ಭಾನುವಾರ, ಸೆಪ್ಟೆಂಬರ್ 1, 2013

ನ್ಯಾಯಮೂರ್ತಿ ಇ ಎಸ್. ವೆಂಕಟರಾಮಯ್ಯ

 ಇ ಎಸ್. ವೆಂಕಟರಾಮಯ್ಯ

ಸುಪ್ರೀಂ ಕೋರ್ಟಿನ ಪ್ರಧಾನ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಪ್ರಥಮ ಕನ್ನಡಿಗರೆಂಬ ಕೀರ್ತಿಗೆ ಪಾತ್ರರಾದ   ಎಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯನವರು ಡಿಸೆಂಬರ್ 18, 1924ರಂದು ಜನಿಸಿದರು. ತಂದೆ ಇ. ವಿ. ಸೀತಾರಾಮಯ್ಯನವರು ಮತ್ತು ತಾಯಿ ನಂಜಮ್ಮನವರು. ಪಾಂಡವಪುರದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ ವೆಂಕಟರಾಮಯ್ಯನವರು  ಮುಂದೆ ಮೈಸೂರು, ಪುಣೆ ಮತ್ತು ಬೆಳಗಾವಿಗಳಲ್ಲಿ ವಿದ್ಯಾಭ್ಯಾಸ ನಡೆಸಿದರು.   ಬಡಕುಟುಂಬದಲ್ಲಿ ಬೆಳೆದ ವೆಂಕಟರಾಮಯ್ಯನವರು ತಮ್ಮ ವಿದ್ಯಾಭ್ಯಾಸವನ್ನು ಅಂದಿನ ಮೈಸೂರಿನ ಬಡ ಮಕ್ಕಳ ಹಾಸ್ಟೆಲ್ಲುಗಳು ಮತ್ತು ವಾರಾನ್ನಗಳಲ್ಲಿ ನಡೆಸಿದರೂ ಮಹಾನ್ ಪ್ರತಿಭಾವಂತರಾಗಿ ಚಿನ್ನದ ಪದಕಗಳೊಂದಿಗೆ ವಿದ್ಯಾಭ್ಯಾಸದಲ್ಲಿ ಉತ್ತುಂಗತೆಯನ್ನು ಸಾಧಿಸಿದರು.

ವೆಂಕಟರಾಮಯ್ಯನವರು 1946ರಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿ, ಮುಂದೆ ಮೈಸೂರು ಸರ್ಕಾರದ ಅಡ್ವೋಕೇಟ್, ಉಚ್ಚತಮ ನ್ಯಾಯಾಲಯಗಳ  ನ್ಯಾಯಾಧೀಶರು ಮುಂತಾದ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿ   1979ರ ವರ್ಷದಲ್ಲಿ  ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ಧೆಯನ್ನು ಅಲಂಕರಿಸಿದ್ದರು.  ತಮ್ಮ ನಿವೃತ್ತಿಯ ಸಮೀಪದ ದಿನಗಳಲ್ಲಿ ಜೂನ್ 1989ರಿಂದ ಡಿಸೆಂಬರ್ 1989 ರವರೆಗೆ ಅವರು ಸರ್ವೋಚ್ಚನ್ಯಾಯಾಲಯದ ಪ್ರಧಾನ ನ್ಯಾಯಾಧೀಶರ ಸ್ಥಾನದ ಗೌರವವನ್ನು ಪಡೆದಿದ್ದರು.

ನಾಡಿನ ಸಾಂಸ್ಕೃತಿಕ ವಲಯದಲ್ಲಿ ಸಹಾ ತಮ್ಮನ್ನು ಗುರುತಿಸಿಕೊಂಡಿದ್ದ ನ್ಯಾಯಮೂರ್ತಿ ವೆಂಕಟರಾಮಯ್ಯನವರು ಹಲವಾರು ವರ್ಷಗಳ ಕಾಲ ಭಾರತೀಯ ವಿದ್ಯಾಭವನದ ರಾಜ್ಯಮಟ್ಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.   ಅವರು ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ಹೊಂದಿದವರಾಗಿದ್ದರು.  ಕಾರ್ಯಕ್ರಮವೊಂದಕ್ಕೆ ಅವರನ್ನು ಆಹ್ವಾನಿಸಲು ಮನೆಗೆ ಹೋಗಿದ್ದಾಗ ನಮ್ಮನ್ನು ಆಪ್ತವಾಗಿ ಕಂಡಿದ್ದರು.  ತಮ್ಮ ಬದುಕಿನಲ್ಲಿ ಅಷ್ಟೊಂದು ಔನ್ನತ್ಯವನ್ನು ಸಾಧಿಸಿದ್ದರೂ ಅತ್ಯಂತ ಸಾಮಾನ್ಯರಂತೆ ಬದುಕನ್ನು ನಡೆಸಿ ಮೌಲ್ಯಯುತ ಬದುಕಿನ ಹಿರಿಮೆಯನ್ನು  ಮೆರೆದ ನ್ಯಾಯಮೂರ್ತಿ  ಇ ಎಸ್ ವೆಂಕಟರಾಮಯ್ಯನವರು 1997ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಈ ಮಹಾನ್ ಚೇತನಕ್ಕೆ ನಮ್ಮ ನಮನ.


Tag: Justice E. S. Venkataramaiah

ಕಾಮೆಂಟ್‌ಗಳಿಲ್ಲ: