ಸೋಮವಾರ, ಸೆಪ್ಟೆಂಬರ್ 2, 2013

ಓಂ ಪುರಿ

ಓಂ ಪುರಿ

ಭಾರತೀಯ ಚಿತ್ರರಂಗದ ಮಹಾನ್ ನಟರಲ್ಲಿ ಒಬ್ಬರಾದ ಓಂ ಪುರಿ  18 ಅಕ್ಟೋಬರ್‌ 1950ರಂದು ಹರ್ಯಾಣದ ಅಂಬಾಲಾದಲ್ಲಿ ಜನಿಸಿದರು.  ತಮ್ಮ ಜೀವನದ ಆರಂಭಿಕ ವರ್ಷಗಳನ್ನು ಪಟಿಯಾಲಾ ಜಿಲ್ಲೆಯ ಸನೌರ್‌ನಲ್ಲಿದ್ದ ತಮ್ಮ ಸೋದರಮಾವನವರೊಂದಿಗೆ ಕಳೆದ ಓಂ ಪುರಿಯವರು ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದರು. ರಾಷ್ಟ್ರೀಯ ನಾಟಕ ಶಾಲೆಯಿಂದ 1973ರಲ್ಲಿ ತೇರ್ಗಡೆಯಾದ ಓಂ ಪುರಿ ಮತ್ತೊಬ್ಬ ಮಹಾನ್ ನಟ ನಸೀರುದ್ದೀನ್‌ ಷಾ ಅವರ ಸಹಪಾಠಿಯಾಗಿದ್ದರು.

1976ರಲ್ಲಿ ಬಿಡುಗಡೆಯಾದ ಘಾಷಿರಾಮ್‌ ಕೋತ್ವಾಲ್‌ಚಿತ್ರದಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದರ ಓಂ ಪುರಿ ಮುಂದೆ  ಭವಾನಿ ಭವಾಯಿ, ಸದ್ಗತಿ, ಅರ್ಧ್‌ ಸತ್ಯ, ಮಿರ್ಚ್‌ ಮಸಾಲಾ  ಮತ್ತು ಧಾರಾವಿ ಸೇರಿದಂತೆ ಹಲವಾರು  ಕಲಾತ್ಮಕ ಚಲನಚಿತ್ರಗಳಲ್ಲಿ  ಅಮರೀಶ್‌ ಪುರಿನಸೀರುದ್ದೀನ್‌ ಷಾ, ಶಬಾನಾ ಅಜ್ಮಿಸ್ಮಿತಾ ಪಾಟೀಲ್‌ ಮುಂತಾದ ಮೇರು ಕಲಾವಿದರೊಂದಿಗೆ ನಟಿಸಿದರು.   ಗಿರೀಶ್ ಕಾರ್ನಾಡರ ಶೋಧ ಪ್ರತಿಭೆಯಾದ ಓಂ ಪುರಿ   ಪ್ರಾರಂಭದಲ್ಲಿ  ಕನ್ನಡದ   ತಬ್ಬಲಿಯು ನೀನಾದೆ ಮಗನೆಚಿತ್ರದ ಕಿರುಪಾತ್ರವೊಂದರಲ್ಲಿ ಸಹಾ ನಟಿಸಿದ್ದರು.

ಓಂ ಪುರಿ ಅವರ ಹಲವಾರು ಪಾತ್ರನಿರ್ವಹಣೆಗಳು ಪ್ರಶಂಸೆಗೆ ಪಾತ್ರವಾಗಿವೆ. ಆಕ್ರೋಶ್‌  ಚಲನಚಿತ್ರದಲ್ಲಿ ಅವರದ್ದು ಶೋಷಣೆಗೊಳಗಾದ ಬುಡಕಟ್ಟು ಜನಾಂಗದವರ ಪಾತ್ರಡಿಸ್ಕೊ ಡ್ಯಾನ್ಸರ್‌  ಚಲನಚಿತ್ರದಲ್ಲಿ ನಾಯಕ ಮಿಥುನ್ ಚಕ್ರವರ್ತಿಯ ಪಾತ್ರವಾಗಿದ್ದ 'ಜಿಮ್ಮಿ'ಯ ಮ್ಯಾನೇಜರ್‌ ಪಾತ್ರ. ಅದೇ ವರ್ಷ ಬಿಡುಗಡೆಯಾದ ಅರ್ಧ್‌ ಸತ್ಯದಲ್ಲಿ, ಜೀವನಪರ್ಯಂತ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಶೋಷಣೆಯ ವಿರುದ್ಧ ರೊಚ್ಚಿಗೆದ್ದ ಕೋಪಿಷ್ಟ ಪೊಲೀಸ್‌ ಅಧಿಕಾರಿಯ ಪಾತ್ರ.  ಆ ಚಿತ್ರದಲ್ಲಿನ ಶ್ರೇಷ್ಠ ಅಭಿನಯಕ್ಕೆ ಅವರು  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. ಮಾಚಿಸ್‌’  ಚಲನಚಿತ್ರದಲ್ಲಿ ಅವರದ್ದು ಸಿಖ್‌ ಉಗ್ರವಾದಿಗಳ ನಾಯಕನ ಪಾತ್ರ, 1997ರಲ್ಲಿ ಬಿಡುಗಡೆಯಾದ ವಾಣಿಜ್ಯ ಚಲನಚಿತ್ರ ಗುಪ್ತ್‌ ನಲ್ಲಿ ಅವರದ್ದು ಪುನಃ ಒಬ್ಬ ಗಟ್ಟಿಗ ಪೊಲೀಸ್‌ ಅಧಿಕಾರಿಯ ಪಾತ್ರ, ಧೂಪ್‌  ಚಿತ್ರದಲ್ಲಿ  ವೀರಮರಣ ಹೊಂದಿದ ಸೈನಿಕನೊಬ್ಬನ ಧೀಮಂತ  ತಂದೆಯ ಪಾತ್ರ.  ಹೀಗೆ ಅವರು ವಿಭಿನ್ನ ರೀತಿಯ ಪಾತ್ರಗಳಿಗೆ ಮನೋಜ್ಞವಾಗಿ ಜೀವ ತುಂಬಿದ್ದಾರೆ.

1999ರಲ್ಲಿ ಓಂ ಪುರಿ ಶಿವರಾಜಕುಮಾರ್‌ ನಾಯಕನಟರಾಗಿದ್ದ  ಕನ್ನಡದ ಎಕೆ 47’  ಚಲನಚಿತ್ರದಲ್ಲಿ, ಭೂಗತ ಪಾತಕಿಗಳಿಂದ ನಗರವನ್ನು ಸುರಕ್ಷಿತವಾಗಿರಿಸಲು ಶತಪ್ರಯತ್ನ ಮಾಡುವ ಒಬ್ಬ ಕಟ್ಟುನಿಟ್ಟಾದ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ನಟಿಸಿ ಪ್ರಶಂಸೆ ಗಳಿಸಿದರು. ಈ ಚಲನಚಿತ್ರವು ಆ ವರ್ಷದ ಭಾರೀ ಯಶಸ್ವಿ ಚಲನಚಿತ್ರವಾಯಿತು.  ಆ ಚಿತ್ರದ ಕನ್ನಡದಲ್ಲಿ ಸಂಭಾಷಣೆಗೆ ಸ್ವತಃ ಓಂ ಪುರಿಯವರೇ ಧ್ವನಿ ತುಂಬಿದ್ದಾರೆ.

ರಿಚರ್ಡ್‌ ಅಟೆನ್ಬರೊ ಅವರ ವಿಶ್ವಪ್ರಖ್ಯಾತ  'ಗಾಂಧಿ' ಚಿತ್ರದಲ್ಲಿ ಓಂ ಪುರಿಯವರದು ಕಿರು ಪಾತ್ರವಾರೂ ಗಮನ ಸೆಳೆಯುವ ಅಭಿನಯ ನೀಡಿದ್ದರು. ತೊಂಬತ್ತರ ದಶಕದಿಂದೀಚೆಗೆ ಅವರು  ಮುಖ್ಯವಾಹಿನಿಯ ಹಿಂದಿ ಚಲನಚಿತ್ರಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ವಿಜ್ರಂಭಿಸತೊಡಗಿದರು.  ಇದಲ್ಲದೆ ಮೈ ಸನ್‌ ದಿ ಫ್ಯಾನಟಿಕ್‌ ‘, ‘ಈಸ್ಟ್‌ ಈಸ್‌ ಈಸ್ಟ್‌’  ಮತ್ತು ದಿ ಪೆರೋಲ್‌ ಆಫಿಸರ್‌’  ಸೇರಿದಂತೆ ಹಲವಾರು ಬ್ರಿಟಿಷ್‌ ನಿರ್ಮಾಣದ ಚಲನಚಿತ್ರಗಳಲ್ಲಿ ನಟಿಸಿ ಅಂತರರಾಷ್ಟ್ರೀಯ ಮನ್ನಣೆ  ಗಳಿಸಿದರು.  ಪ್ಯಾಟ್ರಿಕ್‌ ಸ್ವೇಯ್ಜ್‌ರೊಂದಿಗೆ ಸಿಟಿ ಆಫ್‌ ಜಾಯ್‌ ; ಜ್ಯಾಕ್‌ ನಿಕೊಲ್ಸನ್‌ರೊಂದಿಗೆ ವುಲ್ಫ್‌ ವಾಲ್‌ ಕಿಲ್ಮರ್‌ರೊಂದಿಗೆ ದಿ ಘೋಸ್ಟ್‌ ಅಂಡ್‌ ದಿ ಡಾರ್ಕ್ನೆಸ್‌ ಮತ್ತು 2007ರಲ್ಲಿ ಬಿಡುಗಡೆಯಾದ ಟಾಮ್‌ ಹ್ಯಾಂಕ್ಸ್‌ ಮತ್ತು ಜೂಲಿಯಾ ರಾಬರ್ಟ್ಸ್‌ ಅಭಿನಯದ ಚಾರ್ಲಿ ವಿಲ್ಸನ್ಸ್‌ ವಾರ್‌ ಮುಂತಾದವು  ಓಂ ಪುರಿ ಅವರ ಪ್ರಸಿದ್ಧ ಹಾಲಿವುಡ್ ಚಿತ್ರಗಳು.

ಓಂ ಪುರಿಯವರು ಕಿರುತೆರೆಯ ಧಾರಾವಾಹಿಗಳಲ್ಲೂ ತಮ್ಮ ಪ್ರತಿಭೆಯನ್ನು ಬೆಳಗಿದ್ದಾರೆ. ಖ್ಯಾತ ನಿರ್ದೇಶಕ ಬಸು ಚಟರ್ಜಿ ನಿರ್ದೇಶನದ 'ಕಕ್ಕಾಜಿ ಕಹೀಂಧಾರಾವಾಹಿಯಲ್ಲಿ, ಸದಾ  ಎಲೆ ಅಡಿಕೆ ಅಗಿಯುತ್ತಾ ರಾಜಕಾರಣಿಗಳನ್ನು ಲೇವಡಿ ಮಾಡುವ ಹಾಸ್ಯ ಪಾತ್ರದಲ್ಲಿ ಅವರು ನೀಡಿದ ಅಭಿನಯ ಮನೋಜ್ಞವಾದದ್ದು.  ಮತ್ತೊಂದು ಪ್ರಸಿದ್ಧ ಧಾರವಾಹಿ  'ಮಿಸ್ಟರ್ ಯೋಗಿ'ಯಲ್ಲಿ, ಪ್ರಮುಖ ನಟ ಮೋಹನ್‌ ಗೋಖಲೆಗೆ ಸರಿಸಮಾನವಾದ ಪಾತ್ರದಲ್ಲಿ ಅವರು ಮೆರೆದ ರೀತಿಯೂ ನೆನಪಿನಲ್ಲುಳಿಯುವಂತದ್ದು.  ಗೋವಿಂದ್ ನಿಹಲಾನಿ ನಿರ್ದೇಶಿಸಿದ  ಕಿರುತೆರೆಯ ಚಲನಚಿತ್ರ  ತಮಸ್‌ನಲ್ಲಿ  ಓಂ ಪುರಿ  ವಿಮರ್ಶಕರ  ಪ್ರಶಂಸೆ ಗಳಿಸಿದರು. ಪ್ರೇಕ್ಷಕ ಜನಸ್ತೋಮದಲ್ಲಿ ಬಹಳ ಜನಪ್ರಿಯತೆ ಗಳಿಸಿದ ಹಿಂದಿ ಚಲನಚಿತ್ರಗಳಾದ  ಜಾನೇ ಭೀ ದೋ ಯಾರೋಚಾಚೀ 420, ಹೇರಾ ಫೇರಿ, ಚೋರ್‌ ಮಚಾಯೆ ಶೋರ್‌  ಹಾಗೂ ಮಾಲಾಮಾಲ್‌ ವೀಕ್ಲಿ  ಹಿಂದಿ ಚಲನಚಿತ್ರಗಳಲ್ಲಿ ಓಂ ಪುರಿ ಅವರ ಅಭಿನಯ ಜನಪ್ರಿಯಗೊಂಡಿತು.  ಇಂದಿಗೂ ಅವರು ಬಹುಬೇಡಿಕೆಯಲ್ಲಿರುವ ಕಲಾವಿದರಾಗಿದ್ದಾರೆ.


ಕಳೆದ ವರ್ಷ ಓಂ ಪುರಿ ಅವರು ತಮ್ಮ ಆತ್ಮ ಚರಿತ್ರೆ ಪ್ರಕಟಿಸಿದರು. ನಾಲ್ಕು ರಾಷ್ಟ್ರ ಪ್ರಶಸ್ತಿ, ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಹಾನರರಿ ಆಫಿಸರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್, ಫಿಲಂಫೇರ್ ಜೀವಮಾನ ಸಾಧನೆಯ ಪ್ರಶಸ್ತಿ  ಮುಂತಾದ ಪ್ರತಿಷ್ಟಿತ ಗೌರವಗಳು ಅವರನ್ನರಸಿ ಬಂದಿವೆ.   ಚಲನಚಿತ್ರರಂಗದಲ್ಲಿ ನಿರಂತರವಾಗಿ ಪ್ರಶಂಸನೀಯ ಸೇವೆ ಸಲ್ಲಿಸುತ್ತಾ ಬಂದಿರುವ ಈ ವಿಶಿಷ್ಟ ಕಲಾವಿದರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಹೇಳೋಣ.

Tag: Ompuri, Om puri

ಕಾಮೆಂಟ್‌ಗಳಿಲ್ಲ: