ಭಾನುವಾರ, ಸೆಪ್ಟೆಂಬರ್ 1, 2013

ಶ್ಯಾಮ್ ಬೆನಗಲ್

ಶ್ಯಾಮ್ ಬೆನಗಲ್

ಶ್ಯಾಮ್ ಬೆನಗಲ್ ಚಿತ್ರರಂಗದಲ್ಲಿನ ತಮ್ಮ ಅಪೂರ್ವ ಸೃಜನೆಗಳ  ಮೂಲಕ ಲೋಕಪ್ರಸಿದ್ಧರು.  ಬೆನಗಲ್ ಅಂದರೆ ಎಲ್ಲೋ ನಮ್ಮವರೇ ಇದ್ದ ಹಾಗಿದೆಯಲ್ಲ ಎಂಬ ಭಾವ ಮೂಡಿಸುತ್ತದೆ.  ನಿಜ ಬೆನಗಲ್ ಕರ್ನಾಟಕದ ಕರಾವಳಿಯ ಒಂದು ಊರು. ಶ್ಯಾಮ್ ಬೆನಗಲ್ ಅವರ ಹಿರಿಯರು ಈ ಬೆನಗಲ್ ಎಂಬ ಊರಿನಲ್ಲಿ ನೆಲೆಸಿದ್ದರು.  ನಂತರದಲ್ಲಿ ಅವರ ತಂದೆಯವರು ಸಿಕಂದರಾಬಾದಿನ ಅಲವಾಲಾದಲ್ಲಿ ನೆಲೆಸಿದರು.    ಶ್ಯಾಮ್ ಬೆನಗಲ್ ಅವರು ಡಿಸೆಂಬರ್ 14, 1934ರಂದು ಈ ಸಿಕಂದರಾಬಾದಿನ ಅಲವಾಲಾದಲ್ಲಿ ಜನಿಸಿದರು. 

ಸಾಮಾನ್ಯವಾಗಿ ಹೊಸ ಅಲೆಯ ಚಿತ್ರಗಳೆಂದರೆ ಸಾಮಾನ್ಯ ಜನಸಮುದಾಯದಲ್ಲಿ ಯಾವುದೋ ಸಾವು ನೋವು ಬಡತನಗಳನ್ನು ಬಿಂಬಿಸುವ, ಚಿತ್ರಮಂದಿರದಲ್ಲಿ ಕುಳಿತ ಎರಡು ಮೂರು ಘಂಟೆಗಳ ಕಾಲ ಯಾವುದೋ ಹಿಂಸಾತ್ಮಕ ನೆಲೆಯಲ್ಲಿ ಬುದ್ಧಿವಂತ ಎಂಬ ಸೋಗಿನಲ್ಲಿ ಕುಳಿತ ಅನುಭವವೇ ಎಂಬ ಪ್ರಶ್ನೆ ಮೂಡುತ್ತದೆ.  ಶ್ಯಾಮ್ ಬೆನಗಲ್ ಅವರ ಚಿತ್ರಗಳನ್ನು ನೋಡಿದವರಿಗೆ ಈ ಅಭಿಪ್ರಾಯ ತಪ್ಪು ಎಂದು ನಿಶ್ಚಯವಾಗಿ ತಿಳಿದಿರುತ್ತದೆ.

ಶ್ಯಾಮ್ ಬೆನಗಲ್ಲರ  ಅಂಕುರ್’, ‘ನಿಶಾಂತ್’,  ‘ಮಂಥನ್’, ‘ಜುನೂನ್’, ‘ಕಲಿಯುಗ್’, ‘ಮಂಡಿಮುಂತಾದ ಚಿತ್ರಗಳು ಗಂಭೀರತೆ, ಶೋಷಿತ ಸಮಾಜದ ಚಿತ್ರಣ, ಹಾಡುಗಳಿಲ್ಲದಿರುವಿಕೆ, ಮಸಾಲೆ ರಾಹಿತ್ಯತೆ ಇವುಗಳೆಲ್ಲದರ ನಡುವೆಯೂ ಪ್ರೇಕ್ಷಕರನ್ನು ಆಸಕ್ತಿಯಿಂದ ಚಿತ್ರಮಂದಿರಕ್ಕೆ ಬರುವಂತೆ ಮಾಡಿ ಮನಸೆಳೆದ ಚಿತ್ರಗಳು.  ಭಾರತೀಯ ಚಲನಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ ಶ್ಯಾಮ್ ಬೆನಗಲ್‌  ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ದೂರದರ್ಶನದಲ್ಲಿ ಮೂಡಿದ ಯಾತ್ರಾ’, ಭಾರತ್ ಏಕ್ ಕೊಜ್ಮುಂತಾದವು ಕೂಡ ಪ್ರೇಕ್ಷಕನನ್ನು ಆಸಕ್ತಿಯಿಂದ ಟಿ.ವಿ ಯ ಮುಂದೆ ಕುಳಿತುಕೊಳ್ಳುವಂತೆ ಮಾಡಿದವು. ನಂತರದ ದಶಕಗಳಲ್ಲಿ ಕೂಡ ಶ್ಯಾಮ್ ಬೆನೆಗಲ್ ತಮ್ಮ ವೈವಿಧ್ಯಮಯ ಕೊಡುಗೆಗಳಿಂದ ಚಿತ್ರರಂಗವನ್ನು ಶ್ರೀಮಂತಗೊಳಿಸುತ್ತ ಮುನ್ನಡೆದಿದ್ದಾರೆ.

ಶ್ಯಾಮ್ ಬೆನಗಲ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ನಂತರ ಪುಣೆಯ ಎಫ್‌ಟಿಟಿಐನಲ್ಲಿ ಡಿಪ್ಲೊಮಾ ಪಡೆದರು. ತಮ್ಮ 12ನೆಯ ವಯಸ್ಸಿನಿಂದಲೇ ತಂದೆಯವರ ಕ್ಯಾಮರಾ ಹಿಡಿದು ನಿರ್ದೇಶಕನಾಗುವ ಕನಸು ಕಂಡರು. ಅವರ ತಂದೆಯೂ ಒಬ್ಬ ಒಳ್ಳೆಯ ಕಲಾವಿದರು. ಫೋಟೋಗ್ರಾಫರ್ ಆಗಿದ್ದವರು. ಹತ್ತು ಮಕ್ಕಳ ಪರಿವಾರ. ಚಿಕ್ಕ ಸಮಾರಂಭಗಳು, ಪಿಕ್ನಿಕ್ಗಳ ಸಮಾರಂಭಗಳನ್ನು ಚಿತ್ರಿಸಿಕೊಡುವ ಕೆಲಸಮಾಡುತ್ತಿದ್ದರು. ಶ್ಯಾಮ್ ಅವರ  ಆರನೇ  ವರ್ಷದ ಹುಟ್ಟು ಹಬ್ಬಕ್ಕೆ ಅವರ ತಂದೆ ಒಂದು ಮ್ಯಾಜಿಕ್ ಲ್ಯಾಂಟ್ರಿನ್, ಒಂದು ಪುಟಾಣಿ ಪ್ರೊಜೆಕ್ಟರ್ ಮತ್ತು ಕೆಲವು ಕಾರ್ಟೂನ್ ಚಿತ್ರಗಳನ್ನು ಬಹುಮಾನವಾಗಿ ಕೊಟ್ಟಿದ್ದರು. ಇದೇ ಅವರ ಚಲನಚಿತ್ರಾಸಕ್ತಿ ಗರಿಗೆದರಲು ಪ್ರೇರಕವಾಯಿತು ಎನ್ನುತ್ತಾರೆ ಬೆನಗಲ್ಲರು.

1960ರಿಂದ 1966ರವರೆಗೆ ಬೆನಗಲ್ಲರು  ಮುಂಬಯಿಯ ಲಿಂಟಾಸ್ ಏಜೆನ್ಸಿಯಲ್ಲಿ ಜಾಹೀರಾತು ಕಾಪಿರೈಟರ್ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರದಲ್ಲಿ ಕೆಲವು ಸಮಯ ಭಾಬಾ ಸಾಹೇಬ್ ಫೆಲೋಶಿಪ್ ಪಡೆದು ಅಮೆರಿಕದಲ್ಲಿ ಕೆಲಸ ಮಾಡಿದರು.  ಚಲನಚಿತ್ರ ನಿರ್ದೇಶನಕ್ಕೆ ಇಳಿಯುವ ಮುನ್ನ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವಲ್ಲಿ  ಪಳಗಿದ್ದರು. ಸುಮಾರು 1500 ಜಾಹೀರಾತುಗಳು, ಹಾಗೂ 45 ಸಾಕ್ಷ್ಯಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ. ಬಾಲಕ ಶ್ಯಾಮ್  ತನ್ನ 12ನೆಯ ವಯಸ್ಸಿನಲ್ಲೇ ಛುಟ್ಟಿಯೋಂಮೆ ಮೌಜ್ ಮಸ್ತಿಎಂಬ ಕಿರು-ಚಿತ್ರವನ್ನು ತಯಾರಿಸಿದರು.

ಶ್ಯಾಮ್ ಬೆನೆಗಲ್ ಅವರ ಮೇಲೆ ಅತ್ಯಂತ ಪ್ರಭಾವಮಾಡಿದ ಹಿಂದೀ ಚಿತ್ರಗಳೆಂದರೆ  ಗುರುದತ್ತರ ಪ್ಯಾಸಾ, ರಾಜ್ ಕಪೂರರ ಜಾಗ್ತೆ ರಹೊ, ಬಿಮಲ್ ರಾಯ್ ರವರ  'ದೊ ಬಿಘಾ ಜಮೀನ್', ಸತ್ಯ ಜಿತ್ ರೇರವರ 'ಪಥೇರ್ ಪಾಂಚಾಲಿ' ಮುಂತಾದವು.  ಶ್ಯಾಮ್ ಬೆನೆಗಲ್ ತಮ್ಮ ವಾಕ್ಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದು ಅಂಕುರ್ಚಿತ್ರದಿಂದ. ಅನಂತನಾಗ್ಶಬಾನಾ ಆಜ್ಮಿ , ಸಾಧು ಮೆಹರ್ ಮುಂತಾದವರು ನಟಿಸಿದ ಈ ಹಿಂದಿ ಚಿತ್ರ, ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ್ದಲ್ಲದೆ, ಅಂತರರಾಷ್ಟ್ರೀಯ ಖ್ಯಾತಿಯನ್ನೂ ತಂದು ಕೊಟ್ಟಿತು. ಭೂಮಾಲೀಕತ್ವವುಳ್ಳ  ಅನೇಕ ಜನರು ಬಡವರನ್ನು, ಶೋಷಿತರನ್ನು ಕಾಡುವ ಚಿತ್ರವಾದ ಇದು, ಭೂಮಾಲೀಕರ  ಜೀವನದ ಒಳನೋಟಗಳನ್ನು ವಿಸ್ತರಿಸುತ್ತಾ ಸಾಗುತ್ತದೆ.  ಕಲಾತ್ಮಕ ಹಾಗೂ ಮುಖ್ಯವಾಹಿನಿಯ ಎರಡೂ ಸಮ್ಮಿಶ್ರ ಗುಣಗಳು  ಇವರ ಚಿತ್ರಗಳಲ್ಲಿ  ಮೈದಾಳಿವೆ. ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನದೊಂದಿಗೆ, ಬದಲಾವಣೆಯ ತುಡಿತವೂ ಇವರ ಚಿತ್ರಗಳಲ್ಲಿ ಎದ್ದು ಕಾಣುತ್ತದೆ.  ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾಓಂ ಪುರಿಕುಲ್ ಭೂಷಣ್ ಖರಬಂದಾ ಮುಂತಾದ ಅನನ್ಯ ಪ್ರತಿಭೆಗಳು  ಶ್ಯಾಮ್ ಬೆನೆಗಲ್ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಗಳು. 

ಶ್ಯಾಮ್ ಬೆನಗಲ್ ಮೊದಲಿಗೆ  'ಚರಣದಾಸ್ ಚೋರ್' ಎಂಬ ಎಂಬ ಮಕ್ಕಳ ಚಿತ್ರ ತಯಾರಿಸಿದ್ದರು. ಅನಂತರದಲ್ಲಿ  'ನಿಶಾಂತ್', 'ಭೂಮಿಕಾ', 'ಮಂಥನ್', 'ಜುನೂನ್', 'ಕಲಿಯುಗ್', 'ಆರೋಹಣ್', 'ಮಂಡಿ', 'ತ್ರಿಕಾಲ್'’ ಮುಂತಾದ ಮರೆಯಲಾರದ ಚಿತ್ರಗಳನ್ನು ನೀಡಿದರು. ವಾಸ್ತವಿಕತೆ, ಮತ್ತು ವೈವಿಧ್ಯತೆ ಅವರ ಚಿತ್ರಗಳಲ್ಲಿ ಎದ್ದು ತೋರುತ್ತವೆ.  ಜವಾಹರಲಾಲ್ ನೆಹರು ಅವರ "ಡಿಸ್ಕವರಿ ಆಫ್ ಇಂಡಿಯಾ" ಪುಸ್ತಕವನ್ನು ಆಧರಿಸಿದ "ಭಾರತ್ ಏಕ್ ಖೋಜ್" ಎಂಬ ಅವರು ನಿರ್ದೇಶಿಸಿ ಧಾರಾವಾಹಿ ಪ್ರಭಾವಯುತ ದೃಶ್ಯಸಂಯೋಜನೆ ನಿರೂಪಣೆಗಳಿಂದಾಗಿ  ಪ್ರೇಕ್ಷಕರ ಮನಸೆಳೆದಿತ್ತು.

ಶ್ಯಾಮ್ ಬೆನೆಗಲ್ ಅವರು 1992ರ ವರ್ಷದಲ್ಲಿ 'ಸೂರಜ್ ಕಾ ಸತ್ವಾನ್ ಘೋಡಎಂಬ ಚಿತ್ರ ನಿರ್ಮಿಸಿದರು.   1995ರಿಂದ 2001 ಅವಧಿಯಲ್ಲಿ 'ಮಮ್ಮೂ', 'ಸರ್ಧಾರಿ ಬೇಗಂ' ಮತ್ತು 'ಜುಬೈದಾ' ಎಂಬ ಮೂರು ಮುಸ್ಲಿಂ ಮಹಿಳೆಯರ ಕುರಿತಾದ ಚಿತ್ರಗಳನ್ನು ನಿರ್ದೇಶಿಸಿದರು. 1996ರಲ್ಲಿ  ದಿ ಮೇಕಿಂಗ್ ಆಫ್ ದಿ ಮಹಾತ್ಮ’ , 1999ರಲ್ಲಿ ಸಂಸಾರ’, 2005ರ ವರ್ಷದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್  - ದಿ ಫರ್ಗಾಟನ್ ಹೀರೋ’,  2008ರ ವರ್ಷದಲ್ಲಿ ವೆಲ್ಕಂ ಟು ಸಜ್ಜನಾಪುರ್’, 2009ರಲ್ಲಿ   ವೆಲ್ ಡನ್ ಅಬ್ಬಾಅವರ ನಂತರದ ಚಿತ್ರಗಳು.  ಇವೆಲ್ಲವೂ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಅವರ ಹಿಂದಿನ ದಶಕಗಳಲ್ಲಿನ ಚಿತ್ರಗಳಂತೆಯೇ ಪ್ರಮುಖ ಸಾಧನೆ ಮಾಡಿದವು. ಬಂಗಾಲಿ ಚಿತ್ರ ನೂರ್ ಇನಾಯತ್ ಖಾನ್ನಿರ್ಮಾಣಗೊಳ್ಳುತ್ತಿದೆ.  ನಿರಂತರವಾಗಿ ಕ್ರಿಯಾಶೀಲರಾಗಿರುವ ಶ್ಯಾಮ್ ಬೆನಗಲ್ ಅವರಿಂದ ಮುಂದೆ ಕೂಡ ಬಹಳಷ್ಟು ನಿರೀಕ್ಷಿಸಬಹುದಾಗಿದೆ.

ಭಾರತೀಯ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆಗಾಗಿ  2007ರ ಅಕ್ಟೋಬರ್ ತಿಂಗಳಿನಲ್ಲಿ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪ್ರಧಾನ ಮಾಡಲಾಯಿತು.  ಇದಲ್ಲದೆ  ಪದ್ಮಶ್ರೀ, ಪದ್ಮಭೂಷಣ, ರಾಷ್ಟ್ರಮಟ್ಟದ ಚಲನಚಿತ್ರ ಪ್ರಶಸ್ತಿಗಳು, ಸೋವಿಯತ್ ಲ್ಯಾಂಡ್ ಪ್ರಶಸ್ತಿ ಹೀಗೆ ನಾನಾ ತೆರನಾದ  ವಿಶಿಷ್ಟ ಗೌರವಗಳು ಶ್ಯಾಮ್ ಬೆನಗಲ್ ಅವರಿಗೆ ಸಂದಿವೆ.  ರಾಷ್ಟ್ರಮಟ್ಟದ ಅತ್ಯುತ್ತಮ ಚಿತ್ರ ಪ್ರಶಸ್ತಿಗಳೇ ಏಳು ಬಾರಿ ಸಂದಿವೆ.  


ಭಾರತದ ಚಿತ್ರರಂಗ  ಕಂಡ ಈ ಮಹಾನ್ ವ್ಯಕ್ತಿ ನಮ್ಮೊಡನೆ ಇನ್ನೂ ಬಹಳಷ್ಟು ಕಾಲ ನೆಮ್ಮದಿ ಸುಖ, ಸಂತೋಷ ಸಾಧನೆಗಳಿಂದ ಕಂಗೊಳಿಸುತ್ತಿರಲಿ ಎಂದು ಹಾರೈಸೋಣ.

Tag: Shyam Benegal

ಕಾಮೆಂಟ್‌ಗಳಿಲ್ಲ: