ಸೋಮವಾರ, ಸೆಪ್ಟೆಂಬರ್ 2, 2013

ತೀ.ನಂ.ಶ್ರೀ

ತೀ.ನಂ.ಶ್ರೀ

ಆಂಗ್ಲ ಭಾಷೆಯ ಮೋಹಕ ಸುಳಿಗಾಳಿಯ ಸೆಳೆತಕ್ಕೆ ಸಿಲುಕಿ ತತ್ತರಿಸುತ್ತಿದ್ದ ಕನ್ನಡಾಭಿಮಾನದ ದುರ್ಬಲ ಧ್ವನಿಗೆ ಅಪೂರ್ವವಾದ ಹೊಸ ಕಸುವನ್ನು ಒದಗಿಸಿ, ಕನ್ನಡಿಗರ ಕನ್ನಡತನಕ್ಕೆ ಒಂದು ವೇಗವನ್ನು, ಓಘವನ್ನು  ನೀಡಿದ ಕನ್ನಡದ ದಿಗ್ಗಜರಲ್ಲಿ ಮೂವರು ಶ್ರೀಗಳು ಪ್ರಸಿದ್ಧರು.  ತಮ್ಮ ಸತ್ವದಿಂದ, ಸಾಮರ್ಥ್ಯದಿಂದ, ಪ್ರತಿಭೆಯಿಂದ, ವಿದ್ವತ್ತಿನಿಂದ ಕನ್ನಡ ನಾಡು-ನುಡಿಗಳನ್ನು ಶ್ರೀಮಂತಗೊಳಿಸಿದ ಈ ಮೂವರು ಶ್ರೀಗಳಲ್ಲಿ ತೀ.ನಂ.ಶ್ರೀ ಅವರೂ ಒಬ್ಬರು.  ಕನ್ನಡದ ಕಣ್ವ, ಕಣ್ಮಣಿಗಳೆಂದು ಹೆಸರಾದ ಬಿ.ಎಂ.ಶ್ರೀ ಮತ್ತು ಎಂ.ಆರ್.ಶ್ರೀ ಅವರಂತೆಯೇ ತೀ.ನಂ.ಶ್ರೀ ಅವರೂ ಕನ್ನಡ ಕಳಶವನ್ನು ಬೆಳಗಿದ ಕೀರ್ತಿ ಪಡೆದವರು.  ವಿವಿಧ ನಿಟ್ಟಿನಲ್ಲಿ ಕನ್ನಡಮ್ಮನ ಸಾರಥ್ಯವನ್ನು ಸಮರ್ಥವಾಗಿ ನಿರ್ವಹಿಸಿದವರು. ಶ್ರೀಮಂತವಾದ ತಮ್ಮ ಬದುಕು-ಬರಹ, ಸಿದ್ಧಿ-ಸಾಧನೆಗಳಿಂದ ಇತರರ ಬದುಕು-ಬರಹಗಳಿಗೂ, ಸುತ್ತಮುತ್ತಲ ಪರಿಸರಕ್ಕೂ ಶ್ರೀಮಂತಿಕೆಯನ್ನು ನೀಡಿದವರು.

ಇವರ ಪೂರ್ಣ ಹೆಸರು ತೀರ್ಥಪುರದ ನಂಜುಂಡಯ್ಯ ಶ್ರೀಕಂಠಯ್ಯ.  ತೀರ್ಥಎಂಬ ಪವಿತ್ರವಾದ ಹೆಸರುಳ್ಳ ತುಮಕೂರು ಜಿಲ್ಲೆಯ ತೀರ್ಥಪುರದಲ್ಲಿ ತೀ.ನಂ.ಶ್ರೀಯವರು 26ನೆಯ ನವೆಂಬರ್ 1906ರಲ್ಲಿ ಜನಿಸಿದರು.  ತಂದೆ ನಂಜುಂಡಯ್ಯ ತೀರ್ಥಪುರದ ಶಾನುಭೋಗರು.  ತಾಯಿ ಭಾಗೀರಥಮ್ಮ.  ಬದುಕಿನಲ್ಲಿ ಆರಂಭದ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಂಡದ್ದು ಮತ್ತಿತರ ಸಾವು-ನೋವುಗಳಿಗೆ ಶ್ರೀಯವರ ಕೋಮಲ ಬಾಲ ಹೃದಯ ತತ್ತರಿಸಿರಬೇಕು. ಆದರೆ ಅವರದು ಕಷ್ಟ ಕಾರ್ಪಣ್ಯದ ಬೇಗೆಗೆ ಬಲಿಯಾಗಿ ಕಮರಿಹೊಗುವ ಸಾಧಾರಣ ಜೀವನವಲ್ಲ.  ಅಡೆತಡೆಗಳ ನಡುವೆಯೂ ಚಿಮ್ಮುವ ಅದಮ್ಯ ಚೇತನ.

1926ರಲ್ಲಿ ತೀ.ನಂ.ಶ್ರೀಯವರು ಬಿ.ಎ. ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದು ಪದವೀದಾನ ಸಮಾರಂಭದಲ್ಲಿ ಆರು ಸ್ವರ್ಣ ಪದಕಗಳನ್ನೂ, ಒಂದು ಬಹುಮಾನವನ್ನೂ ನಾಲ್ವಡಿ ಕೃಷ್ಣರಾಜ ಒಡೆಯರ ಕೈಯಿಂದ ಸ್ವೀಕರಿಸಿದರು.  ಅವರ ಓದಿನ ದಿನಗಳಲ್ಲಿ ಮಹಾರಾಜ ಕಾಲೇಜಿನ ಬೋಧಕವರ್ಗದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಪ್ರೊ.ಎಂ.ಹಿರಿಯಣ್ಣ (ಸಂಸ್ಕೃತ), ಬಿ.ಎಂ.ಶ್ರೀಟಿ. ಎಸ್. ವೆಂಕಣ್ಣಯ್ಯ  ಮುಂತಾದವರಿದ್ದರು. ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರಾದರೂ ಅದು ರುಚಿಸದೆ ಮೈಸೂರಿನಲ್ಲಿ ಅಧ್ಯಾಪಕ ಹುದ್ದೆಗೆ ಬಂದರು.  1929ರಲ್ಲಿ ಇಂಗ್ಲೀಷ್ ಎಂ.ಎ ಪದವಿಯನ್ನೂ ಪ್ರಥಮ ಸ್ಥಾನದಲ್ಲಿ ಪಡೆದು ತಮ್ಮ ನೆಚ್ಚಿನ ಮಹಾರಾಜ ಕಾಲೇಜಿನಲ್ಲಿ ಉದ್ಯೋಗ ಗಳಿಸಿದರು.  ಮುಂದೆ 1931ರಲ್ಲಿ ಕನ್ನಡ ಎಂ.ಎ ಕೂಡ ವ್ಯಾಸಂಗ ಮಾಡಿ ಪ್ರಥಮ ಸ್ಥಾನ ಗಳಿಸಿದರು. 

1943ರಲ್ಲಿ ಉಪ ಪ್ರಾಧ್ಯಾಪಕರಾಗಿ ದೊರೆತ ಭಡ್ತಿಯ ಮೇರೆಗೆ ಬೆಂಗಳೂರಿಗೆ ಬಂದಾಗ ಪ್ರೊ. ಎ. ಎನ್. ಮೂರ್ತಿರಾವ್, ಪು. ತಿ. ನರಸಿಂಹಾಚಾರ್ಯರ ಗೆಳೆತನ, ಮಾಸ್ತಿಯಂತಹ ಹಿರಿಯ ಲೇಖಕರ ಸಂಪರ್ಕ ಕೂಡಿ ಬಂತು.  ತಮಗೆ ಆಪ್ತವಾಗಿದ್ದ ಕನ್ನಡ ನಿಘಂಟಿನ ಸಿದ್ಧತೆಯ ಕಾರ್ಯದಲ್ಲಿ ಪ್ರೊ.ಎ.ಆರ್. ಕೃಷ್ಣಶಾಸ್ತ್ರಿಗಳಂತಹ ಮಹನೀಯರ ಜೊತೆ ದುಡಿಯತೊಡಗಿದರು.  ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಪುಣೆಯ ಡೆಕ್ಕನ್ ಕಾಲೇಜಿನ ಭಾಷಾ ವಿಜ್ಞಾನಪೀಠದೊಂದಿಗೆ ಸಹಾ ಅವರಿಗೆ ಸಂಪರ್ಕ ಬೆಳೆಯಿತು.   ರಾಕ್ ಫೆಲರ್ ಪ್ರತಿಷ್ಟಾನದ ಗೌರವ ವೇತನದ ಮೂಲಕ ವಿದೇಶಗಳಲ್ಲಿ ಅಧ್ಯಯನ ಮಾಡಿ ಬಂದರು. 1940ರಲ್ಲಿ ಭಾರತದ ಸಂವಿಧಾನ ಪರಿಷತ್ತಿನ ಅಧ್ಯಕ್ಷರು ಕರೆದಿದ್ದ ಭಾಷಾ ವಿಜ್ಞಾನಿಗಳ ಸಭೆಯ ಪ್ರತಿನಿಧಿಯಾಗಿ ಇವರು ಭಾರತ ದೇಶದ ಮುಖ್ಯಸ್ಥರಿಗೆ ಸೂಚಿಸಿದ ರಾಷ್ಟ್ರಪತಿಎಂಬ ಹೆಸರು ಅಂಗೀಕೃತವಾಯಿತು.  1957ರಲ್ಲಿ ಕುವೆಂಪು ಅವರು ಮೈಸೂರು ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ ತೀ.ನಂ.ಶ್ರೀ ಅವರು ಮಾನಸ ಗಂಗೋತ್ರಿಯಲ್ಲಿ ಕನ್ನಡ ಪೀಠದ ಪ್ರಥಮ ಮುಖ್ಯಸ್ಥರೂ ಆದರು. 

ತೀ.ನಂ.ಶ್ರೀ ಅವರನ್ನು ನೆನೆಯುವವರಿಗೆ, ಮೂರು ಕ್ಷೇತ್ರಗಳಲ್ಲಿ ಅವರು ಅದ್ವಿತೀಯರಾಗಿ ನಿಲ್ಲುತ್ತಾರೆ.  ಮೊದಲನೆಯದು, ಅವರು ಕನ್ನಡದಲ್ಲಿ ಬರೆದು ಬಿಟ್ಟು ಹೋದ ಭಾರತೀಯ ಕಾವ್ಯ ಮೀಮಾಂಸೆಎಂಬ ಉದ್ಧಾಮ ಕೃತಿಯಲ್ಲಿ. ’No Indian Language has a book that can even distantly approach Bharatiya Kavya Meemamseಎಂದು ಪ್ರೊ. ಡಿ.ಎಲ್.ಎನ್ ಅವರು ಹೇಳಿದ್ದು ಸಮಂಜಸವಾಗಿದೆ. ಇದು ಹೊರ ಬಂದ ಕಾಲಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಕೂಡ ಇಂತಹ ಸಮಗ್ರ ಕೃತಿ ಇರಲಿಲ್ಲ.  ಇದನ್ನು ಓದಿ ಮುಗಿಸಿದಾಗ ಭಾರತೀಯ ಕಾವ್ಯ ಮೀಮಾಂಸೆಯ ಜೊತೆಗೆ ಕನ್ನಡ ಸಾಹಿತ್ಯವನ್ನು ದಿಗ್ದರ್ಶನ ಮಾಡಿದ ಅನುಭವವಾಗುತ್ತದೆ. ಈ ಕೃತಿಗಾಗಿ ತೀ.ನಂ.ಶ್ರೀ ಅವರಿಗೆ ಮರಣೋತ್ತರವಾಗಿ ಪಂಪಪ್ರಶಸ್ತಿ ನೀಡಲಾಗಿದೆ.

ಎರಡನೆಯದು, ಅವರು ಕನ್ನಡ ಅಧ್ಯಯನ ಕೇಂದ್ರಗಳಲ್ಲಿ ಭಾಷಾ ವಿಜ್ಞಾನದ ಅಭ್ಯಾಸಕ್ಕೆ ಮಾಡಿದ ಪೂರ್ವ ಸಿದ್ಧತೆ ಮತ್ತು ಕನ್ನಡ ನಿಘಂಟಿಗೆ ನೀಡಿದ  ಪರಿಶ್ರಮದ ಕಾಣಿಕೆ.  ಮೂರನೆಯದು ಅವರು ಪ್ರಾಧ್ಯಾಪಕರಾಗಿ ಭಾಷಣಕಾರರಾಗಿ ಸಂಪಾದಿಸಿದ್ದ ಜನಾನುರಾಗ.  ಜನಪ್ರಿಯತೆಗೆ ಸುಲಭವಾಗಿ ಅಂಟುವ ಪೊಳ್ಳುತನಕ್ಕೆ ಅವಕಾಶ ಮಾಡಿಕೊಡದೆ ಖ್ಯಾತರಾಗಿದ್ದವರು ಅವರು.  ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅವರು ಪ್ರಾಧ್ಯ್ಯಾಪಕರಾಗಿದ್ದಾಗ ಛಂದಸ್ಸು, ಕಾವ್ಯಮೀಮಾಂಸೆ  ಮತ್ತು ಭಾಷಾ ಶಾಸ್ತ್ರ ಮೂರನ್ನೂ ಅವರ ಬಾಯಲ್ಲಿಯೇ ಕೇಳಬೇಕು ಎಂದು ವಿದ್ಯಾರ್ಥಿಗಳು ಆಸೆ ಪಡುವಂಥ ಸ್ಥಿತಿ ಇತ್ತು.  ಮೂರು ವಿಷಯಗಳಲ್ಲೂ ಅವರ ವಿದ್ವತ್ತು ಅದ್ವಿತೀಯವಾಗಿತ್ತು. 

ಒಲುಮೆ’(1932)  ತೀ.ನಂ.ಶ್ರೀ ಅವರ ಮೊಟ್ಟ ಮೊದಲ ಕೃತಿ.  ಪಾಶ್ಚಾತ್ಯ ರಮ್ಯ ಸಂಪ್ರದಾಯದ ಕಾವ್ಯದಿಂದ, ಸಂಸ್ಕೃತ ಸಾಹಿತ್ಯದಲ್ಲಿನ ಮುಕ್ತಕಗಳಿಂದ ಪ್ರಭಾವಿತರಾಗಿ ಬಿ.ಎಂ.ಶ್ರೀ ಅವರ ಇಂಗ್ಲೀಷ್ ಗೀತೆಗಳುರಚನೆಯಿಂದ ಸ್ಫೂರ್ತಿ ಹೊಂದಿ ತೀ.ನಂ.ಶ್ರೀ ಅವರು ತಾರುಣ್ಯದಲ್ಲಿ ಬರೆದ ಕವಿತೆಗಳ ಸಂಕಲನ ಇದು.  ಕೆ. ಎಸ್. ನರಸಿಂಹ ಸ್ವಾಮಿ ಮೊದಲಾಗಿ ಕನ್ನಡದ ಅನೇಕ ಕವಿಗಳಿಗೆ ಸ್ಪೂರ್ತಿಯ ಬಾಗಿಲನ್ನು ತೆರೆದ ಪದ್ಯಗಳು ಇದರಲ್ಲಿವೆ.  ಓದಿದವರೆಲ್ಲ ಇಂಥ ಪದ್ಯಗಳು ಇನ್ನಷ್ಟು ಇರಬೇಕಾಗಿತ್ತು ಎಂದು ಆಸೆ ಪಡುವಂತೆ ಮಾಡಿದ ಅಪರೂಪದ ಪ್ರೇಮಗೀತೆಗಳ ಸಂಕಲನ ಒಲುಮೆ’.

ನಂಟರು’ (ಮೊದಲ ಮುದ್ರಣ 1962) ತಡವಾಗಿ ಪ್ರಕಟವಾದ ಪ್ರಬಂಧಗಳ ಸಂಕಲನ.  ತೀ.ನಂ.ಶ್ರೀ ಅವರು ಪ್ರಬಂಧವೆನ್ನುವುದು ಮಂದಶೃತಿಯ ಭಾವಗೀತೆಎಂದು ತಿಳಿದಿದ್ದರು.  ಇಲ್ಲಿನ ಪ್ರಬಂಧಗಳೆಲ್ಲ ಭಾವಗೀತೆಗಳಂತೆ ಮಿನುಗುವ ನುಡಿಚಿತ್ರಗಳಂತೆಯೇ ಇವೆ.  1970ರಲ್ಲಿ ಪ್ರಕಟವಾದ ಬಿಡಿ ಮುತ್ತುಅಮರ ಶತಕ ಮತ್ತು ಇತರ ಕೆಲವು ಪ್ರಸಿದ್ಧ ಸಂಸ್ಕೃತ ಸುಭಾಷಿತ ಸಂಕಲನಗಳಿಂದ ಆರಿಸಿದ 215 ಮುಕ್ತಕಗಳ ಕನ್ನಡ ಅನುವಾದ.  ಇಲ್ಲಿನ ಸುಂದರ ಸುಭಾಷಿತಗಳು ಕನ್ನಡಕ್ಕೆ ತೀ.ನಂ.ಶ್ರೀಯವರ ಒಂದು ವಿಶೇಷ ಕೊಡುಗೆ.

ತೀ.ನಂ.ಶ್ರೀ ಅವರಿಂದ 1942ರಲ್ಲಿ ಪ್ರಥಮ ಮುದ್ರಣಗೊಂಡ ರಾಕ್ಷಸನ ಮುದ್ರಿಕೆವಿಶಾಖದತ್ತನ ಪ್ರಸಿದ್ಧವಾದ ಸಂಸ್ಕೃತ ನಾಟಕ ಮುದ್ರಾರಾಕ್ಷಸದ ರೂಪಾಂತರ.  ಪ್ರೊ. ವೆಂಕಣ್ಣಯ್ಯನವರ ಸಲಹೆಯ ಮೇರೆಗೆ ಈ ಸುಂದರ ಕೃತಿಯನ್ನು ಕನ್ನಡಕ್ಕೆ ತಂದರು.  1939ರಲ್ಲಿ ಕನ್ನಡ ಮಾಧ್ಯಮ ವ್ಯಾಕರಣವನ್ನು  ಪ್ರಕಟಿಸಿದರು.  ಇದು ಹೊಸಗನ್ನಡ ಭಾಷೆಯ ಅಭ್ಯಾಸ ಮತ್ತು ಬೆಳವಣಿಗೆಗೆ ಪೂರಕವಾಗಿರಲೆಂದು  ಉದ್ಧೇಶಿಸಿ ರಚಿತವಾದ ಗ್ರಂಥಗಳಲ್ಲಿ ಅತ್ಯಂತ ಜನಪ್ರಿಯ ಪುಸ್ತಕ.  1941ರಲ್ಲಿ ಪ್ರಕಟಿಸಿದ ಹೆಣ್ಣು ಮಕ್ಕಳ ಪದಗಳು’  ತೀ.ನಂ.ಶ್ರೀ ಅವರು ಸಂಗ್ರಹಿಸಿದ ಜನಪದ ಗೀತೆಗಳ ಭಂಡಾರವಾಗಿದೆ.  1946ರಲ್ಲಿ ಪ್ರಕಟಿಸಿದ ಹರಿಹರ ಕವಿಯ ನಂಬಿಯಣ್ಣ ರಗಳೆತೀನಂಶ್ರೀ ಅವರು ತಮ್ಮ ವಿದ್ವತ್ತು ಮತ್ತು ಗ್ರಂಥ ಸಂಪಾದನ ಶಾಸ್ತ್ರದ ಜ್ಞಾನಗಳನ್ನು ಧಾರೆಯೆರೆದು ಸಂಪಾದಿಸಿದ ಪ್ರಾಚೀನ ಕನ್ನಡ ಕಾವ್ಯ.  ರನ್ನ ಕವಿಯ ಗದಾಯುದ್ಧ ಸಂಗ್ರಹಂತೀ.ನಂ.ಶ್ರೀ ಸಂಪಾದಿಸಿದ ಇನ್ನೊಂದು ವಿದ್ವತ್ಪೂರ್ಣ ಕೃತಿ.  ಅವರು ರಚಿಸಿದ ವಿಮರ್ಶಾ ಕೃತಿಗಳೆಂದರೆ ಪಂಪ’, ‘ಕಾವ್ಯ ಸಮೀಕ್ಷೆ’, ‘ಸಮಾಲೋಕನಮತ್ತು ಕಾವ್ಯಾನುಭವ’.  ಇಂಗ್ಲೀಷಿನಲ್ಲಿ ತೀ.ನಂ.ಶ್ರೀ ಅವರು ಬರೆದ  Imagination in Indian Poetics and Other Literary Papers’, ‘Affricates in Kannada Speech and Other Linguistic Papersಅವರ ಬದುಕಿನ ಅವಧಿಯ ನಂತರದಲ್ಲಿ ಪ್ರಕಟಗೊಂಡಿವೆ.

ತೀ.ನಂ.ಶ್ರೀ ಅವರ ವಿದ್ವತ್ತು ಮತ್ತು  ಬಹುಶ್ರುತತ್ವಗಳನ್ನು ಬಲ್ಲವರೆಲ್ಲರೂ ಅವರು ಹೆಚ್ಚು ಬರೆಯದೆ ಇದ್ದುದಕ್ಕೆ ವಿಷಾದಿಸುತ್ತಾರೆ.  ಸಾರ್ವಜನಿಕ ಭಾಷಣ ಮತ್ತು ತರಗತಿಯ ಪಾಠಗಳಲ್ಲಿ ಅವರ ಅಭಿಪ್ರಾಯ, ಆಲೋಚನೆಗಳು ಅಭಿವ್ಯಕ್ತಿ ಪಡೆದು ಆ ಮೂಲಕವೂ ಅವರಿಗೆ ತೃಪ್ತಿ ಸಿಕ್ಕುತ್ತಿದ್ದಿರಬಹುದು ಎಂದು ಅವರ ಮಗ ಪ್ರೊ. ಟಿ.ಎಸ್. ನಾಗಭೂಷಣ ಭಾವಿಸುತ್ತಾರೆ. 

1966ರ ಆಗಸ್ಟ್ ತಿಂಗಳಲ್ಲಿ ಶಿಕ್ಷಣ ಸಚಿವಾಲಯದ ವತಿಯಿಂದ ದೆಹಲಿಯಲ್ಲಿ ತಂತ್ರಜ್ಞಾನ ಪರಿಭಾಷೆಯ ತಜ್ಞರುಗಳ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹಲವು ಸ್ಥಳಗಳಿಗೆ ಭೇಟಿಕೊಟ್ಟು ರಾಂಚಿಯಲ್ಲಿರುವ ಮಗಳ ಮನೆ ಮತ್ತು ಕಲ್ಕತ್ತೆಯಲ್ಲಿದ್ದ ಮಗನ ಮನೆಗೆ ಭೇಟಿಕೊಟ್ಟರು.  ತಮ್ಮ ಪತ್ನಿಗೆ ದೆಹಲಿ ತಾಜಮಹಲುಗಳನ್ನು ತೋರಿಸಿಕೊಂಡು ಬಂದ ಬಗ್ಗೆ ಅವರಿಗೆ ಸಂತೋಷವಾಗಿತ್ತು.  ಮಧುಚಂದ್ರವೇನೋ ತುಂಬಾ ಚೆನ್ನಾಗಿ ನಡೆಯಿತು; ಕೇವಲ ನಲವತ್ತು ವರ್ಷ ತಡವಾಯಿತು ಅಷ್ಟೇ!ಎಂದು ಅವರು ಕಲ್ಕತ್ತಕ್ಕೆ ಬಂದಾಗ ಮಗನೊಡನೆ ವಿನೋದವಾಡಿದರು.  ಸೆಪ್ಟೆಂಬರ್ ಏಳನೆಯ ತಾರೀಖು ಬೆಳಗಿನ ಎಂಟುಗಂಟೆಯ ಸಮಯದಲ್ಲಿ ಅನಿರೀಕ್ಷಿತವಾಗಿ ಬಂದ ಹೃದಯಾಘಾತ ಅವರನ್ನು ಎಲ್ಲರಿಂದ ಅಗಲಿಸಿತು.  ಇಂತಹ ಮಹಾನುಭಾವರನ್ನೂ ವಿಧಿ ಲೆಕ್ಕಿಸುವುದಿಲ್ಲ.  ದಿಗ್ ಭೋ ವಿಧೇಹ್ಎಂದು ಭಾಸಕವಿ ಉದ್ಗಾರ ತೆಗೆದದ್ದು ಇಂತಹ ಸಂದರ್ಭವನ್ನು ಕಂಡೇ.

ಕನ್ನಡದ ಈ ಮಹಾನ್ ಹಿರಿಯರಿಗೆ ನಮ್ಮ ಭಕ್ತಿಯ ನಮನ.


(ಆಧಾರ: ಎಚ್. ಜಿ. ಸಣ್ಣಗುಡ್ಡಯ್ಯನವರು ಬರೆದ ತೀ.ನಂ.ಶ್ರೀಕಂಠಯ್ಯ ಅವರ ಕುರಿತ ಬರಹ)

Tag: Thi. Nam. Sri, Ti Nam Sri,  Thi Nam Srikantaiah, Ti Nam Srikantaiah, T. S. Srikantaiah 

ಕಾಮೆಂಟ್‌ಗಳಿಲ್ಲ: