ಸೋಮವಾರ, ಸೆಪ್ಟೆಂಬರ್ 2, 2013

ಸುಬ್ರಹ್ಮಣ್ಯನ್ ಚಂದ್ರಶೇಖರ್

ಸುಬ್ರಹ್ಮಣ್ಯನ್ ಚಂದ್ರಶೇಖರ್

ಅಕ್ಟೋಬರ್ 19, ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಮೂಲ ಸಂಜಾತ ಪ್ರಖ್ಯಾತ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಜನ್ಮದಿನ.

ಸುಬ್ರಹ್ಮಣ್ಯನ್ ಚಂದ್ರಶೇಖರ್, ಭಾರತೀಯ ಮೂಲದ ಅಮೇರಿಕ ದೇಶದ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ. ಗೆಳೆಯರೆಲ್ಲರು ಅವರನ್ನು ಪ್ರೀತಿಯಿಂದ 'ಚಂದ್ರ' ಎಂದೇ ಸಂಬೋಧಿಸುತ್ತಿದ್ದರು. 1985ರಲ್ಲಿ 'ಡಾ.ಚಂದ್ರ' ಮತ್ತು ಅಮೆರಿಕಾದ  'ವಿಲ್ಲಿಫೌಲರ್'  ಜಂಟಿಯಾಗಿ  'ನೋಬೆಲ್ ಪ್ರಶಸ್ತಿ'ಯನ್ನು ಹಂಚಿಕೊಂಡರು. ವಿಶ್ವದ ಶ್ರೇಷ್ಟ ವಿಜ್ಞಾನ ಬರಹಗಾರರಲ್ಲಿ ಒಬ್ಬರಾದ ಆರ್ಥರ್ ಮಿಲ್ಲರ್ ಹೇಳುವಂತೆ, ಅವರೊಬ್ಬ 'ಖಭೌತ ವಿಜ್ಞಾನಿ' - 'ನಕ್ಷತ್ರಲೋಕದ ಅನಭಿಷಕ್ತ ಚಕ್ರವರ್ತಿ'.

ಇವರು ನೊಬೆಲ್ ವಿಜ್ಞಾನಿ ಸರ್ ಸಿ.ವಿ.ರಾಮನ್‌ರ ಸಮೀಪ ಸಂಬಂಧಿ. ಜನನ ಅಕ್ಟೋಬರ್ 19, 1910 ಲಾಹೋರ್ನಲ್ಲಿ. ತಂದೆ ಸುಬ್ರಹ್ಮಣ್ಯಂ ಅಯ್ಯರ್ ವಾಯವ್ಯ ರೈಲ್ವೆಯಲ್ಲಿ 'ಸಹಾಯಕ ಆಡಿಟರ್ ಜನರಲ್' ಆಗಿದ್ದರು. ತಂದೆಯವರು ಚೆನ್ನೈಗೆ ವರ್ಗವಾಗಿ ಬಂದಾಗ, 'ಟ್ರಿಪ್ಲಿಕೇನ್‌'ನಲ್ಲಿ 'ಹಿಂದೂ ಹೈಸ್ಕೂಲ್' ಸೇರಿದರು. ಗಣಿತದಲ್ಲಿ ಅಪಾರ ಪ್ರತಿಭೆ, ಮತ್ತು ಅದ್ಭುತ ನೆನೆಪಿನ ಶಕ್ತಿಯನ್ನು ಹೊಂದಿದ್ದರು. ಅದಕ್ಕೆ ಪುಟವಿಟ್ಟಂತೆ ವಿಜ್ಞಾನದಲ್ಲಿ ತೀವ್ರವಾದ ಆಸಕ್ತಿ, ಉತ್ಸಾಹ.  1925ರಲ್ಲಿ ಪ್ರೆಸಿಡೆನ್ಸಿ ಕಾಲೇಜ್ ಸೇರಿದಾಗ ಭೌತಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡರು. 1930ರಲ್ಲಿ ಪದವೀಧರರಾದರು. ಇಂಗ್ಲೀಷ್ ಸಾಹಿತ್ಯದಲ್ಲಿ ಅದರಲ್ಲೂ 'ವಿಕ್ಟೋರಿಯನ್ ಯುಗದ ಶೈಲಿಯ ಸುಂದರ-ಇಂಗ್ಲೀಷ್-ಸಾಹಿತ್ಯ'ದಲ್ಲಿ ಅತ್ಯಾಸಕ್ತರು. ಆಗಿನ ಕಾಲದ ಇಂಗ್ಲೀಷ್ ಭಾಷೆಯ ಪ್ರಕಾಂಡ ಪಂಡಿತರ ಸಾಹಿತ್ಯವನ್ನು ಚೆನ್ನಾಗಿ ಅರಗಿಸಿಕೊಂಡ 'ಚಂದ್ರ', ತಮ್ಮ ವೈಜ್ಞಾನಿಕ ಬರಹದಲ್ಲಿ ಸಾಹಿತ್ಯದ ಸೊಗಡನ್ನು ತುಂಬಿಡುತ್ತಿದ್ದರು. ಆಗಿನ ಕಾಲದ 'ನೋಬೆಲ್ ಪ್ರಶಸ್ತಿ ವಿಜೇತ', 'ಹ್ಯಾನ್ಸ್ ಬೇಥ್' ಹೇಳುವಂತೆ-ಚಂದ್ರಾರವರ ಬರಹವೆಂದರೆ, 'ವಿಕ್ಟೋರಿಯನ್ ಯುಗದ ಸೌಂದರ್ಯ'ವೆಲ್ಲವೂ ಅವರ ಸಾಹಿತ್ಯದಲ್ಲಿ ಮೇಳೈಸಿರುತ್ತಿತ್ತು. ವಿದ್ಯಾರ್ಥಿ ದೆಸೆಯಲ್ಲೇ 'ವೈಜ್ಞಾನಿಕ ವಿಷಯಗಳ ಮೇಲೆ ಪ್ರಬಂಧ' ಬರೆದಿದ್ದರು.

ಮದ್ರಾಸ್ ನ 'ಪ್ರೆಸಿಡೆನ್ಸಿ ಕಾಲೇಜಿ'ನಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದಾಗ, ತಮಗಿಂತಾ ಒಂದು ವರ್ಷ ಜೂನಿಯರ್ ಆಗಿದ್ದ, 'ರಿಸರ್ಚ್ ಫೆಲೊ ಲಲಿತ ದೊರೈಸ್ವಾಮಿ' ಯವರ ಪರಿಚಯವಾಯಿತು. ಅವರಿಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾದರು.

1930ರ ಮೇನಲ್ಲಿ ಇಂಗ್ಲೆಂಡಿನಲ್ಲಿ ಸಂಶೋಧನೆ ಮಾಡಲು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ಮಂಜೂರಾಯಿತು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾದರು. 1931ರ ಮೇನಲ್ಲಿ ಲಂಡನ್‌ನ ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿಯ ಸಭೆಗಳಲ್ಲಿ ಭಾಗವಹಿಸಿ, ತಮ್ಮ ಪ್ರಬಂಧಗಳನ್ನು ಓದಿದರು. 1931ರ ಜುಲೈನಲ್ಲಿ ಜರ್ಮನಿಗೆ ತೆರಳಿ, ವರ್ಗ ನಿಯಮ, ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ನಕ್ಷತ್ರಗಳ ಕುರಿತು ಅಧ್ಯಯನ ಮಾಡಿದರು. 1932ರ ಜನವರಿಯಲ್ಲಿ 'ಮಾದರಿ ದ್ಯುತಿಗೋಳ'ಗಳ ಬಗ್ಗೆ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯಲ್ಲಿ ವಿಶಿಷ್ಟ ಪ್ರಬಂಧ ಮಂಡಿಸಿ, ಎಡಿಂಗ್‌ಟನ್ ಮತ್ತು ಮಿಲ್ಸ್‌ರ ಮೆಚ್ಚುಗೆಗೆ ಪಾತ್ರರಾದರು. ಬೆಲ್ಜಿಯಂನ ಲೀಡ್ ವಿಶ್ವವಿದ್ಯಾನಿಲಯದಲ್ಲಿ 'ಖಭೌತಶಾಸ್ತ್ರ'ದ ಬಗ್ಗೆ ನೀಡಿದ ಸರಣಿ ಉಪನ್ಯಾಸಗಳು ಮುಂದೆ ಪುಸ್ತಕರೂಪದಲ್ಲಿ ಪ್ರಕಟವಾದವು.

ಅಮೆರಿಕಾ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್‌ನಲ್ಲಿಯ  'ಯೆರ್ಕ್ಸ್ ಬಾಹ್ಯಾಕಾಶ ನಿರೀಕ್ಷಣಾಲಯ'ದಲ್ಲಿ ಸಂಶೋಧನಾ ಸಂಯೋಜಕರಾಗಿ ಕೆಲಸ ಮಾಡಲು ಚಂದ್ರ ಅವರಿಗೆ ಆಹ್ವಾನ ಬಂದಿತು.  ಯೆರ್ಕ್ಸ್‌ನಲ್ಲಿ ವಿಶ್ವದ ಅತ್ಯಂತ ದೊಡ್ಡ ವಕ್ರೀಭವನ ದೂರದರ್ಶಕವಿತ್ತು. ಇಲ್ಲಿ ಚಂದ್ರಶೇಖರ್‌ರವರು ಸುಮಾರು 27 ವರ್ಷಗಳ ಕಾಲ ಕೆಲಸ ಮಾಡಿದರು. ಉಪಾಧ್ಯಾಯ ವೃತ್ತಿಯೊಂದಿಗೆ ಸಂಶೋಧನೆಯೂ ಜೊತೆಜೊತೆಗೆ ನಡೆಯಿತು. 1938-44ರವರೆಗೆ ನಕ್ಷತ್ರಗಳ ಚಲನಶಾಸ್ತ್ರ, ಚಲನಘರ್ಷಣೆಯ ಬಗ್ಗೆ ಸಂಶೋಧನ ನಡೆಸಿದರು. 1943ರಲ್ಲಿ ಪ್ರಾಧ್ಯಾಪಕರಾದರು. 1952-1971ರವರೆಗೆ 'ಆಸ್ಟ್ರೋ ಫಿಸಿಕಲ್ ಜರ್ನಲ್‌'ನ ವ್ಯವಸ್ಥಾಪಕ ಸಂಪಾದಕರಾಗಿದ್ದರು.

1934ರಲ್ಲಿ ಶ್ವೇತ ಕುಬ್ಜಗಳು (White Dwarf) ಹಾಗೂ ಮಿತಿಯುಳ್ಳ ರಾಶಿ ಕುರಿತು ರಷ್ಯಾದ 'ಪುಲ್ಕೋವೊ ಗ್ರಹವೀಕ್ಷಣಾಲಯ'ದಲ್ಲಿ ಉಪನ್ಯಾಸಗಳನ್ನು ನೀಡಿದರು. ನಕ್ಷತ್ರಗಳಲ್ಲಿರುವ ಜಲಜನಕವು ವ್ಯಯವಾಗುತ್ತಾ ಹೋದಂತೆ, ಅವುಗಳ ಸ್ಥಾನದಲ್ಲಿ 1:4 ರ ಅನುಪಾತದಲ್ಲಿ ಹೀಲಿಯಮ್ ರೂಪುಗೊಂಡು, ನಕ್ಷತ್ರವು ಸಂಕುಚಿತವಾಗುತ್ತಾ ಹೋಗುತ್ತದೆ. ಹೀಗಾಗಿ ದ್ರವ್ಯರಾಶಿ ಸ್ಥಿರವಾಗಿ, ಸಾಂದ್ರತೆ ಹೆಚ್ಚಿ, ನಕ್ಷತ್ರದೊಳಗೆ ಒತ್ತಡವು ಅಧಿಕವಾಗುತ್ತದೆ.  ಇದರ ಫಲವಾಗಿ ಪರಮಾಣು ವ್ಯವಸ್ಥೆ ಬಲಹೀನವಾಗಿ, ಎಲೆಕ್ಟ್ರಾನ್ ಹಾಗೂ ನ್ಯೂಕ್ಲಿಯಸ್ ಪ್ರತ್ಯೇಕಗೊಳ್ಳುತ್ತವೆ.  ಈ ಪ್ರಕ್ರಿಯೆ ಮುಂದುವರೆದಂತೆ ಶ್ವೇತಕುಬ್ಜಗಳು ರೂಪುಗೊಳ್ಳುತ್ತವೆ.  ನಕ್ಷತ್ರಗಳ ಭಾರ ಹೆಚ್ಚಿದರೂ, ಅವುಗಳೊಳಗಿನ ದ್ರವ್ಯರಾಶಿ ಒಂದು ಪರಿಮಿತಿಯಲ್ಲಿರುತ್ತವೆ.  ಅಂಥ ನಕ್ಷತ್ರ ಸೂರ್ಯನ 1.44 ರಷ್ಟಕ್ಕಿಂತ ಹೆಚ್ಚಾಗಿರಲು ಸಾಧ್ಯವಿಲ್ಲವೆಂದು ಚಂದ್ರಶೇಖರ್ ಪ್ರತಿಪಾದಿಸಿದರು.  ಅಲ್ಲದೆ ಯಾವುದೇ ನಕ್ಷತ್ರದ ದ್ರವ್ಯರಾಶಿ ಈ ಮಿತಿಗಿಂತ ಹೆಚ್ಚಾಗಿದ್ದರೆ, ಅದು ಸ್ಫೋಟಗೊಂಡು ಸ್ವಲ್ಪಾಂಶ ವಸ್ತುವನ್ನು ವಿಸರ್ಜಿಸಿ, ಶ್ವೇತಕುಬ್ಜವಾಗುತ್ತದೆ ಎಂದು ವಿವರಿಸಿದರು.  ಅಂದರೆ ಯಾವುದೇ ಶ್ವೇತಕುಬ್ಜದ ದ್ರವ್ಯರಾಶಿ 1.44ರ ಮಿತಿಗಿಂತ ಹೆಚ್ಚಾಗಿರುವುದಿಲ್ಲ.  ಈ ಮಿತಿಯನ್ನು "ಚಂದ್ರಶೇಖರ್ ಮಿತಿ" ಎನ್ನುವರು. ಚಂದ್ರಶೇಖರ್ ಈ ಮಿತಿಯನ್ನು ಗಣಿತದ ಲೆಕ್ಕಾಚಾರಗಳಿಂದಲೇ ಕಂಡುಹಿಡಿದರು.  ಈ ಮಿತಿಗಿಂತ ಹೆಚ್ಚು ಹಿಗ್ಗುವ ನಕ್ಷತ್ರ ಸಾವಿರಾರು ಅಣುಬಾಂಬ್‌ಗಳು ಏಕಕಾಲದಲ್ಲಿ ಸ್ಫೋಟಿಸುವಂತೆ ಸಿಡಿದು, ಸೂಪರ್‌ನೋವಾ ಎಂಬ ಹೊಳಪಿನ ನಕ್ಷತ್ರವಾಗುತ್ತದೆ.  ಶ್ವೇತ ಕುಬ್ಜಗಳ ಬಗ್ಗೆ ಅವರು ನಡೆಸಿದ ಸಂಶೋಧನೆ 1944ರ ನಂತರ ಅವರಿಗೆ ಮನ್ನಣೆ ತಂದುಕೊಟ್ಟಿತು.

ಈ ಸಮಯದಲ್ಲಿ ಡಾ. ಚಂದ್ರ, ನಕ್ಷತ್ರಗಳ ಸಂರಚನೆಯ ಬಗ್ಗೆ ಹೊಸ ಕಾಣಿಕೆಯನ್ನು ಒದಗಿಸಿದರು. ಅದರ ಪರಿಪೂರ್ಣತೆಯ ಬದ್ಧತೆಗೆ 20 ಕ್ಕೂ ಮಿಕ್ಕಷ್ಟು ಗ್ರಂಥಗಳು ಹಾಗೂ ನೂರಾರು, ಸಂಶೋಧನಾ ಸಂಬಂಧೀ ಲೇಖನಗಳು ಸಾಕ್ಷಿಯಾಗಿವೆ. ಅತ್ಯಂತ ಉಚ್ಚಮಟ್ಟದ ಶಿಕ್ಷಕರಾಗಿದ್ದ ಚಂದ್ರಶೇಖರ್ ಅವರ ಶಿಷ್ಯರೂ ಅವರಷ್ಟೇ ಪ್ರಗತಿಯನ್ನು ಸಾಧಿಸಿದರು. ಡಾ.ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ 5೦ ಕ್ಕೂ ಮಿಗಿಲಾಗಿ 'ಡಾಕ್ಟೊರೇಟ್ ಪದವಿ' ಗಳಿಸಿದ್ದಾರೆ. 'ಯೇರ್ಕ್ಸ್ ಸಂಶೋಧನಾಲಯ'ದಲ್ಲಿ ಚಂದ್ರರ ಶಿಷ್ಯರಾಗಿದ್ದ  'ಲೀ' ಮತ್ತು  'ಯಾಂಗ್' ಮುಂದೆ 1957ರಲ್ಲಿ ಗುರುಗಳಿಗಿಂತ ಮೊದಲೇ ಕಣ-ಭೌತವಿಜ್ಞಾನದಲ್ಲಿ ನಡೆಸಿದ ಸಂಶೋಧನೆಗೆ 'ನೋಬೆಲ್ ಪ್ರಶಸ್ತಿ 'ಗಳಿಸಿದ್ದರು.

ಚಂದ್ರಶೇಖರ್ ಅವರಿಗೆ  'ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಡಿಎಸ್‌ಸಿ ಪದವಿ',  'ಇಂಗ್ಲೆಂಡ್‌ನ ರಾಯಲ್ ಸೊಸೈಟಿಗೆ ಆಯ್ಕೆ ಗೌರವ',  'ರೇಡಿಯೋ ಆಕ್ಟಿವ್ ಟ್ರಾನ್ಸ್‌ಫರ್' ಪುಸ್ತಕಕ್ಕೆ, ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಅತ್ಯುನ್ನತ ಪ್ರಶಸ್ತಿಯಾದ 'ಆಡಮ್ ಬಹುಮಾನ',  ಬ್ರೂಸ್ ಪದಕ,  'ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿಯ ಚಿನ್ನದ ಪದಕ',  'ರಂಫರ್ಡ್ ಪ್ರಶಸ್ತಿ',  ಭಾರತ ಸರ್ಕಾರದ, 'ಪದ್ಮಭೂಷಣ ಪ್ರಶಸ್ತಿ ಮತ್ತು 1983ರಲ್ಲಿ ಇವೆಲ್ಲಕ್ಕೂ ಕಳಶವಿಟ್ಟಂತೆ  1983ರಲ್ಲಿ 'ಶ್ವೇತಕುಬ್ಜಗಳನ್ನು ಕುರಿತ ಸಂಶೋಧನೆಗೆ ನೊಬೆಲ್ ಪ್ರಶಸ್ತಿ' ಮುಂತಾದ ಪ್ರತಿಷ್ಟಿತ ಗೌರವಗಳು ಸಂದವು. 

ಸುಬ್ರಹ್ಮಣ್ಯನ್ ಚಂದ್ರಶೇಖರ್, 'ಪ್ರಿನ್ಸಿಪಲ್ಸ್ ಆಫ್ ಸ್ಟೆಲಾರ್ ಡೈನಾಮಿಕ್ಸ್' ಮುಂತಾದ ಗ್ರಂಥಗಳನ್ನು ಬರೆದು ಪ್ರಕಟಿಸಿದರು. 1980ರಲ್ಲಿ ಸ್ವಇಚ್ಛೆಯಿಂದಲೇ ಕೆಲಸದಿಂದ ನಿವೃತ್ತಿ ಪಡೆದರು. ಇಳಿವಯಸ್ಸಿನಲ್ಲೂ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದ್ದರು.  ಸಾಹಿತ್ಯದಲ್ಲೂ ಅವರಿಗೆ ಅಪಾರ ಆಸಕ್ತಿ ಇತ್ತು.  ಅಮೆರಿಕದಲ್ಲಿದ್ದರೂ ಪ್ರತಿನಿತ್ಯದಲ್ಲಿ ಅವರ ಉಡುಗೆ-ತೊಡುಗೆ ದಕ್ಷಿಣಭಾರತದ ಪಂಚೆ, ಮೇಲಂಗಿ ಮಾತ್ರ.  ಕೇಳುತ್ತಿದ್ದುದು ಕರ್ನಾಟಕ ಸಂಗೀತ. ಅರವತ್ತೈದು ವರ್ಷಗಳ ಕಾಲ ನಿರಂತರವಾಗಿ ಸಂಶೋಧನೆಯಲ್ಲಿ ನಿರತರಾಗಿದ್ದ 'ಸುಬ್ರಹ್ಮಣ್ಯನ್ ಚಂದ್ರಶೇಖರ್' 1995, ಆಗಸ್ಟ್, 21 ರ ರಾತ್ರಿ, ಮತ್ತೆ ತಿರುಗಿ ಮರಳಿಬಾರದ ನಕ್ಷತ್ರಲೋಕದೆಡೆಗೆ ತೆರಳಿ ಕಣ್ಮರೆಯಾದರು.

ಈ ಮಹಾನ್ ಚೇತನಕ್ಕೆ ನಮ್ಮ ನಮನ.


Tag: Dr. Subrahmanyan Chandrashekar

ಕಾಮೆಂಟ್‌ಗಳಿಲ್ಲ: