ಸೋಮವಾರ, ಸೆಪ್ಟೆಂಬರ್ 2, 2013

ಬಿ. ದಾಮೋದರ ಬಾಳಿಗ

ಬಿ. ದಾಮೋದರ ಬಾಳಿಗ

ಕನ್ನಡ ನಾಡು ನುಡಿಯ ಮೌನ ಸೇವಾವ್ರತಿ, ಸಾಮಾಜಿಕ ಸೇವಾಕರ್ತ, ಸಾಹಿತಿ, ಪ್ರಕಾಶಕ  ದಾಮೋದರ ಬಾಳಿಗರವರು ಸೆಪ್ಟೆಂಬರ್ 7, 1908ರಂದು  ಪುತ್ತೂರಿನಲ್ಲಿ ಜನಿಸಿದರು. ಇವರ ವಂಶಸ್ಥರು ದ.ಕ. ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ರಾಯಿಗ್ರಾಮದವರು. ತಂದೆ ಅಣ್ಣಪ್ಪ ಬಾಳಿಗ, ತಾಯಿ ರಾಧಾಬಾಯಿ. ಬಡತನದಲ್ಲಿ ಹುಟ್ಟಿ ಬೆಳೆದ ಬದುಕು ಅವರದು. ಪ್ರಾರಂಭಿಕ ಶಿಕ್ಷಣವನ್ನು ಪುತ್ತೂರಿನಲ್ಲಿ ನಡೆಸಿ  ಕೊಂಬೆಟ್ಟಿನ ಬೋರ್ಡ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಓದಿದರು. ಹಿಂದಿ, ಇಂಗ್ಲಿಷ್, ಕನ್ನಡ, ಕೊಂಕಣಿ ಭಾಷೆಗಳಲ್ಲಿ  ಪ್ರಾವೀಣ್ಯತೆ ಗಳಿಸಿದರಲ್ಲದೆಮಂಗಳೂರಿನ ಸರ್ಕಾರಿ ಮತ್ತು ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ  ಬಿ.ಎ. ಪದವಿ ಪಡೆದರು.

ಅಂದು ದೇಶದ ತುಂಬೆಲ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದ್ದ ಕಾಲ. ಬಾಳಿಗರು ಗಾಂಧೀಜಿಯವರ ಅಸಹಕಾರ ಚಳವಳಿಯಿಂದ ಪ್ರೇರಿತರಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಟೆಕ್ಸ್ ಟೈಲ್ ಇನ್‌ಸ್ಟಿಟ್ಯೂಟಿನಲ್ಲಿ ತರಬೇತು ಪಡೆದು ಕೆನರಾ ಡೈಯಿಂಗ್ ಅಂಡ್ ಪ್ರಿಂಟಿಂಗ್ ಎಂಬ ಹೆಸರಿನ ಸ್ವ-ಉದ್ಯೋಗ ಪ್ರಾರಂಭ ಮಾಡಿದರು. ಅಡಿಕೆ ಕೊಳೆ ರೋಗ ನಿವಾರಣೆಗಾಗಿ ಗುಡಿ ಕೈಗಾರಿಕೆ ಸ್ಥಾಪನೆ ಮಾಡಿದರು. ಪ್ರವಾಹ ಬಂದು ಜನಸ್ತೋಮಕ್ಕೆ ಭಾರಿ ನಷ್ಟ ಉಂಟಾದಾಗ ಫ್ಲಡ್ ರಿಲೀಫ್ ಕಮಿಟಿ ಸ್ಥಾಪಿಸಿದರು. ಹೀಗೆ ಅವರು ನಾನಾ ರೀತಿಯ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ದಾಮೋದರ ಬಾಳಿಗರಿಗೆ ಎಳೆವೆಯಿಂದಲೇ ಸಾಹಿತ್ಯಾಸಕ್ತಿ ಬೆಳೆದುಬಂತು.   ಮೊಳಹಳ್ಳಿ ಶಿವರಾಯರಿಂದ ಅವರಲ್ಲಿ ಸಾಹಿತ್ಯ ಪ್ರೇರಣೆ ಸ್ಪುರಿಸಿತು. ವಯಸ್ಕರ ಶಿಕ್ಷಣಕ್ಕಾಗಿ ಸೇವೆ ಮಾಡಿದರು. ಪುತ್ತೂರಿನ ಶಾರದಾ ವಾಚನಾಲಯದ ಲೈಬ್ರರಿಯನ್ ಆಗಿ ಕೆಲಕಾಲ ಕಾರ್ಯನಿರ್ವಹಿಸಿದರಲ್ಲದೆ  ಮಂಗಳೂರು ರಥ ಬೀದಿಯಲ್ಲಿ  ಪುಸ್ತಕ ಮಳಿಗೆ ತೆರೆದರು. ಜೊತೆಗೆ ಅಲೈಡ್ ಪಬ್ಲಿಷಿಂಗ್ ಹೌಸ್ ಹೆಸರಿನಿಂದ ಪುಸ್ತಕ ಪ್ರಕಾಶನದ ಉದ್ಯಮ ಪ್ರಾರಂಭಿಸಿದರು. 1938ರಲ್ಲಿ ತೆರೆದ ಬಾಳಿಗ ಅಂಡ್ ಸನ್ಸ್ ಸಂಸ್ಥೆಯ ಅಡಿಯಲ್ಲಿ ಮತ್ತು 1942ರಲ್ಲಿ ತೆರೆದ ನವನಿಪ್ರಕಾಶನದಿಂದ ಹಲವಾರು ಪುಸ್ತಕ ಪ್ರಕಟಣೆ ಮಾಡಿದರು. ಇವುಗಳಲ್ಲಿ ಸುಬ್ರಾಯ ಉಪಾಧ್ಯಾಯರ ಗಿಲಿಗಿಟಿ’ (ಶಿಶುಗೀತೆ ಸಂಕಲನ) ಮೊದಲ ಪ್ರಕಟಣೆ. ಗೋವಿಂದ ಪೈಗಳ ಗೋಲ್ಗೊಥಾ, ವೈಶಾಖ, ಹೆಬ್ಬೆರಳು, ಚಿತ್ರಭಾನು ಮುಂತಾದವುಗಳನ್ನು ಪ್ರಕಟಿಸಿದ ಕೀರ್ತಿ ದಾಮೋದರ ಬಾಳಿಗರದ್ದು. ಪೈಗಳ ಗೋಲ್ಗೊಥವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಹೆಮ್ಮೆ  ಕೂಡಾ ಇವರದ್ದು.

ಅಳಿಲುಸೇವೆ, ಅಜ್ಜಿ ಕತೆ, ಅತ್ತೆಯ ಕರಾರು ಮತ್ತು ಇತರ ಕಥೆಗಳು, ಇಲಿಮನೆ ಗಲಿಬಿಲಿ, ಉಂಡಾಡಿ ತೋಳ, ಗೋವಿನ ಕತೆ, ಚಾಡಿ ಮತ್ತು ಇತರ ಕಥೆಗಳು, ನೂಲುವ ತಕಲಿ, ಬೆಲ್ಲದ ಮಲ್ಲ ಮತ್ತು ಇತರ ಕಥೆಗಳು, ಸೀನಿನ ಸೀನ, ಮಾತಾಳಿ ಆಮೆ ಮತ್ತು ಇತರ ಕಥೆಗಳು ಇವರ ರಸವತ್ತಾದ ಮಕ್ಕಳ ಸಾಹಿತ್ಯರಚನೆಗಳು. ಮಕ್ಕಳ ಬೌದ್ಧಿಕ ಮನೋಧರ್ಮ ಅರಿತು ಬಾಸೆಲ್ ಮಿಷನ್‌ರವರೊಡನೆ  ಹಲವಾರು ಪಠ್ಯ ಪುಸ್ತಕಗಳನ್ನು ರಚಿಸಿದರು. ವಿಜ್ಞಾನವನ್ನು ವಿವರಿಸುವ ನಮ್ಮ ಭೂಮಿ’, ಬಹುಮಾನಿತ ಕೃತಿ ಚರಕ-ತಕಲಿ. ಕರಕುಶಲ ಹೊತ್ತಗೆಗಳು, ಗಡಿಗಡಿಗೆ ತುಪ್ಪದ ದೋಸೆ, ಕಟ್ಟುಕತೆಗಳು ಮುಂತಾದವು ಉತ್ತಮ ಚಿಕ್ಕ ಜನಪ್ರಿಯ ಹೊತ್ತಗೆಗಳು. ಭಾರತ ಜ್ಯೋತಿ ಮಹಾತ್ಮಮತ್ತೊಂದು ಮಹತ್ವದ ಕೃತಿ. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ  ಹಲವಾರು ರಾಷ್ಟ್ರ ಭಕ್ತಿಗೀತೆಗಳ ರಚನೆ ಮಾಡಿದರು. ಇವರು ಕೊಂಕಣಿಯಲ್ಲಿ ರಚಿಸಿದ್ದ ಗೀತೆಗಳನ್ನು ಕನ್ನಡ ಭಾಷಾಂತರದೊಡನೆ ಪ್ರಕಟಿಸಿ ಷಷ್ಟಬ್ದಿ ಸಮಾರಂಭದಲ್ಲಿ ಅರ್ಪಿಸಿದ್ದು ಶಾಂತಿ ಸಾಧನಕೃತಿ.

ಈ ಮಹಾನ್ ಸಾಧಕರು ಮೇ 21, 1985ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಕೃಪೆ: ಕಣಜ

Tag: B. Damodara Baliga

ಕಾಮೆಂಟ್‌ಗಳಿಲ್ಲ: