ಮಂಗಳವಾರ, ಸೆಪ್ಟೆಂಬರ್ 3, 2013

ಶತಾಯುಷಿ ಜೋಹ್ರಾ ಸೆಹಗಲ್

ಶತಾಯುಷಿ ಜೋಹ್ರಾ ಸೆಹಗಲ್

ಚಿತ್ರರಂಗದ ಮುದ್ದಿನ ಅಜ್ಜಿ, ಭಾರತೀಯ ರಂಗಭೂಮಿಯ ಮಹಾನ್ ಕಲಾವಿದೆ, ನೃತ್ಯ ಕಲಾವಿದೆ, ದೂರದರ್ಶನದ ಪ್ರಸಿದ್ಧ ಅಭಿನೇತ್ರಿ  ಜೋಹ್ರಾ ಸೆಹಗಲ್ ಇಂದು ತಮ್ಮ ನೂರನೆಯ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.  ಇಂದು ಕೂಡಾ ಅವರ ಮೊಗದಲ್ಲಿ ನಗೆ ತುಂಬಿ ತುಳುಕುತ್ತಿದೆ.   ಕೆಲವೇ ವರ್ಷಗಳ ಹಿಂದೆ ಬಿಡುಗಡೆಯಾದ ‘ಚೀನೀ ಕಮ್’  ಚಿತ್ರದಲ್ಲಿ ವಯಸ್ಸಾದ ಅಮಿತಾಬ್ ಬಚ್ಚನ್ನರಿಗೆ ಹಿರಿಯ ತಾಯಿಯಾಗಿ, ಉತ್ಸಾಹದ ಚಿಲುಮೆಯಾಗಿ ಅಭಿನಯಿಸಿದ್ದ ಜೋಹ್ರಾ ಸೆಹಗಲ್ ಒಬ್ಬ ಅಪರೂಪದ ಕಲಾವಿದೆ.

ಜೋಹ್ರಾ ಸೆಹಗಲ್ ಅವರು ಇಂದಿಗೆ ಸರಿಯಾಗಿ ನೂರು ವರ್ಷದ ಹಿಂದೆ ಏಪ್ರಿಲ್ 27, 1912ರಂದು ಉತ್ತರಪ್ರದೇಶದ ಸಹರಾನ್ಪುರದಲ್ಲಿ ಜನಿಸಿದರು.  2007ರ ವರ್ಷದಲ್ಲಿ ತಮ್ಮ 95ನೆಯ ವಯಸ್ಸಿನಲ್ಲೂ ಅವರು 42 ಡಿಗ್ರಿ ಉರಿಬಿಸಿಲಿನಲ್ಲಿ ಕುತುಬ್ ಮಿನಾರಿನ ಮುಂದೆ ಉತ್ಸಾಹಭರಿತವಾಗಿ  ಅಭಿನಯಿಸಿದ್ದನ್ನು ‘ಚೀನೀ ಕಮ್’ ಚಿತ್ರದ ಪ್ರಖ್ಯಾತ ನಿರ್ದೇಶಕ  ಬಾಲ್ಕಿ ಆತ್ಮೀಯವಾಗಿ ಸ್ಮರಿಸುತ್ತಾರೆ.

2008ರ ವರ್ಷದಲ್ಲಿ  ಜೋಹ್ರಾ ಸೆಹಗಾಲರು ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡಿನ ಲಾಡ್ಲಿ ಮೀಡಿಯಾ ಪ್ರಶಸ್ತಿಗಳಲ್ಲಿ ‘ಲಾಡ್ಲಿ ಆಫ್ ದಿ ಸೆಂಚುರಿ’ ಗೌರವವನ್ನು ಗಳಿಸಿದರು.  ಈಗ ಶತಾಯುಷಿಯಾಗಿರುವ ಜೋಹ್ರಾ ಸೆಹಗಾಲರು ಇದೀಗ ದೆಹಲಿಯಲ್ಲಿ ಪ್ರಸಿದ್ಧ ಒಡಿಸ್ಸಿ ನೃತ್ಯಗಾತಿಯಾದ  ತಮ್ಮ ಪುತ್ರಿ ಕಿರಣ್ ಸೆಹಗಲ್ ಅವರೊಂದಿಗೆ  ವಾಸಿಸುತ್ತಿದ್ದಾರೆ.

ಜೋಹ್ರಾ ಅವರು ಚಿಕ್ಕಂದಿನಿಂದಲೂ  ನೃತ್ಯದ ಬಗ್ಗೆ ಅಪಾರವಾದ ಒಲವನ್ನು ಹೊಂದಿದ್ದರು.  1935ರಲ್ಲಿ ಅವರು ಭಾರತೀಯ ಮಹಾನ್ ನೃತ್ಯ ಕಲಾವಿದರಾದ ಉದಯಶಂಕರ್ ಅವರೊಂದಿಗೆ ನೃತ್ಯ ಪ್ರದರ್ಶನ ನೀಡುವುದನ್ನು ಪ್ರಾರಂಭಿಸಿದರು.  ನಂತರದಲ್ಲಿ ಅಲ್ಮೋರಾಗೆ ತೆರಳಿ ಅಲ್ಲಿ ನೃತ್ಯ ಶಿಕ್ಷಕಿಯಾಗಿದ್ದ ಜೋಹ್ರಾ ಅವರು ನೃತ್ಯಕಲಾವಿದರೂ ಚಿತ್ರಗಾರರೂ ಆಗಿದ್ದ ಕಾಮೇಶ್ವರ್ ಸೆಹಗಾಲರನ್ನು ವಿವಾಹವಾದರು.

ನೃತ್ಯಕ್ಷೇತ್ರದಿಂದ ರಂಗಭೂಮಿಯ ಕ್ಷೇತ್ರಕ್ಕೆ ಆಗಮಿಸಿದ ಜೋಹ್ರಾ ಸೇಹಗಾಲರು 1945ರ ವರ್ಷದಲ್ಲಿ ಪೃಥ್ವಿ ಥಿಯೇಟರ್ಸ್ ಸೇರಿದರು.  ಪೃಥ್ವೀ ರಾಜ್ ಕಪೂರರಿಂದ ಪ್ರಾರಂಭಗೊಂಡಂತೆ ರಾಜ್ ಕಪೂರ್, ರಿಷಿ ಕಪೂರ್ ಅಲ್ಲದೆ ಇಂದಿನ ಯುವಕ  ರಣಬೀರ್ ಕಪೂರನವರೆಗೆ ಕಪೂರ್ ಕುಟುಂಬದ ನಾಲ್ಕು ತಲೆಮಾರುಗಳೊಂದಿಗೆ ನಟಿಸಿದ ಕೀರ್ತಿ ಜೋಹ್ರಾ ಸೆಹಗಲ್ ಅವರದ್ದು.

ಭಾರತೀಯ ರಂಗಭೂಮಿಯ ಮಹಾನ್ ಅಭಿನೇತ್ರಿಯೆನಿಸಿರುವ ಜೋಹ್ರಾ ಸೆಹಗಾಲರು ಉತ್ತಮ ಅವಕಾಶಗಳು ದೊರಕಿದಾಗ ಚಿತ್ರರಂಗದಲ್ಲಿ ಅಭಿನಯಿಸಿದರು.   ಹಮ್ ದಿಲ್ ದೇ ಚುಕೇ ಸನಮ್, ಬೆಂಡ್ ಇಟ್ ಲೈಕ್ ಬೇಕ್ಕಾಮ್, ನಾಟ್ ಎ ನೈಸ್ ಮ್ಯಾನ್ ಟು ನೋ, ದಿಲ್ ಸೆ, ಕಭೀ ಖುಷಿ ಕಭೀ ಗಮ್, ವೀರ್ ಝಾರಾ, ಚೀನೀ ಕಮ್, ಸಾವರಿಯಾ  ಮುಂತಾದವು ಜೋಹ್ರಾ ಸೆಹಗಾಲರು ನಟಿಸಿರುವ ಕೆಲವೊಂದು ಪ್ರಸಿದ್ಧ ಚಿತ್ರಗಳು.

ಅರವತ್ತರ ದಶಕದಲ್ಲಿ ಜೋಹ್ರಾ ಸೆಹಗಾಲರು ರುಡ್ಯಾರ್ಡ್ ಕಿಪ್ಲಿಂಗರ ಕಥೆಯಾಧಾರಿತ ‘ದಿ ರೆಸ್ಕ್ಯೂ ಆಫ್ ಪ್ಲಫ್ಫಲ್ಸ್’ ಚಿತ್ರದಲ್ಲಿ ಅಭಿನಯಿಸಿದ್ದರು.  ಎಂಭತ್ತರ ದಶಕದಲ್ಲಿ ಅವರು ಲಂಡನ್ನಿನಲ್ಲಿ ಪ್ರಸಿದ್ಧ ನಿರ್ದೇಶಕರಾದ ಜೇಮ್ಸ್ ಐವರಿ ಅವರ ‘ದಿ ಕೋರ್ಟಿಸಾನ್ಸ್ ಆಫ್ ಬಾಂಬೆ’ ಚಿತ್ರದಲ್ಲಿ ಸಹಾ ಅವರು ನಟಿಸಿದ್ದರು.   ಜ್ಯೂಯೆಲ್ ಇನ್ ದಿ ಕ್ರೌನ್, ಮೈ ಬ್ಯೂಟಿಫುಲ್ ಲಾಂಡ್ರೆಟ್ ಮುಂತಾದ ಪ್ರಸಿದ್ಧ ದೂರದರ್ಶನ ಧಾರಾವಾಹಿಗಳಲ್ಲಿ ಸಹಾ ಅವರು ಪಾತ್ರ ನಿರ್ವಹಿಸಿದ್ದರು.

ಪದ್ಮಶ್ರೀ, ಕಾಳಿದಾಸ ಸಮ್ಮಾನ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಮತ್ತು ಪದ್ಮಭೂಷಣ ಮುಂತಾದ ಅನೇಕ ಗೌರವಗಳು ಹಿರಿಯರಾದ ಜೋಹ್ರಾ ಸೆಹಗಾಲರನ್ನು ಅರಸಿ ಬಂದಿವೆ.

ಈ ಮಹಾನ್ ಶತಾಯುಷಿ ಕಲಾವಿದೆ ಕಳೆದ ವರ್ಷ ಈ ಲೋಕವನ್ನಗಲಿದರು.

ಕಾಮೆಂಟ್‌ಗಳಿಲ್ಲ: