ಮಂಗಳವಾರ, ಸೆಪ್ಟೆಂಬರ್ 3, 2013

ಸಂ.ಗೋ. ಬಿಂದೂರಾಯರು

ಸಂ.ಗೋ. ಬಿಂದೂರಾಯರು

ತಮ್ಮ ಸುಶ್ರಾವ್ಯ ಕಾವ್ಯವಾಚನದ ಮೂಲಕ ಮಹಾಭಾರತದ ಕಾಲಕ್ಕೆ ಕೇಳುಗರನ್ನು ಕೊಂಡೊಯ್ಯುತ್ತಿದ್ದ ಸಂ. ಗೋ.  ಬಿಂದೂರಾಯರು ಜನವರಿ 24, 1877ರಲ್ಲಿ  ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ ಜನಿಸಿದರು. ತಂದೆ ಗೋವಿಂದರಾಯರು, ತಾಯಿ ರಮಾಬಾಯಿ. ಬಿಂದೂರಾಯರ ಪ್ರಾರಂಭಿಕ ಶಿಕ್ಷಣ ಚಿತ್ರದುರ್ಗದಲ್ಲಿ ನಡೆಯಿತು.  ರಾಯರು ತರಗತಿಯಲ್ಲಿ ಕುಳಿತದ್ದಕ್ಕಿಂತ ಹರಿಕಥೆ, ಸಂಗೀತ ಕಚೇರಿಯಲ್ಲಿ ಕುಳಿತದ್ದೇ ಹೆಚ್ಚು.  ರಾಯರು ಶಿಕ್ಷಣದ ನಂತರ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪ್ರಾರಂಭಿಸಿ, ನಂತರದಲ್ಲಿ ಬದುಕಿಗಾಗಿ  ಗಂಧದೆಣ್ಣೆ ಕಾರ್ಖಾನೆ, ವಸ್ತು ಪ್ರದರ್ಶನ ಶಾಖೆ, ಕೃಷ್ಣರಾಜೇಂದ್ರ ಮಿಲ್ ಹೀಗೆ ಹಲವಾರು ಕಡೆ ದುಡಿದರು.

ಬಿಂದೂರಾಯರು ನೌಕರಿ ನಿಮಿತ್ತ ಮೈಸೂರು ಸೇರಿದ ಮೇಲೆ ಅಲ್ಲಿ ಮಹಾನ್ ಸಾಹಿತ್ಯ ಸಂಗೀತ ವಿದ್ವಾಂಸರುಗಳ  ಸಂಪರ್ಕ ಒದಗಿ ಬಂದುದಲ್ಲದೆ  ಶ್ರೇಷ್ಠ ವಿದ್ವಾಂಸರ ಸಂಗೀತ ಕಚೇರಿ ಕೇಳುವ ಅವಕಾಶ ಸಹಾ ಒದಗಿಬಂತು.   ಹೀಗೆ  ಬೆಳೆದ ಅವರ ಸಂಗೀತ ಜ್ಞಾನವು ಮುಂದೆ ಕಾವ್ಯವಾಚನಕ್ಕೆ ಪ್ರಸಿದ್ಧರಾಗಿದ್ದ ಶಾಮಾಚಾರ್ಯರ ಬಳಿ ಸವಾಲು ಹಾಕಿ ಕಾವ್ಯವಾಚನವನ್ನು ಅಭ್ಯಾಸ ಮಾಡುವಂತೆ ಪ್ರೇರೇಪಿಸಿತು.  ಅವರು ಮೂಡಿಸಿದ  ಕುಮಾರವ್ಯಾಸ ಭಾರತದ ಕೀಚಕವಧೆಪ್ರಸಂಗವು ಕೇಳುಗರಿಂದ  ಪ್ರಚಂಡ ಪ್ರಶಂಸೆ ಪಡೆಯಿತು.

ಬಿಂದೂರಾಯರಿಗೆ ಸಾಹಿತ್ಯದ ದರ್ಶನಮಾಡಿದವರು ಬಿ.ಎಂ.ಶ್ರೀ, ಎಂ.ಆರ್.ಶ್ರೀ, ಟಿ.ಎಸ್. ವೆಂಕಣ್ಣಯ್ಯ, ಮಾಸ್ತಿ, ಡಿ.ವಿ.ಜಿ ಮುಂತಾದ ಸಾಹಿತ್ಯದ ದಿಗ್ಗಜರು.  ಮಾಸ್ತಿಯವರು ಮೈಸೂರಿನ ಸಬ್ ಡಿವಿಜನಲ್ ಆಫೀಸರಾಗಿದ್ದಾಗ ಪ್ರವಾಸ ಹೊರಟರೆ ಬಿಂದೂರಾಯರನ್ನೂ  ಜೊತೆಯಲ್ಲೇ ಕರೆದೊಯ್ದು ಭಾರತವಾಚನ ಮಾಡಿಸಿ ಸಂತೋಷಿಸುತ್ತಿದ್ದರಂತೆ. ಕಾವ್ಯವಾಚನದಲ್ಲಿ ಮತ್ತಷ್ಟು ಜ್ಞಾನ ಸಂಪಾದಿಸಲೋಸುಗವಾಗಿ ರಾಯರು ಶ್ರೀ ಮಧ್ವಾಚಾರ್ಯರ ಮಹಾಭಾರತ ತಾತ್ಪರ್ಯ ನಿರ್ಣಯ, ಜಗನ್ನಾಥ ದಾಸರ ಹರಿಕಥಾಮೃತಸಾರ, ಕನಕದಾಸರ ಹರಿಭಕ್ತಸಾರ ಮುಂತಾದುವುಗಳ ಆಳವಾದ ಅಧ್ಯಯನ ಕೈಗೊಂಡರು.

ಕಾವ್ಯವಾಚನ ಕಲೆಯನ್ನು ಶಾಶ್ವತವಾಗಿ ಉಳಿಸಲು, ಡಿ.ವಿ.ಜಿ.ಯವರು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ಗಮಕ ತರಗತಿಗಳ ಪ್ರಾರಂಭಕ್ಕೆ ನಾಂದಿಹಾಡಿ, ಬಿಂದೂರಾಯರಿಂದ ಮೂರು ವರ್ಷ ಸತತವಾಗಿ ತರಗತಿಗಳು ನಡೆಯುವಂತೆ ಕ್ರಮ ಕೈಗೊಂಡರು.  ಈ ಕಾರ್ಯಕ್ರಮದ ದೆಸೆಯಿಂದಾಗಿ  ಹಲವಾರು ಶಿಷ್ಯರ ಪಡೆ ನಿರ್ಮಾಣವಾಯಿತು. 

ಬಿಂದೂರಾಯರಿಗೆ ಸಂದ ಗೌರವ  ಪ್ರಶಸ್ತಿಗಳು ಹಲವಾರು. ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನಿಂದ ಮಾನಪತ್ರ ಅರ್ಪಿತಗೊಂಡ ಸನ್ಮಾನ, ಮುಂಬಯಿಯ ಗಮಕ ಗೋಷ್ಠಿಯ ಅಧ್ಯಕ್ಷತೆ ಇವು ಪ್ರಮುಖವಾದವು.   ಬಿಂದೂರಾಯರ  ಕಾವ್ಯವಾಚನವನ್ನು  ಕೇಳಿದ ವೀಣೆ ಶೇಷಣ್ಣನವರು ಸಂಗೀತ ಬೆಡಗುಕಲೆ, ಗಮಕ ದೈವವನ್ನು ಪ್ರತ್ಯಕ್ಷೀಕರಿಸಿ ದರ್ಶನ ಮಾಡಿಸುತ್ತದೆಎಂದು ಪ್ರಶಂಸೆಯ ನುಡಿಗಳನ್ನು ಹರಿಸಿದರು.

ಈ ಮಹಾನ್ ವಿದ್ವಾಂಸರಾದ ಸಂ. ಗೋ.  ಬಿಂದೂರಾಯರು ಸೆಪ್ಟೆಂಬರ್ 6, 1969ರಂದು ನಿಧನರಾದರು.  ಈ ಮಹಾನ್ ವಿದ್ವಾಂಸರ ನೆನಪಲ್ಲಿ ನಮ್ಮ ಗೌರವದ ನಮನಗಳು. 


(ಆಧಾರ:  ಕಣಜ)

Tag: Sam. Go. Bindurao, S. G. Bindurao

2 ಕಾಮೆಂಟ್‌ಗಳು:

Vikas Sudheendra ಹೇಳಿದರು...

Dear Tiru Shridhar,

Your blog is amazing, thanks a ton for well compiled article of many achievers across different areas.
Just mentioning I didn't see article of Late Shakuntala bai Panduranga rao great Gamaki ,she has won awards like "Gamaka Sharade" and first to sing Kuvempu's Ramayana Darshana in Gamaka style. Request you to publish her article.
Regards,
Vikas

Vikas Sudheendra ಹೇಳಿದರು...

Just adding. Late smt Shakuntala bai Panduranga Rao was deciple of late Sri Bindurayaru.
Regards,
Vikas