ಭಾನುವಾರ, ಸೆಪ್ಟೆಂಬರ್ 1, 2013

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್


ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್

ಈ ವಿಶ್ವದಲ್ಲಿ ಶಾಂತಿ ಪ್ರೀತಿ ವಿಶ್ವಾಸಗಳ ಮೂಲಕ ಮಹತ್ವದ್ದನ್ನು ಸಾಧಿಸಿದ ವ್ಯಕ್ತಿಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಎದ್ದು ಕಾಣುತ್ತಾರೆ.  ಆಫ್ರಿಕಾ ಅಮೆರಿಕ ಪ್ರದೇಶಗಳಲ್ಲಿ ನಾಗರಿಕ ಹಕ್ಕುಗಳಿಗೆ ಹೋರಾಡಿದ ಈತ ಮಹಾತ್ಮ ಗಾಂಧಿಯವರ ಹಾದಿಯಲ್ಲಿ ಹೆಜ್ಜೆಯಿಟ್ಟು ಅಸಹಕಾರ ಚಳವಳಿಯಂತಹ ಅಹಿಂಸಾ ಪ್ರಕ್ರಿಯೆಗಳ ಮೂಲಕ ಸಮಾನತೆಯನ್ನು ಸಾಧಿಸ ಹೊರಟು ಧೀಮಂತರಾದರು.  ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಜನಿಸಿದ್ದು ಜನವರಿ 15, 1929ರಂದು.

ಚಿಕ್ಕಂದಿನಿಂದ ಜನಸಮುದಾಯದಲ್ಲಿ ಮೂಡಿದ್ದ ಅಸಮಾನತೆಗಳ ಬಗೆಗೆ ತೀವ್ರ ಸಂವೇದಿಯಾಗಿ ರೂಪುಗೊಂಡ ಮಾರ್ಟಿನ್ 1955ರ ವರ್ಷದಲ್ಲಿ ಮೊಂಟಗೊಮೆರಿ ಬಸ್ ಬಾಯ್ಕಾಟ್ ಚಳುವಳಿಯಲ್ಲಿ  ವಹಿಸಿದ  ನೇತ್ರತ್ವ ಅವರ ಜೀವನದಲ್ಲಿ ಪ್ರಮುಖವಾದುದಾಗಿತ್ತು.  ಬದುಕಿನ ತುಂಬಾ ಹಿಂಸಾ ಪ್ರವೃತ್ತಿಗಳನ್ನು ಕಂಡು ಸ್ವಯಂ ಅನುಭವಿಸಿದ್ದ ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಹಿಂಸೆಗೆ ಹಿಂಸೆಯೇ ಪ್ರತಿಕ್ರಿಯೆ ಆಗುವುದರಿಂದ ಯಾವುದೇ ಸಾಧನೆ ಹೊರಹೊಮ್ಮುವುದಿಲ್ಲವೆಂಬ ಪಕ್ವತೆ ಮೂಡಿತ್ತು.   ಅವರ ಮಾತುಗಳಲ್ಲಿ ಗಾಂಧೀಜಿಯವರ ಪ್ರಭಾವ ಮನೆಮಾಡಿತ್ತು.   1963ರ ವರ್ಷದಲ್ಲಿ ವಾಷಿಂಗ್ಟನ್ ಮಾರ್ಚ್ ನೇತೃತ್ವ ವಹಿಸಿದ್ದ ಮಾರ್ಟಿನ್ ಲೂಥರ್ ಕಿಂಗ್ ಆ ಸಮಯದಲ್ಲಿ ಮಾಡಿದ ‘I have a dream – ನನ್ನದೊಂದು ಕನಸಿದೆಭಾಷಣ ವಿಶ್ವಪ್ರಖ್ಯಾತಿಗಳಿಸಿತು. 

"ನ್ಯಾಯದ ಅರಮನೆಯ ಬೆಚ್ಚಗಿನ ಹೊಸ್ತಿಲಲ್ಲಿ ನಿಂತ ನನ್ನ ಜನಕ್ಕೆ ಹೇಳಬೇಕಾದ ವಿಷಯವೊಂದಿದೆ. ನಮ್ಮ ಹಕ್ಕುಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ನಾವು ಕೆಟ್ಟ ಕೆಲಸಗಳಿಗೆ ಕೈ ಹಾಕಬಾರದು. ದ್ವೇಷ, ಮತ್ತು ಕಹಿಯೆಂಬ ಬಟ್ಟಲಿನಲ್ಲಿ ಸ್ವಾತಂತ್ರದ ದಾಹವನ್ನು ನೀಗಿಸಿಕೊಳ್ಳುವುದು ಬೇಡ. ನಮ್ಮ ಹೋರಾಟವು ಶಿಸ್ತು, ಘನತೆಗಳಿಂದ ಕೂಡಿರಬೇಕು. ದೈಹಿಕ ಹಿಂಸೆಗಳಿಂದಾಗಿ ಕಾಂತಿ ಕಳೆದುಕೊಳ್ಳಬಾರದು. ಶಸ್ತ್ರ ಬಲವನ್ನು ಆತ್ಮಬಲದ ಮೂಲಕ ಎದುರಿಸುವ ಎತ್ತರಕ್ಕೆ ನಾವು ಏರಬೇಕು.

ನೋವಿಗೆ ಹಳಬರಾಗಿರುವ ನಾವು ನಂಬಿಕೆಯೊಂದನ್ನೇ ನೆಚ್ಚಿ ಕೆಲಸ ಮಾಡಿದರೆ ಮಾತ್ರ ನೋವಿನಿಂದ ಮುಕ್ತರಾಗಬಹುದು. ನಿರಾಶೆಯ ಕಣಿವೆಯಲ್ಲಿ ಬಿದ್ದು ಒದ್ದಾಡಬೇಡಿ. ನಾಳಿನ ಕಷ್ಟಗಳು ನಮ್ಮ ಕಣ್ಣೆದುರಿಗಿವೆ ನಿಜ. ಆದರೆ ಗೆಳೆಯರೇ ನನಗಿನ್ನೂ ಕನಸಿದೆ......

ಈ ದೇಶ ತಾನು ಅನುಸರಿಸುತ್ತಿರುವ  ಮತಧರ್ಮದ ನಿಜವಾದ ಅರ್ಥಕ್ಕೆ ಅನುಗುಣವಾಗಿ  ಉನ್ನತಿಗೆ ಏರಿ, ಎಲ್ಲ ಮನುಷ್ಯರು ಸಮಾನವಾಗಿ ಸೃಷ್ಟಿಯಾಗಿದ್ದಾರೆ ಎಂಬ ಸತ್ಯ ಸಾಕಾರದ ಅರಿವನ್ನು ಗಳಿಸಿಕೊಳ್ಳುತ್ತದೆ  ಎಂಬ ಕನಸು ನನಗಿದೆ.

ನನಗೊಂದು ಕನಸಿದೆ, ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಮಾಜಿ ಗುಲಾಮರ ಮಕ್ಕಳು ಮತ್ತು ಮಾಜಿ ಒಡೆಯರ ಮಕ್ಕಳು ಭ್ರಾತೃತ್ವವೆಂಬ ಮೇಜಿನ ಬಳಿ ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ತುಳಿತದಿಂದಾಗಿ ಅನ್ಯಾಯವೆಂಬ ಬೆವರನ್ನು ಸುರಿಸುತ್ತಿರುವ ಮಿಸಿಸ್ಸಿಪ್ಪಿ ರಾಜ್ಯವು ಸ್ವಾತಂತ್ರ್ಯ ಮತ್ತು ನ್ಯಾಯವೆಂಬ ಫಲವತ್ತಾದ ಪ್ರದೇಶವಾಗಿ ಬದಲಾಗುತ್ತದೆ.

ನನಗೊಂದು ಕನಸಿದೆ. ನನ್ನ ನಾಲ್ಕು ಮಕ್ಕಳು ಈ ದೇಶದಲ್ಲಿ ಒಂದು ದಿನ ತಮ್ಮ ಚರ್ಮದ ಬಣ್ಣದಿಂದ ಗುರುತಿಸಲ್ಪಡದೆ, ತಮ್ಮಲ್ಲಿರುವ ವ್ಯಕ್ತಿತ್ವದ ಅಂತಃಸತ್ವದ ಮೂಲಕ ಗುರುತಿಸಲ್ಪಡುತ್ತಾರೆ.

ನನಗೊಂದು ಕನಸಿದೆ, ಒಂದು ದಿನ ಅಲಬಾಮಾದ ಪುಟ್ಟ ಕಪ್ಪು ಜನಾಂಗದ ಗಂಡು - ಹೆಣ್ಣು ಮಕ್ಕಳು ಮತ್ತು ಬಿಳಿಯ ಜನಾಂಗದ ಗಂಡುಹೆಣ್ಣು ಮಕ್ಕಳು ಕೈಕೈ ಹಿಡಿದು ಆಟವಾಡುತ್ತಾರೆ.

ನನಗೊಂದು ಕನಸಿದೆ. ಒಂದು ದಿನ ಈ ಕಣಿವೆಗಳು ಮೇಲೆ ಬರುತ್ತವೆ, ಪರ್ವತಗಳು ಕೆಳಗಿಳಿಯುತ್ತವೆ. ತಗ್ಗು ಗುಂಡಿಗಳು ಸಮತಟ್ಟಾಗುತ್ತವೆ. ದೈವದ ಮಹಿಮೆಯ ಅರಿವಾಗುತ್ತದೆ. ಅದೆಲ್ಲವನ್ನು ಒಗ್ಗಟ್ಟಾಗಿ ಅನುಭವಿಸುವ ಕಾಲ ಬಂದೇ ಬರುತ್ತದೆ.

ಇದು ನಮ್ಮ ಭರವಸೆ, ಇದು ನಮ್ಮ ನಂಬಿಕೆ.
ಮುಕ್ತರು ನಾವು ಕೊನೆಗೂ, ಮುಕ್ತರು ನಾವು ಕೊನೆಗೂ
ವಂದನೆಗಳು ದೇವರೇ, ಮುಕ್ತರು ನಾವು ಕೊನೆಗೂ."

ಈ ಹೃದಯಸಂವೇದಿ ಭಾಷಣದಿಂದ ಅವರ ಜನಪ್ರಿಯತೆ ಎಲ್ಲೆಡೆ ಹಬ್ಬಿತು. ಅವರು ಮುಂದೆ ಸಂಘಟಿಸಿದ ಹೋರಾಟಗಳಿಗೆಲ್ಲಾ ಜನಸಂದಣಿ ಉಕ್ಕಿಹರಿದು ಬರುತ್ತಿತ್ತು.  ಹಿಂದೆ ಅವರ ಕಾರ್ಯಕ್ರಮಗಳಿಗೆ ವಿಧಿಸಲ್ಪಡುತ್ತಿದ್ದ ಸರ್ಕಾರಿ  ಪೊಲೀಸ್ ಕೋಟೆಕಟ್ಟಲೆಗಳು ಕ್ರಮೇಣವಾಗಿ ಸಡಿಲಗೊಳ್ಳತೊಡಗಿದ್ದವು. 

ಅಕ್ಟೋಬರ್ 14, 1964ರಂದು ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಅಸಮಾನತೆಯ ವಿರುದ್ಧ ಶಾಂತಿಯುತವಾದ ಹೋರಾಟ ನಡೆಸಿದ್ದಕ್ಕಾಗಿ ನೋಬಲ್ ಶಾಂತಿ ಪುರಸ್ಕಾರವನ್ನು ನೀಡಲಾಯಿತು.  ತಮ್ಮ ಮುಂದಿನ ಕೆಲವು ವರ್ಷಗಳ ಜೀವಿತದಲ್ಲಿ ಅವರು ಬಡಜನರ ಉದ್ಧಾರದ ಬಗೆಗೆ ಹೆಚ್ಚು ಕಾರ್ಯಪ್ರವೃತ್ತರಾದರು.  ವಿಯೆಟ್ನಾಂ ಅಂತಹ  ಯುದ್ಧಕ್ಕೆ ಹಣ ಖರ್ಚು ಮಾಡುವ ಅಮೆರಿಕಾ ಸರ್ಕಾರ ಅದೇ ಹಣವನ್ನು ಬಡಜನರ ಕಷ್ಟಗಳಿಗೆ ಪ್ರತಿಸ್ಪಂದಿಸಲು ಉಪಯೋಗಿಸುತ್ತಿಲ್ಲ ಎಂಬುದು ಮಾರ್ಟಿನ್ ಲೂಥರ್ ಕಿಂಗ್ ಅವರ ನಿಲುವಾಗಿತ್ತು.  ಕೇವಲ ಮಾತಿನಲ್ಲಲ್ಲದೆ ಬಡಜನರಿರುವ ಸ್ಥಳದಲ್ಲಿ ತಾನೂ ಒಂದು ಪುಟ್ಟ ಬಾಡಿಗೆ ಮನೆಯಲ್ಲಿದ್ದು ನೈರ್ಮಲ್ಯದಲ್ಲಿ ಹೇಗೆ ಬದುಕಬೇಕೆಂದು ತನ್ನ ಜನರಿಗೆ ಮಾದರಿಯಾಗಿ ಬದುಕು ತೋರಿಸಿದರು.  ಹೆಜ್ಜೆಹೆಜ್ಜೆಗೂ ಕಷ್ಟಗಳನ್ನೂ ವಿರೋಧಗಳನ್ನೂ ಅನುಭವಿಸಿದರೂ ದೃಢತೆ, ಶಾಂತಚಿತ್ತತೆ ಮತ್ತು  ಅಚಲ ವಿಶ್ವಾಸಗಳೊಂದಿಗೆ ಕೊನೆಯವರೆಗೂ ಹೋರಾಟ ನಡೆಸಿದರು. 

ಬಹುತೇಕ ಪ್ರಸಿದ್ಧ ಸಾರ್ವಜನಿಕ ಹಿತಚಿಂತಕರ ಬದುಕಿನಲ್ಲಿನ  ವಿಧಿಬರಹದಂತೆ ಮಾರ್ಟಿನ್ ಲೂಥರ್ ಕಿಂಗ್ ಅವರು ಕೂಡಾ 1968ರ ಏಪ್ರಿಲ್ 4ರಂದು ಹಂತಕರ ಗುಂಡಿಗೆ ಬಲಿಯಾದರು.   ಅಮೆರಿಕ ದೇಶ ಈ ಮಹಾನ್ ಹೋರಾಟಗಾರನನ್ನು   ಸ್ಮರಣಾರ್ಥವಾಗಿಸುವ ಹಲವಾರು ಕಾರ್ಯಗಳನ್ನು ಮಾಡಿತು.    ಇಂದು ಆ ದೇಶ ಬರಾಕ್ ಒಬಾಮಾ ಅಂತಹ ಒಬ್ಬ ಕರಿಯ ವ್ಯಕ್ತಿ ರಾಷ್ಟ್ರಾಧ್ಯಕ್ಷನಾಗುವವರೆಗೂ ತನ್ನಲ್ಲಿ ಹಲವಾರು ಬದಲಾವಣೆಗಳನ್ನು ಕಂಡುಕೊಂಡಿದೆ.  ಸಮಾನತೆ ಎಂಬುದು ಈ ವಿಶ್ವದಲ್ಲಿ ಮರೀಚಿಕೆಯಂತಿದೆ ಎಂಬುದು ನಿಜವಾದರೂಮಾರ್ಟಿನ್ ಲೂಥರ್ ಕಿಂಗ್ ಅಂತಹ ಮಹಾನ್ ಹೋರಾಟಗಾರರು ಈ ಬೆಂದ ಭುವಿಯಲ್ಲಿ ಆಗಾಗ ಒಂದಷ್ಟು ತಂಪನ್ನೆರೆಯುವ ಮೂಲಕ  ತಮ್ಮ ಜೀವವನ್ನು ಸಾರ್ಥಕಗೊಳಿಸಿಹೋಗಿರುವುದು ನಮ್ಮಗಳ ಜೀವನಕ್ಕೊಂದಷ್ಟು ಸಹ್ಯತೆ ತಂದಿದೆ ಎಂಬುದಂತೂ ಸತ್ಯ.


Tag: Martin Luther King

ಕಾಮೆಂಟ್‌ಗಳಿಲ್ಲ: