ಮಂಗಳವಾರ, ಸೆಪ್ಟೆಂಬರ್ 3, 2013

ರಾಜೇಶ್ ಖನ್ನ

ರಾಜೇಶ್ ಖನ್ನ

ರಾಜೇಶ್ ಖನ್ನ ಎಂಬ ಹೆಸರಿನ ಪ್ರಖ್ಯಾತಿಯ  ಜತಿನ್ ಖನ್ನ ಡಿಸೆಂಬರ್ 29, 1942ರಲ್ಲಿ ಜನಿಸಿದ.    ತನ್ನ ಬಂಧುಗಳ ದತ್ತು ಪುತ್ರನಾಗಿ ಜತಿನ್ ಖನ್ನ ಬೆಳೆದು ಬಂದ.  ಈತನ ಕಾಲೇಜಿನ ಸಹಪಾಠಿ ಅಂದು ರವಿ ಕಪೂರ್ ಆಗಿದ್ದ ಮತ್ತೋರ್ವ ಪ್ರಸಿದ್ಧ ನಟ ಜಿತೇಂದ್ರ. 

ಚಿತ್ರರಂಗದಲ್ಲಿನ ಸೂಪರ್ ಸ್ಟಾರ್ಎಂಬ ವ್ಯಾವಹಾರಿಕ ಜನಪ್ರಿಯತೆಯ  ಪರಂಪರೆಯಲ್ಲಿ ಮೊದಲಿಗರೆಂಬ ಪ್ರಖ್ಯಾತಿ ರಾಜೇಶ್ ಖನ್ನ ಅವರದು.  ಒಂದು ರೀತಿಯಲ್ಲಿ ಸೂಪರ್ ತಾರೆಗಳಲ್ಲಿ ಅತ್ಯಂತ ಸುಂದರನಾಗಿದ್ದವನು ಕೂಡಾ ಈತನೇ.  ಯಾವುದೇ ಹೊಸ ಪರಂಪರೆ ಆದಾಗಲೂ ಅದನ್ನು ಪ್ರಾರಂಭಿಕವಾಗಿ ಒಪ್ಪದ ಅನೇಕ ನಿಲುವುಗಳಿರುತ್ತವೆ.  ಅಂದಿನ ತಾರೆಯರಾದ ದಿಲೀಪ್ ಕುಮಾರ್, ರಾಜ್ ಕಫೂರ್, ದೇವಾನಂದ್ ಮುಖಗಳಿಗೆ ಒಗ್ಗಿದ್ದ ಚಿತ್ರರಂಗ ರಾಜೇಶ್ ಖನ್ನನ ಮುಖಾರವಿಂದ ಚಿತ್ರರಂಗಕ್ಕೆ ಸೂಕ್ತವಲ್ಲ ಎಂದು ಪರಿಗಣಿಸಿತ್ತಂತೆ.  ಅದರಲ್ಲೂ ಆತನ ಪ್ರಥಮ ಚಿತ್ರಗಳಾದ ಆಖ್ರಿ ರಾಸ್ತಾ, ರಾಹ್ಜ್ ಮುಂತಾದವು ಹೊಳಪಿನಿಂದ ಸಿಡಿಯುವ  ಬದಲು ಟುಸ್ ಎಂದಾಗ ಆತನನ್ನು ಚಿತ್ರರಂಗದ ಪಂಡಿತರು ಇತ್ತ ಬಂದ, ಅತ್ತ ಹೋದಎಂದು ಮೂಗು ಮುರಿದರು.  1969ರ ವರ್ಷದಲ್ಲಿ ಆರಾಧನಾಚಿತ್ರ ಈ ಎಲ್ಲ ಕಥೆಗಳನ್ನೂ ಬದಲಿಸಿ ಅದುವರೆವಿಗೂ ಯಾವುದೇ ಒಬ್ಬ ನಟ ಅಥವಾ ನಟಿ ಕೇಳಿ ಕಂಡರಿಯದ ಪ್ರಖ್ಯಾತಿಯ ಹೊಳೆಯನ್ನು ಈತನಿಗೆ ತಂದುಕೊಟ್ಟಿತು.

ಆರಾಧನಾಚಿತ್ರದ ನಂತರದಲ್ಲಿ ಆನಂದ್’, ‘ಆಪ್ ಕಿ ಕಸಮ್’, ‘ಹಾಥಿ ಮೇರೆ ಸಾಥಿ’, ‘ಮೇರೇ ಜೀವನ್ ಸಾಥಿ’, ‘ಅಮರ್ ಪ್ರೇಮ್’, ‘ನಮಕ್ ಹರಾಮ್ಮುಂತಾದ ಒಂದಾದ ನಂತರ ಒಂದು ಎಂಬಂತೆ ರಾಜೇಶ್ ಖನ್ನನ ಯಶಸ್ವಿ ಚಿತ್ರಗಳು ಮೂಡಿಬಂದವು.  ರಾಜೇಶ್ ಖನ್ನ ಎಂದರೆ ಅಂದಿನ ಯುಗದಲ್ಲಿನ ಕನಸಿನ ಕುವರ.  ಅಂದಿನ ಪ್ರಸಿದ್ಧ ನಟಿಯರಾದ ಶರ್ಮಿಳಾ ಠಾಗೂರ್, ಹೇಮಾ ಮಾಲಿನಿ, ಆಶಾ ಪರೇಖ್, ಮಮ್ತಾಜ್ ಅವರೊಂದಿಗಿನ ನಾಯಕನಾಗಿ, ಆತ ಪ್ರೇಮಪೂರ್ಣ ಪಾತ್ರಗಳ ಮೂಲಕ ಯುವಜನಾಂಗದ ಹೃದಯವನ್ನು ಸೂರೆಗೊಂಡಿದ್ದ.  ಅಂದಿನ ಹುಡುಗರೆಲ್ಲ ರಾಜೇಶ್ ಖನ್ನನಂತೆ ಕ್ರಾಪ್ ಮಾಡಿಸಿಕೊಳ್ಳಲು ಹೆಣಗಿ ಸೋಲುತ್ತಿದ್ದರು.    ಆಗ ತಾನೇ ಬಾಬ್ಬಿ ಚಿತ್ರದಿಂದ ಪ್ರಖ್ಯಾತಿಗೊಂಡಿದ್ದ ಚಿತ್ರರಂಗದ ನವಯುವತಿ ಡಿಂಪಲ್ ಕಪಾಡಿಯಾ ಆತನಿಗೆ ಹೂಮಾಲೆ ಹಾಕಿ ವರಿಸಿದಳು.  ಆತನ ಚಿತ್ರಗಳಲ್ಲಿನ ಸಂಗೀತವಂತೂ ಅಮರವಾದದ್ದು.  ಎಸ್. ಡಿ. ಬರ್ಮನ್, ಆರ್. ಡಿ. ಬರ್ಮನ್, ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರ ಸಂಗೀತದಲ್ಲಿ  ಮತ್ತು ಕಿಶೋರ್ ಕುಮಾರನ ಅಮರ ಗಾಯನದಲ್ಲಿ ಆತನ ಚಿತ್ರಗಳ ಹಾಡುಗಳು ಮರೆಯಲಾರದ ಅಮರಗೀತೆಗಳಂತೆ ಇಂದೂ ಜನಮನದಲ್ಲಿ ಕಂಗೊಳಿಸುತ್ತಿವೆ.  ರಾಜೇಶ್ ಖನ್ನ ಕಿಶೋರ್ ಕುಮಾರ್ ಆರ್ ಡಿ ಬರ್ಮನ್ ಜೋಡಿ ನೀಡಿದ ಅಮರ್ ಪ್ರೇಮ್, ಅಪ್ನಾ ದೇಶ್, ಮೇರೇ ಜೀವನ್  ಸಾಥಿ, ಆಪ್ ಕಿ ಕಸಮ್, ಕಟಿ ಪತಂಗ್, ನಮಕ್ ಹರಾಮ್, ಆವಾಜ್, ಅಂಚಲ್, ಹಮ್ ದೋನೋ, ಅಲಗ್ ಅಲಗ್ ಮುಂತಾದ ಚಿತ್ರಗಳು ಕಂಡ ಯಶಸ್ಸು ನೀಡಿದ ಮಾಧುರ್ಯ ಅಪೂರ್ವವಾದದ್ದು.  1969ರಿಂದ 1973ರ ಅವಧಿಯಲ್ಲಿ ರಾಜೇಶ್ ಖನ್ನನ ಸತತ ಹದಿನೈದು ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದವು.  ಇಂಥಹ ದಾಖಲೆಯನ್ನು ಇದುವರೆಗೂ ಮತ್ಯಾರೂ ಮೀರಿಸಿಲ್ಲ.

ಈ ಎಲ್ಲವಕ್ಕೂ ಒಂದು ಕೊನೆ ಬಂತು.  1973ರ ವರ್ಷದಲ್ಲಿ ಅಮಿತಾಬ್ ಬಚ್ಚನ್ ಜಂಜೀರ್ಚಿತ್ರದಿಂದ ಹೊಸ ಸೂಪರ್ ಸ್ಟಾರ್ ಆದರು.  ರಾಜೇಶ್ ಖನ್ನನ ಪಾತ್ರಗಳು ಕೂಡಾ ಒಂದು ರೀತಿಯಲ್ಲಿ ಏಕತಾನತೆಯಲ್ಲೇ ಮಡುಗಟ್ಟಿ ನಿಂತವು.  ಒಂದು ಕಾಲದ ಶ್ರೇಷ್ಠ ಸಂಗೀತವೆಲ್ಲಾ ಚಿತ್ರರಂಗದ ಬತ್ತಳಿಕೆಯಿಂದ ಕಣ್ಮರೆಯಾಗಿ ಚಿತ್ರರಂಗವು ಜನರಲ್ಲಿ ಹೊಸ ರೀತಿಯ ಸಾಹಸ, ವಿಭಿನ್ನ ನಡಾವಳಿಗಳ ಅಭಿರುಚಿಯನ್ನು ಜನಮಾನಸದಲ್ಲಿ ಭಿತ್ತತೊಡಗಿತ್ತು.   ಹೀಗಾಗಿ ರಾಜೇಶ್ ಖನ್ನನಿಂದ  ಆತನ ಯಶಸ್ಸು, ರೂಪು. ಜನಪ್ರಿಯತೆ, ಕೈ ಹಿಡಿದ ಪತ್ನಿ ಹೀಗೆ ಎಲ್ಲವೂ ಒಂದೊಂದಾಗಿ ದೂರವಾದರು.  ಹಲವಾರು ಸೋತ ಚಿತ್ರಗಳು, ಕೆಲವೊಂದು ಕಲಾತ್ಮಕ ಚಿತ್ರಗಳು, ಪೋಷಕ ಪಾತ್ರಗಳು  ಹೀಗೆ ಹಲವು ರೀತಿಯಲ್ಲಿ ರಾಜೇಶ್ ಖನ್ನ ಮುಂದಿನ ದಶಕಗಳಲ್ಲಿ ಮೂಡಿದರು.  ಕಾಂಗ್ರೆಸ್ ಪಕ್ಷದಿಂದ ಲೋಕಸಭೆಯನ್ನೂ ಪ್ರವೇಶಿಸಿದರು.  ದೂರದರ್ಶನದ ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದರು.    ಅವರು  ತಮ್ಮದೇ ಆದ ಮ್ಯೂಸಿಕ್ ಚಾನೆಲ್ ನಿರ್ಮಿಸುವ ಪ್ರಯತ್ನದಲ್ಲಿದ್ದರು.


69 ದಾಟಿ ಎಪ್ಪತರ ಅಂಚಿನಲ್ಲಿದ್ದ  ರಾಜೇಶ್ ಖನ್ನ ಜುಲೈ 18, 2012ರ ವರ್ಷದಲ್ಲಿ  ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು.  ಒಂದು ರೀತಿಯಲ್ಲಿ ಜನಪ್ರಿಯತೆ, ಸಂಪತ್ತು,  ಬಣ್ಣದ ಬದುಕು ಇವುಗಳೆಲ್ಲದರ ಅನಿರೀಕ್ಷಿತ ಉಗಮ ಮತ್ತು ನಶ್ವರತೆಗಳಿಗೆ  ಸಾಕ್ಷಿಯೋ ಎಂಬಂತೆ ರಾಜೇಶ್ ಖನ್ನ  ಚಿತ್ರರಂಗದಲ್ಲಿ ಎದ್ದು ಕಾಣುತ್ತಾರೆ. 

Tag: Rajesh Khanna

ಕಾಮೆಂಟ್‌ಗಳಿಲ್ಲ: