ಮಂಗಳವಾರ, ಸೆಪ್ಟೆಂಬರ್ 3, 2013

ಶ್ರಾವಣ ಬಂತು


ಶ್ರಾವಣ ಬಂತು ಕಾಡಿಗೆ  | ಬಂತು ನಾಡಿಗೆ  |
ಬಂತು ಬೀಡಿಗೆ  | ಶ್ರಾವಣ ಬಂತು      || ಪಲ್ಲವಿ ||
ಕಡಲಿಗೆ ಬಂತು ಶ್ರಾವಣ  | ಕುಣಿದ್ಹಾಂಗ ರಾವಣಾ
ಕುಣಿದಾಗ ಗಾಳಿ  | ಭೈರವನ ರೂಪತಾಳಿ         || ಅನುಪಲ್ಲವಿ ||


ಶ್ರಾವಣ ಬಂತು ಘಟ್ಟಕ್ಕ  | ರಾಜ್ಯಪಟ್ಟಕ್ಕ  |
ಬಾನಮಟ್ಟಕ್ಕ  |
ಏರ‍್ಯಾವ ಮುಗಿಲು  | ರವಿ ಕಾಣೆ ಹಾಡೆಹಗಲು ||


ಶ್ರಾವಣಾ ಬಂತು ಹೊಳಿಗಳಿಗೆ  | ಅದೇ ಶುಭಗಳಿಗೆ |
ಹೊಳಿಗೆ ಮತ್ತು ಮಳಿಗೆ |
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ ||


ಶ್ರಾವಣಾ ಬಂತು ಊರಿಗೆ | ಕೇರಿಕೇರಿಗೆ |
ಹೊಡೆದ ಝೂರಿಗೆ |
ಜೋಕಾಲಿ ಏರಿ | ಅಡರ‍್ಯಾವ ಮರಕ ಹಾರಿ ||


ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ |
ಮನದ ನನಿಕೊನಿಗೆ |
ಒಡೆದಾವ ಹಾಡೂ | ರಸ ಉಕ್ಕತಾವ ನೋಡು |
ಶ್ರಾವಣಾ ಬಂತು ||


ಬೆಟ್ಟ ತೊಟ್ಟಾವ ಕುತನಿಯ ಅಂಗಿ |
ಹಸಿರು ನೋಡ ತಂಗಿ |
ಹೊರಟಾವೆಲ್ಲೊ ಜಂಗಿ |
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||


ಬನ ಬನ ನೋಡು ಈಗ ಹ್ಯಾಂಗ |
ಮದುವಿ ಮಗನ್ಹಾಂಗ |
ತಲಿಗೆ ಬಾಸಿಂಗ |
ಕಟ್ಟಿಕೊಂಡೂ | ನಿಂತಾವ ಹರ್ಷಗೊಂಡು ||


ಹಸಿರುಟ್ಟ ಬಸುರಿಯ ಹಾಂಗ |
ನೆಲಾ ಹೊಲಾ ಹಾಂಗ |
ಅರಿಸಿಣ ಒಡೆಧಾಂಗ |
ಹೊಮ್ಮತಾವ | ಬಂಗಾರ ಚಿಮ್ಮತಾವ ||ಗುಡ್ಡ ಗುಡ್ಡ ಸ್ಥಾವರಲಿಂಗ |
ಅವಕ ಅಭ್ಯಂಗ |
ಎರಿತಾವನ್ನೋ ಹಾಂಗ |
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ ||


ನಾಡೆಲ್ಲ ಏರಿಯ ವಾರಿ |
ಹರಿತಾವ ಝರಿ |
ಹಾಲಿನ ತೊರಿ |
ಈಗ ಯಾಕs | ನೆಲಕೆಲ್ಲ ಕುಡಿಸಲಾಕ |
ಶ್ರಾವಣಾ ಬಂತು ||

೧೦
ಜಗದ್ಗುರು ಹುಟ್ಟಿದ ಮಾಸ |
ಕಟ್ಟಿ ನೂರು ವೇಷ |
ಕೊಟ್ಟ ಸಂತೋಷ |
ಕುಣಿತದ | ತಾನನ ದಣಿತದ ||

ಶ್ರಾವಣಾ ಬಂತು ಕಾಡಿಗೆ  | ಬಂತು ನಾಡಿಗೆ |
ಬಂತು ಬೀಡಿಗೆ | ಶ್ರಾವಣಾ ಬಂತು ||


ಸಾಹಿತ್ಯ: ಅಂಬಿಕಾತನಯದತ್ತ
ಸಂಗೀತ ಮತ್ತು  ಗಾಯನ: ಸಿ. ಅಶ್ವಥ್

https://www.youtube.com/watch?v=wq69HjPxUE0


ಚಿತ್ರ ವಿವರ: ಮರ್ಲೆಶ್ವರ್ ಜಲಪಾತ. ಕೃಪೆ: ವಿಕಿಪೀಡಿಯಾ


Tag: Shraavana Bantu,  Shraavana Bantu Kaadige Bantu  Naadige Bantu Beedige

ಕಾಮೆಂಟ್‌ಗಳಿಲ್ಲ: