ಸೋಮವಾರ, ಸೆಪ್ಟೆಂಬರ್ 2, 2013

ಬಿ. ವಿ. ಪಾಂಡುರಂಗರಾವ್


ಬಿ. ವಿ. ಪಾಂಡುರಂಗರಾವ್

ಪತ್ರಿಕೆಗಳ ವ್ಯಂಗ್ಯಚಿತ್ರಗಳಿಂದ ಮೊದಲ್ಗೊಂಡು  ತಮ್ಮ ಅತ್ಯಪೂರ್ವ ಸಾಧನೆಗಳಿಗಾಗಿ ಗಿನ್ನೆಸ್ ಬುಕ್ ವಿಶ್ವದಾಖಲೆಗಳವರೆಗೆ ತಮ್ಮ ಸಾಧನೆಯನ್ನು ವಿಶ್ವವ್ಯಾಪಿಯಾಗಿಸಿರುವವರು ಪ್ರಖ್ಯಾತ ವ್ಯಂಗ್ಯಚಿತ್ರಕಾರ ಬಿ. ವಿ. ಪಾಂಡುರಂಗರಾವ್ ಅವರು.  ಮೂಲತಃ ಮೈಸೂರಿನವರಾದ ಪಾಂಡುರಂಗರಾವ್ ಅವರು ಸೆಪ್ಟೆಂಬರ್ 20, 1944ರ ವರ್ಷದಲ್ಲಿ ಜನಿಸಿದರು.  ವೃತ್ತಿಯಲ್ಲಿ ಭಿಲಾಯ್ ಉಕ್ಕಿನ ಕಾರ್ಖಾನೆಯಲ್ಲಿ ಹಿರಿಯ ಅಧಿಕಾರಿಗಳಾಗಿ ನಿವೃತ್ತರಾದ ಪಾಂಡುರಂಗರಾವ್ಪ್ರವೃತ್ತಿಯಿಂದ ಕಲೆ ಮತ್ತು ಕ್ರೀಡಾ ಮನೋಭಾವನೆಯನ್ನು ಪೋಷಿಸಿಕೊಂದು ಬಂದವರು.

ತಮ್ಮ ಹದಿನೆಂಟನೆಯ ವಯಸ್ಸಿನಿಂದ ವ್ಯಂಗ್ಯಚಿತ್ರ ರಚನೆಯಲ್ಲಿ ತೀವ್ರ ಆಸಕ್ತಿ ಮೂಡಿಸಿಕೊಂಡ ಪಾಂಡುರಂಗರಾವ್ಮುಂದೆ ಆ ಕ್ಷೇತ್ರದಲ್ಲಿ ಮಾಡಿದ ಸಾಧನೆ ಮಹತ್ವಪೂರ್ಣವಾದುದು.  ರಾಜ್ಯ ಹಾಗೂ ರಾಷ್ಟ್ರಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ನಿರಂತರವಾಗಿ ಪ್ರಶಸ್ತಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡು ಮುನ್ನಡೆದ ಪಾಂಡುರಂಗರಾವ್ ಅವರು ತೈವಾನ್, ಟರ್ಕಿ, ಕೊರಿಯಾ, ಚೈನಾ, ಬ್ರೆಜಿಲ್, ಫ್ರಾನ್ಸ್, ಇಸ್ರೇಲ್  ಸೇರಿದಂತೆ ಇದುವರೆವಿಗೆ 78  ಅಂತರರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರೋತ್ಸವಗಳಲ್ಲಿ ತಮ್ಮ ಕೃತಿಗಳನ್ನು ಬೆಳಗಿಸಿ ಐವತ್ತಕ್ಕೂ ಹೆಚ್ಚು ಬಾರಿ   ಗೌರವ ಬಹುಮಾನಗಳನ್ನು ಸ್ವೀಕರಿಸಿದ್ದಾರೆ. ಸುಮಾರು ನಲವತ್ತಕ್ಕೂ ಹೆಚ್ಚು  ಬಾರಿ ಏಕವ್ಯಕ್ತಿ ವ್ಯಂಗ್ಯಚಿತ್ರಪ್ರದರ್ಶನವನ್ನು ಮಾಡಿದ್ದಾರೆ. 53 ಸ್ಪರ್ಧಾ  ಆಲ್ಬಮ್ ನಿರ್ಮಿಸಿದ್ದಾರೆ. 47 ಬಾರಿ  ವ್ಯಂಗ್ಯ ಚಿತ್ರ  ಪ್ರದರ್ಶನಗಳನ್ನು  ಏರ್ಪಡಿಸಿದ್ದಾರೆ.   ಸುಧಾ, ತರಂಗ, ಮಲ್ಲಿಗೆ ಸೇರಿದಂತೆ ದೇಶ ವಿದೇಶಗಳ ಅನೇಕ ಪತ್ರಿಕೆಗಳಲ್ಲಿ ಅವರು ಪ್ರಕಟಪಡಿಸಿರುವ ವ್ಯಂಗ್ಯಚಿತ್ರಗಳ ಸಂಖ್ಯೆ ಐದು ಸಹಸ್ರಕ್ಕೂ ಮೀರಿದ್ದು.  ಇತ್ತೀಚಿನ ವರ್ಷಗಳಲ್ಲಿ  ಅವರು ಸುಂದರ  3 ಡಿ ಸ್ವರೂಪದ ಚಿತ್ರಗಳನ್ನು ತಮ್ಮ ವೈವಿಧ್ಯಮಯ ಕೈಚಳಕಕ್ಕೆ ಪೋಣಿಸಿದ್ದಾರೆ.

ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಮಹತ್ಸಾಧನೆಗಾಗಿ ಪಾಂಡುರಂಗರಾವ್ ಏಳು ಬಾರಿ ತಮ್ಮ ಹೆಸರು ಲಿಮ್ಕಾ ವಿಶ್ವದಾಖಲೆಗಳಲ್ಲಿ ನಮೂದಿಸಲ್ಪಟ್ಟಿರುವ ಗೌರವ ಹೊಂದಿದ್ದಾರೆ. ಏಳು ವಾರಿ ಇಂಡಿಯಾ  ಬುಕ್ ಆಫ್  ರೆಕಾರ್ಡ್ಸ್ನಲ್ಲೂ  ಅವರ  ಸಾಧನಾ  ದಾಖಲೆಗಳಿವೆ.  ಮೂರು  ವಿಶಿಷ್ಟ ವಿಶ್ವದಾಖಲೆಗಳು  ಅವರ ಮಹತ್ಸಾಧನೆಗಳಲ್ಲಿ  ಸೇರಿವೆ.     ಅನೇಕ ಮಾಹಿತಿಗಳನ್ನೊಳಗೊಂಡ ತಮ್ಮದೇ ಆದ ಅತಿ ಸಣ್ಣ ಅಂದರೆ 1.5 ಮಿ. ಮೀ ಫ್ಲಿಪ್ ಪುಸ್ತಕವನ್ನು ರಚಿಸಿದ್ದು ಅವರ ಮಹತ್ವದ ಸಾಧನೆಗಳಲ್ಲಿ ವಿಶೇಷವಾದದ್ದೆಂದು ಲಿಮ್ಕಾ ಪ್ರತಿಷ್ಠಾನ ಗುರುತಿಸಿದೆ.     ಅವರು ನಿರ್ಮಿಸಿದ  ಪುಟ್ಟ ಕ್ಯಾಲೆಂಡರ್, ತಮ್ಮ  ಕೈಚಳಕದಲ್ಲಿ ಮೂಡಿಸಿದ  ಪರಿಸರ ಪ್ರಜ್ಞೆ ಮೂಡಿಸುವ ಬೃಹತ್ ಕ್ಯಾಲೆಂಡರ್ ಮುಂತಾದವು  ಸಹಾ ದಾಖಲೆ ಪುಟಗಳನ್ನು ಸೇರಿವೆ.   

2011ರ ವರ್ಷದಲ್ಲಿ ನವದೆಹಲಿಯಲ್ಲಿ ನಡೆದ ಕಾರ್ಟೂನ್ ಉತ್ಸವದಲ್ಲಿ ಪಾಂಡುರಂಗರಾವ್ ಅವರು ಮಾಜಿ ರಾಷ್ಟ್ರಪತಿಗಳಾಗಿದ್ದ  ಭಾರತರತ್ನ  ಎ. ಪಿ. ಜೆ ಅಬ್ದುಲ್ ಕಲಾಂ ಅವರಿಂದ ಜೀವಮಾನ ಸಾಧನೆಯ ಪ್ರಶಸ್ತಿ ಸ್ವೀಕರಿಸಿದ್ದಾರೆ.    ಪಾಂಡುರಂಗರಾವ್ ಅವರ ಕೈ ಚಳಕ ಆರ್. ಕೆ. ಲಕ್ಷ್ಮಣ್ ಅವರಂತಹ ಶ್ರೇಷ್ಠರ ಮೆಚ್ಚುಗೆಯನ್ನು ಪಡೆದಿದೆ.  ಸ್ವಯಂ ಆರ್. ಕೆ. ಲಕ್ಷ್ಮಣರು ಈ ಸ್ನೇಹ ಜೀವಿ ಪಾಂಡುರಂಗರಾಯರ ರೇಖಾ ಚಿತ್ರವನ್ನು ತಮ್ಮ ಕೈಯಾರೆ ಇವರಿಗೆ ಬಿಡಿಸಿ ಕೊಟ್ಟಿದ್ದಾರೆ.    ಪಾಂಡುರಂಗರಾವ್ ಅವರು ಕರ್ನಾಟಕ ವ್ಯಂಗ್ಯಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿ ಸಹಾ ಹಲವಾರು ಕಾಲ ಸೇವೆ ಸಲ್ಲಿಸಿದ್ದಾರೆ.

ಕ್ರೀಡಾರಂಗದಲ್ಲೂ ಮಹತ್ವಪೂರ್ಣ ಸಾಧನೆಗೈದಿರುವ ಪಾಂಡುರಂಗ ರಾವ್ಬಿಲಾಯ್ ಉಕ್ಕಿನ ಕಾರ್ಖಾನೆಯ ಕ್ರಿಕೆಟ್ ತಂಡ, ಮಧ್ಯಪ್ರದೇಶದ ವಿಭಾಗೀಯ ಮಟ್ಟದ  ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಪ್ರತಿನಿಧಿಸಿದ್ದೇ ಅಲ್ಲದೆ ಮಧ್ಯಪ್ರದೇಶ ರಾಜ್ಯದ ಕ್ರಿಕೆಟ್ ಪ್ಯಾನೆಲ್ಲಿನ ಅಂಪೈರ್ ಗಳಲ್ಲಿ ಒಬ್ಬರೆನಿಸಿದ್ದು  ಆ ರಾಜ್ಯದ ಅನೇಕ ವಿಭಾಗೀಯ  ಮತ್ತು ಕೈಗಾರಿಕಾ ಮಟ್ಟದ ಪಂದ್ಯಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.  ಬ್ಯಾಡ್ಮಿಂಟನ್ ಆಟದಲ್ಲೂ ಅಪಾರ ಆಸಕ್ತರಾದ ಪಾಂಡುರಂಗರಾವ್ ಅವರು ಇಂದೂ ಬ್ಯಾಡ್ಮಿಂಟನ್ ಆಡುತ್ತಾರೆ.

ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಸ್ವಯಂ ಸಾಧನೆಯ ಜೊತೆಗೆ ಯುವ ಜನಾಂಗವನ್ನು ಸಹಾ ಈ ಕ್ಷೇತ್ರದಲ್ಲಿ ತಯಾರು ಮಾಡುವಲ್ಲಿ  ಮಹತ್ವದ ಪಾತ್ರವಹಿಸಿರುವ ಪಾಂಡುರಂಗರಾವ್ಅನಾಥಶ್ರಮ, ಬಡಶಾಲೆಗಳಲ್ಲಿನ ಮಕ್ಕಳಿಗಾಗಿ ಸಹಾ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.  ಪರಿಸರ ಜಾಗೃತಿಯನ್ನು ಮೂಡಿಸುವಂತಹ ಸತ್ಕಾರ್ಯ ಪ್ರದರ್ಶನಗಳನ್ನೂ ಬಿಂಬಿಸುತ್ತಿದ್ದಾರೆ.

ಇಂದಿನ ವ್ಯಂಗ್ಯಚಿತ್ರಕಾರರು ವಾಸ್ತವ ಸಂಗತಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.  ಚಿತ್ರವನ್ನು  ಬರೆದ ಮಾತ್ರಕ್ಕೆ ಯಾರೂ  ವ್ಯಂಗ್ಯಚಿತ್ರಕಾರರಾಗಲು ಸಾಧ್ಯವಿಲ್ಲ.  ಸತತ ಪ್ರಯತ್ನದಿಂದ ಮಾತ್ರವೇ ಯಶಸ್ಸು ನಮ್ಮ ಕೈಸೇರುತ್ತದೆಎನ್ನುತ್ತಾರೆ ಪಾಂಡುರಂಗರಾವ್.

ಬಿ. ವಿ. ಪಾಂಡುರಂಗರಾವ್ ಅವರು ವೆಬ್ ಅಂತರ್ಜಾಲದಲ್ಲಿ ಅನೇಕ ಸುಂದರವಾದ ಬ್ಲಾಗ್ ಗಳನ್ನು ಸೃಷ್ಟಿಸಿದ್ದಾರೆ. ಫೇಸ್ ಬುಕ್ಕಿನಲ್ಲೂ ನಮ್ಮೆಲ್ಲರ ಆತ್ಮೀಯರಾಗಿದ್ದಾರೆ.  ಪ್ರತೀದಿನ ಅವರ ಸುಂದರ ಕೈಚಳಕವನ್ನು ಕಾಣುವ ಸೌಭಾಗ್ಯ ನಮ್ಮೆಲ್ಲರದಾಗಿದೆ.


ಈ ಮಹಾನ್ ಸಾಧಕ ನಿತ್ಯ ಉತ್ಸಾಹಿ ಬಿ. ವಿ. ಪಾಂಡುರಂಗರಾಯರಿಗೆ ಹುಟ್ಟು ಹಬ್ಬದ ಆತ್ಮೀಯ ಶುಭಾಶಯಗಳನ್ನು ಹೇಳುತ್ತಾ ಅವರ ಬದುಕು ಸಂತಸಪೂರ್ಣವಾಗಿರಲಿ ಅವರ ಮಹತ್ವದ ಸಾಧನೆಗಳು ನಮ್ಮ ಜನಾಂಗವನ್ನು ನಿತ್ಯ ಪ್ರೇರಿಸುತ್ತಿರಲಿ ಎಂದು ಶುಭ ಹಾರೈಸೋಣ.

Tag: B. V. Panduranga Rao

4 ಕಾಮೆಂಟ್‌ಗಳು:

ಮಂಜುನಾಥ್ ಹೇಳಿದರು...

thumba chennagide

ಮಂಜುನಾಥ್ ಹೇಳಿದರು...

thumba olleya lekhana

B V Panduranga Rao ಹೇಳಿದರು...

Shridhara ravare
nanna bagge barediruva ee lekhana tumba chennagide..tamma blog nalli ee lekhanavannu serisi nanage gaurava nididdiri.. aneka dhanyavaadagalu.
tamma ee blog ondu " gnaana taana '' vaagi ellarigu upayogavaaguttade. Shubhaashayagalondige
--panduranga rao

ತಿರು ಶ್ರೀಧರ ಹೇಳಿದರು...

ಹೃದಯಪೂರ್ವಕ ಧನ್ಯವಾದಗಳು ಪಾಂಡುರಂಗ ರಾವ್ ಸಾರ್.