ಭಾನುವಾರ, ಸೆಪ್ಟೆಂಬರ್ 1, 2013

ಚದುರಂಗ

ಚದುರಂಗ

ಜನವರಿ ಒಂದರಂದು ಬರುವ ಹುಟ್ಟುಹಬ್ಬ ಕನ್ನಡ ಸಾಹಿತ್ಯಲೋಕದ ಪ್ರಮುಖ ಕತೆಗಾರ ಚದುರಂಗಅವರದು.  ಕನ್ನಡ ಸಾಹಿತ್ಯ ಮತ್ತು ಸಿನಿಮಾ ಲೋಕದಲ್ಲಿ ಪ್ರಸಿದ್ಧವಾದ ಸರ್ವಮಂಗಳಮತ್ತು ಉಯ್ಯಾಲೆಕಾದಂಬರಿಗಳನ್ನು ಬರೆದವರು ಚದುರಂಗರು.  ಅಷ್ಟೇ ಅಲ್ಲ ಅವರ ಪ್ರಸಿದ್ಧ ಕಾದಂಬರಿ ವೈಶಾಖ’, ಕನ್ನಡ ಕಾದಂಬರಿ ಲೋಕದಲ್ಲಿ ತನ್ನ ವಿಶಿಷ್ಟತನದಿಂದ ವೈಚಾರಿಕ ಕ್ರಾಂತಿಯನ್ನೇ ಹುಟ್ಟಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು.  ಈ ಪ್ರಸಿದ್ಧ ಕಾದಂಬರಿಗಳಲ್ಲದೆ ಅವರ ನಿಧನಕ್ಕೆ ಸ್ವಲ್ಪ ಮುಂಚೆ ಪ್ರಕಟಗೊಂಡ  ಹೆಜ್ಜಾಲಕಾದಂಬರಿಯನ್ನೂ ಹಲವಾರು ಪ್ರಸಿದ್ಧ ಸಣ್ಣ ಕತೆಗಳನ್ನೂ, ನಾಟಕಗಳನ್ನೂ, ಕವನ ಸಂಕಲನವೊಂದನ್ನೂ ಚದುರಂಗರು ಕನ್ನಡ ಸಾಹಿತ್ಯ ಲೋಕಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.  ಇದಲ್ಲದೆ ಚಿತ್ರರಂಗದ ಸಾಧನೆಗಳಿಗೂ  ಚದುರಂಗರು ಹೆಸರಾಗಿದ್ದಾರೆ.

ಚದುರಂಗರ ನಿಜ ಹೆಸರು ಸುಬ್ರಹ್ಮಣ್ಯರಾಜು ಅರಸು. ಚದುರಂಗದಾಟದ ಪ್ರಿಯರಾದ ಅವರು ಬಹುಶಃ ಅದೇ ಕಾರಣಕ್ಕಾಗಿ  ತಮ್ಮ ಸಾಹಿತ್ಯ ನಾಮಧೇಯವನ್ನೂ ಚದುರಂಗ ಎಂದು ಮಾಡಿಕೊಂಡಿರಬಹುದು.  1916ರ ಜನವರಿ 1 ರಂದು ಹುಣಸೂರು ತಾಲೂಕು, ಕಲ್ಲಹಳ್ಳಿಯಲ್ಲಿ ಜನಿಸಿದ ಚದುರಂಗರು ಮೈಸೂರು ರಾಜಮನೆತನದ ಸಂಬಂಧಿ. ಇವರ ವಂಶದ ಪೂರ್ವಿಕರಲ್ಲಿ ಒಬ್ಬನಾದ ಮಂಗರಸಕವಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಿತನಾಗಿದ್ದಾನೆ.  ಮೈಸೂರಿನ ಕಡೆಯ ಅರಸರಾದ  ಜಯ ಚಾಮರಾಜೇಂದ್ರ ಒಡೆಯರ ಓರಗೆಯವರಾಗಿದ್ದ ಚದುರಂಗರು ಮೈಸೂರಿನ ರಾಯಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ನಂತರ ಬೆಂಗಳೂರಿನ ಇಂಟರ್ ಮೀಡಿಯಟ್ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದರು. ಪುಣೆಯಲ್ಲಿ ಕಾನೂನು ಮತ್ತು ಎಂ.ಎ. ಕಲಿಯಲು ಹೋಗಿ ಕಾರಣಾಂತರಗಳಿಂದ ಓದು ನಿಲ್ಲಿಸಿದರು.

ಬಾಲ್ಯದಲ್ಲೇ ಕತೆ ಕೇಳುವ ಹಾಗೂ ಆ ನಿಟ್ಟಿನಲ್ಲಿ ಯೋಚಿಸಿ ಬರೆಯುವ ಆಸಕ್ತಿ ಇದ್ದುದರಿಂದ ತಮ್ಮ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ, ಪುರಾಣ ಕತೆಗಳನ್ನು ರಾಜ ಮನೆತನದ ಹುಡುಗರಿಗೆ ಹೇಳುತ್ತಿದ್ದರು. ಗಾಂಧೀ ವಿಚಾರಧಾರೆಗೆ ಮನಸೋತು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು. ಎಡಪಂಥಿಯ ವಿಚಾರಧಾರೆಗೆ ಮನಸೋತಿದ್ದ ಚದುರಂಗರು ಎಂ. ಎನ್. ರಾಯ್ ಅವರ ವಿಚಾರಗಳನ್ನು ತಲೆ ತುಂಬಿಸಿಕೊಂಡಿದ್ದರು. ರಾಜ ಮನೆತನದ ಸಿರಿ ಸಂಪತ್ತು, ಅಲ್ಲಿನ ಆಡಂಬರ ಚದುರಂಗರಿಗೆ ಇಷ್ಟವಾಗಲಿಲ್ಲವಾದ್ದರಿಂದ ಶ್ರೀಮಂತ ಹೆಣ್ಣು ತಂದು ಮದುವೆ ಮಾಡಬೇಕೆಂಬ ಮನೆಯವರ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ತಮ್ಮಿಷ್ಟವಾದವರನ್ನು ಮದುವೆಯಾದರು. ಸಂಪ್ರದಾಯ ಹಾಗೂ ಸಾಮಾಜಿಕ ಕಟ್ಟು ಪಾಡುಗಳನ್ನು ಮುರಿದು ಸಂಗಾತಿ ಆಯ್ಕೆ ಮಾಡಿಕೊಂಡ ಚದುರಂಗರು ಬದುಕನ್ನು ಹೋರಾಟವಾಗಿ ಸ್ವೀಕರಿಸಿ ಮೈಸೂರು ತೊರೆದು ಹುಟ್ಟೂರು ಕಲ್ಲಹಳ್ಳಿಯಲ್ಲಿ ಬೇಸಾಯಕ್ಕೆ ತೊಡಗಿದರು. ಅಲ್ಲಿನ ಅನುಭವಗಳೇ ಮುಂದೆ ಅವರ ಕತೆ, ಕಾದಂಬರಿಗಳಾಗಿ ಮೈತಾಳಿದವು.

ಹಳ್ಳಿಯಲ್ಲೇ ಬರಹ ಆರಂಭಿಸಿ ಸಾಹಿತ್ಯದ ಒಡನಾಟವಿಟ್ಟುಕೊಂಡಿದ್ದ ಚದುರಂಗರಿಗೆ ಮಾಸ್ತಿ ಮತ್ತು ಗೊರೂರು ಪ್ರಭಾವ ಬೀರಿದರು. ಹಳ್ಳಿಯ ಬದುಕಿಗೆ ದೃಷ್ಟಿ ತಿರುಗಲು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಗುರುವಾದರೆಂದು ಚದುರಂಗರು ಹೇಳಿಕೊಂಡಿದ್ದಾರೆ.  ಮುಂದೆ ಅನಕೃ, ತರಾಸು ಅವರ ಒಡನಾಟದಲ್ಲಿ ಪ್ರಗತಿಶೀಲ ಸಾಹಿತ್ಯ ಚಳುವಳಿಯಲ್ಲೂ ಪಾಲ್ಗೊಂಡರು.

‘ಸ್ವಪ್ನ ಸುಂದರಿ’ ಚದುರಂಗರ ಮೊದಲ ಕಥಾ ಸಂಕಲನ.  ಶವದಮನೆ’, ‘ಇಣುಕುನೋಟ’, ‘ಬಂಗಾರದ ಗೆಜ್ಜೆ’, ‘ಬಣ್ಣದಬೊಂಬೆ’, ‘ಮೀನಿನ ಹೆಜ್ಜೆಮುಂದೆ ಪ್ರಕಟವಾದ ಕಥಾ ಸಂಕಲನಗಳು. ‘ನಾಲ್ಕು ಮೊಳ ಭೂಮಿ' ಕನ್ನಡದ ಅತ್ಯುತ್ತಮ  ಕತೆಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಕಥೆಯೊಳಗೊಂದು ಕಥಾ ತಂತ್ರದ ಬಳಕೆಯಿಂದ ಗ್ರಾಮ ಹಾಗೂ ನಗರ ಬದುಕಿನಲ್ಲಿನ ಅನ್ಯಾಯಗಳನ್ನು ಸಾಂಕೇತಿಸುವ ಈ ಕತೆ ಭೂವಿವಾದಕ್ಕೆ ಪರಿಹಾರ ಸೂಚಿಸುತ್ತದೆ.

ಚದುರಂಗರ  ಮೊದಲ ಕಾದಂಬರಿ ಸರ್ವಮಂಗಳ’ 1950ರ ಸುಮಾರಿಗೆ ಪ್ರಕಟವಾದಾಗ ಹೊಸದೊಂದು ಅಲೆಯನ್ನೇ ಎಬ್ಬಿಸಿತು.  ಈ ಕಾದಂಬರಿ ಪ್ರಾದೇಶಿಕ ಹಿನ್ನೆಲೆಯನ್ನು ಪಡೆದಿದ್ದರೂ ಸಾರ್ವತ್ರಿಕ ಮಾನವೀಯ ಸಂಬಂಧಗಳನ್ನು ವಸ್ತುವಾಗಿರಿಸಿಕೊಂಡಿದೆ.  ಒಲಿದವರನ್ನು ವಿವಾಹ ಬಂಧನದಲ್ಲಿ ಒಂದಾಗಿಸದ ಕಾರಣದಿಂದಾಗಿ ಉಂಟಾಗಬಹುದಾದ ದುರಂತಗಳ ಬಗ್ಗೆ ಕಾದಂಬರಿ ಹೆಚ್ಚು ಒತ್ತನ್ನು ಕೊಡುತ್ತದೆ.

ಚದುರಂಗರ ಎರಡನೆಯ ಕಾದಂಬರಿ ಉಯ್ಯಾಲೆಯಲ್ಲಿ ಗಂಡು ಹೆಣ್ಣಿನ ಸಂಬಂಧಗಳ ಸೂಕ್ಷ್ಮತೆ ಚಿತ್ರಿತವಾಗಿದೆ.  ಕಾದಂಬರಿಯ ಉದ್ದಕ್ಕೂ ಉಯ್ಯಾಲೆಮುಖ್ಯ ಪಾತ್ರಗಳ ಮಾನಸಿಕ ಸ್ಥಿತಿಗೆ ಒಡ್ಡಿದ ಸಮರ್ಥ ಸಂಕೇತವಾಗಿದೆ.  ಠಾಗೂರರ ಚಾರುಲತಾಕಾದಂಬರಿಯನ್ನು ಹೋಲುವ ಈ ಕೃತಿ ಕನ್ನಡದ ಉತ್ತಮ ಕಾದಂಬರಿಗಳಲ್ಲೊಂದು.

ವೈಶಾಖಕಾದಂಬರಿ ಕನ್ನಡದಲ್ಲಿ ಬಹಳಷ್ಟು ವಿಚಾರ ವಿಮರ್ಶೆಗೆ ಒಳಗಾಗಿರುವ ಒಂದು ಮಹತ್ವದ ಕೃತಿ.  ದಟ್ಟವಾದ ಅನುಭವ ಸಾಮಗ್ರಿ ಮತ್ತು ವಿಶಿಷ್ಟ ತಂತ್ರಗಳಿಂದ ಕೂಡಿರುವ ಇದು ಲೇಖಕರ ಮಹತ್ವಾಕಾಂಕ್ಷೆಯ ಕೃತಿ ಕೂಡ. ಕಥೆಯನ್ನು ನಿರೂಪಕನು ಹೇಳುವುದಿಲ್ಲ.  ಕಾದಂಬರಿಯ ಎರಡು ಮುಖ್ಯ ಪಾತ್ರಗಳಾದ ಲಕ್ಕ ಮತ್ತು ರುಕ್ಮಿಣಿಯರ ಮೂಲಕ ಕಥೆ ಸಾಗುತ್ತದೆ.  ಈ ಎರಡು ಪಾತ್ರಗಳ ಅನುಭವ ಮತ್ತು ನೆನಪುಗಳ ಮೂಲಕ ನಾವು ಘಟನೆಗಳನ್ನು ಕಂಡುಕೊಳ್ಳುತ್ತೇವೆ.  ಅಷ್ಟೇ ಅಲ್ಲದೆ ಭಾಷಾ ದೃಷ್ಟಿಯಿಂದಲೂ ಈ ಕಾದಂಬರಿ ಒಂದು ವಿಶಿಷ್ಟ ಪ್ರಯೋಗವಾಗಿದೆ.  ಗ್ರಾಮ್ಯ ಭಾಷೆ ಮತ್ತು ಶಿಷ್ಟ ಭಾಷೆಗಳೆರಡನ್ನೂ ಎರಡು ವಿಭಿನ್ನ ಹಿನ್ನಲೆಗಳುಳ್ಳ ಪಾತ್ರಗಳ ಮೂಲಕ ಮೋಹಕವಾಗಿ ಬಳಸಿದ್ದಾರೆ. ವೈಶಾಖಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

 ‘ಕುಮಾರರಾಮಜಾನಪದ ಕಥೆಗಳಲ್ಲಿ ನಿರಂತರವಾಗಿ ಜನಮನವನ್ನು ಸೂರೆಗೊಂಡಿರುವ ಪಾತ್ರ.  ಪ್ರಚಲಿತ ವಿಷಯಗಳನ್ನಷ್ಟೇ ಅಲ್ಲದೆ ಚದುರಂಗರು ಹುಲ್ಲೂರು ಶ್ರೀನಿವಾಸ ಜೋಯಿಸರ ಉಲ್ಲೇಖಗಳನ್ನು ಆಧರಿಸಿ ಕುಮಾರರಾಮ ನಾಟಕವನ್ನು ರಚಿಸಿದ್ದಾರೆ.  ಸುಮಾರು ಹತ್ತೊಂಬತ್ತು ದೃಶ್ಯಗಳ ಈ ನಾಟಕದಲ್ಲಿ ಲೇಖಕರು ಸಾಂಪ್ರದಾಯಿಕ ಕಥೆಗಳಿಗಿಂತ  ಭಿನ್ನವಾದ ಕೆಲವು ಪ್ರಸಂಗಗಳನ್ನು ರೂಪಿಸಿಕೊಂಡಿದ್ದಾರೆ.  ನಾಟಕದಲ್ಲಿ ಮೂಡಿರುವ  ಸಂಭಾಷಣಾ ತೀವ್ರತೆ ಕಲಾತ್ಮಕವಾಗಿದೆ. 

ಇಲಿಬೋನುಚದುರಂಗರ ಮತ್ತೊಂದು ನಾಟಕ.  ಇಲ್ಲದ ಏಣಿಯನ್ನು ಏರುವವನು, ಇಲ್ಲದ ಗುದ್ದಲಿಯಿಂದ ಅಗೆಯುವವನು ಇಲ್ಲಿನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.  ಒಬ್ಬನದು ಅಲೌಕಿಕತೆಯ ಕುರಿತಾದ ದೃಷ್ಟಿ.  ಮತ್ತೊಬ್ಬನದು ವೈಜ್ಞಾನಿಕ ದೃಷ್ಟಿಕೋನ. ಇಲ್ಲಿನ ಪಾತ್ರಗಳು  ಜೀವನದ ಇಲಿಬೋನಿನಲ್ಲಿ ಸಿಕ್ಕಿಹಾಕಿಕೊಂಡು ತೊಳಲಾಡುವ ಸಂಕಟ ವಿಷಾದಗಳ ಜೊತೆಗೆ ಅರ್ಥವನ್ನು ಕಂಡುಕೊಳ್ಳುವ ವಿಶಿಷ್ಟ ನೋಟ ಈ ನಾಟಕದಲ್ಲಿದೆ.

ಅಲೆಗಳುಕೃತಿ ಚದುರಂಗರ ಹನಿಗವನಗಳ ಸಂಕಲನ.  ಹಾಸ್ಯ, ವ್ಯಂಗ್ಯ, ಜೀವನೋಲ್ಲಾಸಗಳನ್ನು ಇಲ್ಲಿ ಕಾಣಬಹುದಾಗಿದೆ.

ಚದುರಂಗರು ಸಾಹಿತಿಗಳಷ್ಟೇ ಅಲ್ಲದೆ ಚಿತ್ರ ನಿರ್ದೇಶಕರಾಗಿಯೂ ಕನ್ನಡಿಗರಿಗೆ ಪರಿಚಿತರಾದವರು.  ಸಿನಿಮಾ ಕಲೆಯ ಬಗ್ಗೆ ಆಕರ್ಷಿತರಾಗಿದ್ದ ಚದುರಂಗರು ಪುಣೆಯಲ್ಲಿ ಅದರ  ತಂತ್ರದ ಬಗ್ಗೆ ಸ್ವಯಂ ಅಧ್ಯಯನ ನಡೆಸಿದ್ದರು.  ಪತ್ರಿಕೆಗಳಲ್ಲಿ ಚಲನಚಿತ್ರ ವಿಮರ್ಶೆಗಳನ್ನೂ ಬರೆದರು.  ಸುಮಾರು 1948ರಲ್ಲಿ ಮೈಸೂರಿನಲ್ಲಿ ತಯಾರಾದ ಭಕ್ತ ರಾಮದಾಸಚಿತ್ರಕ್ಕೆ ಕಥಾಲೇಖಕರಾಗಿದ್ದರು.  ಅಷ್ಟೇ ಅಲ್ಲದೆ ಮುಂದೆ ವಿದೇಶಿ ಚಿತ್ರಸಂಸ್ಥೆ ಎಂ.ಜಿ.ಎಂ ತಯಾರಿಸಿದ ಇಂಗ್ಲೀಷಿನ ಮಾಯಾಚಿತ್ರದ ಸಹನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.  ಅವರ ಈ ಅನುಭವ ಮತ್ತು ಆಸಕ್ತಿಗಳ ಪರಿಣಾಮವಾಗಿ ಗೆಳೆಯರೊಂದಿಗೆ ಶ್ರೀ ನಾಗೇಂದ್ರ ಚಿತ್ರಕಲಾ ಸಂಸ್ಥೆಯನ್ನು ಸ್ಥಾಪಿಸಿ ತಮ್ಮದೇ ಕಾದಂಬರಿಯಾಗಿ ಸರ್ವಮಂಗಳಾಚಿತ್ರವಾಗಿ ನಿರ್ಮಿಸಿದರು.  ಈ ಚಿತ್ರ 1966-67ರ ರಾಜ್ಯ ಚಲನಚಿತ್ರದ ಪ್ರಶಸ್ತಿಗಳನ್ನು ಗಳಿಸಿಕೊಂಡಿತು.  ಅವರ ಮತ್ತೊಂದು ಕಾದಂಬರಿ ಉಯ್ಯಾಲೆಯನ್ನು ಕೂಡ ತಾವೇ ಸ್ವತಃ ನಿರ್ಮಿಸದಿದ್ದರೂ ಅದರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಉಯ್ಯಾಲೆಯನ್ನು ಪ್ರಸಿದ್ಧರಾದ ಎನ್. ಲಕ್ಷ್ಮೀನಾರಾಯಣ್ ನಿರ್ದೇಶಿಸಿದರು.  ಉತ್ತಮ ಚಿತ್ರಕಥಾ ಲೇಖಕರಾಗಿ ಉಯ್ಯಾಲೆಅವರಿಗೆ ಪ್ರಶಸ್ತಿಯನ್ನು ತಂದುಕೊಟ್ಟಿತು.   ಅವರು  ಕುವೆಂಪು ಮತ್ತು ನೃತ್ಯ ಕಲಾವಿದೆ ವೆಂಕಟಲಕ್ಷ್ಮಮ್ಮ ಅವರ ಕುರಿತಾಗಿ ಸಾಕ್ಷಚಿತ್ರಗಳನ್ನೂ ನಿರ್ದೇಶಿಸಿದ್ದಾರೆ


ಅಲೆಗಳುಸಂಕಲನದ ಒಂದು ಮುಕ್ತಕದಲ್ಲಿ ಚದುರಂಗರು ಬೆನ್ನ ಹಿಂದಿನ ಗೆಳೆಯ ವೇಳೆಯಾಗಿದೆ ಹೊರಡುಎಂದಾಗ ಕೆಲಸ ಮುಗಿದಿಲ್ಲ ಯಾಕಿಷ್ಟು ತಡೆ ಎಂದೆಎಂದು ಬರೆಯುತ್ತಾರೆ.  ಸದಾ ಹೊಸತನ  ಅನ್ವೇಷಿಸುತ್ತ ಜೀವನವನ್ನು ನಡೆಸಿದ ಚದುರಂಗರಿಗೆ ಅದು  ಸಹಜ ಸ್ವಭಾವ ಆಗಿತ್ತು ಎಂದು ತೋರುತ್ತದೆ.  ಚದುರಂಗ ಅವರು 1998, ಅಕ್ಟೋಬರ್ 19ರಂದು ಮೈಸೂರಿನಲ್ಲಿ ನಿಧನ ಹೊಂದಿದರು.

Tag: Chaduranga

ಕಾಮೆಂಟ್‌ಗಳಿಲ್ಲ: