ಸೋಮವಾರ, ಸೆಪ್ಟೆಂಬರ್ 2, 2013

ಎಂ. ರಂಗರಾವ್

ಎಂ. ರಂಗರಾವ್

ಎಂ. ರಂಗರಾವ್ ಅಂದರೆ ವೀಣೆಯ ಸುಮಧುರ ನಾದದ ನೆನಪಾಗುತ್ತದೆ.  ವೀಣೆಯ ನಾದ ನೀಡುವ ಆತ್ಮಾನಂದ, ಅನುಭೂತಿ ಒಂದು ರೀತಿಯ ವಿಶಿಷ್ಟತೆಯದು.  ಸಿನಿಮಾ ಮತ್ತು ಭಕ್ತಿಸಂಗೀತದಲ್ಲಿ ಎಂ. ರಂಗರಾಯರು ವೀಣೆಯ ಸುಮಧುರತೆಯನ್ನು ಅಳವಡಿಸಿಕೊಂಡು ಈ ಸಂಗೀತ ಮಾಧ್ಯಮಕ್ಕೆ ನಾವೀನ್ಯತೆ, ಮಧುರತೆ ಮತ್ತು ಸುಶ್ರಾವ್ಯತೆಗಳನ್ನು ಹರಿಸಿದವರು.

ರಂಗರಾಯರು 1932ರ ವರ್ಷದಲ್ಲಿ ಅಕ್ಟೋಬರ್ 15ರ ದಿನದಂದು ಆಂಧ್ರಪ್ರದೇಶದ ಕವಲೇರು ಗ್ರಾಮದಲ್ಲಿ ಜನಿಸಿದರು.  ತಮ್ಮ ತಾಯಿ ರಂಗಮ್ಮನವರಿಂದ ರಂಗರಾಯರು ಸಂಗೀತದ ಸದಭಿರುಚಿಯನ್ನು ಬೆಳೆಸಿಕೊಂಡರು.  ರಂಗರಾಯರು ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ, ಆದರೆ ಬೆಳೆದದ್ದು ಸಂಗೀತದಿಂದ.

ತೆಲುಗಿನ 'ಸ್ವರ್ಗ ಸೀಮಾ ಯೋಗಿ ವೇಮನ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ರಂಗರಾಯರಿಗೆ 'ತ್ಯಾಗಯ್ಯ' ಚಿತ್ರದಲ್ಲಿ ಆಕಸ್ಮಿಕವಾಗಿ ವೀಣೆ ನುಡಿಸುವ ಅವಕಾಶ ಒದಗಿ ಬಂತು.  ಮುಂದೆ ರಂಗರಾಯರು ಪ್ರಸಿದ್ಧಿ ಪಡೆದದ್ದು ಕನ್ನಡ ಚಿತ್ರರಂಗದಲ್ಲಿ

1967ರ ವರ್ಷದಲ್ಲಿ  ಪ್ರಸಿದ್ಧ ನಿರ್ದೇಶಕರಾದ  ಎಂ. ಆರ್. ವಿಠಲ್ ಅವರ ನಿರ್ದೇಶನದ ಕನ್ನಡ ಚಿತ್ರ ನಕ್ಕರೆ ಅದೇ ಸ್ವರ್ಗದ ಮೂಲಕ ಎಂ. ರಂಗರಾವ್  ಸ್ವತಂತ್ರ ಸಂಗೀತ ನಿರ್ದೇಶಕರಾದರು.  ಇದು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದ ಮೊದಲ ಚಿತ್ರವೂ ಹೌದು.

ಕನ್ನಡ ಚಿತ್ರರಂಗದ ಶ್ರೇಷ್ಠ ಗೀತೆಗಳ ಚಿತ್ರಗಳೆನಿಸಿರುವ 'ಹಣ್ಣೆಲೆ ಚಿಗುರಿದಾಗ’, ‘ನಕ್ಕರೆ ಅದೇ ಸ್ವರ್ಗ’, ‘ಸಾಕ್ಷಾತ್ಕಾರ’, ‘ಎಡಕಲ್ಲು ಗುಡ್ಡದ ಮೇಲೆ’, ‘ಬಂಧನ’, ಬಿಡುಗಡೆಯಾಗದಿದ್ದರೂ ಗೀತೆಗಳಿಂದ ಪ್ರಖ್ಯಾತಿ ಪಡೆದ  ಗಾನಯೋಗಿ ರಾಮಣ್ಣ’, ‘ಹುಡುಗಾಟದ ಹುಡುಗಿ’, ‘ದೇವರು ಕೊಟ್ಟ ವರ’, ‘ಕಾವೇರಿ’, ‘ಹೊಸ ಬೆಳಕು’, ‘ಶ್ರಾವಣ ಬಂತು’, ‘ಕವಿರತ್ನ ಕಾಳಿದಾಸ’, ‘ಕಲ್ಲು ವೀಣೆ ನುಡಿಯಿತು’, ‘ಕಥಾನಾಯಕ’,  ‘ಬಹದ್ದೂರ್ ಗಂಡು’, ‘ರಾಜಾ ನನ್ನ ರಾಜ’, ‘ರಂಗನಾಯಕಿ’, ‘ಹೃದಯ ಪಲ್ಲವಿ’, ‘ಮುದುಡಿದ ತಾವರೆ ಅರಳಿತು’, ‘ಅರುಣ ರಾಗ’, ‘ಸಮಯದ ಗೊಂಬೆ’, ‘ಬದುಕು ಬಂಗಾರವಾಯಿತು’ ಹೀಗೆ ಅನೇಕ ಉತ್ತಮ ಸಂಗೀತವಿರುವ  ಚಿತ್ರಗಳ ಪಟ್ಟಿಯೇ ನೆನಪಿಗೆ ಬರುತ್ತದೆ.

ಹೂವು ಚೆಲುವೆಲ್ಲಾ ನಂದೆಂದಿತು, ಬಾಳೊಂದು ಭಾವ ಗೀತೆ, ಒಲವೆ ಜೀವನ ಸಾಕ್ಷಾತ್ಕಾರ, ಬಾನಿಗೆ ನೀಲಿಯಾ ಮೇಘಕೆ ಬಣ್ಣವ, ಜನುಮ ಜನುಮದ ಅನುಬಂಧ, ಒಲವೆ ಜೀವನ ಸಾಕ್ಷಾತ್ಕಾರ, ವಿರಹಾ ನೂರು ನೂರು ತರಹ, ಬಣ್ಣ ನನ್ನ ಒಲವಿನ ಬಣ್ಣ, ನೂರೊಂದು ನೆನಪು ಎದೆಯಾಳದಿಂದ, ಕೇಳನೋ ಹರಿ ತಾಳನೋ, ನಾ ನಿನ್ನ ಧ್ಯಾನದೊಳಿರಲು, ಬೆಳ್ಳಿಯ ತೆರೆಯ ಮೋಡದ ಮರೆಯ, ಬೇಲೂರ ಗುಡಿಯಲ್ಲಿ ಶಿಲೆಯಾಗಿ ನಿಂತೋಳೆ, ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ, ಶೃಂಗೇರಿ ಗೀರ್ವಾಣಿ, ಈ ದೇಶ ಚೆನ್ನ ಈ ಮಣ್ಣು ಚಿನ್ನ, ತೆರೆದಿದೆ ಮನೆ ಓ ಬಾ ಅತಿಥಿ, ಶ್ರಾವಣ ಮಾಸ ಬಂದಾಗ, ಇದೇ ರಾಗದಲ್ಲಿ ಇದೇ ತಾಳದಲ್ಲಿ, ಬಾನಿನ ಅಂಚಿಂದ ಬಂದೆ, ಸದಾ ಕಣ್ಣಲೆ ಪ್ರಣಯದಾ ಕವಿತೆ ಹಾಡುವೆ, ಪ್ರಿಯತಮಾ ಕರುಣೆಯಾ ತೋರೆಯಾ, ನನ್ನಾ ದೇವನ ವೀಣಾ ವಾದನ, ನನ್ನೆದೆ ವೀಣೆಯು ಮಿಡಿಯುವುದು, ಮುತ್ತಿನಂತ ಮಾತೊಂದು ಗೊತ್ತೇನಮ್ಮ, ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ, ನೂರು ಕಣ್ಣು ಸಾಲದು, ಕನ್ನಡನಾಡಿನ ರಸಿಕರ ಮನವಾ, ರಾಗಕೆ ಸ್ವರವಾಗಿ, ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ, ನಾನೊಂದು ತೀರ ನೀನೊಂದು ತೀರ, ಕೋಗಿಲೆ ಹಾಡಿದೆ ಕೇಳಿದೆಯಾ, ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ, ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನೀಗೆ ಇಂತಹ ನೂರಾರು ಸುಶ್ರಾವ್ಯ ಗೀತೆಗಳ ಇಂಪನ್ನು ನಮಗೆ ತಂದಿತ್ತವರು ರಂಗರಾಯರು.

ಗಾನಯೋಗಿ ರಾಮಣ್ಣ ಚಿತ್ರ ತೆರೆಕಾಣಲಿಲ್ಲ.  ಆದರೆ ಆ ಚಿತ್ರದ ನಾ ನಿನ್ನ ಧ್ಯಾನದೊಳಿರಲು’, ಮತ್ತು ಕೇಳನೋ ಹರಿ ತಾಳನೋಗೀತೆಗಳು ಡಾ. ಎಂ. ಬಾಲಮುರಳಿ ಕೃಷ್ಣರ ಧ್ವನಿಯಲ್ಲಿ ಮೂಡಿಬಂದಿರುವ ರೀತಿ ಮತ್ತು ಭೀಮ್ ಪಲಾಸ್ ರಾಗದಲ್ಲಿ ಬಂದ ಹಣ್ಣೆಲೆ ಚಿಗುರಿದಾಗ ಚಿತ್ರದ ಹೂವು ಚೆಲುವೆಲ್ಲಾ ನಂದೆಂದಿತು’,  ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ' ಗೀತೆಗಳು  ಮತ್ತು ಎಡಕಲ್ಲು ಗುಡ್ಡದ ಮೇಲೆ ಚಿತ್ರದ ವಿರಹಾ ನೋವು ನೂರು ತರಹಗೀತೆಗಳು ರಂಗರಾಯರಿಗೆ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತದಲ್ಲಿದ್ದ ಪರಿಣತಿಯನ್ನುಯನ್ನು ಎತ್ತಿ ತೋರುತ್ತವೆ.

ತಮ್ಮ ಸಂಗೀತ ನಿರ್ದೇಶನದಿಂದ ಕನ್ನಡ ಚಿತ್ರರಂಗಕ್ಕೆ ಮಾಧುರ್ಯದ ಹೊಳೆಯನ್ನೇ ಹರಿಸಿದ ರಂಗರಾವ್, ಅನೇಕ ಭಕ್ತಿಗೀತೆಗಳ ರಾಗ ಸಂಯೋಜನೆಯಿಂದಲೂ ಜನಪ್ರಿಯರಾಗಿದ್ದಾರೆ. ಗಜಮುಖನೆ ಗಣಪತಿಯೇ ನಿನಗೆ ವಂದನೆ’,  ‘ಶರಣು ಶರಣಯ್ಯ ಶರಣು ಬೆನಕ’, ‘ಎದ್ದೇಳು ಮಂಜುನಾಥ ಏಳು ಬೆಳಗಾಯಿತು’, ‘ಉಡುಪಿಯಿದು ಉಡುಪಿಯಿದು ಗೀತಾಚಾರ್ಯರ ಕ್ಷೇತ್ರವಿದು’, ‘ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶ್ರಂಗೇರಿ’, ‘ವಾರ ಬಂತಮ್ಮ ಗುರುವಾರ ಬಂತಮ್ಮ’, ‘ನೋಡು ನೋಡು ಕಣ್ಣಾರ ನಿಂತಿಹಳು’, ‘ಶರಣರ ಕಾಯೇ ಚಾಮುಂಡೇಶ್ವರಿ’  ಮುಂತಾದ ಬಹುತೇಕ ದಿನನಿತ್ಯದ ಭಕ್ತಿ ಸಂದರ್ಭಗಳಲ್ಲಿ ಮತ್ತು ಹಬ್ಬದ ಸಂದರ್ಭಗಳಲ್ಲಿ ಕೇಳಿಬರುವ ಸುಶ್ರಾವ್ಯ ಗೀತೆಗಳು ಎಂ. ರಂಗರಾವ್ ಅವರಿಂದ ಮೂಡಿಬಂದಿದೆ.   


ಕನ್ನಡ ಭಾಷೆಯಲ್ಲದೆ ಇತರ ಭಾಷೆಗಳಲ್ಲೂ ರಂಗರಾಯರ ಸಂಗೀತದ ಸುಮಧುರ ನಿನಾದ ಹರಿದಿದೆ.  1991ರ ವರ್ಷದಲ್ಲಿ ನಿಧನರಾದ ರಂಗರಾಯರು  ನೂರಾರು  ಚಿತ್ರಗಳ ಸಾವಿರಾರು  ಸುಮಧುರ ಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗಕ್ಕೆ ಮರೆಯಲಾರದ ಕೊಡುಗೆ ನೀಡಿದವರು.  ಈ ಮಹಾನ್ ಸಂಗೀತಗಾರನ ನೆನಪಿಗೆ ನಮ್ಮ ಗೌರವಪೂರ್ವಕ ನಮನ.

Tag: M. Rangarao

ಕಾಮೆಂಟ್‌ಗಳಿಲ್ಲ: