ಭಾನುವಾರ, ಸೆಪ್ಟೆಂಬರ್ 1, 2013

ದೊಡ್ಡೇರಿ ವೆಂಕಟಗಿರಿರಾವ್

ದೊಡ್ಡೇರಿ ವೆಂಕಟಗಿರಿರಾವ್

ಕನ್ನಡದ ಪ್ರಸಿದ್ಧ ಬರಹಗಾರ, ವೈದ್ಯ ಮತ್ತು ಛಾಯಾಚಿತ್ರಗಾರರಾದ  ದೊಡ್ಡೇರಿ ವೆಂಕಟಗಿರಿರಾವ್ ಅವರು  1913ರ ಡಿಸೆಂಬರ 28ರಂದು ಸೊರಬ ತಾಲ್ಲೂಕಿನ ದೊಡ್ಡೇರಿ ಎಂಬಲ್ಲಿ  ಜನಿಸಿದರು. ಇದು ಅವರ ನೂರಾ ಎರಡನೆಯ  ಜನ್ಮವರ್ಷವಾಗಿದೆ.  ತಂದೆ ತಿಮ್ಮಪ್ಪನವರು ಮತ್ತು  ತಾಯಿ ರುಕ್ಮಿಣಿಯವರು.  ವೆಂಕಟಗಿರಿರಾಯರು   ಪಂಡಿತ ತಾರಾನಾಥರ ಆಯುರ್ವೇದ ವಿದ್ಯಾಲಯದಲ್ಲಿ  ಎಲ್.ಐ.ಎಂ. ಡಿಪ್ಲೊಮ ಪಧವೀದರರಾದರು..

ವೈದ್ಯರಾಗಿ ಸಾಗರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ವೆಂಕಟಗಿರಿರಾಯರು ನಂತರದಲ್ಲಿ  ತಮ್ಮ ವೃತ್ತಿಯನ್ನು  ದೊಡ್ಡಬಳ್ಳಾಪುರದಲ್ಲಿ ಕೈಗೊಂಡರು. ತಮ್ಮ ಸುದೀರ್ಘಕಾಲದ ವೈದ್ಯಕೀಯ  ಸೇವೆಯಲ್ಲಿಬಂದ ರೋಗಿಗಳಿಗೆ ಉಚಿತ ವೈದ್ಯಕೀಯ ಸಲಹೆ ಮುಖಾಂತರ ಅವರು ಕೈಗೊಂಡ  ಸಮಾಜ ಸೇವೆ ಅನನ್ಯವಾದದ್ದು. 

ದೊಡ್ಡೇರಿ ವೆಂಕಟಗಿರಿರಾಯರು  ವೃತ್ತಿಯಲ್ಲಿ ವೈದ್ಯರಾದಂತೆ, ಛಾಯಾಗ್ರಹಣ ಪ್ರವೀಣರೂ ಆಗಿದ್ದುಅಖಿಲ ಭಾರತ ಫೋಟೋಗ್ರಾಫಿ ಪರಿಷತ್ತಿನ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದವರು.

1932ರ ಸುಮಾರಿನಲ್ಲೇ ಕವಿತೆಯ ಮುಖಾಂತರ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ವೆಂಕಟಗಿರಿರಾಯರು. ಕಾದಂಬರಿ, ಶಿಶುಸಾಹಿತ್ಯ, ಸಣ್ಣಕಥೆ, ಲೈಂಗಿಕ ಸಾಹಿತ್ಯ, ಪ್ರವಾಸಕಥನ ಮುಂತಾದ  ಎಲ್ಲ ಪ್ರಕಾರಗಳಲ್ಲೂ  ಕೃತಿ ರಚನೆ ಮಾಡಿದರು. ಆರೋಗ್ಯ, ಲೈಂಗಿಕ ವಿಜ್ಞಾನ ಮುಂತಾದ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ದಾಂಪತ್ಯ ಜೀವನಮಾಸಪತ್ರಿಕೆಯನ್ನು ಪ್ರಾರಂಭಿಸಿ ಹಲವಾರು ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದರು.

ವೆಂಕಟಗಿರಿರಾಯರ ಕಥಾನಕಗಳು ಅಂದಿನ ವಾರಪತ್ರಿಕೆಗಳಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದವು.  ರೋಹಿಣಿ’ , ‘ಚೆಲುವೆ’, ‘ದಾಳಿಂಬೆ’, ‘ಕರಿಗಡುಬು’  ‘ತುಂಬಿದ ಕೊಡಮುಂತಾದ ಕಥೆ ಕವಿತೆಗಳ  ಸಂಕಲನಗಳು; ‘ಅತ್ತಿಯ ಹೂವು’, ‘ದೃಷ್ಟಿದಾನ’, ‘ಸಂಪ್ರದಾನ’, ‘ಅವಧಾನ’,  'ಇಷ್ಟಕಾಮ್ಯಮುಂತಾದ ಕಾದಂಬರಿಗಳು; ‘ಸಂತಾನ ಸಂಯಮ’, ‘ಪ್ರಸವ ಜ್ಞಾನ’, ‘ವಿಕೃತ ಕಾಮ’, ‘ಕಾಮ ಶಿಕ್ಷಣ’  ಮುಂತಾದ ವೈಜ್ಞಾನಿಕ ಕೃತಿಗಳು; ‘ಕಂದನ ಹಾಡುಗಳುಬಾಲಸಾಹಿತ್ಯಹೀಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡೇರಿ ವೆಂಕಟಗಿರಿ ರಾಯರ ಕೊಡುಗೆ ಅಪಾರವಾದುದು.

ದೊಡ್ಡೇರಿ ವೆಂಕಟಗಿರಿರಾಯರ ಅವಧಾನಕೃತಿ ಪುಟ್ಟಣ್ಣ ಕಣಗಾಲರ ಅಮೃತ ಘಳಿಗೆಚಲನಚಿತ್ರವಾಗಿ ರೂಪುಗೊಂಡಿತ್ತು.

ದೊಡ್ಡೇರಿ ವೆಂಕಟಗಿರಿರಾಯರ ಹವ್ಯಾಸಿ ಛಾಯಾಚಿತ್ರಗ್ರಹಣವಂತೂ  ಅಂತಾರಾಷ್ಟ್ರೀಯ ಪ್ರಖ್ಯಾತಿಯದು. ಪಿಕ್ಟೋರಿಯಲ್ ಫೋಟೋಗ್ರಫಿ ವಿಭಾಗದಲ್ಲಿ  ಅಪಾರ ಪರಿಣತಿಅಂತಾರಾಷ್ಟ್ರೀಯ ಮಾನ್ಯತೆಗಳು, ಇಂಡಿಯನ್ ಫೋಟೋಗ್ರಫಿ ಸೊಸೈಟಿಯ ಅಧ್ಯಕ್ಷತೆ ಹೀಗೆ ಅವರ ಪ್ರಖ್ಯಾತಿಗಳು ಅಪೂರ್ವವಾದದ್ದು. ಛಾಯಾಗ್ರಹಣದ ಬಗ್ಗೆ ವೆಂಕಟಗಿರಿರಾಯರು ಬರೆದ ಪುಸ್ತಕ ಭಾವಾಭಿವ್ಯಂಜಕ ಛಾಯಾಚಿತ್ರಕಲೆಛಾಯಾಚಿತ್ರ ಕಲೆಯಲ್ಲಿ ಆಕರ ಗ್ರಂಥ.

ಛಾಯಾಚಿತ್ರ, ಸಾಹಿತ್ಯಕ್ಕೆ ಸಂಬಂಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಎಫ್.ಐ.ಎ.ಪಿ. ಪ್ರಶಸ್ತಿ, ಅಮೆರಿಕ ಫೋಟೋಗ್ರಫಿ ಸೊಸೈಟಿ ತ್ರೀ ಸ್ಟಾರ್ ಸರ್ಟಿಫಿಕೇಟ್, ಸಾಹಿತ್ಯ ಆಕಾಡೆಮಿ, ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ದೊಡ್ಡೇರಿ ವೆಂಕಟಗಿರಿರಾಯರನ್ನು ಅರಸಿ ಬಂದಿದ್ದವು.

ದೊಡ್ಡೇರಿ  ವೆಂಕಟಗಿರಿ ರಾವ್  ಅವರು 2000ದ ವರ್ಷದಲ್ಲಿ  ಮಲೆನಾಡಿನ ಛಾಯಾಚಿತ್ರ ಸಂಸ್ಥೆ 'ಸಾಗರ ಫೋಟೋಗ್ರಫಿಕ್ ಸೊಸೈಟಿ'ಯನ್ನು ಹುಟ್ಟುಹಾಕಿದರು.  ಈ ಸಂಸ್ಥೆಯು    ರಾಜ್ಯ - ರಾಷ್ಟ್ರಮಟ್ಟದ ಛಾಯಾಚಿತ್ರ ಸಲೋನ್, ರಾಯರ ಛಾಯಾಚಿತ್ರ ಪ್ರದರ್ಶನ, ಕಮ್ಮಟಗಳು, ಉಪನ್ಯಾಸಗಳು ಇತ್ಯಾದಿ ಅನೇಕ ಕಾರ್ಯಕ್ರಮಗಳನ್ನು ನಡೆಸುಕೊಂಡು ಬರುತ್ತಿದೆ.

ದೊಡ್ಡೇರಿ ವೆಂಕಟಗಿರಿರಾಯರು ಮೇ 2004ರ ವರ್ಷದಲ್ಲಿ ಲೋಕವನ್ನಗಲಿದರು.  ಈ ಮಹಾನ್ ಸಾಧಕರಿಗೆ ನಮ್ಮ ಸವಿನೆನಪಿನ ನಮನಗಳು.

ವಿಷಯ ಕೃಪೆ:  ವಿಕಿಪೀಡಿಯಾ,  ಕಣಜ ಮತ್ತು ಅನುರಾಧಾ ಬಿ. ರಾವ್

ಚಿತ್ರಕೃಪೆ: ಕೆ. ಎಸ್. ರಾಜಾರಾಂ

Tag: Dodderi Venkatagiri Rao

ಕಾಮೆಂಟ್‌ಗಳಿಲ್ಲ: