ಭಾನುವಾರ, ಸೆಪ್ಟೆಂಬರ್ 1, 2013

ಸಂಸ

ಸಂಸ

ಕನ್ನಡ ಸಾಹಿತ್ಯ ಲೋಕದಲ್ಲಿ ಆವಿರ್ಭವಿಸಿದ್ದ  ನಾಟಕಕಾರ ಸಂಸ’’ ಅವರು ಹುಟ್ಟಿದ ದಿನ ಜನವರಿ 13, 1898.  ಮೈಸೂರು ಸಂಸ್ಥಾನದ ಯಳಂದೂರು ಅವರ ಹುಟ್ಟೂರು. ಅದೆಲ್ಲಾ ಸರಿ, ಈ  ಸಂಸಅಂದರೆ ಅರ್ಥವೇನು?

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಬಯಲು ರಂಗಮಂದಿರದ ಹೆಸರು ಸಂಸ ಬಯಲು ರಂಗಮಂದಿರ’.  ಸಂಸಅಂದರೆ ಯಾರು ಎಂಬುದು ಒಂದು ಕುತೂಹಲ.  ಈ ಕುತೂಹಲದ ಹಿಂದೆ ಹೋದಷ್ಟೂ ಅದು ಒಂದು ಪರಿಧಿಯ ನಂತರದಲ್ಲಿ ಕೇವಲ ಕುತೂಹಲದ ಕಥೆಯ ಕೊನೆಯಲ್ಲಿ ಏನೋ ಅರ್ಥವಾಗದ ಹಾದಿಯಲ್ಲಿ ನಿಂತ ಹಾಗಿರುತ್ತದೆ.

ಸಂಸಕನ್ನಡ ನಾಟಕಲೋಕದಲ್ಲಿ ವಿಶಿಷ್ಟ ನಾಟಕಕಾರರೆನಿಸಿರುವ ಎ. ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್ ಅವರ ಕಾವ್ಯನಾಮ.  ಈ ಹೆಸರು ಬಂದಿದ್ದೂ ವಿಚಿತ್ರವಾಗಿ, ವಿಚಿತ್ರ ಘಟನೆಗಳ ಹಿನ್ನಲೆಯಲ್ಲಿ.  ಶ್ರೀಯುತರಿಗೆ ನಾಟಕಗಳಲ್ಲಿ ತಮ್ಮ ಹೆಸರು ಕಂಸಎಂಬ ಹೆಸರನ್ನು ನಮೂದಿಸಬೇಕೆಂಬ ಇಚ್ಛೆ ಇತ್ತು.  ಆದರೆ ಮುದ್ರಣವಾದಾಗ ಅದು ಸಂಸಎಂದಾಗಿತ್ತು.  ಸ್ವಾಮಿ ವೆಂಕಟಾದ್ರಿ ಅಯ್ಯರ್ ತಮ್ಮ ಹೆಸರನ್ನು ರಾಕ್ಷಸಗುಣದ ಕಂಸಎಂದು ಏಕಿಡಲು ಪ್ರಯತ್ನಿಸಿದರೋ!

ಬಾಲ್ಯದಿಂದಲೂ ಕುಟುಂಬ ಪ್ರೀತಿಯಲ್ಲಿ  ಅತೃಪ್ತರಾದ ಸಂಸರ ಬದುಕು ಹಲವು ಮಾನಸಿಕ ತೊಳಲಾಟಗಳ - ಗೊಂದಲಗಳ ಬೀಡಾಗಿರುವುದನ್ನು, ಹಲವು ಘಟನೆಗಳು, ಒಂದಷ್ಟು ಸತ್ಯ ಮತ್ತು ಹಲವಷ್ಟು ಕಟ್ಟು ಕತೆಗಳನ್ನು ಬೆರೆಸಿ ಲೋಕದಲ್ಲಿ ಹರಡಿವೆ.  ಯಾವುದು ಸತ್ಯ ಯಾವುದು ಅಸತ್ಯ ಎಂದು ತಿಳಿಯದ್ದರ ಮಟ್ಟಿಗೆ ಈ ಕಲಸು ಮೇಲೋಗರ ನಡೆದಿದೆ.  ಇಷ್ಟಂತೂ ನಿಜ.  ಅವರು ಒಂದಷ್ಟು ಮೌಲಿಕ ಬರಹ ಮಾಡಿದ್ದರು.  ಅವರು ಸತ್ತಿದ್ದು ಆತ್ಮಹತ್ಯೆಯಿಂದ.  ಹಲವು ಬಾರಿ ಪ್ರಯತ್ನಿಸಿ ಕೊನೆಗೆ 1939ರ ವರ್ಷದಲ್ಲಿ ಆತ್ಯಹತ್ಯೆಯಲ್ಲಿ ಯಶಸ್ಸು(?) ಪಡೆದರು

ಹತ್ತನೆಯ ತರಗತಿಯಲ್ಲಿ ವೆಂಕಟಾದ್ರಿ ಅಯ್ಯರ್ ಫೇಲು.  ಈ ಕೀಳರಿಮೆಯನ್ನು ತೊಡೆದುಕೊಳ್ಳುವುದಕ್ಕೋ ಎಂಬಂತೆ ಹಟತೊಟ್ಟು ಕನ್ನಡದಲ್ಲಿ ಪ್ರಚಂಡ ಪಾಂಡಿತ್ಯ ಗಳಿಸಿಕೊಂಡರು.  ಹಾಗೆಯೇ ತಮಿಳು ಮತ್ತು ಇಂಗ್ಲೀಷನ್ನೂ ಚೆನ್ನಾಗಿಯೇ ಕಲಿತರು.  ಮುಂದೆ ಕೆಲವು ಪ್ರಯತ್ನಗಳಾದರೂ ವಿದ್ಯಾಭ್ಯಾಸ ಅಲ್ಲಿಗೆ ನಿಂತುಹೋದ ಹಾಗಿದೆ. 

ಸಂಸರು ಹೈಸ್ಕೂಲಿನಲ್ಲಿರುವಾಗಲೇ ಕೌಶಲಎಂಬ ಬಂಗಾಳಿ ಶೈಲಿಯ ನಾಟಕ ಬರೆದು ಪ್ರಕಟಿಸಿದ್ದರು.  ಆನಂತರ ಅವರು ಶ್ರೀಮಂತೊದ್ಯಾನ ವರ್ಣನಂಎಂಬ ಚಂಪೂ ಕಾವ್ಯವನ್ನು ರಚಿಸಿದ್ದರು.  ಮನೆಯಲ್ಲಿ ಚಿಕ್ಕಪ್ಪ, ಅಣ್ಣಂದಿರೊಡನೆ ಇದ್ದ ಭಿನ್ನಾಭಿಪ್ರಾಯದಿಂದ ಮನೆಯಿಂದ ಹೊರಬಿದ್ದು ಹಲವೆಡೆಗಳಲ್ಲಿ ನೌಕರಿ ಮಾಡಿದರೂ ಒಂದು ಕಡೆ ನಿಲ್ಲುವ ವ್ಯವಧಾನ ಇಲ್ಲದೆ ತಿರುಗಾಟಕ್ಕೆ ತೊಡಗಿದರು.   1916ರಿಂದ 1936ರವರೆಗೆ ಇಪ್ಪತ್ತು ವರ್ಷ ಅಲ್ಲಲ್ಲಿ ಅಲೆದಿದ್ದಾರೆ.  ತಮ್ಮ ಜೀವಿತದ ಕೊನೆಯ ಮೂರು ವರ್ಷಗಳು ಅಂದರೆ 1936ರಿಂದ 1939ರವರೆಗೆ ಮಾತ್ರ ಮೈಸೂರಿನಲ್ಲಿ ನೆಲೆ ಊರಿದ್ದಾರೆ.

1919ನೆಯ ಇಸವಿ ಸಂಸರ ಬದುಕಿನಲ್ಲಿ ಮಹತ್ವದ ವರ್ಷ.  ಈ ವರ್ಷ ಬೆಂಗಳೂರಿನ ಎಡಿಎ ಸಂಸ್ಥೆ ಏರ್ಪಡಿಸಿದ್ದ ಶ್ರೀಕಂಠೀರವ ನರಸರಾಜ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಸಂಸರ ಸುಗುಣ ಗಂಭೀರನಾಟಕ ಎರಡನೆಯ ಬಹುಮಾನ ಪಡೆಯಿತು.  ಪ್ರಥಮ ಬಹುಮಾನ ಪಡೆದದ್ದು ಕೈಲಾಸಂ ಅವರ ಟೊಳ್ಳುಗಟ್ಟಿನಾಟಕ.  ಸ್ಪರ್ಧೆಯ ತೀರ್ಪುಗಾರರಾಗಿದ್ದವರು ಶೀ ಬಿ.ಎಂ. ಶ್ರೀಕಂಠಯ್ಯನವರು, ಬೆನಗಲ್ ರಾಮರಾಯರು ಮತ್ತು ನಂಗಪುರಂ ವೆಂಕಟೇಶ ಅಯ್ಯಂಗಾರ್ ಆವರು.  ಇದರಿಂದಾಗಿ ಈ ಸ್ಪರ್ಧೆಗೆ ಮಹತ್ವ ಬಂದಿತ್ತು.  ಮತ್ತು ಅದರಲ್ಲಿ ಬಹುಮಾನ ಗಳಿಸಿದ ಕೃತಿಗಳಿಗೂ ಮಹತ್ವ ಬಂದಿತ್ತು. 

ಸುಗುಣ ಗಂಭೀರಸಂಸರು ರಚಿಸಿದ ಮೊದಲ ನಾಟಕ.  ಈ ನಾಟಕಕ್ಕೆ ಬಹುಮಾನ ಬಂದಾಗ ಸಂಸರು ಇನ್ನೂ ಇಪ್ಪತ್ತೊಂದು ವರ್ಷದ ಯುವಕ.  ನಂತರ ಬದುಕಿನ ಇಪ್ಪತ್ತು ವರ್ಷಗಳನ್ನು ಅವರು ಬಹುಮಟ್ಟಿಗೆ ನಾಟಕ ರಚನೆಗೇ ಮೀಸಲಾಗಿರಿಸಿದರು.

ದೇಶಾಟನೆಗೈಯುತ್ತಾ, ತಾತ್ಕಾಲಿಕ ಉದ್ಯೋಗಗಳಲ್ಲಿ ತೊಡಗುತ್ತಾ 1923ರಲ್ಲಿ ಮೈಸೂರಿಗೆ ಹಿಂದಿರುಗಿದ ಸಂಸರು ವಿಗಡ ವಿಕ್ರಮರಾಯ’  ನಾಟಕವನ್ನು ಬರೆದರು.  ಆದರೆ 2 ವರ್ಷಗಳ ಕಾಲ ಆ ಕೃತಿಯನ್ನು ಯಾರಿಗೂ ನೀಡದೆ ತಮ್ಮ ಬಳಿಯೇ ಭದ್ರವಾಗಿರಿಸಿಕೊಂಡಿದ್ದರು.  1925ರಲ್ಲಿ ಪ್ರಬುದ್ಧ ಕರ್ಣಾಟಕಪತ್ರಿಕೆಯಲ್ಲಿ ಪ್ರಕಟಣೆಗೆ ನೀಡಿದರು.

ಸಂಸರು ಮಾನಸಿಕವಾಗಿ, ಈ ಅವಧಿಯಲ್ಲಿ ಬದಲಾಗುತ್ತಿದ್ದರೆಂಬುದಕ್ಕೆ ಈ ಕೆಳಗಿನ ಪ್ರಸಂಗ ಉದಾಹರಣೆಯಾಗಿದೆ.  1925ರ ವರೆಗೆ ಸಾಮಾನ್ಯವಾಗಿ ತಮ್ಮ ಕೃತಿಗಳಲ್ಲಿ ತಮ್ಮ ಹುಟ್ಟು ಹೆಸರನ್ನೇ ಅಷ್ಟಿಷ್ಟು ಬದಲಿಸಿ (ಉದಾ: ಎ. ಎನ್. ಸ್ವಾಮಿ, ಸ್ವಾಮಿ, ವೆಂಕಟಾದ್ರಿ ಪಂಡಿತ್, ಎ.ವಿ. ಪಂಡಿತ್, ಸ್ವಾಮಿ ವೆಂಕಟಾದ್ರಿ ಇತ್ಯಾದಿ ಹದಿಮೂರು ಹೆಸರುಗಳನ್ನು) ಬಳಸುತ್ತಿದ್ದರು.  ಈ ಬಾರಿ ವಿಗಡ ವಿಕ್ರಮರಾಯನಾಟಕವನ್ನು ಕಂಸಎಂಬ ರಾಕ್ಷಸನ ಕಾವ್ಯನಾಮದೊಂದಿಗೆ ಪ್ರಕಟಣೆಗೆ ನೀಡಿದರು.  ಆದರೆ ಅಲ್ಲೂ ಮತ್ತೊಬ್ಬ ರಾಕ್ಷಸ (ಮುದ್ರಾರಾಕ್ಷಸ)ನಿಂದಾಗಿ ಅದು ಸಂಸಎಂದಾಯಿತು.   ಮತ್ತು ಮುಂದೆ ಸಂಸಎಂಬ ಹದಿನಾಲ್ಕನೆಯ ಕಾವ್ಯನಾಮವೇ ಶಾಶ್ವತವಾಗಿ ಉಳಿಯಿತು.  ವಿಗಡ ವಿಕ್ರಮರಾಯನಾಟಕ ಪ್ರಬುದ್ಧ ಕರ್ಣಾಟಕದಲ್ಲಿ ಮೂರು ಕಂತುಗಳಲ್ಲಿ ಪ್ರಕಟವಾಗಿ ಅದರ ವಿಚಿತ್ರ ಕಾವ್ಯನಾಮದಿಂದ ಮತ್ತು ನಾಟಕದ ಸತ್ವದಿಂದಾಗಿ ಸಾಹಿತ್ಯಾಸಕ್ತರ ಗಮನ ಸೆಳೆಯಿತು.

ಸಂಸರು 1919ರಿಂದ 1939ರ ವರೆಗಿನ ಅವಧಿಯಲ್ಲಿ ಮೈಸೂರು ಅರಸರ ಚರಿತ್ರೆಯನ್ನಾಧರಿಸಿ ಒಟ್ಟು 23 ನಾಟಕಗಳನ್ನು ರಚಿಸಿದರಂತೆಅದರಲ್ಲಿ ಈಗ ಲಭ್ಯವಿರುವುದು ಕೇವಲ ಆರು ನಾಟಕಗಳು ಮಾತ್ರ.  ೧. ಸುಗುಣ ಗಂಭೀರ ೨. ವಿಗಡ ವಿಕ್ರಮರಾಯ ೩. ವಿಜಯನಾರಸಿಂಹ ೪. ಬಿರುದಂತೆಂಬರ ಗಂಡ ೫. ಬೆಟ್ಟದ ಅರಸು ಮತ್ತು ೬. ಮಂತ್ರಶಕ್ತಿ.  ಒಮ್ಮೆ ಧಾರವಾಡದಲ್ಲಿ ಯಾರೊಂದಿಗೋ ಜಗಳವಾಡಿಕೊಂಡು ಯಾರ ಮೇಲಿನ ಆಕ್ರೋಶಕ್ಕೋ ಕೆಲವು ನಾಟಕಗಳನ್ನು ಸುಟ್ಟುಬಿಟ್ಟರಂತೆ  ಇನ್ನೊಮ್ಮೆ ಮತಾಂತರ ಹೊಂದಬೇಕೆಂದು ನಿರ್ಧರಿಸಿ ಪಾದ್ರಿಯೊಬ್ಬನಿಗೆ ನ್ಯಾಸವಾಗಿ ನೀಡಿದ  ಹಸ್ತಪ್ರತಿಗಳ ಪೆಟ್ಟಿಗೆ ಅಲ್ಲೇ ಉಳಿದು ಹೋಯಿತಂತೆ.  ಅಂತೆ-ಕಂತೆ.  ಒಟ್ಟಿನಲ್ಲಿ ಈಗ ಉಳಿದ 17 ನಾಟಕಗಳು ಲಭ್ಯವಿಲ್ಲ. 

ಸಂಸರ ಇತರ ನಿಗೂಢತೆಯಂತೆಯೇ ಅವರ ಪ್ರವಾಸ ಚಟುವಟಿಕೆಗಳೂ ಸಹಾ ನಿಗೂಢವಾಗಿವೆ.  ಫಿಜಿ ದ್ವೀಪಗಳು, ಟಿಬೆಟ್, ಆಫ್ಘಾನಿಸ್ತಾನ, ಬೆಲೂಚಿಸ್ತಾನ, ಬರ್ಮಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳನ್ನವರು ಸುತ್ತಿ ಬಂದಿದ್ದರು.

ಸಂಸರ ಎಲ್ಲಾ ನಾಟಕಗಳೂ ಮೈಸೂರು ಅರಮನೆಯ ಇತಿಹಾಸವನ್ನು ಆಧರಿಸಿದವು.  ಸಂಸರು ತಮ್ಮ ಐತಿಹಾಸಿಕ ನಾಟಕಗಳಲ್ಲೂ ಸಮಕಾಲೀನ ಪ್ರಜ್ಞೆಯನ್ನು ಉಳಿಸಿಕೊಂಡಿದ್ದಾರೆ.  ಅಧಿಕಾರಕ್ಕಾಗಿ ನಡೆಯುವ ಪೈಪೋಟಿ, ಕುತಂತ್ರಗಳು, ಒಳಜಗಳಗಳು, ಗಂಡು ಹೆಣ್ಣಿನ ಸಂಬಂಧಗಳು, ಎದುರಾಳಿಯನ್ನು ಮುಗಿಸಲು ಹೆಣ್ಣನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಮುಂತಾದವುಗಳನ್ನು ಇಂದಿನ ರಾಜಕೀಯದಲ್ಲೂ ಕಾಣಬಹುದು.  ಅವರ ನಾಟಕಗಳ ಪಾತ್ರಗಳಾದ ರಣಧೀರನಂತಹ ಉದಾತ್ತರು, ವಿಕ್ರಮರಾಯ, ಕರುವಿಯನ್ ಅಂತಹ ದುಷ್ಟರು ಎಲ್ಲ ಕಾಲಕ್ಕೂ ಸಲ್ಲುತ್ತಾರೆ.

ಸಂಸರ ನಾಟಕಗಳಿಗೆ ಏಕ ಎಳೆಯ ಕಥಾ ವಿನ್ಯಾಸವಿಲ್ಲ.  ದೃಶ್ಯಗಳು ಜೋಡಿಸಿ ಇಟ್ಟಂತೆ ಕಾಣುತ್ತವೆ.  ಒಂದು ರೀತಿ ತಮಗರಿವಿಲ್ಲದೆ ಸಂಸರು ಬ್ರೆಕ್ಟನ ಎಪಿಕ್ ತಂತ್ರ ಕಲ್ಪನೆಯನ್ನು ಅಳವಡಿಸಿಕೊಂಡುಬಿಟ್ಟಿದ್ದಾರೆ.  ಐತಿಹಾಸಿಕ ನಾಟಕ ರಚನೆಗೆ ಹೊಸ ಸಂಪ್ರದಾಯ ಹಾಕಿಕೊಟ್ಟ ಸಂಸರಂತಹ ನಾಟಕಕಾರರನ್ನು ಯಾವುದೇ ಗುಂಪಿನೊಂದಿಗೆ ವರ್ಗೀಕರಿಸಲಾಗುವುದಿಲ್ಲ.  ಅವರದ್ದು ತಮ್ಮದೇ ಆದ ಭಿನ್ನಮಾರ್ಗ.

ಇಂಗ್ಲಿಷಿನಲ್ಲಿ ಶೆರ್ಲಾಕ್ ಹೋಮ್ಸ್ ಇನ್ ಜೈಲ್ಎಂಬ ಕಾದಂಬರಿಯನ್ನು ಸಂಸರು ಬರೆದಿದ್ದಾರೆ.  ಶ್ರೀಮಂತೊಧ್ಯಾನಂ’, ‘ಸಂಸ ಪದಂ’, ‘ಈಶಪ್ರಕೋಪನ’, ‘ನರಕ ದುರ್ಯೋಧನೀಯಂ,  ‘ಅಚ್ಚುಂಬ ಶತಕ’  ಅವರ ಕಾವ್ಯದ ಸಾಲಿನಲ್ಲಿ ಸೇರುತ್ತವೆ.

ಸಂಸರ ನಾಟಕೀಯ ವಿಧಾನವೂ ಗಂಭೀರವಾದುದು.  ಅಲ್ಲಿ ಹಾಸ್ಯಕ್ಕೆ ಎಡೆಯಿಲ್ಲ.  ಪಾತ್ರ ರಚನೆ ಮತ್ತು ಸಂಭಾಷಣಾ ಚಾತುರ್ಯಕ್ಕೆ ಅವರ ನಾಟಕಗಳಲ್ಲಿ ಹೆಚ್ಚಿನ ಮಹತ್ವ.  ಅವರ ನಾಟಕಗಳ ವಸ್ತು ವಿಸ್ತಾರ.   ಪೂರ್ಣಪ್ರಮಾಣದ ಪಾತ್ರ ರಚನೆ ಸಂಸರಿಗೆ ವಿಶಿಷ್ಟವಾದದ್ದು.  ಸಂಸರ ಪರಂಪರೆ ಬೆಳೆಯಲಿಲ್ಲ.  ಅವರು ಯಾರನ್ನೂ ಅನುಕರಿಸಲಿಲ್ಲ.  ತಮ್ಮದೇ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡರು.  ಕನ್ನಡಕ್ಕೊಬ್ಬನೇಕೈಲಾಸಂ’  ಎನ್ನುವುದನ್ನು ಒಪ್ಪುವುದಾದರೆ, ಕನ್ನಡಕೊಬ್ಬನೇ ಸಂಸಎನ್ನುವುದನ್ನೂ ಒಪ್ಪಬೇಕಾಗುತ್ತದೆ. 


(ಆಧಾರ: ಪ್ರಕಾಶ್ ಕಂಬತ್ತಳ್ಳಿ ಅವರ ಸಂಸರ ಕುರಿತ ಬರಹ)

Tag: Samsa

ಕಾಮೆಂಟ್‌ಗಳಿಲ್ಲ: