ಮಂಗಳವಾರ, ಸೆಪ್ಟೆಂಬರ್ 3, 2013

ಹೂವಾಡಗಿತ್ತಿ

ಹೂವಾಡಗಿತ್ತಿ

‘ಹೂವು ಬೇಕೆ’ ಎಂದು ಮುಂಬಾಗಿಲಿಗೆ ಬಂದು
ಕೇಳಿದಳು ನಗುನಗುತ ಹೂವಿನವಳು.
ಬುಟ್ಟಿಯಲಿ ನೂರಾರು ಮಲ್ಲಿಗೆಯ ದಂಡೆಗಳು
ನಗುವ ಚೆಲ್ಲಿದುವೆನ್ನ ಮುಖವ ಕಂಡು.

ಅಲ್ಲಲ್ಲಿ ಮಲ್ಲಿಗೆಯ ನಡುನಡುವೆ ಸಂಪಗೆಯ
ಪಚ್ಚೆತೆನೆ ಪಾದರಿಯ ಅಚ್ಚಗಂಪು
‘ತಾಯಿಗಿದ ತಂದಿಹೆನು ತುಂಬುಹೂವಿನ ಸರವ
ತೋರಿ ಬನ್ನಿರಿ ಒಳಗೆ’ ಎಂದಳವಳು.

ಹೂವೆಲ್ಲ ನೋಡಿದವು ಹಂಬಲಿನ ಕಣ್ದೆರೆದು
ಮನದೊಳಗೆ ಕೂಡಿದುದು ಬೇವು-ಬೆಲ್ಲ;
ಮಾಲೆಯಲಿ ನಾನೊಂದು ಹೂವಾಗಿ ನೋಡಿದೆನು
ಮನೆಯೊಳಗೆ ಹೂಮುಡಿವ ಮಡದಿಯಿಲ್ಲ!

ಬುಟ್ಟಿಯಲಿ ಹೂವಿತ್ತು; ತೊಟ್ಟಿಲಲಿ ಮಗುವಿತ್ತು
ಬೆಟ್ಟಸೀಮೆಯ ಸುಖದ ತೌರಿನಲ್ಲಿ.
ಗುಟ್ಟನರಿತೆನು ಎಂಬ ಭಾವದೆಳನಗುವಿತ್ತು
ದಿಟ್ಟಹುಡುಗಿಯ ತುಂಟ ಕಣ್ಣಿನಲ್ಲಿ.

ಬಲುದೂರ ತೌರಿನಲಿ ನನ್ನ ಪ್ರೇಮದ ಗಂಗೆ
ತೂಗಿದಳು ಕಂದನನು ಲಾಲಿಯೆಂದು.
ಹೂಗನಸ ತಿಳಿದೆದ್ದು ಹೇಳಿದೆನು, ಎಲೆ ಹೆಣ್ಣೆ,
ಪೂಜೆಯಾದುದು, ಹೂವು ಬೇಡವೆಂದು.

ಹೂಮಾಲೆಗಳ ರತ್ನದುಯ್ಯಾಲೆಯೊಳಗಿರಿಸಿ
ಮೆರೆಸಿದಳು ಮನದೊಲವ ಹೂವಿನವಳು;
ಹೂಬಲೆಯ ನಡುವೆ ನಾನಿರಲೊಂದು ಮೀನಾಗಿ
ದೂರದಲಿ ಕೂಗಿದಳು ‘ಹೂವು ಹೊವೆ’೦ದು

ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ

ಚಿತ್ರಕೃಪೆ

Tag: Hoovaadagitti

ಕಾಮೆಂಟ್‌ಗಳಿಲ್ಲ: