ಸೋಮವಾರ, ಸೆಪ್ಟೆಂಬರ್ 2, 2013

ಕಣಗಾಲ್ ಪ್ರಭಾಕರ ಶಾಸ್ತ್ರಿ

ಕಣಗಾಲ್ ಪ್ರಭಾಕರ ಶಾಸ್ತ್ರಿ

ಕನ್ನಡದ ಮಹಾನ್ ಚಿತ್ರಸಾಹಿತಿ, ಶ್ರೇಷ್ಠ ಚಿತ್ರಗೀತೆಗಳ ರಚನೆಕಾರ, ನಿರ್ದೇಶಕ, ನಿರ್ಮಾಪಕ ಹೀಗೆ ಪ್ರಸಿದ್ಧರಾದವರು ಕಣಗಾಲ್ ಪ್ರಭಾಕರ ಶಾಸ್ತ್ರಿಯವರು.  ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರು ಪ್ರಭಾಕರ ಶಾಸ್ತ್ರಿಗಳ ತಮ್ಮ

ಶ್ರೀಕೃಷ್ಣದೇವರಾಯ, ಸ್ಕೂಲ್ ಮಾಸ್ಟರ್, ಸಾಕ್ಷಾತ್ಕಾರ, ಮಲ್ಲಮ್ಮನ ಪವಾಡ, ಕನಾರತ್ನ, ಮಲ್ಲಿ ಮದುವೆ, ಸಾಕು ಮಗಳು, ಸತಿಶಕ್ತಿ  ಅಂತಹ ಶ್ರೇಷ್ಠ ಚಿತ್ರಗಳು ಪ್ರಭಾಕರ ಶಾಸ್ತ್ರಿಗಳ ಚಿತ್ರಸಾಹಿತ್ಯ ರಚನೆಗೆ ಶಾಶ್ವತ ಕೀರ್ತಿಯನ್ನು ತಂದಿದ್ದರೆ,  ‘ಅನುರಾಗದ ಅಮರಾವತಿ’, ‘ಅತಿ ಮಧುರ ಅನುರಾಗ’, ‘ಅಮರ ಮಧುರ ಪ್ರೇಮ’, ‘ಭಾಮೆಯ ನೋಡಲು ತಾ ಬಂದ’, ‘ಆಡೋಣ ಬಾ ಬಾ ಗೋಪಾಲ’, ‘ತಿರುಪತಿ ಗಿರಿವಾಸ ಶ್ರೀ ವೆಂಕಟೇಶ’, ‘ಒಲವೆ ಜೀವನ ಸಾಕ್ಷಾತ್ಕಾರ’, ‘ಜನುಮ ಜನುಮದ ಅನುಬಂಧ’, ‘ನಟನ ವಿಶಾರದ ನಟಶೇಖರ’,  ‘ಕೊಡಗಿನ ಕಾವೇರಿ’, ‘ಬಿಳಿಗಿರಿ ರಂಗಯ್ಯ’, ‘ಕನ್ನಡ ನಾಡಿನ ರಸಿಕರ ಮನವ’,  ‘ಪವಡಿಸು ಪಾಲಾಕ್ಷ’, ‘ಶರಣೆಂಬೆ ಶ್ರೀಲಲಿತೆ’, ‘ಕಾದಿರುವಳೋ ಕೃಷ್ಣ’ , ‘ಫಲಿಸಿತು ಒಲವಿನ ಪೂಜಾಫಲ’, ‘ಬಹು ಜನ್ಮದ ಪೂಜಾ ಫಲ’, ‘ನಾನೂ ನೀನೂ ಜೋಡಿ’, ‘ಚನ್ನರಸಿ ಚೆಲುವರಸಿ ಲಾವಣ್ಯ ರಾಶಿ’, ‘ಶ್ರೀ ಚಾಮುಂಡೇಶ್ವರಿ’, ‘ಇದೇ ಹೊಸ ಹಾಡು’, ‘ಸುವ್ವಿ ಸುವ್ವಿ ಸುವ್ವಾಲೆ’ , ‘ಒಲವಿನ ಪ್ರಿಯಲತೆ’,  ಇಂತಹ ಶಾಸ್ತ್ರಿಗಳ ಅಸಂಖ್ಯಾತ ಶ್ರೇಷ್ಠ ಚಿತ್ರಗೀತೆಗಳನ್ನು ನಾವು ದಿನನಿತ್ಯದಲ್ಲಿ ಇಂದೂ ಸವಿಯುತ್ತಿದ್ದೇವೆ. 

ಪ್ರಭಾಕರ ಶಾಸ್ತ್ರಿಗಳು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಸಮೀಪದ ಕಣಗಾಲು ಗ್ರಾಮದ ರಾಜನ ಬಿಲುಗುಳಿಯಲ್ಲಿ 1929ರ ನವೆಂಬರ್ 11ರಂದು ಜನಿಸಿದರು.  ಬಾಲ್ಯದಿಂದಲೇ ತಾತನ ತೊಡೆಯೇರಿ, ಸಾಹಿತ್ಯದ ಪರಿಚಯ ಮಾಡಿಕೊಂಡರೆಂದು ಅಂದಿನ ದಿನಗಳಲ್ಲಿ ಅವರ ಪ್ರಖ್ಯಾತಿ ಎಲ್ಲೆಡೆ ಹರಡಿತ್ತು.   ಕಡು ಬಡತನದ ದಿನಗಳಲ್ಲಿ  ಸಿ.ಬಿ.ಮಲ್ಲಪ್ಪನವರ ನಾಟಕ ಕಂಪನಿಗೆ ಏಳನೇ ವಯಸ್ಸಿನಲ್ಲೇ ಸೇರಿಕೊಂಡ ಶಾಸ್ತ್ರಿಗಳು  ತಮ್ಮ 11ನೇ ವಯಸ್ಸಿನಲ್ಲಿ ರಾಜಾಸ್ಯಾಂಡೊ ಅವರ ಬಳಿ ಸಹಾಯಕ ಸಂಕಲನಕಾರರಾಗಿ ಸೇರಿಕೊಂಡರು. ಈ ನಡುವೆ ಹತ್ತಾರು ಪೌರಾಣಿಕ ನಾಟಕಗಳನ್ನೂ ಬರೆದರು.  ಅವರು ಬರೆದ ನಾಟಕಗಳಲ್ಲಿ ಪ್ರಚಂಡ ರಾವಣಕೃತಿ ಇಂದೂ ಅಭಿನಯಿಸಲ್ಪಡುತ್ತಿದೆ.

ನಿರ್ದೇಶಕ ಶಂಕರ್ ಸಿಂಗ್ ಅವರ ಕೃಷ್ಣಲೀಲಾ ಚಿತ್ರಕ್ಕೆ ಮೊದಲ ಬಾರಿ ಹಾಡುಗಳನ್ನು ರಚಿಸಿದ ಪ್ರಭಾಕರ ಶಾಸ್ತ್ರಿ ಅವರು ಭಾಗ್ಯೋದಯ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ಗೀತೆಗಳನ್ನು ರಚಿಸುವ ಮೂಲಕ ಪೂರ್ಣ ಪ್ರಮಾಣದ ಚಿತ್ರಸಾಹಿತಿಯಾದರು.  ಬಿ.ಆರ್.ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯ ಖಾಯಂ ಬರಹಗಾರರಾಗಿ ಶ್ರೀಕೃಷ್ಣದೇವರಾಯ ಚಿತ್ರದವರೆಗೂ ಸೇವೆ ಸಲ್ಲಿಸಿದರು. ಹಲವು ಅತ್ಯುತ್ತಮ ಚಿತ್ರಗಳಿಗೆ ಕಾರಣೀಭೂತರಾದರು.

ಭಲೇ ಭಟ್ಟ, ಸುಭದ್ರಾ ಕಲ್ಯಾಣ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ ನಂತರದಲ್ಲಿ 1963ರಲ್ಲಿ ತಾವೇ ಸತಿಶಕ್ತಿ ಚಿತ್ರ ನಿರ್ಮಿಸಿ ನಿರ್ದೇಶಿಸಿದರು. ವಾಸ್ತವವಾಗಿ ಈ ಚಿತ್ರವನ್ನು ದೇವಿಫಿಲಂಸ್ ಸಂಸ್ಥೆ ನಿರ್ಮಿಸಬೇಕಿತ್ತು. ಕಾರಣಾಂತರಗಳಿಂದ ಕೊನೆ ಕ್ಷಣದಲ್ಲಿ ಹಿಂದೆಗೆಯಿತು. ಇದನ್ನು ತಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಭಾವಿಸಿದ ಶಾಸ್ತ್ರಿಗಳು ನಿರ್ಮಾಣಕ್ಕೂ ತೊಡಗಿದರೆಂದು ಹೇಳಲಾಗುತ್ತದೆ. ದಕ್ಷಿಣ ಭಾರತದ ಅಂದಿನ ಖ್ಯಾತ ನಟಿ ಸಾಹುಕಾರ್ ಜಾನಕಿ ನಾಯಕಿಯಾಗಿದ್ದ ಈ ಚಿತ್ರದಲ್ಲಿ ರಾಜಕುಮಾರ್ ನಾಯಕ ಮತ್ತು ಖಳನಾಯಕನ ಪಾತ್ರ ಮಾಡಿದ್ದರು. ರಾಜಕುಮಾರ್ ಅವರ ಮಾಂತ್ರಿಕನ ಮೇಕಪ್, ಶ್ಯಾಮಲಾದಂಡಕವನ್ನು ಒಂದು ತಂತ್ರವಾಗಿ ಬಳಸಿಕೊಂಡ ಕ್ರಮ, ಹಾಗೂ ಜನಪ್ರಿಯ ಗೀತೆಗಳು ಚಿತ್ರದ ಯಶಸ್ಸಿಗೆ ಕಾರಣವಾದವು. ಹೀಗಿದ್ದೂ ಶಾಸ್ತ್ರಿಗಳು ಮತ್ತೆ ಚಿತ್ರನಿರ್ಮಾಣದತ್ತ ಆಸಕ್ತಿ ತೋರಲಿಲ್ಲ.

ಪ್ರಭಾಕರ ಶಾಸ್ತ್ರಿಗಳು ತಮ್ಮ  ಗೀತೆಗಳಲ್ಲಿ ಅನೇಕ ರೀತಿಯ ನೂತನ  ಪ್ರತಿಮೆಗಳನ್ನು ಅಳವಡಿಸಿದ್ದಾರೆ.  ಒಲವೇ ಯಮುನಾ ನದಿಯಾಗಿ ಹರಿದಿದೆ, ಅಲ್ಲಿ ರಾಧಾಮಾಧವರು  ಅಮರ ಪ್ರೇಮಿಗಳು’, ‘ಮನವೆಲ್ಲ ಮೈಮರೆವ ಬೃಂದಾವನ’, ‘ಚಿತ್ರದಿ ಚಿತ್ರವ ಬರೆದವಳು’, ‘ಸತಿಪತಿಗೊಲಿದ ರತಿಪತಿಗಾನ’, ‘ಗಾಂಧಾರ ಭಾಷೆಯ ಹಕ್ಕಿಗಳಿಂಚರ’ , ‘ಒಲವಿನ ಪೂಜೆಗೆ ಒಲವೇ ಮಂದಾರ’, ‘ಒಲವಿನ ಸವಿಯ ಸವಿಯುವ ಶುಭದಿನ’,   ಹೀಗೆ ಹಲವಾರು ನಿದರ್ಶನಗಳನ್ನು ತೋರಬಹುದು. 

ಶಾಸ್ತ್ರಿಯವರು ಸುಮಾರು ನಾನೂರು ಕನ್ನಡ ಚಿತ್ರಗೀತೆಗಳನ್ನು ರಚಿಸಿದ್ದಾರೆ.

ಪ್ರಭಾಕರ ಶಾಸ್ತ್ರಿಗಳು 1989ರಲ್ಲಿ ನಿಧನರಾದರು.  ಕನ್ನಡ ಚಿತ್ರರಂಗದ ಅಮೂಲ್ಯ ಚಿತಸಾಹಿತ್ಯ ರಚನೆಕಾರರಾಗಿ ಪ್ರಭಾಕರ ಶಾಸ್ತ್ರಿಗಳ ಹೆಸರು ಅಜರಾಮರವಾದದ್ದು.


Tag: Kanagal Prabhakar Shastri

ಕಾಮೆಂಟ್‌ಗಳಿಲ್ಲ: