ಭಾನುವಾರ, ಸೆಪ್ಟೆಂಬರ್ 1, 2013

ಆರ್. ಸಿ. ಹಿರೇಮಠ

ಆರ್. ಸಿ. ಹಿರೇಮಠ

ಡಾ. ಆರ್. ಸಿ. ಹಿರೇಮಠ ಅವರ ಪೂರ್ಣ ಹೆಸರು ರುದ್ರಯ್ಯ ಚಂದ್ರಯ್ಯ ಹಿರೇಮಠ ಎಂದು.  ಅವರ ಜನ್ಮದಿನ ಜನವರಿ 15, 1920.  ಆರ್. ಸಿ. ಹಿರೇಮಠರನ್ನು ನಾನು ಮರೆಯಲಿಕ್ಕೆ ಸಾಧ್ಯವಿಲ್ಲ.  ಕಾರಣ ನನಗೆ ತುಂಬಾ ಹೃದಯಕ್ಕೆ ತಟ್ಟಿದ ಭಾಷಣವನ್ನು ಕೇಳಿದ್ದು ಅವರಿಂದ.  ಒಮ್ಮೆ ಭಾರತೀಯ ವಿದ್ಯಾಭವನ ನಾಡಿನಲ್ಲೆಲ್ಲ ಕನ್ನಡದ ವಿವಿಧ ವಿಷಯಗಳ ಬಗೆಗೆ ಉಪನ್ಯಾಸಗಳನ್ನು ಏರ್ಪಡಿಸಲು ಯೋಜಿಸಿ ನಮ್ಮ ಎಚ್ ಎಮ್ ಟಿ ಕನ್ನಡ ಸಂಪದಕ್ಕೆ   ಎರಡು ಉಪನ್ಯಾಸ ಕಾರ್ಯಕ್ರಮಗಳನ್ನು ಹಂಚಿತು.  ಅವುಗಳಲ್ಲಿ ಒಂದು ಡಾ. ಆರ್. ಸಿ. ಹಿರೇಮಠರಿಂದ ಅಲ್ಲಮಪ್ರಭುಗಳ ಕುರಿತು ಉಪನ್ಯಾಸ.  ಅದೇನು ವಿಚಿತ್ರವೋ ಅಂದು ಕಾರ್ಯಕ್ರಮದಲ್ಲಿ ಇದ್ದದ್ದು ಕೇವಲ 8 ಜನ.  ನಮಗೋ ಕಸಿವಿಸಿ.  ಹೇಗೆ ಅಂತಹ ಪ್ರಬುದ್ಧರ ಬಳಿ ಇಷ್ಟು ಕಡಿಮೆ ಮಂದಿಯ ಮುಂದೆ ಮಾತನಾಡಲು ಕೇಳುವುದು.  ಅವರ ಬಳಿ ವಿಷಯ ಹೇಳಿದಾಗ ಅಯ್ಯೋ ಅದಕ್ಯಾಕೆ ಚಿಂತೆ ಆಸಕ್ತವಾದ ಒಂದೇ ಒಂದು ಹೃದಯ ಇದ್ದರೂ ಸಾಕು ಎಂದರು.  ಅಂದು ಅವರ ಮಾತನ್ನು ಕೇಳದಿದ್ದಲ್ಲಿ ನಮ್ಮ ಜೀವನದಲ್ಲಿ ಖಂಡಿತ ಅದೇನೋ ಕಳೆದುಕೊಂಡುಬಿಡುತ್ತಿದ್ದೆವು!  ಅಲ್ಲಿದ್ದ ನಮ್ಮ 8 ಜನರ ಪಾಲಿಗೆ ಅದೊಂದು ಅವಿಸ್ಮರಣೀಯ ಅನುಭವ.  ಹೇಗೆ ಪ್ರಭುದೇವರ ವಿಚಾರಗಳು ಮತಧರ್ಮಗಳ ಮೂಢ ಆಚರಣೆಗಳ ಪ್ರಭಾವದಿಂದ ಮುಕ್ತವಾಗಬೇಕೆಂಬ ಆಶಯದಲ್ಲಿ ಕ್ರಾಂತಿಕಾರಕ ವಿಷಯಗಳಾಗಿದ್ದವು ಎಂಬ ವಿಚಾರವನ್ನು ಅವರು ಒಂದೊಂದಾಗಿ ತೆರೆದಿಡುತ್ತಾ, ಅದೇ ವಿಚಾರ ಭಗವದ್ಗೀತೆಯಲ್ಲಿ ಯಾವ ರೀತಿಯಲ್ಲಿ ಸಮಾನವಾಗಿದೆ ಎಂಬ ದಿವ್ಯನೋಟವನ್ನು ನೀಡತೊಡಗಿದರು.  ಒಂದು ಕ್ರಾಂತಿಕಾರಕ ವಿಚಾರ ಕೇವಲ ಒಂದು ವ್ಯವಸ್ಥೆಯ ಬಂಡಾಯ ಚಿಂತನೆಯಾದ ಮಾತ್ರಕ್ಕೆ, ಅದು ಮಾನವನ ಮೂಲ ಅರಿವಿನಿಂದ ಮೂಡಿದ ಸತ್ಯದ ಪರಿಧಿಯಿಂದ ಆಚೆಗಿನ ವಿಷಯವಾಗಲಿಕ್ಕೆ ಸಾಧ್ಯವಿಲ್ಲಎಂಬ ಮೂಲಸತ್ಯದ ಕುರಿತು ಅವರು ತೆರೆದಿಟ್ಟ ಆಧ್ಯಾತ್ಮ ಪ್ರಪಂಚ ನನ್ನ ಜೀವಮಾನದಲ್ಲಿ ಮರೆಯಲಾಗದ ಘಟನೆ.

ಡಾ. ಆರ್. ಸಿ. ಹಿರೇಮಠರು ಹೇಳಿದ ಒಂದು ಕಥೆ ನನಗೆ ತುಂಬಾ ಇಷ್ಟವಾಗಿರುವುದರಿಂದ ನಿಮ್ಮೊಡನೆ ಅದನ್ನೂ ಹಂಚಿಕೊಂಡುಬಿಡುತ್ತೇನೆ.  ಅಲ್ಲಮ ಪ್ರಭುಗಳು ಲೋಕ ಸಂಚಾರಿಗಳು.  ಊರಿಂದ ಊರಿಗೆ ತಿರುಗುವಾಗೊಮ್ಮೆ ಒಬ್ಬ ರೈತ  ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ.  ಪ್ರಭುಗಳನ್ನು ಕಂಡು ಯಾವುದೋ ತೇಜಸ್ವಿ ವ್ಯಕ್ತಿಯನ್ನು ಕಂಡಂತೆ ಆತ ಕೈಮುಗಿದ. 

ಪ್ರಭುಗಳು ಮುಗ್ಧರಂತೆ ಕೇಳಿದರು.  ಯಾರು ನೀನುನೀನು ಮಾಡುತ್ತಿರುವುದಾದರೂ ಏನನ್ನು?” 

ರೈತ.  ನುಡಿದ, “ನಾನು ರೈತ.  ಲೋಕ ಸಂರಕ್ಷಕ.  ಬೆಳೆಯನ್ನು ಬೆಳೆದು ಈ ಲೋಕದ ಸಕಲಜೀವಿಗಳಿಗೂ ಅನ್ನವನ್ನು ನೀಡುವವ”.

ಪ್ರಭುದೇವರು ಅಯ್ಯೋ ಹುಚ್ಚ ಎಂದು ಗಹಗಹಿಸಿ ನಕ್ಕರು, “ನೀನು ಲೋಕದ ಸಂರಕ್ಷಕ! ಲೋಕಕ್ಕೇ ಅನ್ನವನ್ನು ನೀಡುವವ! ಲೋಕವು ನಿನ್ನಿಂದಲೇ ನಡೆಯುತ್ತಿದೆ.. ಹ.. ಹ. ಹ... !.

ರೈತ ಗಲಿಬಿಲಿಯಾದ.  ಮಹಾಸ್ವಾಮಿ ತಮ್ಮ ನಗೆಯ ಕಾರಣವೇನು?”

ನೀನು ಈ ಲೋಕದ ಸಕಲ ಜೀವಿಗಳಿಗೂ ಅನ್ನವನ್ನು ನೀಡುವವ ಎನ್ನುವೆಯೆಲ್ಲ, ನೀನು ಭೂಮಿಯನ್ನು ಉಳುವಾಗ ಎಷ್ಟು ಜೀವಿಗಳು ತಮ್ಮ ಜೀವವನ್ನು ಕಳೆದುಕೊಳ್ಳುತ್ತವೆ ಎಂಬ ಅರಿವೇನಾದರೂ ನಿನಗೆ ಇದೆಯೋ?”  ಮರುಪ್ರಶ್ನಿಸಿದರು ಪ್ರಭುದೇವರು.

ಈಗ ಆ ರೈತ ಪೂರ್ಣ ಗಲಿಬಿಲಿಯಾದ.  ಮಹಾಸ್ವಾಮಿ ನನ್ನನ್ನು ಮನ್ನಿಸಿರಿ.  ನನ್ನ ಅಹಂಕಾರವನ್ನು ನೀವು ನನಗೆ ತಿಳಿಸಿಕೊಟ್ಟಿರಿ.  ಆದರೆ ಪೂಜ್ಯರು ಕೃಪೆ ಮಾಡಿ ತಿಳಿಸಬೇಕು. ಎಷ್ಟೊಂದು ಜೀವಿಗಳು ನನ್ನ ಈ ಕಾಯಕದಿಂದ ಜೀವ ಕಳೆದುಕೊಳ್ಳುತ್ತಾವೆಂದ ಮೇಲೆ ನಾನು ಈ ಕಾಯಕವನ್ನು ನಿಲ್ಲಿಸಿಬಿಡಬೇಕೆಂಬುದು ತಮ್ಮ ಇಂಗಿತವೇ?”

ಪ್ರಭುದೇವರು ನುಡಿದರು, “ನೀನೇನೂ ನಿನ್ನ ಕಾಯಕವನ್ನು ನಿಲ್ಲಿಸಬೇಕಿಲ್ಲ.  ನಿನ್ನಲ್ಲಿರುವ ನಾನೆಂಬ ಭಾವವನ್ನುಇಲ್ಲವಾಗಿಸಿಕೊಂಡರೆ ಸಾಕು”.

ಇಂತಹ ಹಲವಾರು ಕತೆಗಳನ್ನು ಮಕ್ಕಳಿಗೆ ಕಥೆ ಹೇಳುವ ರೀತಿಯಲ್ಲಿ ಬಣ್ಣಿಸಿದ ಹಿರೇಮಠರು ಇಂತಹ ಚಿಂತನೆಗಳು ಹೇಗೆ ಭಗವದ್ಗೀತೆಯಲ್ಲಿ ಕೂಡ ಹೇಳಲ್ಪಟ್ಟಿದೆ ಎಂಬುದರ ಬಗ್ಗೆ ವಿವರಿಸಿ ನಮ್ಮನ್ನು ನಮ್ಮ ಹೃದಯದಂತರಾಳಕ್ಕೆ ಇಳಿಸಿದರು.  ಒಂದು ವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನದಲ್ಲಿದ್ದ ಹಿರಿಯ ವ್ಯಕ್ತಿ, ಮಹಾನ್ ವಿದ್ವಾಂಸ ತನ್ನ ಕಾರ್ಯಕ್ರಮಕ್ಕೆ ಬಂದ ಕೇವಲ ಎಂಟು ಜನರ ಮುಂದೆ ಸುಮಾರು ಒಂದೂವರೆ ಘಂಟೆಗಳ ಕಾಲದ ಅವಧಿಯವರೆಗೂ ಇನ್ನೇನಕ್ಕೂ ಗಮನ ನೀಡದಂತೆ ಮಾಡಿದ ಈ ಉಪನ್ಯಾಸವನ್ನು  ನನಗೆ ಇಂದೂ ನಂಬಲಾಗುತ್ತಿಲ್ಲ.  ಸಾಮಾನ್ಯವಾಗಿ ತುಂಬಾ ಹೆಚ್ಚಲ್ಲದಿದ್ದರೂ ಸಾಕಷ್ಟು ಜನ ಸೇರುತ್ತಿದ್ದ ನಮ್ಮ ಸಂಪದದ ಕಾರ್ಯಕ್ರಮಗಳಿಗೆಏಕೆ ಕೇವಲ ಎಂಟು ಜನ ಮಾತ್ರ ಅಂದಿನ ಕಾರ್ಯಕ್ರಮದಲ್ಲಿ ಇದ್ದರು ಎಂದು ನನಗೆ ಇಂದು ಕೂಡಾ ಅರ್ಥವಾಗುತ್ತಿಲ್ಲ!  ಆ ಕಾರ್ಯಕ್ರಮ ನನ್ನಲ್ಲಿ ಅಷ್ಟೊಂದು ಮಹತ್ವದ ಪರಿಣಾಮ ಹೇಗೆ ಬೀರಿತು ಎಂದು ಕೂಡ ಅರ್ಥವಾಗುತ್ತಿಲ್ಲ.  ಬಹುಷಃ ನಮ್ಮ ಬದುಕಿನಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೂ ಯಾವುದೋ ನಮ್ಮ ಅರಿವಿಗೆ ಮೀರಿದ ಒಂದು  ಮಹತ್ವದ ಹಿನ್ನಲೆ ಕೂಡಾ  ಇದೆಯೇನೋ ಎಂದೆನಿಸುಸುತ್ತದೆ!  ಈಗ ಡಾ. ಆರ್. ಸಿ. ಹಿರೇಮಠರ ಬದುಕಿನ ಘಟನಾವಳಿಗಳನ್ನು ಓದಿದಾಗಲೂ ಇಂತದ್ದೇ ಭಾವ ನನ್ನನ್ನಾವರಿಸುತ್ತಿದೆ. 

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರುದ್ರಯ್ಯ ಹಿರೇಮಠರು ಸ್ವಪ್ರತಿಭೆಯಿಂದ ಹಂತಹಂತವಾಗಿ ಮೇಲೇರಿದರು.  ಬಡತನದ ಬೇಗೆಯಲ್ಲಿ ಬಸವಳಿದು ಹೋಗಿದ್ದ ತಾಯಿ ವೀರಮ್ಮ ತನ್ನ ನಾಲ್ಕು ಮಕ್ಕಳೊಂದಿಗೆ ಜೀವನವನ್ನೇ  ಮಕ್ತಾಯ ಮಾಡಿಕೊಳ್ಳಲು  ಹೊರಟಿದ್ದಾಗ ಆಲೂರಿನ ಸಂಗಮ್ಮ ಎಂಬ ಮುದುಕಿ ಈ ಯೋಚನೆಯನ್ನು ಬಿಟ್ಟು ನಿನ್ನ ಮಕ್ಕಳನ್ನು ಭಿಕ್ಷಾಟನೆಗೆ ಕಳಿಸು ಜಂಗಮರು  ಭಿಕ್ಷೆ ಬೇಡುವುದರಲ್ಲಿ ಏನೂ ತಪ್ಪಿಲ್ಲಎಂದು ಬುದ್ಧಿವಾದದ ಭರವಸೆ ನೀಡಿದಳು.  ಹೀಗೆ ಭಿಕ್ಷಾಟನೆಯಲ್ಲಿ ಈ ಬಾಲಕ ರುದ್ರಯ್ಯ ಹಿರೇಮಠನ ಬದುಕು ಪ್ರಾರಂಭವಾಯಿತು.  ಜೊತೆಗೆ ಓದುವ ಆಸಕ್ತಿ ತಳೆದಿದ್ದ ರುದ್ರಯ್ಯನಿಗೆ ಅನೇಕ ಉಪಾಧ್ಯಾಯರು  ಪ್ರೋತ್ಸಾಹಿಸಿ ಓದಲು ಅನುಕೂಲ ಮಾಡಿಕೊಟ್ಟರು. 

ರುದ್ರಯ್ಯ ಹಿರೇಮಠರು ತಮ್ಮ ಊರು ಕುರುಡಗಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದು ಮುಗಿಸಿದ ನಂತರ ಓದಲು ಅನುಕೂಲವಿಲ್ಲದೆ ದೂರದ ಗದಗಿಗೆ ಬಂದು, ಬದುಕಿಗಾಗಿ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.  ಅವರ ಓದು ಅಲ್ಲಿಗೇ ಮುಗಿದು ಹೋದ ಘಟನೆಯಾಗಿ ಹೋಗಿತ್ತು.   ಒಂದು ದಿನ ಪೆಟ್ರೋಲ್ ಬಂಕ್ ಬಳಿ ಇದ್ದ  ಶಾಲೆಯ ಬಳಿ ಬಾಲಕ ರುದ್ರಯ್ಯ ಹೋಗಿದ್ದ.  ಆ ಶಾಲೆಯಲ್ಲಿ ಶಾಲಾಧಿಕಾರಿಗಳು ಆರನೇ ವರ್ಗದ ತಪಾಸಣೆ ನಡೆಸಿದ್ದರು.  ಪ್ರಶ್ನೆ ಮಾಡುತ್ತಾ ವೇಣಿಸಂಹಾರಎಂದರೇನು ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.  ಆದರೆ ವಿದ್ಯಾರ್ಥಿಗಳಲ್ಲಿ ಯಾರೂ ಉತ್ತರ ಹೇಳದಿದ್ದಾಗ, ಆಗ ಬಾಗಿಲ ಬಳಿ ನಿಂತ ರುದ್ರಯ್ಯ ತನ್ನ ಪ್ರಾಥಮಿಕ ಶಿಕ್ಷಕರು ತಿಳಿಸಿಕೊಟ್ಟ ಹಾಗೆ ವೇಣಿ + ಸಂಹಾರ ಎಂದು ಬಿಡಿಸಿ ಉತ್ತರ ಹೇಳಿದ.  ಈ ಘಟನೆಯಲ್ಲಿದ್ದ ಅಧಿಕಾರಿಗಳು ಮತ್ತು ಪ್ರಸಿದ್ಧ ಶಿಕ್ಷಕರಾಗಿದ್ದ ಶ್ರೀ. ಕ.ಬ. ಅಂಗಡಿಯವರು ರುದ್ರಯ್ಯನಿಗೆ ತಮ್ಮ ಶಾಲೆಯಲ್ಲಿ ಓದಲು ಅವಕಾಶಮಾಡಿಕೊಟ್ಟರು.  ಹುಡುಗನ ಚಾತುರ್ಯ ತಿಳಿದ ಪೆಟ್ರೋಲ್ ಬಂಕ್ ಮೇಲ್ವಿಚಾರಕ ಬ್ಯಾಡಗಿ ಶಿವಪ್ಪನವರು ಸಹಾ  ರುದ್ರಯ್ಯನಿಗೆ ಓದಲು ಅನುಕೂಲ ಮಾಡಿಕೊಟ್ಟರು.  ಆದರೆ ಮನೆಯಲ್ಲಿ ಕಣ್ಣಿಲ್ಲದ ತಾಯಿ, ತಂಗಿ, ತಮ್ಮಂದಿರನ್ನು ಸಾಕುವ ಹೊಣೆ ಕೂಡ ರುದ್ರಯ್ಯ ಹಿರೇಮಠರ ಮೇಲೆ ಇತ್ತು.  ಹೀಗೆ ಪೆಟ್ರೋಲ್ ಬಂಕ್ ಕೆಲಸ ಮತ್ತು ಓದು ಎರಡನ್ನೂ ಜೊತೆಜೊತೆಯಾಗಿ ಮುಂದುವರೆಸಿದರು.  ಹೀಗೆ ಓದಿ 1934ರ ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾದರು.

ಮುಂದೆ ಬ್ಯಾಡಗಿ ಶಿವಪ್ಪನವರು ರುದ್ರಯ್ಯನಿಗೆ ತಾವೇ ಫೀಸು ಕಟ್ಟಿ ಹೈಸ್ಕೂಲಿಗೆ ಸೇರಿಸಿ ಕೆಮಿಕಲ್ ವರ್ಕ್ಸ್ ನಲ್ಲಿ ದಿನಾ ಮುಂಜಾನೆ ಎರಡು ಗಂಟೆ ಕೆಲಸ ಮಾಡಲು ಸೂಚಿಸಿದರು.  ಹೀಗೆ ರುದ್ರಯ್ಯ ಹಿರೇಮಠರು 1939ರ ಮೆಟ್ರಿಕ್ ಪರೀಕ್ಷೆ ಕಟ್ಟಿ ಗಣಿತ ವಿಷಯದಲ್ಲಿ 100ಕ್ಕೆ 90 ಅಂಕಗಳಿಸಿ ಕೇಂದ್ರದಲ್ಲಿ ಮೇಲುಸ್ಥಾನಗಳಿಸಿ ತೇರ್ಗಡೆ ಹೊಂದಿದರು.

ಕರ್ಣಾಟಕ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ದೊರೆಯದೆ ಇದ್ದಾಗ ಪ್ರೊ.ಆರ್. ವಿ. ಜಹಗೀರದಾರ(ಶ್ರೀರಂಗ) ಅವರು ಆಸಕ್ತಿವಹಿಸಿ ಆರ್ಟ್ಸ್ ವಿಭಾಗಕ್ಕೆ ಸೇರಲು ಸೂಚಿಸಿ ಅಗತ್ಯ ನೆರವು ನೀಡಿದರು.  ಹೀಗೆ ಆರ್ಟ್ಸ್ ಪರೀಕ್ಷೆಯಲ್ಲಿ ಪ್ರಪ್ರಥಮ ಶ್ರೇಣಿ ಪಡೆದರು.  ಅವರ ಪ್ರತಿಭೆಯನ್ನು ಗಮನಿಸಿದ ಡಾ. ಶಿ.ಚೆ. ನಂದೀಮಠ ಅವರು ತಮ್ಮಲ್ಲಿಗೆ ಕಳುಹಿಸಲು ಕರ್ಣಾಟಕ ಕಾಲೇಜಿನ ಅಧ್ಯಾಪಕರಿಗೆ ಸೂಚಿಸಿದರು.  ಹೀಗೆ ರುದ್ರಯ್ಯ ಹಿರೇಮಠರು ಬೆಳಗಾವಿಯ ಲಿಂಗರಾಜ ಕಾಲೇಜಿಗೆ ಬಂದರು.  ಅಲ್ಲಿ ಬಿ.ಎ. ಪರೀಕ್ಷೆಯನ್ನು ಪ್ರಶಸ್ತಿ ಸಹಿತ ಪ್ರಥಮ ಸ್ಥಾನದಲ್ಲಿ ಮುಗಿಸಿದರು.   ಲಿಂಗರಾಜ ಕಾಲೇಜಿನ ಫೆಲೋ ಆಗಿ ಎಂ. ಎ. ಪದವಿ ಪಡೆದು ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಕನ್ನಡ ಅಧ್ಯಾಪಕರಾದರು.  ಮುಂದೆ ಕನ್ನಡ ಪ್ರಾದ್ಯಾಪಕರೂ, ಮುಖ್ಯಸ್ಥರೂ ಆಗಿ ತಮ್ಮ ಸಾಹಿತ್ಯ ಜೀವನಕ್ಕೆ ಒಂದು ವ್ಯವಸ್ಥಿತ ರೂಪವನ್ನು ಕೂಡ ಬಾಗಲಕೋಟೆಯಲ್ಲಿ ಕೊಟ್ಟುಕೊಂಡರು.  ಮುಂದೆ 1951ರಲ್ಲಿ ಕರ್ಣಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ರೀಡರ್ ಆಗಿ, 1957ರಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರೂ ಆಗಿ ಇಡೀ ಕನ್ನಡ ವಿಭಾಗಕ್ಕೆ ವಿವಿಧ ರೀತಿಗಳಲ್ಲಿ ಆನೆಯಬಲವನ್ನು ತಂದುಕೊಟ್ಟರು.  ಈ ಮಧ್ಯೆ 1955ರಲ್ಲಿ ಪಿ.ಎಚ್.ಡಿ ಪದವಿ ಕೂಡಾ ಗಳಿಸಿದರು. ಹೀಗೆ ಭಿಕ್ಷಾವೃತ್ತಿಯಲ್ಲಿ ತೊಡಗಿಸಿಕೊಂಡು, ಕಾಯಕದಲ್ಲಿ ತೊಡಗಿ ಓದನ್ನು ಮುಂದುವರೆಸಿ ಪ್ರಾಧ್ಯಾಪಕರಾಗಿ, 1975ರ ವರ್ಷದಲ್ಲಿ  ಅದೇ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡ ಡಾ. ಆರ್. ಸಿ. ಅವರ  ಜೀವನ ಹೋರಾಟದ್ದು, ಫಲಪ್ರದವಾದದ್ದು.

ಕಾವ್ಯದೆಡೆಗೆ ಡಾ. ಆರ್. ಸಿ. ಅವರ ಗಮನ ತೀರ ಎಳವೆಯಲ್ಲೇ ಹರಿಯಿತು. ಚಿಕ್ಕವಯಸ್ಸಿನಲ್ಲೇ ಹಾಡುಕಟ್ಟಿ ಹಾಡುವುದು ಅವರಿಗೆ ಅಭ್ಯಾಸವಾಗಿತ್ತು.  ಡಾ. ಆರ್. ಸಿ. ಹಿರೇಮಠರ  ಮೊದಲ ಕವನ ಸಂಕಲನ ಪ್ರಕಟವಾದದ್ದು 1948ರಲ್ಲಿ .  ಮುಂದೆ ಹತ್ತು ವರ್ಷ ಅವರು ಆ ಕಡೆ ಗಮನ ಹರಿಸಿರಲಿಲ್ಲ.  1958ರಲ್ಲಿ ವಿದೇಶಕ್ಕೆ ಹೋದಾಗ ಅಲ್ಲಿನ ನಿಸರ್ಗದ ರಮಣೀಯತೆಯನ್ನು ಗಮನಿಸಿದ ಇವರು ಮತ್ತೆ ಕಾವ್ಯರಚನೆಗೆ ಆರಂಭಿಸಿದರು. 

ಕನಸಿನಲಿ ಕನವರಿಸಿ ಕನ್ನಡ
ಕೇಳುವವರೇ ಇಲ್ಲಲಾ!
ಹೆತ್ತತಾಯನುಡಿಯ ಬೆಡಗನು
ಎತ್ತೊಮರೆಯುವನ್ತಾಯ್ತಲಾ!

ಎಂದು ಮರುಗಿದರು.  ಅವರು ಪ್ರಕಟಿಸಿದ ಕವನ ಸಂಕಲನಗಳು ಎರಡು ಮಾತ್ರ - 'ಸುಮಾಂಜಲಿ' ಮತ್ತು 'ಮೌನಸ್ಪಂದನ'.  ಡಾ. ಆರ್. ಸಿ. ಹಿರೇಮಠ ಅವರ ಕಾವ್ಯಸೃಷ್ಟಿಯ ಜೊತೆಗೆ ಅವರ ಕಾವ್ಯವಿಮರ್ಶೆಕೂಡ ಮಹತ್ವದ್ದು.  ಮುಂದೆ ಮೂಡಿದ ಅವರ ಬರಹಗಳೆಲ್ಲಾ ಸಂಪಾದನೆ ಮತ್ತು ಸಂಶೋಧನೆಯ ಕುರಿತಾದದ್ದು.

ಗ್ರಂಥ ಸಂಪಾದನೆಯಲ್ಲಿ ವಿಶಿಷ್ಟ ಕಾರ್ಯ ಮಾಡಿರುವ ಹಿರೇಮಠರು ವೀರಶೈವ ಕವಿಗಳಾದ ಭೀಮ ಕವಿ, ಬಸವ ಕವಿ, ಪದ್ಮಣಾಂಕ, ಷಡಕ್ಷರ ಕವಿ, ಬಸವ ಲಿಂಗಕವಿ, ಶಾಂತ ಲಿಂಗ ದೇಶಿಕ, ರಾಘವಾಂಕ, ಹರಿಹರ, ಚಾಮರಸ ಮುಂತಾದವರ  ಕಾವ್ಯಗಳು, ಕನಕದಾಸರ ಮೋಹನ ತರಂಗಿಣಿ, ನಾಗಚಂದ್ರನ ರಾಮಚರಿತ ಪುರಾಣಂಮುಂತಾದವುಗಳನ್ನು  ಸಮರ್ಥವಾಗಿ ಸಂಪಾದಿಸಿಕೊಟ್ಟಿದ್ದಾರೆ.  ಈ ಸಂಪಾದನೆಯಲ್ಲಿರುವ ಕ್ರಮಬದ್ಧತೆ ಗಮನಿಸಿದರೆ, ಪ್ರಾಚೀನ ಕಾವ್ಯಗಳ ಸಂಪಾದಕನಿಗೆ ಇರಬೇಕಾದ ಆಳವಾದ ಅಧ್ಯಯನ, ಶ್ರದ್ಧೆ, ನಿಷ್ಠೆ, ತಾಳ್ಮೆಯನ್ನು ಸಹಜವಾಗಿ ಹೊಂದಿದ್ದ ಡಾ. ಆರ್. ಸಿ. ಹಿರೇಮಠರು ಕಾವ್ಯ ಸಂಪಾದನಾ ಕ್ಷೇತ್ರದಲ್ಲಿ ಅಜರಾಮರರಾಗಿ ಉಳಿಯುವರು ಎಂಬುದು ವೇದ್ಯವಾಗುತ್ತದೆ.

ಡಾ. ಆರ್.ಸಿ. ಹಿರೇಮಠರು ಪ್ರತ್ಯೇಕ ಆಧುನಿಕ ವಚನ ಸಂಪಾದನಾ ಸಮುದಾಯ (school of Textual criticism of Vachana Literature) ದ ಸಂಸ್ಥಾಪಕರಾದರು.  ತಾಳೆಗರಿ, ಕಾಗದದ ಪ್ರತಿಗಳಲ್ಲಿ ಹುದುಗಿದ್ದ ಅಸಂಖ್ಯ ವಚನಗಳನ್ನು ಪರಿಷ್ಕರಿಸಿ ಸಂಪಾದಿಸುವುದಷ್ಟೇ ಅಲ್ಲದೆ ಅದಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನೂ ಅಮೂಲಾಗ್ರವಾಗಿ ಸಂಶೋಧಿಸಿ ಜನಮನದ ಅಭಿರುಚಿ ವಚನವಾಙ್ಮಯದಲ್ಲಿ ವರ್ಧಿಸುವಂತೆ ಮಾಡಿದ ಕೀರ್ತಿ ಡಾ ಆರ್. ಸಿ. ಹಿರೇಮಠ ಅವರದ್ದು.  ವಚನಸಾಹಿತ್ಯ ಸಂಗ್ರಹಣೆ, ಸಂಪಾದನೆ, ಪ್ರಕಟಣೆಗೆ ಅನುವಾಗುವಂತೆ ಹಸ್ತಪ್ರತಿ ಭಂಡಾರ (Manuscripts Bank) ವನ್ನು ಸ್ಥಾಪಿಸಿ ನಾಡಿನ ಮೂಲೆ ಮೂಲೆಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳನ್ನು ಸಂಗ್ರಹಮಾಡಿದುದು ಅತ್ಯಂತ ಶ್ಲಾಘನೀಯ ಕಾರ್ಯವೇ ಸರಿ.

ಡಾ. ಆರ್. ಸಿ. ಹಿರೇಮಠರ ಸಂಪಾದನೆಯಲ್ಲಿ ಚೆನ್ನಬಸವಣ್ಣನವರ ವಚನಗಳು’, ‘ಬಸವಣ್ಣನವರ ವಚನಗಳು ಕಾಂಡ-1 ಮತ್ತು ಸಿದ್ಧರಾಮೇಶ್ವರ ವಚನಗಳು’, ‘ಅಲ್ಲಮಪ್ರಭುದೇವರ ವಚನಗಳು’, ‘ಸಕಲ ಪುರಾತನರ ವಚನಗಳು’, ‘ಅಕ್ಕಮಹಾದೇವಿ ವಚನಗಳು’, ‘ಶಿವಗಣಪ್ರಸಾದಿ ಮಹಾದೇವಯ್ಯ ಮತ್ತು ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶೂನ್ಯ ಸಂಪಾದನೆಗಳು’, ವಿಶೇಷಾನುಭವ ಷಟ್ ಸ್ಥಲ’, ‘ಮುಕ್ತಿಕಂಠಾಭರಣ’, ‘ವೀರಶೈವ ಚಿಂತಾಮಣಿ’, ‘ಸಿದ್ಧಲಿಂಗಯತಿಯ ಷಟ್ ಸ್ಥಲಜ್ಞಾನಾಮೃತ’, ಬ್ರಹ್ಮಾದ್ವೈತ ಸಿದ್ಧಾಂತ ಷಟ್ ಸ್ಥಲಾಭರಣ’, ‘ಇಪ್ಪತ್ತೇಳು ಶಿವಶರಣೆಯರ ವಚನಗಳು’, ‘ಅಮುಗೆ ರಾಯಮ್ಮ ಮತ್ತು ಅಕ್ಕಮ್ಮನ ವಚನಗಳು’, ‘ನೀಲಮ್ಮನ ವಚನಗಳು ಮತ್ತು ಲಿಂಗಮ್ಮನ ವಚನಗಳುಮುಂತಾದವು ಸಮರ್ಥ ಪ್ರಸ್ತಾವನೆ, ಶಬ್ದಕೋಶ, ವಿಶೇಷ ಪದಕೋಶ, ಪಾರಿಭಾಷಿಕ ಪದಕೋಶಗಳೊಂದಿಗೆ ಸಮರ್ಥವಾಗಿ ಪ್ರಕಟಗೊಂಡಿವೆ.

ಮೂಲತಃ ಸಂಶೋಧಕ ಮನೋಧರ್ಮದಿಂದ ಕೂಡಿದ ಡಾ. ಆರ್. ಸಿ. ಹಿರೇಮಠರು ಸಂಶೋಧನ ರಂಗದಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ.  ವೈಯಕ್ತಿಕ ಸಂಶೋಧನೆಗಳಲ್ಲದೆ ನಲವತ್ತು ಪಿ.ಎಚ್.ಡಿ. ಪ್ರಬಂಧಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.  ಡಾ. ಆರ್. ಸಿ. ಹಿರೇಮಠರ ಸಂಶೋಧನಪರವಾದ ಕಾಣಿಕೆಗಳನ್ನು ತಿಳಿಯಲು ಅವರು ಬರೆದಿರುವ ಮಹಾಕವಿ ರಾಘವಾಂಕ’, ‘Linguistic investigations of some problems on the relationship of Indo-Aryan and Dravidian Languages’, ‘The Strucutre of Kannada’, 'Bhuddism in Karnataka' ಗ್ರಂಥಗಳು, ಹಾಗೂ ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿ ಬರೆದ ಲೇಖನಗಳು, ಮತ್ತು ಅವರು ಸಂಪಾದಿಸಿದ ಸುಮಾರು ಮೂವತ್ತರಷ್ಟು ಗ್ರಂಥಗಳಿಗೆ ಬರೆದ ಪೀಠಿಕೆಗಳನ್ನು ನೋಡಿದಾಗ ಅವರ ಸಂಶೋಧನೆಯ ವ್ಯಾಪ್ತಿಯ ಪರಿಚಯವಾಗುತ್ತದೆ.

ಅವರು ಉಪಕುಲಪತಿಗಳಾಗಿ ವಿಶ್ವವಿದ್ಯಾಲಯದಲ್ಲಿ ಮಾಡಿದ ಸೇವೆ ಕೂಡ ಅಪಾರ.  ಅವರ ಅಧಿಕಾರಾವಧಿಯಲ್ಲಿ  ವಿಶ್ವವಿದ್ಯಾಲಯ ಬಹಳಷ್ಟು ಕಾರ್ಯಕ್ರಮಗಳು, ಸೌಲಭ್ಯಗಳು, ಹೊಸ ಹೊಸ ಅಧ್ಯಯನಾ ವ್ಯವ್ಯಸ್ಥೆ, ಸಂಶೋಧನಾ ವಿಧಾನಗಳು, ವಿವಿಧ ಪ್ರದೇಶಗಳಲ್ಲಿ ಶೈಕ್ಷಣಿಕ ಬೆಳವಣಿಗೆ ಹೀಗೆ ಸರ್ವತೋಮುಖ ಅಭಿವೃದ್ಧಿಯನ್ನೂ ಸಾಧಿಸಿತು.  ಹೀಗೆ ಸ್ವಯಂ ಏಕಮುಖವಾಗಿ ಪ್ರಗತಿಯನ್ನು ಸಾಧಿಸಿ ಶೈಕ್ಷಣಿಕ ಪ್ರಗತಿಯನ್ನೂ ಸಾಧಿಸಿದ ಕೀರ್ತಿ ಡಾ. ಆರ್. ಸಿ. ಹಿರೇಮಠ ಅವರದ್ದು. 

ಕನ್ನಡ ನಾಡು ಡಾ. ಆರ್. ಸಿ. ಹಿರೇಮಠರಿಗೆ 59ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ನೀಡಿತು.  ತೆಲುಗು, ತಮಿಳು, ಮಲಯಾಳಂ, ಕನ್ನಡ ಭಾಷೆಗಳ ಕುರಿತು ದ್ರಾವಿಡ ಭಾಷಾ ಜ್ಞಾನ ಕೇಂದ್ರದ ನಿರ್ದೇಶಕರಾಗಿ ಸಹಾ ಅವರು ಸೇವೆ ಸಲ್ಲಿಸಿದ್ದರು.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿಬಿಕ್ಷಾಟನೆಯಲ್ಲಿ ತೊಡಗಿಸಿಕೊಂಡು ವಿದ್ಯಾಭ್ಯಾಸದ ಆಸಕ್ತಿ ಕಳೆದುಕೊಳ್ಳದೆ, ಚಿಕ್ಕ ವಯಸ್ಸಿನಲ್ಲೇ ದುಡಿಯಲು ತೊಡಗಿ ಜೊತೆಯಲ್ಲಿಯೇ ಅಧ್ಯಯನವನ್ನೂ ನಡೆಸಿ, ಸಂಸಾರದ ಹೊಣೆ ಹೊತ್ತು, ಕುರುಡಿ ತಾಯಿ ತಂಗಿ, ತಮ್ಮಂದಿರನ್ನು ಬಡತನದಿಂದ ಸಾಕಿ ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸಿ ಆ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನೂ ನೀಡಿದ ಧೀಮಂತ ವ್ಯಕ್ತಿತ್ವ ಡಾ. ಆರ್. ಸಿ. ಹಿರೇಮಠ ಅವರದ್ದು.

ಈ ಮಹಾನ್ ಚೇತನಕ್ಕೆ ನಮ್ಮ ನಮನ.


(ಮಾಹಿತಿ ಆಧಾರ: ಈ ಲೇಖನದಲ್ಲಿ ಮೂಡಿರುವ ಡಾ. ಆರ್. ಸಿ.  ಹಿರೇಮಠರ ಬದುಕು ಮತ್ತ್ತ ಸಾಧನೆಗಳ ಕುರಿತಾದ ಮಾಹಿತಿಗಳನ್ನು ಪ್ರೊ. ಆರ್ ರಾಚಪ್ಪನವರು ಬರೆದಿರುವ ಲೇಖನದಿಂದ ಆಧರಿಸಿದ್ದೇನೆ)

Tag: R. C. Hiremath

ಕಾಮೆಂಟ್‌ಗಳಿಲ್ಲ: