ಸೋಮವಾರ, ಸೆಪ್ಟೆಂಬರ್ 2, 2013

ಗಂಗಾಧರ ಚಿತ್ತಾಲ

ಗಂಗಾಧರ ಚಿತ್ತಾಲ

ಗಂಗಾಧರ ಚಿತ್ತಾಲರು ನವೋದಯ ಕಾಲದ ಪ್ರಮುಖ ಕವಿಗಳು. ಗಂಗಾಧರ ಚಿತ್ತಾಲರು  ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲಿ 1923ರ ನವೆಂಬರ್ 12ರಂದು ಜನಿಸಿದರು.  ಕನ್ನಡದ ಮತ್ತೋರ್ವ ಪ್ರಖ್ಯಾತ ಲೇಖಕರಾದ ಯಶವಂತ ಚಿತ್ತಾಲರು ಇವರ ಸಹೋದರ. 

ಗಂಗಾಧರ ಚಿತ್ತಾಲರು 1940ರಲ್ಲಿ ಕುಮಟಾದ ಗಿಬ್ಸ್ ಹೈಸ್ಕೂಲಿನಿಂದ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಗೆ ಕುಳಿತು  ಮುಂಬಯಿ ವಿಶ್ವವಿದ್ಯಾಲಯದಲ್ಲಿ ಹೊಸ ವಿಕ್ರಮ ಸ್ಥಾಪಿಸಿ, ಪ್ರಥಮ ಸ್ಥಾನ ಪಡೆದರು.  1942ರ ವರ್ಷದಲ್ಲಿ  ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಗಂಗಾಧರ ಚಿತ್ತಾಲರು  ಕಾಲೇಜಿನಿಂದ ಹೊರದೂಡಲ್ಪಟ್ಟರು.   ಮುಂದೆ ಪುನಃ ಕಾಲೇಜು ಶಿಕ್ಷಣವನ್ನು ಮುಂದುವರಿಸಿದಾಗಲೂ  ಎಂ.ಎನ್.ರಾಯ್ ಅವರ ಪಕ್ಷದೊಂದಿಗೆ ಸಂಬಂಧವಿಟ್ಟುಕೊಂಡ ಚಿತ್ತಾಲರುವಿದ್ಯಾರ್ಥಿ ಸಂಘಗಳ  ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. 1945ರಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು, ಮುಂಬಯಿ ವಿಶ್ವವಿದ್ಯಾಲಯದ ಬಿ.ಎ. (ಆನರ್ಸ್) ಪದವಿ ಪಡೆದರು.  1948ರಲ್ಲಿ ಐ.ಎಸ್. ಮತ್ತು ಎ.ಎಸ್. ಪರೀಕ್ಷೆಗಳಲ್ಲಿ ತೇರ್ಗಡೆಯಾಗಿಮುಂಬಯಿಯಲ್ಲಿ ಸಹಾಯಕ ಮಹಾಲೇಖಪಾಲಕರಾಗಿ ನೇಮಕಗೊಂಡರು.

ಗಂಗಾಧರ ಚಿತ್ತಾಲರು 1955ರಿಂದ 1958ರ ಕಾಲಾವಧಿಯಲ್ಲಿ ವಾಷಿಂಗ್ಟನ್ ನಲ್ಲಿ ಡೆಪ್ಯುಟಿ ಡೈರೆಕ್ಟರ್ ಆಫ್ ಆಡಿಟ್ಸ್ ಆಗಿ ಕಾರ್ಯ ನಿರ್ವಹಿಸಿದರು.  1966ರಿಂದ 1967ರ ಕಾಲಾವಧಿಯಲ್ಲಿ ಲಂಡನ್ನಿನಲ್ಲಿ  ಸೇವೆ ಸಲ್ಲಿಸಿದರು.  1977ರಲ್ಲಿ ನಿವೃತ್ತರಾದರು. 

ಕಾವ್ಯಸೃಷ್ಟಿಯಲ್ಲಿ ಗಂಗಾಧರ ಚಿತ್ತಾಲರದು ಸೃಜನಶೀಲ ಮನಸ್ಸು.  ಕಾಲದ ಕರೆ, ಮನುಕುಲದ ಹಾಡು, ಹರಿವ ನೀರಿದು, ಸಂಪರ್ಕ ಮುಂತಾದವು ಚಿತ್ತಾಲರ  ಕವನ ಸಂಕಲನಗಳು.  ಭಯದ ಗೀತ', ‘ದುಃಖಗೀತ', ‘ಹರಿವ ನೀರಿದು', ‘ಕಾಮಸೂತ್ರ', ‘ಕವನ', ‘ಸುಧೀರ', ‘ಸಂಪರ್ಕ', ‘ಹಾಲು', ‘ಗುಲ್ ಮೊಹರ್ಮುಂತಾದವು ಅವರ ಕೆಲವೊಂದು ಪ್ರಸಿದ್ಧ ಕವಿತೆಗಳೆನಿಸಿವೆ. 

”ಗಂಗಾಧರ ಚಿತ್ತಾಲರ ಕವಿತೆಗಳು ಪಾರದರ್ಶಕವಾದ ಕವಿತೆಗಳು. ಕವಿತೆಗಳ ವಸ್ತುವಿನಲ್ಲಿ ಇರುವ ಸಂಕೀರ್ಣತೆಯು ಅದರ ಶಿಲ್ಪವನ್ನು ನಿಗೂಢವಾಗಿಸುವುದಿಲ್ಲ. ಇದು ಚಿತ್ತಾಲರ ಕವಿತೆಗಳ ಮೂಲಗುಣ. ಅಲ್ಲಿ ಅನಗತ್ಯವಾದ ಕ್ಲಿಷ್ಟತೆಯು ಸುಳಿಯುವುದಿಲ್ಲ. ಅವರನ್ನು ಅವರಿಗೆ ಸಮಕಾಲೀನರಾದ ಇತರ ನವ್ಯ ಕವಿ'ಗಳಿಂದ ಭಿನ್ನವಾಗಿಸುವ ಗುಣವೂ ಈ ಪಾರದರ್ಶಕತೆಯೇ. ನವ್ಯಕಾವ್ಯವು ಗದ್ಯಲಯವನ್ನು ಬಳಸಿಕೊಂಡು ಕಾವ್ಯಕ್ಕೆ ಸಹಜವಾದ ಲಯಗಳನ್ನು ಬಿಟ್ಟುಕೊಟ್ಟಿತೆಂಬುದು ತಪ್ಪು ಕಲ್ಪನೆ. ಚಿತ್ತಾಲರ ಕವಿತೆಗಳನ್ನು ನಿಧಾನವಾಗಿ, ಗಟ್ಟಿಯಾಗಿ ಓದಿಕೊಳ್ಳುವುದರಿಂದ ಮಾತ್ರವೇ ಅದರ ಇನ್ವೊಕೇಟಿವ್' ಗುಣ ಮತ್ತು ಆರ್ದ್ರಭಾವಗಳು ನಮ್ಮ ಅನುಭವಕ್ಕೆ ಬರುತ್ತವೆ” ಎಂದು  ಕನ್ನಡ ವಿಮರ್ಶಕ ಡಾ. ಎಚ್.ಎಸ್ ರಾಘವೇಂದ್ರರಾವ್ ಅವರು ಕನ್ನಡದ ಅನನ್ಯ ಕವಿ ಗಂಗಾಧರ ಚಿತ್ತಾಲರ ಕವಿತೆಗಳನ್ನು ವ್ಯಾಖ್ಯಾನಿಸಿದ್ದಾರೆ.

ಗಂಗಾಧರ ಚಿತ್ತಾಲರ ಸಮಗ್ರ ಕಾವ್ಯ ಮತ್ತು ಅವರ ಕಾವ್ಯಗಳ ಕುರಿತಾದ ಸಮಗ್ರ ವಿಮರ್ಶೆಗಳು ಪ್ರಕಟಗೊಂಡಿವೆ.   1982ರಲ್ಲಿ ಗಂಗಾಧರ ಚಿತ್ತಾಲರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಸಂದಿತ್ತು.

ಗಂಗಾಧರ ಚಿತ್ತಾಲರು 1987ರಲ್ಲಿ ಈ ಲೋಕವನ್ನಗಲಿದರು.  ಈ ಹಿರಿಯ ಚೇತನಕ್ಕೆ ನಮ್ಮ ನಮನ.


Tag: Gangadhara Chittala

ಕಾಮೆಂಟ್‌ಗಳಿಲ್ಲ: