ಮಂಗಳವಾರ, ಸೆಪ್ಟೆಂಬರ್ 3, 2013

ಸಂತನಾದ ನಾಟಕಕಾರ ಅಲ್ದಾಳ ಮಾಸ್ತರರು

ಸಂತನಾದ ನಾಟಕಕಾರ ಅಲ್ದಾಳ ಮಾಸ್ತರರು
-ಗುಡಿಹಳ್ಳಿ ನಾಗರಾಜ

`ಅಲ್ದಾಳ ಮಾಸ್ತರ` ಅಥವಾ `ಅಲ್ದಾಳ ಕವಿಗಳು` ಎಂದೇ ಖ್ಯಾತರಾದವರು ಲಾಲ್‌ಮಹ್ಮದ ಬಂದೇನವಾಜ ಖಲೀಫ್ ಅಲ್ದಾಳ (ಎಲ್.ಬಿ.ಕೆ. ಅಲ್ದಾಳ). ಇವರಿಗೆ ಕರ್ನಾಟಕ ಸರ್ಕಾರದ ಅತ್ಯುನ್ನತ ಪಶಸ್ತಿಯಾದ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.  ನಾಟಕಕಾರನಾಗಿ ಇವರು `ಅಲ್ದಾಳ ಕವಿ`. (ವೃತ್ತಿರಂಗಭೂಮಿಯ ಪರಿಭಾಷೆಯಲ್ಲಿ ನಾಟಕಕಾರನನ್ನು ಕವಿ ಎಂದೇ ಕರೆಯುತ್ತಾರೆ) ನಾಟಕ ನಿರ್ದೇಶಕನಾಗಿ `ಅಲ್ದಾಳ ಮಾಸ್ತರ`. ಕಲ್ಯಾಣ ಕರ್ನಾಟಕದ (ಹೈದರಾಬಾದ್ ಕರ್ನಾಟಕ) ಗ್ರಾಮೀಣ ಪ್ರದೇಶ ಇವರ ಕಾರ್ಯಕ್ಷೇತ್ರ.

ಇಪ್ಪತ್ತರ ಹರೆಯದಲ್ಲಿ ನಟನಾಗಿ ನಾಟಕ ಕಂಪೆನಿ ಪ್ರವೇಶ. ಬಡತನ, ಸ್ವಅಧ್ಯಯನ, ರಂಗಾನುಭವ ಮುಪ್ಪರಿಗೊಂಡು ಮೂಡಿದ್ದು ನಾಟಕ. ತಾವು ಬರೆದ ನಾಟಕಗಳಿಗೆ ತಾವೇ ಮಾಸ್ತರರು - ಅಂದರೆ ನಿರ್ದೇಶಕರು. ವೃತ್ತಿ ರಂಗಭೂಮಿಯ ಪ್ರತೀತಿಯೇ ಅದು. ನಾಟಕ ರಚನೆ ಮಾಡಿದ ಮಾತ್ರಕ್ಕೆ ನಾಟಕಕಾರನ ಕೆಲಸ ಮುಗಿಯುವುದಿಲ್ಲ. ರಂಗದ ಮೇಲೆ ಅದನ್ನು ಕಳೆಗಟ್ಟಿಸಬೇಕು. ಯಶಸ್ಸೇ ಅಲ್ಲಿ ಮಾನದಂಡ.

ಅಲ್ದಾಳ ಮಾಸ್ತರ 1962ರಲ್ಲಿ ಬರವಣಿಗೆ ಆರಂಭಿಸಿದರು. ಇವರ `ಪತಿಭಕ್ತಿ`, `ಕಲಿಯುಗದ ಕನ್ಯಾ`, `ನಮಸ್ಕಾರ`, `ನನ್ನ ದೇವರು`, `ವಂಚಕ` ಮುಂತಾದ ನಾಟಕಗಳು 1960-70ರ ದಶಕದ ಕರ್ನಾಟಕದ ಪ್ರತಿಷ್ಠಿತ ಚಿಕ್ಕೊಪ್ಪಾ, ಬೆನಕಟ್ಟಿ, ಸುಳ್ಳ, ಯಂಕಂಚಿ, ಮೈಂದರಗಿ ಮುಂತಾದ 12 ನಾಟಕ ಕಂಪೆನಿಗಳಲ್ಲಿ ರಂಗೇರಿದವು. 1970ರಲ್ಲೇ ರಚಿಸಿದ `ಬಾಳಿಗೊಂದು ಬೆಲೆ ಬೇಕು` ಎಂಬ ಇವರ ನಾಟಕದ ಕಥೆಯನ್ನೇ ನಂತರ ಬಿಡುಗಡೆಯಾದ `ನಾರದ ವಿಜಯ` ಜನಪ್ರಿಯ ಸಿನಿಮಾ ಹೋಲುತ್ತದೆ!

ಕಡಕೋಳ ಮಡಿವಾಳಪ್ಪ ಎಂಬ ತತ್ವಪದಕಾರನ ಕುರಿತು 1972ರಲ್ಲಿ ಇವರು ರಚಿಸಿದ ನಾಟಕ ಅಪಾರ ಯಶಸ್ಸು ಪಡೆಯುತ್ತದೆ. ಮುಂದೆ ಇದು ಅವರ ಬದುಕಿಗೊಂದು ಹೊಸ ಆಯಾಮವನ್ನೇ ಕಲ್ಪಿಸುತ್ತದೆ. ಸಾಧು ಸಂತರು, ಅವಧೂತರು, ತತ್ವಪದಕಾರರು, ಶಿವಯೋಗಿಗಳು ಇವರನ್ನು ಕೈಹಿಡಿದು ನಡೆಸಿಕೊಂಡು ಹೋಗುತ್ತಾರೆ- ಬರಹ ಬದುಕು ಎರಡರಲ್ಲೂ. ಪವಾಡ ಪುರುಷರ ಕುರಿತ ನಾಟಕ ರಚನೆ- ನಿರ್ದೇಶನ ಆರಂಭವಾದ ಮೇಲೆ ಇವರ ಕಾರ್ಯಕ್ಷೇತ್ರ ನಾಟಕ ಕಂಪೆನಿಗಳಿಂದ ಹೈದರಾಬಾದ್ ಕರ್ನಾಟಕದ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಾಗಿ ಹೊರಳಿಕೊಳ್ಳುತ್ತದೆ.

ಒಂದು ಮತ ಅಲ್ಲ, ಒಂದು ಜಾತಿ ಅಲ್ಲ, ಹಲವು ಜಾತಿಗಳಿಗೆ ಮತ್ತು ಅವರ ನಂಬಿಕೆಗಳಿಗೆ ನಾಟಕದ ರೂಪುಕೊಟ್ಟು ರಂಗದ ಮೇಲೆ ಅವನ್ನು ಸಾಕಾರಗೊಳಿಸಿದವರು ಅಲ್ದಾಳ ಕವಿಗಳು. ಕುರುಬರ ಯಲ್ಲಪ್ಪಸ್ವಾಮಿ ಕುರಿತು `ಮುಗಳಖೋಡ ಮುತ್ತು`, ಈಡಿಗರ ಬಾಲಯೋಗೀಂದ್ರ ಮಹಾರಾಜೇಂದ್ರರ ಕುರಿತು `ಗರತಿ ವಿಶ್ವಜ್ಯೋತಿ`, ವಿಶ್ವಕರ್ಮ ಜನಾಂಗದ `ಅಳ್ಳಳ್ಳಿ ಅಯ್ಯಪ್ಪಯ್ಯ ಮಹಾತ್ಮೆ`, `ಹಾರಕೂಡ ಚನ್ನಬಸವೇಶ್ವರ ಮಹಾತ್ಮೆ` ಸೇರಿದಂತೆ ಹಲವು ಲಿಂಗಾಯತ ಶರಣರು, ಮೋಟನಹಳ್ಳಿ ಹಸನಸಾಬ್, ಮುದನೂರು ದೇವರ ದಾಸೀಮಯ್ಯ- ಹೀಗೆ ಎಲ್ಲ ಸಾಮಾಜಿಕ ಸ್ತರದವರನ್ನು ರಂಗದ ಮೇಲೆ ಯಶಸ್ವಿಗೊಳಿಸಿದ ಕೀರ್ತಿ ಈ ಲಾಲ್‌ಮಹ್ಮದ ಅಲ್ದಾಳರದು.

ವೃತ್ತಿರಂಗಭೂಮಿಯ ಹಿನ್ನೆಲೆಯಿಂದಾಗಿ ದೃಶ್ಯ ನಿರ್ಮಿತಿ, ಪಾತ್ರಪೋಷಣೆ, ಸಂಭಾಷಣೆಯಲ್ಲಿ ಅಲ್ದಾಳರದು ಪಳಗಿದ ಕೈ. ಸಂಕೀರ್ಣ ಕಥೆಯನ್ನು ನಾಟಕಕ್ಕೆ ಅಳವಡಿಸುವ ರೀತಿ, ಸಾಮಾನ್ಯರ ಬವಣೆಯನ್ನು ಹಾಸ್ಯಪಾತ್ರಗಳಲ್ಲಿ ಹೆಣೆಯುವ ಮಾದರಿ, ಅಧಿಕಾರ ಮದವನ್ನು ಚಿತ್ರಿಸುವ ವೈಖರಿ ಅಪ್ಪಟ ಕಸಬುದಾರನದು.

ತಮ್ಮ ಬಳಿ ಇರುವ ಐತಿಹ್ಯ, ಪವಾಡ, ದಂತಕಥೆಗಳು, ಅರ್ಧಂಬರ್ಧ ಚರಿತ್ರೆಯನ್ನು ಕವಿಗಳಿಗೆ ಒದಗಿಸಿದರೆ ಸಾಕು. ಅದರ ಮೇಲೆ ಅವರು ವೃತ್ತಿನಾಟಕದ ಸಿದ್ಧಶೈಲಿಯ ಸುಂದರ ಕಲಾಕೃತಿಯೊಂದನ್ನು ರಚಿಸಿ ನಿರ್ದೇಶಿಸುತ್ತಾರೆ. ಈ ಕಾಯಕದಲ್ಲಿ ಬಿಡುವೆಂಬುದೇ ಇಲ್ಲ. ಇದುವರೆಗೆ ಪ್ರಕಟಿತ 15, ಅಪ್ರಕಟಿತ 30ಕ್ಕೂ ಅಧಿಕ ನಾಟಕಗಳಲ್ಲಿ ಪವಾಡ ಪುರುಷರ ಕುರಿತ ನಾಟಕಗಳದೇ ಸಿಂಹಪಾಲು.

74 ವರ್ಷ ವಯಸ್ಸಿನ ಈ ಹರೆಯದಲ್ಲೂ ಅಲ್ದಾಳ ಮಾಸ್ತರರು ಗುಲ್ಬರ್ಗ ಜಿಲ್ಲೆ ಚಿತ್ತಾಪುರ ತಾಲ್ಲೂಕು ಮಳಗಿಯಲ್ಲಿ `ಶ್ರೀ ಗುರು ನಂಜೇಶ್ವರ ಲೀಲಾ` ನಾಟಕ ಬರೆದು ನಿರ್ದೇಶಿಸಲು ಅಲ್ಲೇ ಮೂರು ತಿಂಗಳು ಇತ್ತೀಚೆಗೆ ನೆಲೆ ನಿಂತಿದ್ದರು. ಕೃಷಿಯ ಮಹತ್ವವನ್ನು ಸಾದರ ಪಡಿಸುವುದು ನಾಟಕದ ಸಂದೇಶ. ಈ ಮಧ್ಯೆ ಗುಲ್ಬರ್ಗದಲ್ಲಿ ಕ್ಯಾಂಪ್‌ಮಾಡಿದ್ದ ಶೇಕ್ ಮಾಸ್ತರರ ನಾಟಕ ಕಂಪನಿಗೆ `ಯಾರ ತಾಳಿ ಯಾರಿಗೆ?` ಎಂಬ ಸ್ವರಚಿತ ನಾಟಕವನ್ನು ಕೂಡ್ರಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ದಿಂಡೂರಿನಲ್ಲಿ `ದಾನಲಿಂಗೇಶ್ವರ ಚರಿತ್ರೆ` ನಾಟಕ ರಚಿಸಿ ನಿರ್ದೇಶಿಸಿ ಬಂದಿದ್ದಾರೆ.

ಪವಾಡಗಳ ಕುರಿತ ಅವರ ನಾಟಕಗಳಲ್ಲಿ ಸತ್ತವರು ಎದ್ದು ಬರುವುದು! ಕಬ್ಬಿಣವನ್ನು ಬಿಸ್ಕಿಟ್‌ನಂತೆ ಅಗೆದು ತಿನ್ನುವುದು! ಸಂತರ ಕರುಣೆಯಿಂದ ಮಕ್ಕಳಾಗಿಬಿಡುವುದು! - ಇದೆಲ್ಲ ಅವೈಜ್ಞಾನಿಕ. ಎಲ್ಲಿಯಾದರೂ ಇದು ಸಾಧ್ಯವೇ ಎಂದು ತಳ್ಳಿಹಾಕಬಹುದು. ಆದರೆ ಪವಾಡಗಳು ಇಲ್ಲಿ ಸಾಂಕೇತಿಕ ಮಾತ್ರ. ಒಳ್ಳೆಯತನಕ್ಕೆ ಜಯ ದೊರಕಿಸಿಕೊಡಲು ನಮ್ಮ ಜನಪದ ಕಲಾಕಾರರು ಕಂಡುಕೊಂಡ ಮಾರ್ಗ ಇದು. ಸರಳತೆ, ಸಜ್ಜನಿಕೆಗೆ ಅಂತಿಮವಾಗಿ ಜಯ ಸಿಗುತ್ತದೆ ಎಂಬುದನ್ನು ಪವಾಡಗಳ ಮೂಲಕ ಸಾಂಕೇತಿಕವಾಗಿ ಕವಿ ಇಲ್ಲಿ ಹೇಳುತ್ತಾರೆ.

ಅಲ್ದಾಳ ಕವಿಗಳು ಭಾಮಿನಿ ಷಟ್ಪದಿಯಲ್ಲಿ ನಾಲ್ಕು ಪುರಾಣಗಳನ್ನು ರಚಿಸಿದ್ದಾರೆ. ತತ್ವಗೀತೆಗಳ ಸಂಕಲನ ಹೊರತಂದಿದ್ದಾರೆ. ನಾಮಾವಳಿಗಳನ್ನು ರಚಿಸಿದ್ದಾರೆ. ಪ್ರಕಟಿತ ಅಪ್ರಕಟಿತ ಸೇರಿ ನೂರಕ್ಕೂ ಅಧಿಕ ಗ್ರಂಥಗಳನ್ನು ಅವರು ರಚಿಸಿದ್ದಾರೆ. ಭಕ್ತಿಗೀತೆಗಳ ಧ್ವನಿ ಸುರಳಿಗೆ ಸಾಹಿತ್ಯ ಒದಗಿಸಿದ್ದಾರೆ.

ಅಲ್ದಾಳ ಅವರ ರಂಗಸೇವೆಯನ್ನು ಗೌರವಿಸಿ ರಾಜ್ಯೋತ್ಸವ, ನಾಟಕ ಅಕಾಡೆಮಿ ಸೇರಿದಂತೆ ಹತ್ತಾರು ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಲಾಗಿದೆ. ಇದೀಗ ಕನ್ನಡ ರಂಗಭೂಮಿಯ ಅತ್ಯುನ್ನತ ಪುರಸ್ಕಾರವಾದ ಗುಬ್ಬಿ ವೀರಣ್ಣ ಪ್ರಶಸ್ತಿ ಅವರ ಮಡಿಲಿಗೆ. ರಂಗ ಕಲಾವಿದರ ಕುರಿತ ಅಭಿನಂದನಾ ಗ್ರಂಥಗಳು ಹೊರಬಂದಿರುವುದು ಕೈಬೆರಳೆಣಿಕೆಯಷ್ಟು ಮಾತ್ರ. ಅವುಗಳ ಪೈಕಿ ಅಲ್ದಾಳ ಮಾಸ್ತರರ ಕುರಿತು ಹೊರತಂದಿರುವ `ರಂಗ ಸಂತ ಜಂಗಮ`ವೂ ಒಂದು.

1938ರಲ್ಲಿ ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕು ಬನ್ನಿಹಟ್ಟಿಯಲ್ಲಿ ಜನಿಸಿದ ಅಲ್ದಾಳ ಮಾಸ್ತರ ಯುವಕರಾಗಿದ್ದಾಗಲೇ ಬಂದು ನೆಲೆಸಿದ್ದು ಗುಲ್ಬರ್ಗ ಜಿಲ್ಲೆ ಜೇವರಗಿ ತಾಲ್ಲೂಕು ಮಳ್ಳಿಗೆ. ಪತ್ನಿ ಅಮೀನ್‌ಬಿ, ಪುತ್ರರಾದ ಮಹಮದ್ ರಫಿ ಹಾಗೂ ಮಹಮದ್ ಶಫಿ ಹಾಗೂ ಮೊಮ್ಮಕ್ಕಳೊಂದಿಗೆ ವಾಸ. ಅವರದು ಯಾವುದೇ ವ್ಯಸನಗಳಿಲ್ಲದ ಸರಳ ಜೀವನ.

ನಿಜಗುಣ ಶಿವಯೋಗಿ, ದಾಸರು, ತತ್ವಪದಕಾರರು, ವಚನಗಳು, ಡಿವಿಜಿ ಕಗ್ಗ, ಕನ್ನಡದ ಕುರಾನ್ ಮುಂತಾದವು ಅವರ ಸಂಗಾತಿಗಳು. ಯುವ ಲೇಖಕರು ಕೊಟ್ಟ ಪುಸ್ತಕಗಳನ್ನು ಆದ್ಯಂತವಾಗಿ ಓದಿ ಪ್ರತಿಕ್ರಿಯಿಸುವುದು ಅವರ ಸಜ್ಜನಿಕೆಯ ದ್ಯೋತಕ. ಸಂತರ ಕುರಿತ ಯಶಸ್ವಿ ನಾಟಕಗಳನ್ನು ಕೊಟ್ಟ ಈ ಕವಿಯನ್ನು ಈ ಭಾಗದ ಜನ ಅತ್ಯಂತ ಗೌರವದಿಂದ ಕಾಣುತ್ತಾರೆ. ಇಲ್ಲಿಯ ಜನಕ್ಕೆ ಅಲ್ದಾಳ ಕವಿಯೂ ಒಬ್ಬ ಅವಧೂತನಂತೆ!

ಈ ಮಹನೀಯರಿಗೆ ಗುಬ್ಬೀ ವೀರಣ್ಣ ಪ್ರಶಸ್ತಿ ಬಂದಿರುವ ಸಂದರ್ಭದಲ್ಲಿ ನಮ್ಮ ಗೌರವಪೂರ್ವಕ ಅಭಿನಂದನೆಗಳು.

ಕೃಪೆ: ಪ್ರಜಾವಾಣಿ

Tag: Aldaala Mastararu

ಕಾಮೆಂಟ್‌ಗಳಿಲ್ಲ: