ಭಾನುವಾರ, ಸೆಪ್ಟೆಂಬರ್ 1, 2013

ಲಕ್ಷ್ಮಿ


ಲಕ್ಷ್ಮಿ

ಭಾರತದ ಪ್ರಮುಖ ಸಿನಿಮಾ ತಾರೆಯರಲ್ಲಿ ಲಕ್ಷ್ಮಿ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತಾರೆ.  1968ರಲ್ಲಿ ತೆರೆಕಂಡ ತಮಿಳು ಚಿತ್ರ ಜೀವನಾಂಶಂಮೂಲಕ ಚಿತ್ರರಂಗಕ್ಕೆ ಬಂದ ಲಕ್ಷ್ಮಿ ಅವರು ಈಗಲೂ ಸಕ್ರಿಯರಾಗಿ ಅಭಿನಯ ಕ್ಷೇತ್ರದಲ್ಲಿ ಉಳಿದಿದ್ದಾರೆ.  ಆಗ ಅವರ ವಯಸ್ಸು ಕೇವಲ 15.  ಅವರ ತಂದೆ ವೈ.ವಿ. ರಾವ್ ಮೂಲತಃ ತೆಲುಗಿನವರಾಗಿದ್ದರೂ, ಕನ್ನಡವನ್ನೊಳಗೊಂಡಂತೆ, ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಪಾರ ಹೆಸರನ್ನು ಮಾಡಿದ್ದರು.   ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ಸತಿ ಸುಲೋಚನ’ (1938) ನಿರ್ದೇಶಿಸಿದವರು ಅವರೇ.    ಲಕ್ಷ್ಮಿ ಅವರ ತಾಯಿ ರುಕ್ಮಿಣಿ ಮತ್ತು ಅಜ್ಜಿ ನಂಗಂಬಕ್ಕಂ ಜಾನಕಿ ಅವರು ಸಹಾ ಆ ಕಾಲದ  ಚಲನಚಿತ್ರ ಅಭಿನೇತ್ರಿಯರು.  ಲಕ್ಷ್ಮಿ ಅವರ ಮಗಳು ಐಶ್ವರ್ಯ  ಸಹಾ ಚಲನಚಿತ್ರರಂಗದಲ್ಲಿದ್ದವರು.  ಹೀಗಾಗಿ ಅವರ ಹಲವು ತಲೆಮಾರುಗಳು ಚಿತ್ರರಂಗದಲ್ಲಿ ಇರುವಂತಾಗಿದೆ.

ಲಕ್ಷ್ಮಿ ಅವರು ಡಿಸೆಂಬರ್ 13, 1952ರಂದು ಮದ್ರಾಸಿನಲ್ಲಿ ಜನಿಸಿದರು.  ಪ್ರಾರಂಭದಿಂದಲೇ ದಕ್ಷಿಣ ಭಾರತದ ನಾಲ್ಕೂ ಪ್ರಮುಖ ಚಿತ್ರರಂಗಗಳಾದ ತಮಿಳು, ಕನ್ನಡ, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲಿ ನಟಿಸಲಾರಂಭಿಸಿದ ಲಕ್ಷ್ಮಿ ಅವರಿಗೆ, 1974ರಲ್ಲಿ ನಟಿಸಿದ ಚಟ್ಟಕ್ಕಾರಿಮಲಯಾಳಂ ಚಿತ್ರ ಅಪಾರ ಜನಪ್ರಿಯತೆ ತಂದುಕೊಟ್ಟಿತು.  ಅದೇ ಚಿತ್ರ  ಜ್ಯೂಲಿಆಗಿ ಹಿಂದಿ ಚಿತ್ರವಾದಾಗ ಅವರ ಜನಪ್ರಿಯತೆ ದೇಶದೆಲ್ಲೆಡೆ ಹಬ್ಬಿತು.  ಜ್ಯೂಲಿಚಿತ್ರಕ್ಕಾಗಿ ಪ್ರತಿಷ್ಟಿತ ಫಿಲಂಫೇರ್ ಪ್ರಶಸ್ತಿ ಪಡೆದರು.   ಹಿಂದಿ ಚಿತ್ರರಂಗದಲ್ಲಿ ಕೆಲವೊಂದು ಚಿತ್ರಗಳಲ್ಲಿ ಅಭಿನಯಿಸಿದ ಅವರಿಗೆ ದಕ್ಷಿಣ ಭಾರತ ಚಿತ್ರರಂಗವೇ ಕ್ಷೇಮವೆನಿಸಿತು.  1977ರಲ್ಲಿ  ಸಿಂಗೀತಂ ಶ್ರೀನಿವಾಸರಾಯರು ನಿರ್ದೇಶಿಸಿದ ತಮಿಳು ಚಿತ್ರ ಸಿಲನೇರಂಗಳಿಲ್ ಸಿಲ ಮನಿದರ್ಗಳ್ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದರು. 

ತಮ್ಮ ಪ್ರಾರಂಭಿಕ ವರ್ಷಗಳಲ್ಲಿ ರಾಜ್ ಕುಮಾರ್ ಅವರೊಂದಿಗೆ ಒಂದು  ಚಿತ್ರದಲ್ಲಿ ನಟಿಸಿ ಹೋಗಿದ್ದ ಲಕ್ಷ್ಮೀ ಅವರು ಪುನಃ ಪ್ರಖ್ಯಾತಿಯಿರುವ ದಿನಗಳಲ್ಲಿ ನಾ ನಿನ್ನ ಮರೆಯಲಾರೆಚಿತ್ರದಲ್ಲಿ ಅಭಿನಯಿಸಿದರು.  ಆ ಚಿತ್ರ ಕನ್ನಡದಲ್ಲಿ ಅಪಾರ ಯಶಸ್ಸು ಸಾಧಿಸಿತು.  ಹಾಗಾಗಿ ಮುಂದೆ ಕಿಲಾಡಿ ಜೋಡಿ’, ‘ನಾ ನಿನ್ನ ಬಿಡಲಾರೆ’, ‘ಒಲವು ಗೆಲುವು’, ‘ಅಂತ’, ‘ಪಲ್ಲವಿ ಅನುಪಲ್ಲವಿ’, ‘ಅವಳ ಹೆಜ್ಜೆ’, ‘ಟೋನಿ’, ‘ಸೌಭಾಗ್ಯ ಲಕ್ಷ್ಮಿ’, ‘ಲಯನ್ ಜಗಪತಿ ರಾವ್’, ‘ನಾನೊಬ್ಬ ಕಳ್ಳ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಇಬ್ಬನಿ ಕರಗಿತು’, ‘ಮುದುಡಿದ ತಾವರೆ ಅರಳಿತು’, ‘ಗಾಳಿ ಮಾತು’, ‘ಬಿಡುಗಡೆಯ ಬೇಡಿ’, ‘ಮಕ್ಕಳಿರಲವ್ವ ಮನೆ ತುಂಬಾ’, ‘ನನ್ನವರು’,  ‘ಹೂವು ಹಣ್ಣುಹೀಗೆ ಬಹಳಷ್ಟು ಯಶಸ್ವಿ ಚಿತ್ರಗಳ ನಾಯಕಿಯಾದರು. ದೊರೈ ಭಗವಾನ್ ಜೋಡಿ ನಿರ್ದೇಶಿಸಿದ ಬಹುತೇಕ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು.  ಹೂವು ಹಣ್ಣುಚಿತ್ರದ ಅಭಿನಯಕ್ಕೆ  ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಅಭಿನೇತ್ರಿಯ ಪ್ರಶಸ್ತಿ ಸಹಾ ಪಡೆದರು. 

ತಮಗೆ ಉತ್ತಮ ಪಾತ್ರಗಳನ್ನೂ, ಜನಪ್ರಿಯತೆಯನ್ನೂ ಕೊಟ್ಟ ಕನ್ನಡದ ಬಗ್ಗೆ ವಿಶೇಷ  ಒಲವು ಹೊಂದಿರುವ ಲಕ್ಷ್ಮಿಕನ್ನಡದಲ್ಲಿ 'ಅವಳ ಹೆಜ್ಜೆ' ಚಿತ್ರದ ನಿರ್ಮಾಣವನ್ನೂನಂತರದಲ್ಲಿ ಮಕ್ಕಳ ಸೈನ್ಯಚಿತ್ರದ ನಿರ್ದೇಶನವನ್ನೂ ಮಾಡಿ ಆ ಚಿತ್ರಗಳಲ್ಲಿ ಯಶಸ್ಸು ಕೂಡ ಪಡೆದರು.  

ಮುಂದೆ ಲಕ್ಷ್ಮಿ ಅವರು ತಮಿಳು ಹಿಂದಿ ಚಿತ್ರಗಳಲ್ಲಿ ಐಶ್ವರ್ಯ ರೈ ಅವರಿಗೆ ಅಜ್ಜಿಯಾಗಿ, ಕರೀನಾ ಕಪೂರ್ ಅವರಿಗೆ ತಾಯಿಯಾಗಿ ನಟಿಸಿದಂತೆ, ಕನ್ನಡದಲ್ಲೂ ಮತ್ತಿತ್ತರ ಭಾಷೆಗಳಲ್ಲೂ ಹಿರಿಯ ಪಾತ್ರಗಳಲ್ಲಿ ನಿರಂತರವಾಗಿ ಮುಂದುವರೆದಿದ್ದಾರೆ.  ತಮಗಿಂತ ಹಿರಿಯರಾದ ರಜನೀಕಾಂತ್ ಅಂತ ನಟರಿಗೆ ಕೂಡ ತಾಯಿಯಾಗಿ ನಟಿಸಿದ್ದಾರೆ.  ಪ್ರೀತ್ಸೋದ್ ತಪ್ಪಾ’, ‘ಸೂರ್ಯ ವಂಶ’, ‘ದಿಗ್ಗಜರುಮುಂತಾದ ಚಿತ್ರಗಳನ್ನೂ ಈ ನಿಟ್ಟಿನಲ್ಲಿ ಹೆಸರಿಸಬಹುದು.  ಇತ್ತೀಚಿನ ವರ್ಷದಲ್ಲಿ  ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿಗಳಲ್ಲಿ ಅವರು ವಂಶಿಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. 

ಸಿನಿಮಾ ನಟನೆಯಲ್ಲದೆ ತಮಿಳಿನಲ್ಲಿ ದೂರದರ್ಶನದ ಕೆಲವು ಕಾರ್ಯಕ್ರಮಗಳನ್ನು ಸಂಯೋಜಿಸಿ ಯಶಸ್ವಿಯಾದ ಲಕ್ಷ್ಮಿ ಅವರು ಕನ್ನಡದಲ್ಲೂ ಇದು ಕಥೆಯಲ್ಲ ಜೀವನಎಂಬ ಕಾರ್ಯಕ್ರಮವನ್ನು ನಿರ್ವಹಿಸಿದ್ದರು.  ಹಲವಾರು ಕಿರುತೆರೆಯ  ರಿಯಾಲಿಟಿ ಷೋಗಳಲ್ಲಿ ಸಹಾ ಅವರು ತೀರ್ಪುಗಾರರಾಗಿ ಕಾಣಬರುತ್ತಿದ್ದಾರೆ.

ತನ್ನ ಕೊನೆಯುಸಿರಿರುವವರೆಗೂ ಚಿತ್ರರಂಗದಲ್ಲಿ ಪಾತ್ರವಹಿಸುತ್ತೇನೆ ಎನ್ನುವ ಲಕ್ಷ್ಮಿ ಅವರ ಕಲಾ ಕಾಳಜಿ ಮನನೀಯ.  ಕನ್ನಡವನ್ನೊಳಗೊಂಡಂತೆ ಅವರು ನಟಿಸಿರುವ ಭಾಷೆಗಳನ್ನೆಲ್ಲಾ ಉತ್ತಮವಾಗಿ ಸಂಭಾಷಿಸುತ್ತಾರೆ ಕೂಡ. ಸೌಂದರ್ಯ, ಪ್ರತಿಭೆ, ಕರ್ತವ್ಯ ನಿಷ್ಠೆ ಇವುಗಳೆಲ್ಲವನ್ನೂ ಮೇಳೈಸಿಕೊಂಡು ವೈವಿಧ್ಯಮಯ ಪಾತ್ರಗಳಲ್ಲಿ ನಿಷ್ಠೆಯಿಂದ ಅಭಿನಯಿಸುತ್ತಾ ಕಲಾಭಿಮಾನಿಗಳ ಹೃದಯದಲ್ಲಿ ನಿತ್ಯ ವಿರಾಜಮಾನರಾಗಿರುವ ಈ ಅಭಿನೇತ್ರಿ ತಮ್ಮ ಬದುಕಿನಲ್ಲಿ ನಿತ್ಯ ಸುಖ ಸಂತೋಷ ನೆಮ್ಮದಿ ಸಾಧನೆ ಸಂತೃಪ್ತಿಗಳನ್ನು ಕಾಣಲಿ ಎಂದು ಹಾರೈಸೋಣ.

Tag: Lakshmi

ಕಾಮೆಂಟ್‌ಗಳಿಲ್ಲ: