ಮಂಗಳವಾರ, ಸೆಪ್ಟೆಂಬರ್ 3, 2013

ಎನ್ ಮನು ಚಕ್ರವರ್ತಿ

ಎನ್ ಮನು ಚಕ್ರವರ್ತಿ

ಪ್ರೊ. ಎನ್. ಮನು ಚಕ್ರವರ್ತಿಯವರು ಶಿಕ್ಷಕರಾಗಿ, ಸಾಹಿತ್ಯ, ಸಂಸ್ಕೃತಿ ಮತ್ತು ಸಿನಿಮಾ ವಿಮರ್ಶಕರಾಗಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಸಿದ್ಧರು.  ಕಳೆದ ಸಾಲಿನಲ್ಲಿ  ಮನು ಚಕ್ರವರ್ತಿಯವರು ಕರ್ನಾಟಕಕ್ಕೆ ಗೌರವ ತಂದಿರುವ ರಾಷ್ಟ್ರಮಟ್ಟದ ಅತ್ಯುತ್ತಮ ಚಲನಚಿತ್ರ ವಿಮರ್ಶಕ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದರು.  ಈ ಪ್ರಶಸ್ತಿಗೆ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ವಿಮರ್ಶೆ, ವಿಶ್ಲೇಷಣೆ, ಸಂಕೀರ್ಣವಾದ ಚಿಂತನೆಯ ಫ‌ಲವಾದ ಬರಹಗಳ ಮೂಲಕ ಸಿನೆಮಾ ಮೀಮಾಂಸೆಗೆ ಅವರು ನೀಡಿರುವ ಕೊಡುಗೆಯನ್ನು ಸಮಗ್ರವಾಗಿ ಗುರುತಿಸಲಾಗಿದೆ.  ಪ್ರೊ. ಮನು ಚಕ್ರವರ್ತಿಯವರ ಜನ್ಮದಿನ ಫೆಬ್ರವರಿ 4.

ಬೆಂಗಳೂರಿನ ಎನ್ ಎಮ್ ಕೆ ಆರ್ ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಎನ್‌. ಮನು ಚಕ್ರವರ್ತಿಯವರು ಕನ್ನಡ ಮತ್ತು ಇಂಗ್ಲಿಷ್‌ ಸಾಹಿತ್ಯದ ಗಣ್ಯ ವಿಮರ್ಶಕರು. ಸಂಗೀತ, ಸಿನೆಮಾಗಳಲ್ಲೂ ತೀವ್ರ ಆಸಕ್ತಿ ಹೊಂದಿರುವ ಇವರ ಚಿಂತನೆ ಮತ್ತು ಬರಹಗಳು ಸಂಸ್ಕೃತಿ ವಿಮರ್ಶೆಯ ವಿಶಾಲ ಹರಹನ್ನು ಪಡೆದುಕೊಂಡಿವೆ. ಅನೇಕ ಚಲನಚಿತ್ರ ರಸಗ್ರಹಣ ಶಿಬಿರಗಳನ್ನು ನಡೆಸಿದ್ದಾರೆ, ಪ್ರಬಂಧಗಳನ್ನು ಮಂಡಿಸಿದ್ದಾರೆ, ಸಂವಾದಗಳನ್ನು ನಡೆಸಿದ್ದಾರೆ ಮತ್ತು ಸಿನೆಮಾದ ಬಗ್ಗೆ ಗಂಭೀರವಾದ ಚಿಂತನೆಯಿಂದ ಹೊಮ್ಮಿದ ಬರಹಗಳನ್ನು ನೀಡಿದ್ದಾರೆ. ಚಲನಚಿತ್ರಗಳಿಗೆ ತಾತ್ವಿಕ ನೆಲೆಯನ್ನು ಒದಗಿಸುವಲ್ಲಿ ನಿರ್ದೇಶಕರ ಜೊತೆ ಅವರು  ಸಹಭಾಗಿತ್ವವನ್ನು ವಹಿಸಿದ್ದಾರೆ.

ಮನು ಚಕ್ರವರ್ತಿಯವರು ಡೀಪ್‌ ಫೋಕಸ್‌ ಎಂಬ ಸಿನೆಮಾದ ಪತ್ರಿಕೆ, ಹಲವು ದಿನಪತ್ರಿಕೆಗಳು, ನಿಯತಕಾಲಿಕೆಗಳು, ಸಂಕಲನಗಳಲ್ಲಿ ಸಿನೆಮಾದ ವಿವಿಧ ವಿಭಾಗಗಳನ್ನು ಕುರಿತು ಬರಹಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಸಿನೆಮಾದ ವಿವಿಧ ಹಂತಗಳು, ವ್ಯಕ್ತಿಗಳು, ಇರಾನಿಯನ್‌ ಸಿನೆಮಾ, ಗಿರೀಶ್‌ ಕಾಸರವಳ್ಳಿಯವರ ಚಲನಚಿತ್ರಗಳ ವಿಶ್ಲೇಷಣೆ, ಸಮಕಾಲೀನ ಭಾರತೀಯ ಸಿನೆಮಾದ ಕಾಳಜಿಗಳು, ಗುಣಲಕ್ಷಣಗಳು, ಚಲನಚಿತ್ರಗಳಲ್ಲಿ ದಮನಿತರ ಚಿತ್ರಣದ ಸ್ವರೂಪ, ಜಪಾನಿ ಸಿನೆಮಾದ ಪರಂಪರೆ ಹೀಗೆ ಸಿನೆಮಾದ ಹಲವು ಅಂಶಗಳ ಬಗ್ಗೆ ಅನನ್ಯ ದೃಷ್ಟಿಕೋನ ಮತ್ತು ಸಂಕೀರ್ಣ ನೆಲೆಗಟ್ಟಿನ ಬರಹಗಳನ್ನು ನೀಡಿದ್ದಾರೆ.  ‘ಮಾಧ್ಯಮ-ಮಾರ್ಗ’, ‘ಕಲ್ಚರಿಂಗ್‌ ರಿಯಲಿಸಂ’,  ‘ಫ್ರೇಮಿಂಗ್‌ ದಿ ನ್ಯೂ ವೇವ್‌ (ಕನ್ನಡದ ಶ್ರೇಷ್ಠ ನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ್‌ ಕುರಿತ ಪುಸ್ತಕ)’,  ‘ಭಾರತೀಯ ಸ್ತ್ರೀವಾದ’  ಇವರು ಪ್ರಕಟಿಸಿರುವ  ಪುಸ್ತಕಗಳಲ್ಲಿ ಹಲವು.

ಚಲನಚಿತ್ರಗಳೊಡನೆ ಮನು ಚಕ್ರವರ್ತಿಯವರ  ನಂಟು ಚಿಕ್ಕಂದಿನಿಂದ ಸ್ವಾಭಾವಿಕವಾಗಿ ಬೆಳೆಯಿತು. ಅವರು ಬೆಂಗಳೂರಿಗೆ ರಜೆಗೆಂದು ಬಂದಾಗ ಅವರ ಸೋದರಮಾವಂದಿರು ಆಂಗ್ಲ ಚಿತ್ರಗಳಿಗೆ ಕರೆದುಕೊಂಡುಹೋಗುತ್ತಿದ್ದರು. ಮೈಸೂರಿನಲ್ಲಿದ್ದ ಕೆಲವೇ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದ್ದ ವಿವಿಧ ಭಾಷೆಗಳ ಚಿತ್ರಗಳನ್ನು ವಾರಕ್ಕೆ ಹಲವೆಂಬಂತೆ ಅತೀವ ಆಸಕ್ತಿಯಿಂದ ನೋಡಿತ್ತಿದ್ದರು. ದಸರಾ ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರಗಳ ಪರಿಚಯವಾಯಿತು.

ಇಂದು ಕನ್ನಡ ಚಲನಚಿತ್ರ ರಂಗ ದುಃಸ್ಥಿತಿಯಲ್ಲಿರುವುದಕ್ಕೆ ಹಿಂದಿ ಮತ್ತಿತರ ಚಿತ್ರೋದ್ಯಮಗಳ ದಬ್ಟಾಳಿಕೆ ಒಂದೆಡೆ ಕಾರಣವಾದರೆ, ಮತ್ತೂಂದೆಡೆ ಕನ್ನಡ ಚಲನಚಿತ್ರ ರಂಗ ಮಾಡಿದ ಗುಣಾತ್ಮಕವಲ್ಲದ ಆಯ್ಕೆಗಳೂ ಹೊಣೆಯಾಗಿವೆ. ಲಾಭ ಗಳಿಕೆಯನ್ನೇ ಗುರಿಯಾಗಿಸಿ ಕೊಂಡು ಸಾಹಿತ್ಯ ಕೃತಿಗಳು ಅಥವಾ ಸಾಮಾಜಿಕ ಕಳಕಳಿಯುಳ್ಳ ಕಥಾವಸ್ತುಗಳನ್ನು ಆಯ್ಕೆಮಾಡದಿರುವುದು, ನಿಜಜೀವನಕ್ಕಿಂತಲೂ ಹಿಗ್ಗಿದ ತಾರೆಗಳ ವೈಭವೀಕರಣ, ಭಾವಾತಿರೇಕದ ನಿರೂಪಣೆ, ಬಹುಪಾಲು ಜನರ ವಾಸ್ತವಕ್ಕೆ ದೂರವಾದ ವೈಭವೋಪೇತವಾದ ಜೀವನಶೈಲಿಯ ಚಿತ್ರಣ, ಅಬ್ಬರದ ಸಂಗೀತ, ಮಾಧುರ್ಯ, ಲಾಲಿತ್ಯಗಳಿಲ್ಲದ ಕುಣಿತ ಮುಂತಾದವು ಚಲನಚಿತ್ರಗಳ ಅಧಮ ಗುಣಮಟ್ಟಕ್ಕೆ ಕಾರಣವಾಗಿವೆ. ಇದರಿಂದ ಜನರು ಗುರುತಿಸಿಕೊಳ್ಳುವ ಸಂಸ್ಕೃತಿಗೂ ಚಲನಚಿತ್ರಗಳಲ್ಲಿ ಮೂಡಿಬರುವ ಸಂವೇದನೆಗೂ ಕಂದಕವೇರ್ಪಟ್ಟಿದೆ ಎಂದು ಮನು ಚಕ್ರವರ್ತಿ ಅಭಿಪ್ರಾಯಪಡುತ್ತಾರೆ.

ಗಂಭೀರವಾದ ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಿರುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ. ಶ್ರೇಷ್ಠ ನಿರ್ದೇಶಕರ ಚಿತ್ರೋತ್ಸವ ನಡೆದಾಗ ಬಹುಸಂಖ್ಯೆಯಲ್ಲಿ ವೀಕ್ಷಕರು ಬರುವುದು ಅವುಗಳೂ ಜನಪ್ರಿಯವೆಂಬುದಕ್ಕೆ ಸಾಕ್ಷಿಯಾಗಿದೆ. ಇದರೊಂದಿಗೆ ವೀಕ್ಷಕರೂ ತಮ್ಮ ಅಭಿರುಚಿಯನ್ನು ಪರಿಷ್ಕರಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ಮನು ಚಕ್ರವರ್ತಿ.

ರಾಷ್ಟ್ರೀಯ ಪ್ರಶಸ್ತಿಯೇ ಅಲ್ಲದೆ ಗೋವಿಂದ ಪೈ ಸ್ಮಾರಕ ಪ್ರತಿಷ್ಠಾನ ಸ್ಥಾಪಿಸಿರುವ ವಿ. ಎಮ್. ಇನಾಂದಾರ್ ಕಾವ್ಯ ವಿಮರ್ಶಾ ಪ್ರಶಸ್ತಿ ಕೂಡಾ ಇತ್ತೀಚೆಗೆ ಮನು ಚಕ್ರವರ್ತಿ ಅವರಿಗೆ ಸಂದಿದೆ.

“ನಮ್ಮ ಅತ್ಯುತ್ತಮ ಮೇಧಾವೀ ಮನಸ್ಸುಗಳು ಆಡಳಿತ ಪ್ರವೀಣಗೊಳ್ಳುತ್ತಿವೆಯೇ ವಿನಃ ಶಿಕ್ಷಣ ಕ್ಷೇತ್ರಕ್ಕೆ ದಕ್ಕುತ್ತಿಲ್ಲ” ಎಂಬುದು ಶಿಕ್ಷಣ ಕ್ಷೇತ್ರದ ಬಗ್ಗೆ ಮನು ಚಕ್ರವರ್ತಿಯವರ ಕಾಳಜಿಯುಕ್ತ ಚಿಂತನೆಯಾಗಿದೆ.  ತಾವು ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಬುದ್ಧಿವಂತ ಯುವ ವಿದ್ಯಾರ್ಥಿಗಳ ಜತೆಯಲ್ಲಿ ಮಾತುಕತೆಗೆ ತೊಡಗುವುದು ನನಗಿಷ್ಟವಾದ ವಿಚಾರ ಎಂದು ನನ್ನರಿವಿಗೆ ಬಂತು.  ಅದು ಸಾಧ್ಯವಾಗದಿದ್ದ ಕ್ಷಣದಲ್ಲೇ  “ಶಿಕ್ಷಕನ ಕೆಲಸ ಬಿಟ್ಟು, ಬೇರೆ ಇನ್ನಾವುದಾದರೂ ಕಾಯಕಕ್ಕೆ ತೊಡಗಿ  ನನಗೂ ನನ್ನ ವಿದ್ಯಾರ್ಥಿಗಳಿಗೂ ಉಪಯೋಗವಾಗುವ ಹಾಗೆ ನಡೆದುಕೊಳ್ಳುತ್ತೇನೆ” ಎನ್ನುತ್ತಾರೆ ಮನು ಚಕ್ರವರ್ತಿ.  ತಮ್ಮ ಓದಿನ ದಿನಗಳಲ್ಲಿ ತಮಗೆ ಉಪಾಧ್ಯಾಯರಾಗಿ ವಿವಿಧ ರೀತಿಗಳಲ್ಲಿ ಪ್ರೇರಕರಾದ  ನೀಡಿದ ಪ್ರೊ. ಸಿ. ಡಿ. ನರಸಿಂಹಯ್ಯ, ಪ್ರೊ. ಯು. ಆರ್. ಅನಂತಮೂರ್ತಿ ಮತ್ತು   ಪ್ರೊ. ಬಿ. ದಾಮೋದರ ರಾವ್ ಅಂತಹ ಮಹನೀಯರ ಕೊಡುಗೆಯನ್ನು ಮನು ಚಕ್ರವರ್ತಿ ಆತ್ಮೀಯವಾಗಿ ಸ್ಮರಿಸುತ್ತಾರೆ.

ಮನು ಚಕ್ರವರ್ತಿ ಅವರಿಗೆ  ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.

ಆಧಾರ:  ಉದಯವಾಣಿಯಲ್ಲಿ ಪ್ರಕಟವಾದ ಲೇಖನ.

Tag: N. Manu Chakravarthi

ಕಾಮೆಂಟ್‌ಗಳಿಲ್ಲ: