ಭಾನುವಾರ, ಸೆಪ್ಟೆಂಬರ್ 15, 2013

ಎಂ. ಎಸ್. ಸುಬ್ಬುಲಕ್ಷ್ಮಿ

ಎಂ. ಎಸ್. ಸುಬ್ಬುಲಕ್ಷ್ಮಿ

ಭಕ್ತಿ ಎಂಬುದು ನಮ್ಮ ಜೀವನದಲ್ಲಿ  ಪುಟ್ಟ ವಯಸ್ಸಿನಿಂದಲೇ ಅನುಭಾವಕ್ಕೆ ಬಂದ ರೀತಿಯನ್ನು ಗುರುತಿಸುವುದಾದರೆ, ಅದರ ಪ್ರಾರಂಭ ನಮ್ಮ ಮನೆಗಳ ರೇಡಿಯೋಗಳಲ್ಲಿ  ಶನಿವಾರದಂದು ತಪ್ಪದೆ ಕೇಳಿಬರುತ್ತಿದ್ದ  ಕೌಸಲ್ಯ ಸುಪ್ರಜಾರಾಮ ಪೂರ್ವಾಸಂಧ್ಯಾ ಪ್ರವರ್ತತೆಎಂಬ ಸುಶ್ರಾವ್ಯ ಸುಪ್ರಭಾತ.  ಆ ಸುಂದರ ಇನಿದನಿಯ ಮಂತ್ರಘೋಷ ನಮ್ಮನ್ನು ಎಚ್ಚರಿಸುತ್ತಿತ್ತೋ, ಇಲ್ಲ ಮತ್ತಷ್ಟು ಜೋಗುಳ ಹಾಡುತ್ತಾ ಮುದ್ದುಮಾಡುತ್ತಿತ್ತೋಇಲ್ಲ ಇಂತಹ ಸುಂದರ ಇನಿದನಿ ಕೇಳದೆ ವ್ಯರ್ಥವಾಗಿ ನಿದ್ದೆಯಲ್ಲಿ ಸಮಯ ವ್ಯಯಮಾಡುತ್ತಿದ್ದೇವೆಲ್ಲ ಎಂಬ ಭಾವ ಹುಟ್ಟಿಸುತ್ತಿತ್ತೋಹೀಗೆಯೇ ಎಂದು ನಿರ್ದಿಷ್ಟವಾಗಿ  ಅದರ ಜಾಡು ಗುರುತಿಸಿಕೊಳ್ಳುವುದು  ಕಷ್ಟ.  ಹೀಗೆ ನಮ್ಮೊಳಗಿನ ಅವ್ಯಕ್ತದ ಆ ಪರಮಾತ್ಮನನ್ನು ಮೃದುವಾಗಿ ಸ್ಪರ್ಶಿಸುತ್ತಿದ್ದ ಆ ಸುಮಧುರ ಇಂಚರವನ್ನು ಹೇಗೆ ತಾನೇ ಮರೆಯಲು ಸಾಧ್ಯ.  ಈ ಮಹಾತಾಯಿಯ ದನಿಗೆ ಓಡಿಬರದಿರಲಿಕ್ಕೆ ಆ ಪರಮಾತ್ಮನಿಗಾದರೂ ಹೇಗೆ ತಾನೇ ಸಾಧ್ಯವಿದ್ದೀತು.  ಒಂದು ರೀತಿಯಲ್ಲಿ ಆ ವೈಕುಂಠಪುರವಾಸನಾದ  ಶ್ರೀನಿವಾಸ ಎಂ. ಎಸ್. ಸುಬ್ಬುಲಕ್ಷ್ಮಿ  ಅವರ ಭಕ್ತಿಪೂರ್ಣ ಧ್ವನಿ ತರಂಗಗಳೋಪಾದಿಯಲ್ಲಿ  ಸರ್ವಹೃದಯಗಳಲ್ಲೂ ರಾರಾಜಿಸುತ್ತಿದ್ದ ಸಿರಿ ನಿವಾಸನೇ ಹೌದು.

ಭಕ್ತಿ, ಮಾಧುರ್ಯ, ಸೂಕ್ಷ್ಮತೆಗಳ ವಿಚಾರ ನೆನೆದಾಗಲೆಲ್ಲ, "ಓ ಹಾಗೆಂದರೆ ಅದು ಒಂದು ಗಂಭೀರ ಸ್ವರೂಪದ್ದಿರಬೇಕು, ಅದು  ಹೊರಗೇಳದ ಅಂತರ್ಧ್ವನಿಯಾಗಿ  ಎಲ್ಲೋ ಸುಪ್ತವಾಗಿ ಅಡಗಿರುವಂತದ್ದುಮುಂತಾದ ಭಾವಗಳು ನನ್ನಲ್ಲಿ ಒಮ್ಮೊಮ್ಮೆ ಬಂದು ಹೋಗಿರುವುದುಂಟು.  ಹೀಗೆ ಅನಿಸಿದಾಗೆಲ್ಲಾ ನಾನು ಎಂ. ಎಸ್ ಅವರನ್ನು ನೆನೆದು ಅಚ್ಚರಿ ಪಡುತ್ತೇನೆ.  ಇಂಥಹ ಕಂಚಿನ ಕಂಠದಲ್ಲಿ, ಅಂತಹ ಏರು ಧ್ವನಿಯಲ್ಲಿ, ಇಂಥಹ ಸುಸ್ಪಷ್ಟತೆಯ ಶ್ರೇಷ್ಠ ಉಚ್ಚಾರಗಳಲ್ಲಿ ಭಕ್ತಿ, ಮಾಧುರ್ಯ, ಸೂಕ್ಷ್ಮತೆಗಳು ಮನೆ ಮಾಡಿರುವ ಆ ಪರಮಾತ್ಮನ ಲೀಲೆಯ ವೈಭೋಗವಾದರೂ ಎಂತಹ ವೈಶಿಷ್ಟ್ಯದ್ದು ಎಂದು!  ಬಹುಃಶ ಅದಕ್ಕೆ ಉತ್ತರವೂ ಪರಮಾತ್ಮನೇ ಇರಬೇಕು!

ಎಂ. ಎಸ್. ಸುಬ್ಬುಲಕ್ಷ್ಮಿ ಅವರು ಜನಿಸಿದ ದಿನ ಸೆಪ್ಟೆಂಬರ್ 16, 1916. ಇಂದಿಗೆ  ನೂರು  ವರ್ಷಗಳಾಯ್ತು.  ತನ್ನ ತಾಯಿ ಷಣ್ಮುಗವಡಿವು ಅಮ್ಮಾಳ್ ಅವರ ಕಾರ್ಯಕ್ರಮಗಳಲ್ಲಿ  ಏಳೆಂಟು ವಯಸ್ಸಿನ ಬಾಲೆಯಾಗಿರುವಾಗಲೇ ಅವರು ಹಾಡಲು ಪ್ರಾರಂಭಿಸಿದ್ದರು.  ಅವರು ಹತ್ತು  ವರ್ಷದವರಾಗಿದ್ದಾಗಲೆ ಅವರ ಮೊದಲ ಧ್ವನಿಮುದ್ರಣ ಹೊರಬಂತು.  ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕರ್ನಾಟಕ ಸಂಗೀತವನ್ನೂ  ಮತ್ತು ಪಂಡಿತ್ ನಾರಾಯಣ್ ರಾವ್ ವ್ಯಾಸ್ ಅವರಿಂದ ಹಿಂದುಸ್ತಾನಿ ಸಂಗೀತವನ್ನೂ ಅವರು ಕಲಿತರು. ತಮ್ಮ ಹದಿನೇಳನೇ ವಯಸ್ಸಿನಲ್ಲಿ ಮದ್ರಾಸಿನ ಸಂಗೀತ ಅಕಾಡೆಮಿಯಲ್ಲಿ ಪ್ರಥಮ ಸಂಗೀತ ಕಛೇರಿಯನ್ನು ನೀಡಿದ ಎಂ. ಎಸ್   ಮುಂದೆ ನೀಡಿದ ಕಚೇರಿಗಳಿಗೆ, ಹಾಡಿದ ಧ್ವನಿಸುರುಳಿಗಳಿಗೆ ಲೆಕ್ಕವೇ ಇಲ್ಲವೇನೋ.  1945ರಲ್ಲಿ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಮೀರಾಚಿತ್ರದಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದರು.  ಸದಾಶಿವಮ್ ಎಂಬ ಸ್ವಾತಂತ್ರ್ಯ ಹೋರಾಟಗಾರರನ್ನು ಅವರು ಪ್ರೇಮಿಸಿ ವಿವಾಹವಾದರು.

ಎಂ. ಎಸ್. ಸುಬ್ಬುಲಕ್ಷ್ಮಿಯವರ ಸಂಗೀತ ಶ್ರೋತೃಗಳ ವಿಸ್ತಾರ ದೇಶ ವಿದೇಶಗಳ ಎಲ್ಲ ಎಲ್ಲೆಗಳನ್ನೂ ಮೀರಿ ಹರಿದಿದೆ. ಒಮ್ಮೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಉಂಥಾಟ್ ಅವರು ಸುಬ್ಬುಲಕ್ಷ್ಮಿಯವರನ್ನು ಸಭೆಗೆ ಪರಿಚಯಿಸುತ್ತಾ ಸಂಗೀತಕ್ಕೆ ಭೌಗೋಳಿಕ ಎಲ್ಲೆಕಟ್ಟುಗಳಿಲ್ಲ. ಅದು ಸರ್ವರನ್ನೂ ರಂಜಿಸಬಲ್ಲ ವಿಶ್ವಭಾಷೆಎಂದು ಹೇಳಿರುವ ಮಾತುಗಳು ಸುಬ್ಬುಲಕ್ಷ್ಮಿಯವರ ಗಾಯನದ ಸರ್ವಪ್ರಿಯತೆಯನ್ನು ಅರ್ಥಪೂರ್ಣವಾಗಿ ಸೂಚಿಸುವಂತಿದೆ.  ಅವರ ಧ್ವನಿಯಲ್ಲಿ ಹರಿದ ತ್ಯಾಗರಾಜ, ದೀಕ್ಷಿತ, ತಿರುನಾಳ್ಭಾಗವತಆಳ್ವಾರ್, ಆಚಾರ್ಯ, ದಾಸವರೇಣ್ಯರ  ಕೃತಿಗಳ ಸಂಖ್ಯೆ ಎಲ್ಲಾ ಎಲ್ಲೆಗಳನ್ನೂ ಮೀರಿದ್ದು.  ಅವರಿಗೆ ಸಾಹಿತ್ಯ ಮತ್ತು ನಾದ  ಗುಣವಿರುವುವೆಲ್ಲಾ ಯಾವುದೇ ಭಿನ್ನ ಭಾವನೆಯಿಲ್ಲದೆ ಸ್ವೀಕೃತವಾಗಿತ್ತು.  ಅವರು ಯು. ಎನ್. ಜನರಲ್ ಅಸೆಂಬ್ಲಿಯಲ್ಲಿ  ಜಗದೊದ್ದಾರನ’, ಜಯಚಾಮರಾಜ ಒಡೆಯರ ಶಿವಶಿವಭೋ’, ರಾಜಾಜಿಯವರು ಆ ಸಂದರ್ಭಕ್ಕೆ ರಚಿಸಿಕೊಟ್ಟ ಇಂಗ್ಲಿಷ್ ಗೀತೆ, ಶ್ಯಾಮಾಶಾಸ್ತ್ರಿಗಳ ಸರೋದಳ ನೇತ್ರಿಮುಂತಾದ ಕೀರ್ತನೆಗಳನ್ನು ಸೇರಿಸಿ ನಡೆಸಿಕೊಟ್ಟ ಕಚೇರಿ ಪಾಶ್ಚಾತ್ಯ ರಸಿಕರು ಮತ್ತು ವಿದ್ವಾಂಸರುಗಳನ್ನು ತಟ್ಟಿದ ಬಗೆ ಈ ಮಾತುಗಳನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ.

ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಭಾವಯಾಮಿ ರಘುರಾಮಂಎಂಬ ಸ್ವಾತಿ ತಿರುನಾಳರ ಕೃತಿ ಮತ್ತು  ಶ್ರೀರಂಗಮಂಗಳ ನಿಧಿಂ ಕರುಣಾ ನಿವಾಸಂಎಂಬ ಶ್ಲೋಕದೊಂದಿಗೆ ಮೂಡುವ  ಮುತ್ತುಸ್ವಾಮಿ ದೀಕ್ಷಿತರ  ಶ್ರೀರಂಗಪುರವಿಹಾರಗೀತೆಗಳು    ಯಾವುದೇ ಸಾಹಿತ್ಯ ಜ್ಞಾನವಿಲ್ಲದವರಿಗೂ ರಾಮಾಯಣದ ಆಳವಾದ ಅನುಭಾವವನ್ನು ನೀಡುತ್ತವೆ.  ವಲ್ಲಭಾಚಾರ್ಯರ ಅಧರಂ ಮಧುರಂ, ವದನಂ ಮಧುರಂ.... ಮಧುರಾಧಿಪತೆ ಅಖಿಲಂ ಮಧುರಂಗೀತೆಯಲ್ಲಿನ ಶ್ರೀಕೃಷ್ಣನ ಪ್ರೇಮ-ಸೌಂದರ್ಯ-ಆನಂದ ಲಹರಿಗಳ ಶ್ರೇಷ್ಠತೆಯನ್ನು ಎಂ. ಎಸ್. ಅವರ ಧ್ವನಿಯಂತೆ ಅನುಭವ ಕಟ್ಟಿಕೊಡುವ ಮಾದರಿ ಮತ್ತೊಂದು ಸಿಗಲಾರದು. ಭಜಗೋವಿಂದಂ ಭಜಗೋವಿಂದಂ, ಗೋವಿಂದಂ ಭಜ ಮೂಢಮತೆಎಂದು ನಮ್ಮ ಮೂಢಮತಿಯನ್ನು ಪ್ರಶ್ನಿಸುವ ಶಂಕರರ ಅಧ್ಯಾತ್ಮ ಸೌಂದರ್ಯ ಎಂ.ಎಸ್ ಅವರ ಇನಿಧ್ವನಿಯಲ್ಲಿ ನಮ್ಮ ಮೈಮನ ಮರೆಸದಿರುವ ಸಾಧ್ಯತೆಗಳೇ ಇಲ್ಲ.   ಶಂಭೋ ಮಹಾದೇವ ಶರಣಂ ಶ್ರೀಕಾಲದೀಶಎಂಬ ನೀಲಕಂಠನ್ ಶಿವನ್ ಅವರ ಭಕ್ತಿಪೂರ್ಣಗೀತೆಯ ಎಂ.ಎಸ್. ಅವರ ಗಾನದಲ್ಲಿನ ಭಾವಪೂರ್ಣತೆಯಲ್ಲಿ ಸಿಲುಕಿಸುವ ಲೀನತೆ ಅಪೂರ್ವವಾದದ್ದು.  ಇಂಥಹ ಅನುಭಾವಗಳು ವಿಶ್ವದೆಲ್ಲೆಡೆ ಬಹಳಷ್ಟು ಅಭಿಮಾನಿಗಳನ್ನು ಖಂಡಿತವಾಗಿ ಮುಟ್ಟಿರುತ್ತದೆ.  ಡಿ. ವಿ. ಜಿ ಅವರ ಯದುವಂಶ ತಿಲಕನಗೀತೆ ಕೂಡಾ ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಪ್ರಸಿದ್ಧ ಗೀತೆಗಳಲ್ಲಿ ಒಂದು.   ಗುಣ ಯಾವುದೇ ಸಾಹಿತ್ಯದಲ್ಲಿದ್ದರೂ ಎಂ. ಎಸ್. ಅವರಿಗೆ ಅದರ ಬಗ್ಗೆ ಆಪ್ತತೆ. 

ಮದ್ರಾಸಿನಲ್ಲಿ ನಡೆದ ಒಂದು ಸಂಗೀತೋತ್ಸವಕ್ಕೆ ಪಂಡಿತ ನೆಹರೂ ಅವರು ಮುಖ್ಯ ಅತಿಥಿಗಳಾಗಿ ಆಹ್ವಾನಿತರಾಗಿದ್ದರು.  ಎಂ. ಎಸ್. ಸುಬ್ಬುಲಕ್ಷ್ಮಿಯವರ ಕಚೇರಿ ಏರ್ಪಾಡಾಗಿತ್ತು.  ನೆಹರೂರವರು ಆ ಸಂದರ್ಭದಲ್ಲಿ ಸುಬ್ಬುಲಕ್ಷ್ಮಿಯವರನ್ನು ಕುರಿತು ನಾಲ್ಕು ಮಾತನ್ನು ಆಡಬೇಕಾಗಿದ್ದರಿಂದ ಎದ್ದು ನಿಂತು “After all I am a Prime Minister.  What can I speak on the Queen of Music” ಎಂದು ತಮ್ಮ ಸಹಜ ಸುಂದರ ಸುಮಧುರ ಧ್ವನಿಯಲ್ಲಿ ರಾಜಗಾಂಭೀರ್ಯದಿಂದ ನುಡಿದರಂತೆ.  ಅದು ಕೇವಲ ಮಾತಿನ ವೈಖರಿಯಾಗಿಲ್ಲದೆ ಇಡೀ ದೇಶ ಎಂ. ಎಸ್. ಅವರನ್ನು ಕಾಣುತ್ತಿದ್ದ ವೈಶಿಷ್ಟ್ಯತೆಯ ದ್ಯೋತಕವೂ ಆಗಿದೆ.   ಮಹಾತ್ಮ ಗಾಂಧೀಜಿಯವರು ಹರಿ ತುಮ ಹಾರೋಎಂಬ ಒಂದು ಭಜನ್ ಅನ್ನು ಸುಬ್ಬುಲಕ್ಷ್ಮಿಯವರ ಬಾಯಿಯಿಂದಲೇ ಕೇಳಬಯಸಿದರು.  ಈ ಮಾತುಗಳನ್ನು ಕೇಳಿ ಹೃದಯ ತುಂಬಿ ಬಂದ ಸುಬ್ಬುಲಕ್ಷ್ಮಿ ಅವರು ಆ ಭಜನ್ ಅನ್ನು ಕಲಿತು ಮದ್ರಾಸಿನ ಬಾನುಲಿಯಲ್ಲಿ ಹಾಡಿ ನಂತರ ಗಾಂಧೀಯವರ ಸಮ್ಮುಖದಲ್ಲಿ ಕೂಡಾ ಹಾಡಿದಾಗ ಮಹಾತ್ಮರ ಹೃದಯ ಮೂಖವಾಗಿ ಸಂವೇದಿಸಿ ಸಂತೋಷಪಟ್ಟಿತು.  ಅದಾದ ಮೂರುತಿಂಗಳ ನಂತರದಲ್ಲಿ ಗಾಂಧೀಜಿಯವರು ಹಂತಕನಿಗೆ ಬಲಿಯಾದಾಗ ಸುಬ್ಬಲಕ್ಷ್ಮಿ ಅವರಿಗೆ ಆ ಭಜನ್ ಘಟನೆಯ ಮೂಕಶೋಕ ಮಾರ್ದನಿಸಿತು.  ಇಂದಿಗೂ ಗಾಂಧೀಸ್ಮೃತಿಯ ಸಂದರ್ಭದಲ್ಲಿ ಸುಬ್ಬುಲಕ್ಷ್ಮಿ ಅವರು ಹಾಡಿದ ಮಾಹಾತ್ಮರಿಗೆ ಪ್ರಿಯವಾದ ವೈಷ್ಣವ ಜನತೋಗೀತೆಗೇ ಅಗ್ರಪೀಠ.

ಒಮ್ಮೆ ಬೆಂಗಳೂರಿನ ಶಿವಾನಂದ ಸರ್ಕಲ್ ಸಮೀಪದ ರಸ್ತೆ ಬದಿಯಲ್ಲಿ ಗಣೇಶ ಕಾರ್ಯಕ್ರಮಕ್ಕಾಗಿ ನಿರ್ಮಿಸಿದ್ದ ಪೆಂಡಾಲಿನಲ್ಲಿ ನಡೆದ  ಒಂದು ಸಂಗೀತ ಕಚೇರಿ ನೆನಪಾಗುತ್ತದೆ.  ಸುಬ್ಬುಲಕ್ಷ್ಮಿ ಅವರು ಹಾಡುತ್ತಿದ್ದಾಗ ಹೊರಗಡೆ ಮಳೆ.  ಕರೆಂಟ್ ಹೋಗಿ ಬಿಟ್ಟಿತ್ತು.  ಆದರೆ ಸುಬ್ಬುಲಕ್ಷ್ಮಿ ಅವರು ತಮ್ಮ ಗಾಯನ ಆಧ್ಯಾತ್ಮದಲ್ಲಿ ಲೀನವಾಗಿ ಹೋಗಿದ್ದರು.  ಹೊರಗಡೆ ಮಳೆ ಎಂಬ ಸದ್ದು, ಒಳಗಿದ್ದ ಜನರ ತಳಮಳ ಇವ್ಯಾವುವೂ ಅವರನ್ನು ಸ್ಪರ್ಶಿಸಿರಲಿಲ್ಲ.  ಅವರ ಸಮೀಪದಲ್ಲಿ  ಇನಿತು ದೂರದಲ್ಲಿಯೇ ನಿಂತು ಆಲಿಸುತ್ತಿದ್ದ ನನಗಂತೂ ವಿಸ್ಮಯ.  ಈ ಮಹಾತಾಯಿ ತಮ್ಮ ಗಾಯನವನ್ನು ಮುಂದುವರೆಸಿದ್ದರು.  ಸುಮಾರು ಇಪ್ಪತ್ತು ನಿಮಿಷಗಳ ನಂತರದಲ್ಲಿ ಆ ಹಾಡು ಪೂರ್ತಿಯಾದ ನಂತರ ಕಣ್ಣುಬಿಟ್ಟು  ಎನ್ನ ಕರೆಂಟ್ ಪೋಯಿಡ್ಚಾ!ಎಂದು ಮುಗ್ಧವಾಗಿ ಕೇಳಿದರು ಆ ತಾಯಿ.  ಇಂತಹ ಅನನ್ಯ ತಲ್ಲೀನತೆಯ ಅನುಭಾವ ನೆನೆದಾಗಲೆಲ್ಲಾ ಮನಸ್ಸು ಮೂಕವಾಗುತ್ತದೆ.

ಈ ಗಾನ ಸರಸ್ವತಿಯ ಕಂಠಶ್ರೀಯನ್ನು  ಉತ್ತರ ದೇಶದ ಒಬ್ಬ ಬರಹಗಾರರು ಷಹನಾಯ್ ನಾದಕ್ಕೆ ಹೋಲಿಸಿ ಅವರ ಸಂಗೀತ ಕಛೇರಿಯ ಒಂದು ಸುರಮ್ಯ ಚಿತ್ರವನ್ನು ಕೊಡುತ್ತಾರೆ.  ನಿಮಗೆ ಯಾವಾಗಲಾದರೂ ಒಮ್ಮೆ ಅವರ ಗಾಯನವನ್ನು ಕೇಳುವ ಅವಕಾಶ ದೊರೆತರೆ ನೋಡಿ, ವೇದಿಕೆಯ ಮೇಲೆ ಪಕ್ಕವಾದ್ಯಗಳೊಂದಿಗೆ ಕುಳಿತು ಅವರು ಗಾಯನದಲ್ಲಿ ತನ್ಮಯರಾಗಿರುವುದನ್ನು ಕಾಣುವಿರಿ.  ತಮ್ಮ ಮುಂದೆ ಕಿವಿಗಳನ್ನು ತೆರೆದು ತದೇಕದೃಷ್ಟಿಯಿಂದ ಕುಳಿತಿರುವ ಸಾವಿರಾರು ಸಭಿಕರ ಪರಿವೆಯೇ ಅವರಿಗಿರುವುದಿಲ್ಲ.  ಹಾಡು ಮುಗಿದು ಪ್ರೇಕ್ಷಕರಿಂದ ಮೆಚ್ಚುಗೆಯಾಗಿ ಭೋರ್ಗರೆವಂತೆ ಚಪ್ಪಾಳೆಗಳ ಸುರಿಮಳೆಯಾದಾಗಲೇ ಅವರಿಗೆ ಭಾವಸಮಾಧಿಯಿಂದ ಎಚ್ಚರ!  ಆಗ ಅವರು ಪ್ರೇಕ್ಷಕರತ್ತ ಮುಗಳುನಗೆ ಸೂಸಿ ಕೈ ಜೋಡಿಸಿ ನಮಸ್ತೆಹೇಳುವರು”. 

ಸುಬ್ಬುಲಕ್ಷ್ಮಿಯವರಿಗೆ ಭಾರತರತ್ನ ಪ್ರಶಸ್ತಿ, ವಿಶ್ವಸಂಸ್ಥೆ ಗೌರವ, ಮ್ಯಾಗ್ಸೇಸೆ ಅಂತಹ ಎಲ್ಲ ಶ್ರೇಷ್ಠ ಪ್ರಶಸ್ತಿ ಗೌರವಗಳೂ ಸಂದವು.  ಸುಬ್ಬುಲಕ್ಷ್ಮಿ ಅವರಿಗೆ ಜೀವನದಲ್ಲಿ ಸಂಗೀತದ ಹೊರತು ಬೇರೆ ಯಾವುದರಲ್ಲೂ ಹೆಚ್ಚು ಆಸಕ್ತಿ ಇರಲಿಲ್ಲ. ಹಾಡುಗಾರಿಕೆ ಸುಬ್ಬುಲಕ್ಷ್ಮಿಯವರಿಗೆ ಕೇವಲ ಒಂದು ಧನಾರ್ಜನೆಯ ಸಾಧನವಾಗಲಿಲ್ಲ ಅದೊಂದು ತಪಸ್ಸು ಎಂದೇ ಅವರು ಭಾವಿಸಿದ್ದರು. ಧರ್ಮಕಾರ್ಯಗಳಿಗೆಂದು ನೆರವು ಬೇಡಬಂದವರಿಗೆ ಸುಬ್ಬುಲಕ್ಷ್ಮಿ ಅವರು ನೀಡಿದ ಸಹಾಯಾರ್ಥ ಕಾರ್ಯಕ್ರಮಗಳು ಎಣಿಕೆಗೂ ನಿಲುಕದಷ್ಟು.  ಅವರ ಕೊಡುಗೈ ನೀತಿಗೆ ಅಡೆತಡೆಯೇ ಇರಲಿಲ್ಲ ಎಂಬ ಮಾತು ಜನಜನಿತ. 

ಈ ಮಹಾನ್ ತಪಸ್ವಿಯ ಬಗ್ಗೆ ಹೇಳುವುದಕ್ಕೆ ಕೊನೆ ಎಲ್ಲಿದೆ.  ಆಕೆಯ ಗಾನಲೋಕದಲ್ಲಿ ಲೀನವಾಗುವುದಕ್ಕಿಂತ ಮಹಾನ್ ಸುಖವಾದರೂ ಮತ್ತೆಲ್ಲಿಯದು.  ಅವರು ಡಿಸೆಂಬರ್ 11, 2004ರಲ್ಲಿ ನಿಧನರಾದರು.  ದೇಹ ಎಂಬುದು ಅಶಾಶ್ವತ.  ನಾವು ಅವರ ಕಾಲದಲ್ಲಿ ಬದುಕಿದ್ದೇ ನಮ್ಮ ಸೌಭಾಗ್ಯ.  ಎಂ. ಎಸ್. ಅವರ ವರ್ಚಸ್ಸು, ಬದುಕು, ಗಾಯನ ಎಲ್ಲವೂ ಅಮರ.  ಎಲ್ಲವೂ ಮಧುರ.  ಆ ಮಧುರಾಧಿಪತಿಯ ಅಖಿಲವೂ ಮಧುರವಾಗಿರುವಂತೆ.

ಈ ಮಹಾನ್ ಸಂಗೀತ ತಪಸ್ವಿ ಎಂ. ಎಸ್. ಸುಬ್ಬುಲಕ್ಷ್ಮಿ ಎಂಬ ನಾದ ಚೇತನಕ್ಕೆ ಅವರ ಜನ್ಮ ಶತಮಾನೋತ್ಸವ  ಸಂದರ್ಭದಲ್ಲಿ ನಮ್ಮ ಸಾಷ್ಟಾಂಗ ನಮನ.


Tag: M. S. Subbulakshmi