ಭಾನುವಾರ, ಸೆಪ್ಟೆಂಬರ್ 1, 2013

ಪ್ರಕೃತಿ ಮಿತ್ರ ‘ಎಂ. ವೈ. ಘೋರ್ಪಡೆ’

ಪ್ರಕೃತಿ ಮಿತ್ರ ಎಂ. ವೈ. ಘೋರ್ಪಡೆ

ಎಂ. ವೈ.  ಘೋರ್ಪಡೆ ಎಂದರೆ ತಕ್ಷಣ ನೆನಪಾಗುವುದು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಛಾಯಾಚಿತ್ರಗ್ರಾಹಕಾರಾಗಿ ಅವರು ಪಡೆದ ಹೆಸರು.  ಅವರೊಬ್ಬ ಶ್ರೇಷ್ಠ ಛಾಯಾಗ್ರಾಹಾಕ, ಪ್ರಕೃತಿ ಮಿತ್ರ, ರಾಜಮನೆತನದ ಹಿರಿಮೆವಂತ, ನುರಿತ ರಾಜಕಾರಣಿ, ಕೈಗಾರಿಕೆಗಳ ಸ್ಥಾಪಕ, ಸಮಾಜದಲ್ಲಿ ಹಿಂದುಳಿದವರಿಗೂ, ಮಹಿಳೆಗರಿಗೂ  ಸಮಾನತೆ ಕಲ್ಪಿಸಿಕೊಟ್ಟ ಸಮಾಜದ ಹಿತಚಿಂತಕ.

ಮುರ್ರಾರಾವ್ ಯಶವಂತರಾವ್ ಘೋರ್ಪಡೆ ಅವರು ಸಂಡೂರಿನ ರಾಜ ಮನೆತನಕ್ಕೆ ಸೇರಿದವರು.  ಅವರ ತಂದೆಯವರು ದೇಶಕ್ಕೆ ಸ್ವಾತಂತ್ರ್ಯಬಂದ ಸಮಯದಲ್ಲಿ ತಮ್ಮ ಸಂಸ್ಥಾನವನ್ನು ಭಾರತಕ್ಕೆ ಸೇರಿಸಿದರು. 

ಎಂ. ವೈ ಘೋರ್ಪಡೆ ಅವರು ಹುಟ್ಟಿದ್ದು ಡಿಸೆಂಬರ್ 7, 1931ರಲ್ಲಿ.  ಸಂಡೂರು, ಬೆಂಗಳೂರು ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದರು.  ಅರ್ಥಶಾಸ್ತ್ರದಲ್ಲಿ ಅವರಿಗೆ ಪರಿಣತಿ.  ಲೋಕಸಭಾ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಹಣಕಾಸು ಮಂತ್ರಿ(1972-77)ಗಳಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿ(1990, 1992-94, 1999-2004)ಗಳಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಎಂ.ವೈ ಘೋರ್ಪಡೆಯವರು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಛಾಯಾಚಿತ್ರಗ್ರಾಹಕರಾಗಿ ಅಪೂರ್ವವಾದ ಹೆಸರು ಮಾಡಿದ್ದಾರೆ. 

'Sunlight & Shadows - An Indian Photographer's Diary', 'Down Memory Lane - A memoir', 'Development Ethos and Experience', 'Paramacharya of Kanchi', 'The Grand Resistance Murarirao Ghorpade', 'Winged Friends', 'Three Stories', 'Sandur Echo'  ಅವರ ಪ್ರಮುಖ ಇಂಗ್ಲಿಷ್ ಬರಹಗಳು. 

'ನೆನಪಿನ ಚಿತ್ರಗಳು', 'ಅಭಿವೃದ್ಧಿ ಆಳ್ವಿಕೆ ಮತ್ತು ಮಾನವೀಯ ಮೌಲ್ಯಗಳು', 'ಕಂಚಿಯ ಪರಮಾಚಾರ್ಯರು'  - ಕನ್ನಡಕ್ಕೆ ಅನುವಾದಗೊಂಡಿವೆ.

ಪಕ್ಷಿಗಳ ಪ್ರೇಮವನ್ನು ಜನರಲ್ಲಿ ಅದರಲ್ಲೂ ಮಕ್ಕಳಲ್ಲಿ ಪಕ್ಷಿ ಪ್ರೇಮ ಹುಟ್ಟಿಸುವ ನಿಟ್ಟಿನಲ್ಲಿ ಇತ್ತೀಚಿನ  ವರ್ಷದಲ್ಲಿ  ಘೋರ್ಪಡೆ ಅವರು ಪ್ರಕಟಿಸಿದ  'ರೆಕ್ಕೆಯ ಮಿತ್ರರುಅಪಾರವಾದ ಜನಪ್ರೀತಿಯನ್ನು ಗಳಿಸಿಕೊಂಡಿದೆ.  ಇದು ಘೋರ್ಪಡೆ ಅವರ 'Winged Friends'ನ ಕನ್ನಡ ಅನುವಾದ. ಶಾಂತಾ ನಾಗರಾಜ್ ಮತ್ತು ಡಾ. ಪಿ. ಎಸ್. ಗೀತಾ ಕನ್ನಡಕ್ಕೆ ಅನುವಾದಿಸಿದ್ದಾರೆ.  ಅತ್ಯುತ್ತಮ ಪಕ್ಷಿಗಳ ಛಾಯಾಚಿತ್ರಗಳನ್ನು ಒಳಗೊಂಡಿರುವ 158 ದೊಡ್ಡ ಪುಟಗಳ ಈ ಸುಂದರ ಪುಸ್ತಕವನ್ನು ತಾವೇ ಬೃಹತ್ ಹಣದ ಕೊಡುಗೆ ನೀಡಿ  ಅತಿ ಕಡಿಮೆ ದರ ರೂ 100ಕ್ಕೆ ಜನರಿಗೆ ಒದಗುವಂತೆ ಘೋರ್ಪಡೆ ಅವರು ಮಾಡಿರುವ ಕೆಲಸ ಅತ್ಯಂತ ಶ್ಲಾಘನೀಯವೆನಿಸಿದೆ. 

ಘೋರ್ಪಡೆಯವರ ತಂದೆಯವರು ಅಂದಿನ ದಿನಗಳಲ್ಲಿ ತಮ್ಮ ಆಡಳಿತದ ಕ್ಷೇತ್ರದಲ್ಲಿದ್ದ ದೇವಾಲಯಗಳಿಗೆ ದಲಿತರಿಗೂ ಪ್ರವೇಶ ದೊರಕುವಂತೆ ಮಾಡಿ ಮಹಾತ್ಮಗಾಂಧಿಯವರ ಹರಿಜನ ಪತ್ರಿಕೆಯ ಲೇಖನಗಳಲ್ಲಿ ಪ್ರಶಂಸೆ ಪಡೆದವರು.  ಈ ಕೆಲಸವನ್ನು ತಾವೂ ಮುಂದುವರೆಸಿದ ಎಂ.ವೈ. ಘೋರ್ಪಡೆಯವರು ಮಹಿಳೆಯರಿಗೂ, ಹಿಂದುಳಿದವರಿಗೂ ದೇವಸ್ಥಾನಗಳಿಗೆ ಪ್ರವೇಶವಲ್ಲದೆ ಅವರ ಏಳಿಗೆಗೂ ದುಡಿದರು.  ಸಂಡೂರಿನಲ್ಲಿ ಮ್ಯಾಂಗನೀಸ್ ಉದ್ಯಮವನ್ನು ಸ್ಥಾಪಿಸಿದರೂ ಇಂದಿನ ದಿನಗಳ ರಾಜಕಾರಣಿಗಳು  ಮಾಡಿದ ಪರಿಸರದ ಲೂಟಿಯನ್ನು ಅವರು ಮಾಡಲಿಲ್ಲವೆಂಬುದು ಅವರ ಹಿರಿಮೆಯನ್ನು ಮತ್ತಷ್ಟು ಪ್ರಕಾಶಿಸುವಂತದ್ದಾಗಿದೆ.    ತಮ್ಮ ಆಡಳಿತದ ಅವಧಿಯಲ್ಲಿ ಪಂಚಾಯತ್ ರಾಜ್ ಯಶಸ್ವೀ ಅನುಷ್ಟಾನಕ್ಕೆ ಅವರು ನಿರಂತರ ಶ್ರಮಿಸಿದರು.


ಘೋರ್ಪಡೆಯವರು ಅಕ್ಟೋಬರ್ 2011ರ ವರ್ಷದಲ್ಲಿ ಈ ಲೋಕವನ್ನಗಲಿದರು.

Tag: M. Y. Ghorpade

ಕಾಮೆಂಟ್‌ಗಳಿಲ್ಲ: