ಭಾನುವಾರ, ಸೆಪ್ಟೆಂಬರ್ 29, 2013

ರಂಗನಾಥ ದಿವಾಕರ

ರಂಗನಾಥ ದಿವಾಕರ

ಮಹಾನ್ ರಾಷ್ಟ್ರಭಕ್ತ, ಸ್ವಾತಂತ್ರ ಹೋರಾಟಗಾರ, ಆಧ್ಯಾತ್ಮ ಚಿಂತಕ, ವಿದ್ವಾಂಸ, ಬರಹಗಾರ, ಪತ್ರಕರ್ತ, ರಾಜಕಾರಣಿ ರಂಗನಾಥ ದಿವಾಕರರು ಕನ್ನಡ ನಾಡಿನಲ್ಲಿ ಜನಿಸಿದ ಮಹಾನ್ ರತ್ನಗಳಲ್ಲಿ ಒಬ್ಬರು. 

ರಂಗನಾಥ ರಾಮಚಂದ್ರ ದಿವಾಕರರು 1894ರ ಸಪ್ಟಂಬರ 30ರಂದು ಧಾರವಾಡದಲ್ಲಿ ಜನಿಸಿದರು. ತಂದೆ ರಾಮಚಂದ್ರ ಮತ್ತು  ತಾಯಿ ಸೀತಾಬಾಯಿಯವರು.  ದಿವಾಕರರು ಬೆಳಗಾವಿ, ಪುಣೆ, ಮುಂಬಯಿಯಲ್ಲಿ ಶಿಕ್ಷಣ ಪಡೆದು ಎಂ.ಎ  ಪದವೀಧರರಾದರು.

ಗಾಂಧೀಜಿ, ತಿಲಕ, ಅರವಿಂದರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ರಂಗನಾಥ ದಿವಾಕರರು  ಅಪ್ಪಟ ಗಾಂಧಿವಾದಿಯಾಗಿ ಜೀವನವನ್ನು ಸಾಗಿಸಿದರು. ಸೆರೆಮನೆ ವಾಸದಲ್ಲಿನ  ಇವರ ಅನುಭವಗಳು ಸೆರೆಯ ಮರೆಯಲ್ಲಿಎಂಬ ಅವರ ಪ್ರಸಿದ್ಧ ಕೃತಿಯಲ್ಲಿ ವ್ಯಕ್ತಗೊಂಡಿವೆ. ಭಾರತ ಸ್ವತಂತ್ರವಾದ ಬಳಿಕ ಕೇಂದ್ರ ಸರಕಾರದ ಸುದ್ದಿ ಖಾತೆ ಮಂತ್ರಿಗಳಾಗಿ, ಕರ್ನಾಟಕ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ, ಬಿಹಾರದ ರಾಜ್ಯಪಾಲರಾಗಿ ಹೀಗೆ ವಿವಿಧ ರೀತಿಯ ಜವಾಬ್ಧಾರಿಗಳನ್ನು ದಿವಾಕರರು  ನಿರ್ವಹಿಸಿದ್ದರು. 

ದಿವಾಕರರು ಸಂಯುಕ್ತ ಕರ್ನಾಟಕ’ ,  ‘ಕರ್ಮವೀರ’ ,  ‘ಕಸ್ತೂರಿಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಲೋಕಶಿಕ್ಷಣ ಟ್ರಸ್ಟನ ಅಧ್ಯಕ್ಷರಾಗಿದ್ದರು. ಕೆಲ ಕಾಲ ಯುನೈಟೆಡ್ ಕರ್ನಾಟಕಎನ್ನುವ ಆಂಗ್ಲ ಪತ್ರಿಕೆಯನ್ನೂ ನಡೆಸಿದರು.

ಸಾಹಿತಿಯಾಗಿ ರಂಗನಾಥ ದಿವಾಕರರು ಸೆರೆಯ ಮರೆಯಲ್ಲಿ’,  ‘ಮಹಾತ್ಮರ ಮನೋರಂಗ’, ‘ವಚನಶಾಸ್ತ್ರ ರಹಸ್ಯ’, ‘ಹರಿಭಕ್ತಿಸುಧೆ’, ‘ಉಪನಿಷತ್ ಪ್ರಕಾಶ’, ‘ಉಪನಿಷತ್ ಕಥಾವಲಿ’,  ‘ಗೀತೆಯ ಗುಟ್ಟು’,  ‘ಕರ್ಮಯೋಗ’,  ‘1857ರ ಸ್ವಾತಂತ್ರ್ಯ ಸಂಗ್ರಾಮ’, ‘ಕಾಂಗ್ರೆಸ್ ರತ್ನ ಮಹೋತ್ಸವ’,  ‘ಗಾಂಧೀಜಿ’, ‘ವಿಶ್ವಮೇಧ’, ‘ಕರನಿರಾಕರಣೆಯ ವೀರಕಥೆ’, ‘ಕರ್ನಾಟಕ ಏಕೀಕರಣ’, ‘ಜೈಹಿಂದ್’ (ಕ್ಯಾಪ್ಟನ್ ಲಕ್ಷ್ಮೀ ಅವರು ಬರೆದ ಪುಸ್ತಕದ ಅನುವಾದ) ಮುಂತಾದ ಅಮೂಲ್ಯ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. 

ರಂಗನಾಥ ದಿವಾಕರರ ಆಂಗ್ಲ ಗ್ರಂಥಗಳೆಂದರೆ ಸತ್ಯಾಗ್ರಹ’, ‘ಗ್ಲಿಂಪ್ಸಸ್ ಆಫ್ ಗಾಂಧೀಜಿ’, ‘ಉಪನಿಷತ್ ಇನ್ ಸ್ಟೊರೀಸ್ ಅಂಡ್ ಡೈಲಾಗ್’, ‘ಮಹಾಯೋಗಿ’, ‘ಭಗವಾನ್ ಬುದ್ಧ’, ‘ಕರ್ನಾಟಕ ಥ್ರೂ ಏಜಸ್(ಸಂಪಾದಿತ)’, ‘ರಾಮಕೃಷ್ಣ ಪರಮಹಂಸಮುಂತಾದವು.   ಇದಲ್ಲದೆ  ಎಂ.ಆರ್. ಶ್ರೀಯವರ ನಾಗರಿಕಗ್ರಂಥವನ್ನು ಹಿಂದಿಗೆ ಅನುವಾದ ಮಾಡಿದ್ದಾರೆ.

ರಂಗನಾಥ ದಿವಾಕರರಿಗೆ ಕನ್ನಡ ನಾಡು 1938ರಲ್ಲಿ ಬಳ್ಳಾರಿಯಲ್ಲಿ ಜರುಗಿದ 23ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಗೌರವಿಸಿತು.  ಕರ್ನಾಟಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಗೌರವವನ್ನು ಪ್ರಧಾನ ಮಾಡಿತು.

ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಫೋಟೋ ಕೃಪೆ: www.kamat.com

Tag: Ranganatha Diwakar


ಕಾಮೆಂಟ್‌ಗಳಿಲ್ಲ: