ ಎಂಬ ಹೃದ್ಭಾವವನ್ನು  ನಮ್ಮ ಆಂತರ್ಯದಲ್ಲಿ ಸ್ಥಾಪಿಸಿರುವ ಮಹಾ ತೇಜಸ್ವೀಭಾವ ಬುದ್ಧರಿಗೆ ನಮ್ಮ ನಮನ.

ಬುದ್ಧಂ ಶರಣಂ ಗಚ್ಚಾಮಿ
ಸಂಗಂ ಶರಣಂ ಗಚ್ಚಾಮಿ
ದಮ್ಮಂ ಶರಣಂ ಗಚ್ಚಾಮಿ

ಈ ಜಗತ್ತಿನ ಸರ್ವ ಶ್ರೇಷ್ಠರಿಗೆ ನಾವು ಶರಣು ಹೋಗೋಣ.  ಈ ಶ್ರೇಷ್ಠತೆಯೆಡೆಗೆ ನಡೆದಿರುವ ಸಂಗಾತಿಗಳಿಗೆ ಶರಣಾಗೋಣ.  ದಿವ್ಯತೆಯ ಬದುಕಿಗೆ ಶರಣಾಗೋಣ.


Tag: Buddha

ಕಾಮೆಂಟ್‌ಗಳಿಲ್ಲ: