ಸೋಮವಾರ, ಸೆಪ್ಟೆಂಬರ್ 2, 2013

ಖುಷ್ಬೂ

ಖುಷ್ಬೂ

ಹಿಂದೀ ಚಿತ್ರಗಳಲ್ಲಿ ಸಹಾಯಕ  ಪಾತ್ರಗಳಲ್ಲಿ ನಟಿಸುತ್ತಿದ್ದ ನಖತ್ ಖಾನ್ ಎಂಬಾಕೆ ಖುಷ್ಬೂ ಎಂಬ ಹೆಸರಿನಿಂದ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ಇನ್ನಿಲ್ಲದ ಪ್ರಖ್ಯಾತಿ ಪಡೆದು ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ವಿಜ್ರಂಭಿಸಿದ್ದಾರೆ.  ಖುಷ್ಬೂ ಅವರು ಜನಿಸಿದ ದಿನ ಸೆಪ್ಟೆಂಬರ್ 29, 1970. 

ಕನ್ನಡದ ಕನಸುಗಾರ ರವಿಚಂದ್ರನ್ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ ರಣಧೀರ, ಅಂಜದ ಗಂಡು ಖುಷ್ಬೂ ಅವರಿಗೆ ಚಿತ್ರರಂಗದಲ್ಲಿ ಬೃಹತ್ ಏರು ಮುಖ ಒದಗಿಸಿಕೊಟ್ಟ ಪ್ರಾರಂಭಿಕ ಚಿತ್ರಗಳಲ್ಲಿ ಪ್ರಮುಖವಾದವು.  ಮುಂದೆ ತಮಿಳು ಚಿತ್ರರಂಗದಲ್ಲಿ ಅಪಾರ ಯಶಸ್ಸು ಪಡೆದರೂ ಕನ್ನಡದಲ್ಲಿ ಅನಂತನಾಗ್ ಅವರ ಜೊತೆ ಗಗನ, ಆಂಟಿ ಪ್ರೀತ್ಸೆ ವಿಷ್ಣುವರ್ಧನ್ ಜೊತೆ ಹೃದಯಗೀತೆ, ಜೀವನದಿ; ರವಿಚಂದ್ರನ್ ಜೊತೆ ಮೇಲಿನ ಚಿತ್ರಗಳಲ್ಲದೆ ಶಾಂತಿ ಕ್ರಾಂತಿ; ಅಂಬರೀಷ್ ಜೊತೆ ಒಂಟಿ ಸಲಗ; ಎಸ್ ಪಿ ಬಾಲ ಸುಬ್ರಮಣ್ಯಮ್ ಜೊತೆ ಮಹಾ ಎಡಬಿಡಂಗಿ; ಮಾಲಾಶ್ರೀ ಜೊತೆ ಚಾಮುಂಡಿ ಹೀಗೆ ಅನೇಕ ಕನ್ನಡ ಚಿತ್ರಗಳಲ್ಲಿ ಖುಷ್ಬೂ ನಟಿಸಿದ್ದಾರೆ. 

ಸೌಂದರ್ಯಾಭಿವ್ಯಕ್ತಿಯ ಜೊತೆಗೆ ಪ್ರತಿಭೆಯೂ ಮೇಳೈಸಿರುವ ಖುಷ್ಬೂ ತಾವು ನಟಿಸಿರುವ ಎಲ್ಲ ಭಾಷಾ ಚಿತ್ರರಂಗದಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ.  ದೂರದರ್ಶನ ಮಾಧ್ಯಮದಲ್ಲೂ ಅವರು ಸಾಕಷ್ಟು ಪ್ರಖ್ಯಾತ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಜೀವನದಲ್ಲಿ ಹಲವು ರೀತಿಯ ಏರಿಳಿತಗಳಲ್ಲಿ ಬದುಕು ಸವೆಸಿದ ಖುಷ್ಬೂ  ಅಪಾರ ಜನಪ್ರಿಯತೆಯ ಜೊತೆಗೆ, ಭಾರತೀಯ ಮಡಿವಂತಿಕೆಯ ಮನೋಭಾವಗಳಿಗೆ  ಒಗ್ಗದ ಕೆಲವೊಂದು ಹೇಳಿಕೆಗಳಿಂದ ಹಲವಾರು ವಿವಾದಗಳಿಗೆ ಸಿಲುಕಿದ್ದೂ ಉಂಟು.  ಇವೆಲ್ಲವುಗಳ ನಡುವೆ ಇಂದೂ ಚಿತ್ರರಂಗ ಮತ್ತು ದೂರದರ್ಶನ ಕ್ಷೇತ್ರಗಳಲ್ಲಿ ತಮ್ಮ ವಯಸ್ಸು, ಗಾತ್ರಕ್ಕೆ ತಕ್ಕಂತೆ ವಿವಿದ  ಪಾತ್ರಗಳಲ್ಲಿ ಅವರ ಅಪಾರ ಜನಪ್ರಿಯತೆ ಮತ್ತು ಯಶಸ್ಸು ಇಂದೂ ಮುಂದುವರೆದಿದೆ.Tag: Khushboo

ಕಾಮೆಂಟ್‌ಗಳಿಲ್ಲ: