ಭಾನುವಾರ, ಸೆಪ್ಟೆಂಬರ್ 1, 2013

ಅಟಲ್ ಬಿಹಾರಿ ವಾಜಪೇಯಿ

ಅಟಲ್ ಬಿಹಾರಿ ವಾಜಪೇಯಿ

ಡಿಸೆಂಬರ್ 25 ಅಂದರೆ ತಕ್ಷಣ ನೆನಪಾಗುವುದು  ವಾಜಪೇಯಿ ಅವರ ಜನ್ಮದಿನ.   ಎಲ್ಲರಿಗೂ ನಮ್ಮವರು ಎಂದು ಅನಿಸುವಂತೆ ಮಾಡಿದವರು ಇವರೊಬ್ಬರೇ.  ಎಲ್ಲದರಲ್ಲೂ ಇದ್ದು ಯಾವುದೂ ತನ್ನದಲ್ಲವೆಂದು ಬದುಕಿರುವವರು ಇವರೊಬ್ಬರೇ.  ನಮ್ಮ ಬದುಕಿನಲ್ಲೂ ನಾವೂ ಹೀಗಿದ್ದಿದ್ದರೆ ಚೆನ್ನ, ನಮಗೆ ಬೇಕಿದ್ದವರು ಹೀಗಿದ್ದಿದರೆ ಚೆನ್ನ, ನಮ್ಮ ನಾಯಕ ಹೀಗಿದ್ದಿದರೆ ಚೆನ್ನ, ನಮ್ಮ ಬದುಕೂ ಹೀಗಾದರೆ ಚೆನ್ನ ಎಂದು ಅನಿಸಿದವರು ಇವರೊಬ್ಬರೇ.   ಆದರೆ, ದೇವರು ಒಳ್ಳೆಯದೆಲ್ಲವನ್ನೂ ಒಂದೊಂದೇ ಸೃಷ್ಟಿಸುತ್ತಾನೆ.  ಒಂದರಂತೆ ಇನ್ನೊಂದಿಲ್ಲ.  ವಾಜಪೇಯಿಯಂತೆ ಇನ್ನೊಬ್ಬರಿಲ್ಲ. 

ವಾಜಪೇಯಿ ಎಲ್ಲರಿಗೂ ಬೇಕು.  ಆದರೆ ಅವರು ಬದುಕಿನ ಸಂಧ್ಯೆಯಲ್ಲಿ ತಮ್ಮಾಳದಲ್ಲಿ ಬದುಕುತ್ತಿದ್ದಾರೆ.  ಅವರಿಗೆ ನಾವು ನೋಡುತ್ತಿರುವ ಬದುಕು ಬೇಡವಾಗಿದೆ.  ಅವರು ನಮ್ಮೊಡನಿದ್ದಾಗ ಅವರ ಮಾತನ್ನು ಕೇಳದ ಪ್ರಪಂಚ ಅವರು ಆ ಕಡೆ ತಿರುಗಿದಾಗ  ಅವರು ಬೇಕು ಎನ್ನುತ್ತಿದೆ. 

ಅವರು ಕರೆದರೆ ಬರುವವರಲ್ಲ -  ಅವರಂತೆ ನಾವಾಗದೆ.  ಬೇಡ ಅವರು ಬರುವುದು ಬೇಡ, ಅವರೂ ನಮ್ಮಂತಾದರೆ ಕಷ್ಟ.  ಆಗ ನಮಗೆ ನಮ್ಮ ಬಳಿ ಇಂತದ್ದೊಂದು ಮುತ್ತು ಇತ್ತು ಎಂದು ಭಾವಿಸುವ ಅವಕಾಶವೂ ತಪ್ಪಿ ಹೋದೀತು. 

ವಯಸ್ಸಾದ ಮೇಲೆ ಅನಾರೋಗ್ಯ ಎಂಬುದು ತಂದೊಡ್ಡುವ ಸಮಸ್ಯೆಗಳು ಅನೇಕ.  ಆದರೆ ಶ್ರೇಷ್ಠ ಜೀವ ಅಂತರಾತ್ಮದ ಬಲದಿಂದ  ವಯಸ್ಸು, ವ್ಯಾಧಿಯ ನೋವು ಮತ್ತು ಮರಣ ಭಯ ಇವೆಲ್ಲವನ್ನೂ ಮೀರಿರಬಲ್ಲದು.  ವಾಜಪೇಯಿ ಅವರದ್ದು ಅಂಥಹ ಅಂತರಾತ್ಮವುಳ್ಳ ಜೀವ.   ವಾಜಪೇಯಿ ಅವರ ಬದುಕು  ಸಂಧ್ಯೆಯಲ್ಲಿದ್ದರೂ  ಸೊಬಗನ್ನು ಹೊರಸೂಸುವಂತದ್ಧು.  ಅಂಥಹ ಸೊಬಗು ನಮ್ಮ ಬದುಕಿಗೂ ಲಭ್ಯವಾಗುವಂತೆ ಆ ದೇವರಲ್ಲಿ ಅವರು ಒಂದಷ್ಟು ಶಿಫಾರಸ್ಸು ಮಾಡುವಂತಾಗಲಿ.  ಅಂತಹವರಿಗೆ ತಾನೇ ದೇವರ ಸಾಮ್ರಾಜ್ಯದಲ್ಲಿ ಪ್ರವೇಶ ಸಾಧ್ಯ.  ಅಂತಹ ಮೇಧಾವಿ ಮಾತುಗಾರನ ಮಾತನ್ನು ತಾನೇ, ದೇವರೂ ಸಹಾ ಕಿವಿಗೊಟ್ಟು ಕೇಳಲಿಚ್ಚಿಸುವುದು. 


ನಮಗೋ ಅವರ ನೆನಪಷ್ಟೇ. ಅವರು ಇನ್ನೂ ನಮ್ಮ ಪ್ರಪಂಚದಲ್ಲಿದ್ದಾರೆ ಎಂಬುದಷ್ಟೇ ಇರುವ ಸಣ್ಣ ನೆಮ್ಮದಿ.  ಆ ಶ್ರೇಷ್ಠ ಹಿರಿಯ ಜೀವಕ್ಕಾಗಿ ಹೃದಯಪೂರ್ವಕವಾಗಿ ಪ್ರಾರ್ಥನೆ ಮತ್ತು ಸಾಷ್ಟಾಂಗ ನಮನ.  

Tag: Atal Bihari Vajpayee

ಕಾಮೆಂಟ್‌ಗಳಿಲ್ಲ: