ಸೋಮವಾರ, ಸೆಪ್ಟೆಂಬರ್ 2, 2013

ಯೋಗರಾಜ್ ಭಟ್

ಯೋಗರಾಜ್ ಭಟ್

ಒಂದು ಕಾಲದಲ್ಲಿ  ಪ್ರಖ್ಯಾತ ಸ್ಟಾರ್ ಯುಗ ಕಂಡಿದ್ದ ನನ್ನಂತಹ ಕನ್ನಡ ಚಿತ್ರ ಪ್ರೇಕ್ಷಕನಿಗೆಅಂತಹ ಸ್ಟಾರುಗಳು ಇತ್ತೀಚಿನ ವರ್ಷಗಳಲ್ಲಿ ಮನಮುಟ್ಟಿರುವುದು  ಕಡಿಮೆ.  ಇದು ನಮಗೆ ವಯಸ್ಸಾಗಿರುವುದರ ಸಂಕೇತವೋ  ಅಥವಾ ನಮ್ಮ ಚಿತ್ರರಂಗದ ನಿಜ ಸ್ಥಿತಿಯೋ ಹೇಳಲಾರೆ.  ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮನ್ನು ಮೋಡಿ ಮಾಡಿದ ಚಿತ್ರವೊಂದಿದೆ.  ಅದು ಮುಂಗಾರುಮಳೆ’.  ಅದರ ಹಾಡುಗಳು ಇಂದೂ ಮನಸ್ಸಿನಲ್ಲಿ ನಿಂತಿವೆ.  ಆ ಚಿತ್ರ ದೃಶ್ಯಕಾವ್ಯವೆಂಬಂತೆ ಮನದಲ್ಲಿ ಮನೆ ಮಾಡಿದೆ ಎಂಬುದಂತೂ ಸುಳ್ಳಲ್ಲ.  ಹಾಗಾಗಿ ಈ ಸುಂದರ ಚಿತ್ರದ ಸೃಷ್ಟಿಕರ್ತ ಯೋಗರಾಜ್ ಭಟ್ ನಮ್ಮ ನೆನಪಲ್ಲಿ ನಿಂತಿದ್ದಾರೆ.  ಹಾಗಾಗಿ ಅವರು ನಮ್ಮ ಚಿತ್ರರಂಗದ ಸ್ಟಾರ್ ಎನ್ನಲಡ್ಡಿಯಿಲ್ಲ.    ಅಕ್ಟೋಬರ್ 8 ಅವರು ಹುಟ್ಟಿದ ದಿನ. 

ಉಡುಪಿಯ ಜಿಲ್ಲೆಯ ಮಂದರ್ತಿಯವರಾದ ಯೋಗರಾಜ್ ಭಟ್ಟರು ಮುಂದೆ ಹಾವೇರಿ ಬಳಿಯ ತಿಳವಳ್ಳಿಯಲ್ಲಿ ಬಾಲ್ಯವನ್ನು ಕಳೆದು ಮೈಸೂರಿನಲ್ಲಿ ಸಾಹಿತ್ಯದ ವಿದ್ಯಾರ್ಥಿಯಾಗಿದ್ದವರು.  ಅಖಿರಾ ಖುರಸೋವಾ ಅವರ ಚಿತ್ರಗಳನ್ನುನೋಡಿ ಪ್ರಭಾವಿತರಾದ ಯೋಗರಾಜ್ ಭಟ್ ತಮ್ಮ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗುವ ಕನಸನ್ನು ಬೆನ್ನುಹತ್ತಿದರು.  ಗಿರೀಶ್ ಕಾಸರವಳ್ಳಿ, ವಿ ರವಿಚಂದ್ರನ್, ಸುನಿಲ್ ಕುಮಾರ್ ದೇಸಾಯಿ, ಬಿ ಸುರೇಶ್ ಮುಂತಾದವರೊಂದಿಗೆ ಹಲವು ಚಿತ್ರಗಳಿಗೆ ದುಡಿದ ಭಟ್, ಸಿನಿಮಾ ನಿರ್ದೇಶನಕ್ಕೆ ತೊಡಗುವ ಮೊದಲು ದೂರದರ್ಶನಕ್ಕಾಗಿ ಚಕ್ರಎಂಬ ಧಾರಾವಾಹಿ ನಿರ್ದೇಶಿಸಿದ್ದರು. 

ಮುಂಗಾರು ಮಳೆತರುವ ಮೊದಲು ಅವರು ಮಣಿ’, ‘ರಂಗ ಎಸ್ ಎಸ್ ಎಲ್ ಸಿಚಿತ್ರಗಳನ್ನು ನಿರ್ದೇಶಿಸಿದ್ದರು.  ಮುಂಗಾರು ಮಳೆನಂತರದಲ್ಲಿ ಗಾಳಿ ಪಟ’, ‘ಇಂತಿ ನಿನ್ನ ಪ್ರೀತಿಯ’, ‘ಮನಸಾರೆ’, ‘ಜಂಗ್ಲಿ’,   ‘ಪಂಚರಂಗಿ’, ‘ಜಾಕಿ’, ‘ಪರಮಾತ್ಮ’, ‘ಲೈಫು ಇಷ್ಟೇನೇ’, ‘ಅಣ್ಣಾ ಬಾಂಡ್’, ‘ಕಿಲಾಡಿ ಕಿಟ್ಟಿ’, ‘ಜಾನು’, ‘ಡ್ರಾಮಾ’, ‘ವಾಸ್ತು ಪ್ರಕಾರ’ ಹೀಗೆ ಅವರ ಚಿತ್ರರಂಗದ ಹಾದಿ ಸಾಗುತ್ತಿದೆ.  ಇತ್ತೀಚೆಗೆ ನಟನೆಗೂ ಕಾಲಿಟ್ಟಿದ್ದಾರೆ.  ಹಿಂದಿಯಲ್ಲಿ ದೊಡ್ಡ ರೀತಿಯಲ್ಲಿ ಚಿತ್ರ ನಿರ್ದೇಸುತ್ತಿದ್ದಾರೆ ಎಂಬ ಸುದ್ಧಿಯೂ ಇದೆ.  ಯೋಗರಾಜ  ಭಟ್ಟರು, ನಿರ್ದೇಶಕರಷ್ಟೇ ಅಲ್ಲ ಕವಿ, ಬರಹಗಾರ ಕೂಡ. 

ಸಿಕ್ಕಾಪಟ್ಟೆ ರೀಲು ಸುತ್ತುತ್ತಾ ಕನ್ನಡ ಸಿನಿಮಾರಂಗದ ವಿಮೋಚಕರು ತಾವೇ ಎಂದು ಹೇಳಿಕೊಳ್ಳುವ ಬಹುತೇಕ ಗಾಂಧಿನಗರಿಗರ ನಡುವೆ, `ನನ್ನ ಸಿನಿಮಾ ನಾನು ನೋಡಲ್ಲ, ಅವುಗಳ ಯಶಸ್ಸಿಗೆ ನಾನು ಜವಾಬ್ದಾರನೂ ಅಲ್ಲ' ಎಂದು ಹೇಳಿಕೊಳ್ಳುವ ಭಟ್ಟರ ಕೆಂಡಸಂಪಿಗೆಯಲ್ಲಿ ಮೂಡಿಬಂದ ಅಕ್ಕ 2010 ಸ್ಮರಣ ಸಂಚಿಕೆಯಿಂದಆಯ್ದ ಒಂದು ಸಂದರ್ಶನ ನನ್ನ ಗಮನ ಸೆಳೆಯಿತು.    ಅದು ಇಂತಿದೆ:

* ನಿಮ್ಮ ಪ್ರಕಾರ ಚಲನಚಿತ್ರವೆಂದರೇನು?

ಓತ್ಲ ವ್ಯಾಪಾರ... ವಿಪರೀತ ಕೆಲಸದ ಮಧ್ಯೆ ಜನರಿಗೆ ಬಿಡುವಿನ ವೇಳೆ ಬೇಕಾಗುತ್ತದೆ... ಆ ಬಿಡುವಿನ ವೇಳೆಯಲ್ಲಿ ಮಾಡಲೇನೂ ಕೆಲಸ ಇರುವುದಿಲ್ಲ... ಅಂಥ ಟೈಮಿನಲ್ಲಿ ಒಂಥರ ಮನರಂಜನೆ ಬೇಕು ಅನಿಸುತ್ತದೆ. ಆಗ ಆ `ಕೆಲಸ ವಿಮುಕ್ತ' ಜನರು `ಕೆಲಸವಿಲ್ಲದೇ' ಚಿತ್ರಮಂದಿರಕ್ಕೆ ಬರ್ತಾರೆ. ಅಂದರೆ ಚಿತ್ರಮಂದಿರದಲ್ಲಿ ಇದ್ದಷ್ಟು ಹೊತ್ತು ಆ ಅಷ್ಟು ಜನರೂ ಒಂಥರ ನಿರುದ್ಯೋಗಿಗಳೆಂದೇ ಹೇಳಬಹುದು.  ಅಷ್ಟು ಜನ ನಿರುದ್ಯೋಗಿಗಳನ್ನು ಕತ್ತಲು ಕೋಣೆಯಲ್ಲಿ ಗುಡ್ಡೆ ಹಾಕಿ ಕಾಲ್ಪನಿಕವಾದ ಸದ್ದು, ಚಿತ್ರಗಳೊಂದಿಗೆ ಕಥಾಕಾಲಕ್ಷೇಪ ಮಾಡುವುದೇ ಚಲನ ಚಿತ್ರಗಳ ಉದ್ದೇಶ ಎನ್ನಬಹುದು. ಜನರು ಆ ಘಳಿಗೆಯಲ್ಲಿ ನಿರುದ್ಯೋಗಿಗಳಾಗಿ ಬಂದಿರುವುದರಿಂದ ಚಿತ್ರ ನಿರ್ದೇಶಕರು ಕೂಡ ಪಕ್ಕಾ ನಿರುದ್ಯೋಗಿಗಳಂತೆ ಕಥೆ, ಹಾಡು-ಪಾಡು-ಹಾಸ್ಯ ಇತ್ಯಾದಿಗಳನ್ನು ರೀಲು ಸುತ್ತಿ ಬಿಡಬೇಕು... ನಿರುದ್ಯೋಗಂ ನಿರ್ದೇಶಕ ಲಕ್ಷಣಂ!... ಇದು ನಮ್ಮ ಚಿತ್ರಶಿಕ್ಷಣಂ!!!!!

* ಇಷ್ಟೆಲ್ಲ ಸಕ್ಸಸ್‌ಫುಲ್ ಚಿತ್ರಗಳನ್ನು ಮಾಡಿ ಈ ಥರ ಮಾತಾಡಬಹುದೇ?

ಯಶಸ್ಸು ಯಾವತ್ತು ಒನ್‌ವೇ ಅಲ್ಲ... ನನ್ನ ಯಾವ ಚಿತ್ರದ ಯಶಸ್ಸಿಗೂ ನಾನು ನೇರವಾಗಿ ಹೊಣೆಯಾಗಲಾರೆ. ಯಶಸ್ಸು ನೋಡುಗರ ಕಣ್ಣಲ್ಲಿ, ಕಿವಿಯಲ್ಲಿ ಇರ್ತಿದೆ... ಅವರ ಚಪ್ಪಾಳೆ ಸದ್ದಲ್ಲಿ ಇರ್ತದೆ. ನಿರ್ದೇಶಕ, ಅವನಿಗಿರುವ ಅಲ್ಪ ತಿಳುವಳಿಕೆಯಿಂದ ಏನೋ ಒಂದು ಚಿತ್ರದ ಥರಹ ಕಾಣಿಸುವ ವಸ್ತುವೊಂದನ್ನು, ಕಲಾವಿದರ ಥರಹ ಕಾಣುವವರನ್ನು, ಪರದೆ ಮೇಲೆ ತೋರಿಸಲು ಮಾತ್ರ ಸಾಧ್ಯ. ಅದು ಚೆನ್ನಾಗಿದೆ, ಚೆನ್ನಾಗಿಲ್ಲ ಅಂತ ಹೇಳುವುದೆಲ್ಲ ಪ್ರೇಕ್ಷಕನಿಗೆ ಬಿಟ್ಟಿದ್ದು. ಸಕ್ಸಸ್‌ಫುಲ್ ಚಿತ್ರಗಳು ರೆಡಿಯಾಗುವುದು ಜನರಿಂದ, ಅವರ ಜೇಬಿನಿಂದ ಟಿಕೆಟ್ ಕೌಂಟರಿಗೆ ಹರಿದು ಬರುವ ದುಡ್ಡಿನಿಂದ. ಆದ್ದರಿಂದ ನನಗೂ ಸಕ್ಸಸ್‌ಗೂ ಅಂಥ ಸಂಬಂಧವೂ ಇಲ್ಲ, ನಾನು ನನ್ನನ್ನು ಸಕ್ಸಸ್‌ಫುಲ್ ನಿರ್ದೇಶಕ ಎಂದು ಅಪ್ಪಿತಪ್ಪಿಯೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ, ಹೇಳಿರುವ ದಾಖಲೆಯೂ ಇಲ್ಲ. ನೀವು ಆ ತಪ್ಪು ಮಾಡಬಾರದಾಗಿ ವಿನಂತಿ.

* ಅಮೆರಿಕಾ ಬಗ್ಗೆ ತಮ್ಮ ಅಭಿಪ್ರಾಯ? ಇಲ್ಲಿನ ಕನ್ನಡಿಗರ ಪರಿಚಯ ಇದೆಯಾ?

ಅಮೆರಿಕಾ ಬಗ್ಗೆ ಓದಿ, ಕೇಳಿ ಗೊತ್ತು. ಅಮೆರಿಕನ್ ಚಿತ್ರಗಳ ಮುಖಾಂತರ ಮಾತ್ರ ನಾನು ಅಮೆರಿಕಾ ನೋಡಿದ್ದೇನೆ. ಅಲ್ಲೆಲ್ಲ ಭಯಂಕರ ಶಿಸ್ತು, ಸಮಯದ ಪಾಲನೆ, ದಿನ ಸ್ನಾನ ಮಾಡಬೇಕಾದ, ಹಾಯ್ ಹಲೋ ಹೇಳಬೇಕಾದ ಶಿಷ್ಟಾಚಾರಗಳೆಲ್ಲ ಇವೆಯೆಂದು ಕೇಳಿ, ನನಗೂ ಆ ರಾಷ್ಟ್ರಕ್ಕೂ ಕನಸಿನಲ್ಲು ಸಂಬಂಧ ಸಾಧ್ಯವಿಲ್ಲವೆಂಬ ಪೂರ್ವಗ್ರಹ ಹೊಂದಿರುವವನಾಗಿದ್ದು, ನಾನು ಆ ದೇಶದ ಕಡೆ ದಿಂಬಿಟ್ಟು ಮಲಗಿಲ್ಲ.

ಇನ್ನು ಅಲ್ಲಿನ ಕನ್ನಡಿಗರ್ಯಾಲರು ಅಷ್ಟಾಗಿ ಪರಿಚಯ ಇಲ್ಲ. ಮನೋಮೂರ್ತಿ ಹಾಗೂ ಅವರ ಕುಟುಂಬದವರು ಗೊತ್ತು. ನನ್ನ ಪರಿಚಯ ಮಾಡಿಕೊಂಡ ಬಗ್ಗೆ ಅವರಿಗೆ ಪಶ್ಚಾತ್ತಾಪ ಇದೆ. ಮಿಕ್ಕವರೆಲ್ಲ ಬಚಾವಾಗಿದ್ದಾರೆ. ಈಗ ನಿಮ್ಮ ಪರಿಚಯವಾಗಿದೆ. ಪರಿಣಾಮವಾಗಿ ಈ ಅಡ್ಡ ಕಸುಬಿಯ ಲೇಖನ ಇಲ್ಲಿ ಪ್ರಿಂಟ್ ಆಗ್ತಿದೆ.

* ಕನ್ನಡಚಿತ್ರರಂಗ ಇತ್ತೀಚೆಗೆ ದುಃಸ್ಥಿತಿ ಎದುರಿಸುತ್ತಿದೆ ಎಂದು ಕೇಳಿದ್ದೇವೆ... ಇದಕ್ಕೆ ತಮ್ಮ ಪ್ರಕಾರ ಕಾರಣವೇನಿರಬಹುದು?

ಯಾವುದೇ ರಂಗ ದುಃಸ್ಥಿತಿ ತಲುಪಬೇಕೆಂದರೆ ಅದು ಮೊದಲು ಎಂದೋ ಒಂದು ದಿನ ಉಚ್ಛ್ರಾಯ ಸ್ಥಿತಿ ತಲುಪಿರುವ ಉದಾಹರಣೆ ಇರಬೇಕು. ಆ ಥರಹದ ಅತ್ಯಂತ ಸಂತುಷ್ಟದ ದಿನಗಳು ಕನ್ನಡ ಚಿತ್ರರಂಗದಲ್ಲಿ ಯಾವತ್ತಿಗೂ ಇರಲಿಲ್ಲವಾದ್ದರಿಂದ, ಇವತ್ತು ಅದು ದುಃಸ್ಥಿತಿಯಲ್ಲಿದೆಯೆಂದು ಹೇಳುವುದು ತಪ್ಪು. ಇದು ಆವತ್ತು, ಇವತ್ತು, ಯಾವತ್ತೂ ಕೂಡ ದುಃಸ್ಥಿತಿಯಲ್ಲೇ ಉಸಿರಾಡುವ ರಂಗ...  ಸಿರಿಗನ್ನಡಂಗೆಲ್ಗೆ!!!!

* ಯಾಕೆ ಮುಂಗಾರುಮಳೆ ಟೈಮಿನಲ್ಲಿ ಎಲ್ಲ ಸುಭೀಕ್ಷವಾಗಿತ್ತಲ್ವ?

ಜನ ಒಮ್ಮೊಮ್ಮೆ ಹುಚ್ಚರನ್ನೂ ದಾರಿ ಕೇಳುತ್ತಾರೆ..! ಆ ಹುಚ್ಚ ಕೂಡ ಎಲ್ಲೋ ದಾರಿ ತೋರಿಸಲೆಂದು ಕೈ ಎತ್ತಿ, ಇನ್ನೆಲ್ಲೋ ತೋರಿಸಿ, ಆ ದಾರಿಯೇ ಕರೆಕ್ಟಾದ ದಾರಿ ಆಗಿಬಿಡುತ್ತದೆ, ಜೊತೆಗೆ ಆ ಯಶಸ್ಸನ್ನು ಯಶಸ್ಸೆಂದು ಪರಿಗಣಿಸಿ, ಹಲವಾರು ಸಜ್ಜನರು ದಾರಿ ತಪ್ಪುವ ಸಾಧ್ಯತೆಯೂ ಇದೆ!!... ಮುಂಗಾರುಮಳೆ ಆ ಥರ ಆದದ್ದು...!!!

* ಒಳ್ಳೆಯದು. ನೀವು ಅಲ್ಲಿ ಇಲ್ಲಿ ಕವಿತೆ ಬರ್ದಿದ್ದು ಓದಿದೀವಿ... ಚೆನ್ನಾಗೂ ಇರತ್ತೆ... ಯಾಕೆ ಅವನ್ನ ಮುಂದುವರೆಸಲ್ಲ?

ನಾನು ಚೆನ್ನಾಗಿ ಹಾವು ಹಿಡೀತೀನಿ... ಹಾಗಂತ ಹಾವು ಹಿಡ್ಕೊಂಡು ಡಿಸ್ಕವರಿ ಚಾನೆಲ್‌ನಲ್ಲಿ ಬರೋದು ತಪ್ಪಲ್ವ? ಮಾಡೋ ಒಂದು ಕೆಲಸಾನೆ ನೆಟ್ಟಗೆ ಮಾಡಕ್ ಬರಲ್ಲ, ಇನ್ನು ನನ್ನ ಮೂತಿಗೆ ಹಾಡು ಬರೆಯೋ ಸಾಹಿತಿ ಅನ್ನೋ ಬೋರ್ಡು ಬೇರೆ ಬೇಕಾ?!!

* ನಿಮ್ಮನ್ನ ಯಾಕೆ ನೀವು ಬೈಕೋತೀರಿಅದೂ ಎಲ್ಲಾ ಇದ್ದೂ ಕೂಡ?

ನಿಮ್ಮನ್ನ ಬೈದ್ರೆ ನೀವು ವಾಪಾಸ್ ಬೈತೀರಿ... ಜಗಳಾ ಆಗತ್ತೆ.... ಸಿನೆಮಾದೋರ್ನ ಬೈದ್ರೆ ಚಪ್ಲಿ ಹಿಡ್ಕೋತಾರೆ... ಸಾಹಿತಿಗಳಿಗೇನಾದ್ರು ಅಂದ್ರೆ ಸಾಹಿತ್ಯಿಕವಾಗಿ ಅರ್ಥ ಆಗ್ದೆ ಇರೋ ಥರ ಅಮೂರ್ತವಾಗಿ ಜಗಳಾ ಆಡ್ತಾರೇಂತ ಭಯ.... ಪ್ರೇಕ್ಷಕರಿಗೇನಾದ್ರು ಬೈದ್ರೆ ನನ್ನ ಮನೇಗ್ ಕಳಿಸ್ತಾರೆ... ಹೊಟ್ಟೆ ಪಾಡು ಕಷ್ಟ....  ಅದಕ್ಕೆ ಸಿಂಪಲ್ಲಾದ ಮಾರ್ಗ ನನ್ನನ್ನೇ ಬೈಕೊಳ್ಳೋದು.. ಒಂಥರ ನೆಮ್ದಿ... ಯಾವಾಗ್ಲು `ಅಲರ್ಟ್' ಆಗಿರಬೋದು. ನಾವೆಲ್ಲ ಒಂದು ಅಂತ ಚಿಕ್ಕವಯಸ್ಸಿನಲ್ಲಿ ಮೇಷ್ಟ್ರು ಹೇಳ್ಕೊಟ್ಟಿದ್ದಾರೆ... ಅದಕ್ಕೆ ನನ್ನ ಬೈದ್ರೆ ಎಲ್ರನ್ನೂ ಬೈಯ್ದಂಗೆ ಲೆಕ್ಕ ಅಲ್ವಾ?!!!!

* ನಿಮಗೆ ಯಾರನ್ನ ಕಂಡ್ರೆ ತುಂಬಾ ಇಷ್ಟ? ಯಾರನ್ನ ಕಂಡ್ರೆ ತುಂಬ ಕೋಪ?

ನನ್ನ ಚಿತ್ರ ಬಿಡುಗಡೆಯಾದ ಚಿತ್ರಮಂದಿರದಲ್ಲಿನ ಪ್ರೊಜೆಕ್ಟರ್ ಆಪರೇಟರ್ ಕಂಡ್ರೆ ನಂಗೆ ವಿಪರೀತ ಇಷ್ಟ ಹಾಗೂ ಸಹಾನುಭೂತಿ....  ಪಾಪ, ನನ್ನ ಚಿತ್ರ ಓಡಿದಷ್ಟೂ ದಿನ, ಲೆಕ್ಕ ತಪ್ಪಿ ಹೋಗುವಷ್ಟು ಶೋಗಳನ್ನ ಆತ ನೋಡಲೇಬೇಕು... ಅನಿವಾರ್ಯವಾಗಿ...!

ಈ ಮಧ್ಯೆ ಒಬ್ಬನ ಮೇಲೆ ತುಂಬಾ ಕೋಪ ಇದೆ. ನಮ್ಮನೇಲಿ ವಾಷ್‌ಬೇಸಿನ್ ಬಲಗಡೇ ನಲ್ಲೀಲಿ ಬಿಸಿನೀರು ಬರತ್ತೆ... ಸ್ನಾನದ ಟ್ಯಾಪ್‌ನಲ್ಲಿ ಎಡಗಡೇ ನಲ್ಲೀಲಿ ಬಿಸಿನೀರು ಬರತ್ತೆ... ಅವೆರಡನ್ನೂ ಉಲ್ಟಾ ಕೂರಿಸಿದ ಪ್ಲಂಬರ್ ಮೇಲೆ ಸಿಟ್ಟಿದೆ. ದಿನಾ ಯಾವ ನಲ್ಲಿಯಲ್ಲಿ ಬಿಸಿನೀರು ಬರತ್ತೆ ಅಂತ ನೆನಪಿಸಿಕೊಂಡು ನಲ್ಲಿ ತಿರುಗಿಸೋದು ಹಿಂಸೆ ಕೆಲಸ...

* ನಿಮ್ಮ ಉತ್ತರಗಳಲ್ಲಿ ನಿಮಗೊಂದು `ಸೀರಿಯಸ್‌ನೆಸ್' ಇದೆ ಎಂದು ಅನಿಸುವುದೇ ಇಲ್ಲ, ಯಾಕೆ?

ನಾನು ತುಂಬಾ ಸೀರಿಯಸ್ ಹುಡುಗ ಕಣ್ರೀ....! ಎಲ್ರೂ ನನ್ನ ಲೂಸು ಅಂದ್ಕೊಂಡಿದಾರೆ... ನಾನೇನ್ಮಾಡ್ಲೀ? ನೀವಾದ್ರೂ ನನ್ನ ಸೀರಿಯಸ್ಸಾಗಿ ತಗೋತೀರಿ ಅಂತ ದೃಢವಾಗಿ ನಂಬಿದ್ದೆ... ನೀವು ಕೂಡ ಕೈಕೊಟ್ರಿ!!!....

* ಇದುವರೆಗೂ ನೀವು ಮಾತಾಡಿದ್ದರ ತಾತ್ಪರ್ಯವೇನು, ನಿಮ್ಮ ಪ್ರಕಾರ?

ನೀವೇನೂ ಕೇಳೇ ಇಲ್ಲ... ನಾನೇನೂ ಹೇಳೇ ಇಲ್ಲ... ನೀವು ಕೇಳಬೇಕಾದ್ದು ಇನ್ನೂ ತುಂಬಾ ಬಾಕಿ ಇತ್ತು... ನಾನು ಹೇಳಬೇಕಾದ್ದೂ ಕೂಡ ತುಂಬ ಇದೆ... ಅಂದರೆ ಯಾವುದೇ ಸಂದರ್ಶನ ಯಾವತ್ತಿಗೂ ಅಪೂರ್ಣ ಎಂದು ನನ್ನ ಭಾವನೆ. ನನ್ನ ಹುಚ್ಚುತನವನ್ನು ನಾಲ್ಕು ಪೇಜುಗಳಲ್ಲಿ ಹೇಳಲು ಸಾಧ್ಯವಾಗದೇ ಇರುವುದು ನನ್ನ ಅಸಾಮರ್ಥ್ಯ... ನಿಮ್ಮ ಜಾಣತನ ಮತ್ತು ಸೆನ್ಸಿಬಿಲಿಟಿಯನ್ನು ಎರಡು ಸಾಲಿನ ಪ್ರಶ್ನೆಗಳಲ್ಲಿ ತೇಲಿ ಬಿಡಲು ಸಾಧ್ಯವಾಗದೇ ಇರುವುದು ನಿಮ್ಮ ಅಸಾಮರ್ಥ್ಯ.... ಹೋಗಿ ಹೋಗಿ ಕನ್ನಡ ಚಿತ್ರಗಳ ಬಗ್ಗೆ, ತಲೆಕೆಟ್ಟ ಕನ್ನಡ ನಿರ್ದೇಶಕನ ಅಭಿಪ್ರಾಯ ಕೇಳಿದರೆ ಇನ್ನೇನಾಗ್ತದೆ?!!!  ನಮ್ಮಿಬ್ಬರಿಗೂ ಮಾಡಲು ಕೆಲಸವಿಲ್ಲ ಎಂದು ಈಗಾಗಲೇ ಓದುಗರು ತೀರ್ಮಾನಕ್ಕೆ ಬಂದಿರುತ್ತಾರೆ... ಅಥವಾ ಈಗಾಗಲೇ ಓದುಗರು ಹತ್ತಾರು ಪುಟ `ಜಂಪ್' ಮಾಡಿ ಮುಂದೆ ಹೋಗಿರಲೂಬಹುದು. ಅಕಸ್ಮಾತ್ ನೀವು- ಹತ್ತಾರು ಜನ ಗಣ್ಯವ್ಯಕ್ತಿಗಳು ದೀಪ ಹಚ್ಚುವ Photo, ವಾರ್ಷಿಕ ವರದಿ, ಸಾಧನೆಗಳ ಪಟ್ಟಿ, ಅಮೆರಿಕ ಕನ್ನಡಿಗರ ನಗುಮುಖದ ಫೋಟೊ- ಎಲ್ಲವನ್ನೂ ನಿಮ್ಮ ಈ ಸಂಚಿಕೆಯಲ್ಲಿ print ಮಾಡಿದ್ದಲ್ಲಿ, ಈಗಾಗಲೇ ಈ ಪುಸ್ತಕ ಅಥವಾ ಸಂಚಿಕೆಯು ಓದುಗರ ಮನೆಯ ಲ್ಯಾಂಡ್‌ಲೈನ್ ಫೋನಿನ ಕೆಳಗೆ 'phone diary' ಜೊತೆ ಟೆಲಿಫೋನಿಗೆ ಹಾಸಿಗೆಯಂತೆ ಬಿದ್ದಿರುವ ಸಾಧ್ಯತೆಯೂ ಇದೆ!!!

ಈ ಥರವಾಗಿ ಕಾಲ, ಕನ್ನಡ, ಕನ್ನಡ ಚಿತ್ರಗಳು, ಪ್ರೇಕ್ಷಕರು, ಕಲೆ, ಸಾಹಿತ್ಯ, ಓದುಗರೆಲ್ಲ ನಮ್ಮ ಅರಿವಿಗೆ ಮೀರಿ `ಏನೇನೋ' ಆಗಿ ಹೋಗಿವೆ... ಅಂಥದ್ದರಲ್ಲಿ ನನ್ನ ಈ ಸಂದರ್ಶನ ನಿಮಗೆ ಮುಖ್ಯವಾಗಿ ಕಂಡಷ್ಟು ನನಗೇ ಕಾಣುತ್ತಿಲ್ಲ... ಕೈ ಮುಗೀತೀನಿ... ಏನಾದ್ರು ಬೈದು ನಿಲ್ಲಿಸಿಬಿಡಿ....

* ತುಂಬಾ ಚೆನ್ನಾಗಿ ಬೈಯಬಹುದು... ಶುರು ಮಾಡ್ಲಾ?

ಈ ಸಂದರ್ಶನ ಮುಗಿಸಿ ಶುರು ಮಾಡಿ... ಮುಂದಿನ ಸಂಚಿಕೆಗೆ ಬೇಕಾಗಬಹುದು!!!!

* ಸರಿ, ದೊಡ್ಡ ನಮಸ್ಕಾರ!!

ಥ್ಯಾಂಕ್ಯೂ... ಸಣ್ಣ ನಮಸ್ಕಾರ!!!! 


ಯೋಗರಾಜ ಭಟ್ ಅವರು ಕನ್ನಡ ಚಿತ್ರರಂಗದಲ್ಲಿ ಉತ್ತಮ ಚಿತ್ರಗಳನ್ನು ಹೆಚ್ಚು ಹೆಚ್ಚು ನೀಡುವಂತಾಗಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಸಲ್ಲಿಸೋಣ.


ಕೃಪೆ:  ಈ ಲೇಖನದಲ್ಲಿ ಮೂಡಿ ಬಂದಿರುವ ಸಂದರ್ಶನ ಮಾರ್ಚ್ 11, 2011 ಮೀರಾ ಪಿ.ಆರ್ ಅವರು ಕೆಂಡಸಂಪಿಗೆಯಲ್ಲಿ ಮೂಡಿಸಿರುವಂತದ್ದಾಗಿದೆ.  (http://kendasampige.com/article.php?id=4256).  ಇದಕ್ಕಾಗಿ ಕೆಂಡಸಂಪಿಗೆಗೆ ನಾವು ಋಣಿ.


('ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಲೇಖನಗಳನ್ನು ನಮ್ಮ ಸಂಸ್ಕೃತಿ ಸಲ್ಲಾಪ ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ)
Tag: Yogaraj Bhat

ಕಾಮೆಂಟ್‌ಗಳಿಲ್ಲ: