ಸೋಮವಾರ, ಸೆಪ್ಟೆಂಬರ್ 30, 2013

ಟಿ. ಎಸ್. ವೆಂಕಣ್ಣಯ್ಯ

ಟಿ. ಎಸ್. ವೆಂಕಣ್ಣಯ್ಯ

ಹಲವು ದೀಪಗಳನ್ನು ಹಚ್ಚಿ ಅವುಗಳ ಪ್ರತಿಭೆಯಲ್ಲಿ ತಾನು ಹಿಂದೆ ನಿಂತ ದೀಪ ತಳುಕಿನ ವೆಂಕಣ್ಣಯ್ಯನವರು.  ಕುವೆಂಪು, ತೀನಂಶ್ರೀ, ಡಿ. ಎಲ್. ನರಸಿಂಹಾಚಾರ್, ಎಂ.ವಿ. ಸೀತಾರಾಮಯ್ಯ, ಎಸ್. ವಿ. ಪರಮೇಶ್ವರ ಭಟ್ಟ, ಮಾನ್ಸಿ ನರಸಿಂಗರಾವ್, ಜಿ. ವೆಂಕಟಸುಬ್ಬಯ್ಯ ಇಂತಹ ವಿದ್ವಾಂಸರು, ಕವಿಗಳು ಎಷ್ಟೋ ದಶಕಗಳ ನಂತರವೂ ಅವರನ್ನು ಪ್ರೀತಿಯಿಂದ, ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಿದ್ದರು  ಎನ್ನುವುದು; ಅವರ ಶಿಷ್ಯರಲ್ಲದೆ ಬಿ.ಎಂ.ಶ್ರೀ, ಮಾಸ್ತಿ, ಡಿ.ವಿ.ಜಿ ಇಂತಹವರೂ ಅವರನ್ನು ಅದೇ ಬಗೆಯ ಪ್ರೀತಿಯಿಂದ ಸ್ಮರಿಸುತ್ತಿದ್ದರು ಎನ್ನುವುದು ನವೋದಯ ಕನ್ನಡ ಸಾಹಿತ್ಯದ ಯುಗದಲ್ಲಿ ಅವರ ಸ್ಥಾನಕ್ಕೆ ಕನ್ನಡಿ.  ದೈಹಿಕವಾಗಿ, ಮಾನಸಿಕವಾಗಿ ಎತ್ತರದ ವ್ಯಕ್ತಿಯಾಗಿದ್ದ ವೆಂಕಣ್ಣಯ್ಯನವರನ್ನು ಸ್ಮರಿಸಿಕೊಳ್ಳುತ್ತಿದ್ದವರು, ಅವರನ್ನು ಕುರಿತು ಅತ್ಯಂತ ಗೌರವದಿಂದ ಅವರಂತಹ ಮನುಷ್ಯರೇ ವಿರಳ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದರು.

ವೆಂಕಣ್ಣಯ್ಯನವರು 1885ರ ಅಕ್ಟೋಬರ್ 1ರಂದು ಹುಟ್ಟಿದರು.  ನಂಟರೊಬ್ಬರ ಮನೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ವಾಸಿಸಿದ ವೆಂಕಣ್ಣಯ್ಯ ಕಷ್ಟ, ತಿರಸ್ಕಾರಗಳ ನಡುವೆಯೂ ವ್ಯಾಸಂಗ ಮಾಡಿದರು.  ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವರ ಮದುವೆಯಾಯಿತು.  ಹೆಂಡತಿ ಭಾಗೀರಥಮ್ಮ.  ಫಸ್ಟ್ ಇನ್ ಆರ್ಟ್ಸ್ (ಎಫ್. ಎ) ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ ಚಿಕ್ಕಪ್ಪನ ನೆರವಿನಿಂದ ಬಿ.ಎ ಓದಿದರು.  ಅವರು ಬಿ.ಎ ಪರೀಕ್ಷೆಯಲ್ಲಿ ಯಶಸ್ವಿಯಾದಾಗ ಇಡೀ ತಳುಕು ಹಳ್ಳಿಯೇ ಸಂಭ್ರಮದಿಂದ ಹಬ್ಬವನ್ನಾಚರಿಸಿತು.  1914ರಲ್ಲಿ ಖಾಸಗಿ ವಿದ್ಯಾರ್ಥಿಯಾಗಿ, ಕನ್ನಡ ಎಂ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದರು.  ಆಗಿನ ದಿನಗಳಲ್ಲಿ ಕನ್ನಡ ಎಂದರೇ ತಾತ್ಸಾರ, ಕನ್ನಡದಲ್ಲಿ ಎಂ.ಎ ಪರೀಕ್ಷೆ ಮಾಡುವುದೆಂದರೆ ಹಾಸ್ಯಕ್ಕೆ ವಸ್ತು.

ಧಾರವಾಡದ ಬೇಸಿಲ್ ಮಿಷನ್ ಹೈಸ್ಕೂಲಿನಿಂದ ಅಧ್ಯಾಪಕರಾದ ವೆಂಕಣ್ಣಯ್ಯ ಬಹುಬೇಗ ಉತ್ತಮ ಅಧ್ಯಾಪಕರೆಂದೂ, ಗೌರವಿಸಬೇಕಾದ ಮನುಷ್ಯ ಎಂದೂ ಹೆಸರಾದರು.  ಅರವತ್ತು ರೂಪಾಯಿ ಸಂಬಳದಲ್ಲಿ ಇಪ್ಪತ್ತು ರೂಪಾಯಿಗಳನ್ನು ತಂದೆಗೆ ಕಳುಹಿಸುತ್ತಿದ್ದರು. ಮೂರು ವರ್ಷಗಳ ನಂತರ ಬೆಂಗಳೂರು ಸೇಂಟ್ ಜೋಸೆಫ್ ಹೈಸ್ಕೂಲಿನಲ್ಲಿ ಎಪ್ಪತ್ತೈದು ರೂಪಾಯಿಗಳ ಸಂಬಳದ ಮೇಲೆ ಅಧ್ಯಾಪಕರಾಗಿ ಬಂದರು.  ಹದಿನೈದು ರೂಪಾಯಿ ಬಾಡಿಗೆಗೆ ದೊಡ್ಡ ಮನೆ ಸಿಕ್ಕುತ್ತಿದ್ದ ಕಾಲ.  ಅವರು ಆರಿಸಿದ ಮನೆ ಎಷ್ಟು ದೊಡ್ಡದಾಗಿತ್ತೆಂದರೆ ಅಲ್ಲೇ ಎ. ಎಸ್. ನರಸಿಂಹಯ್ಯನವರು, ಎ. ಆರ್. ಕೃಷ್ಣಶಾಸ್ತ್ರಿಗಳು, ಎಂ. ಆರ್. ಶ್ರೀನಿವಾಸ ಮೂರ್ತಿಗಳು ಎಲ್ಲಾ ಸಂಸಾರ ಸಹಿತ ವಾಸ ಮಾಡುವುದು ಸಾಧ್ಯವಾಯಿತು.  1919ರಲ್ಲಿ ಸೆಂಟ್ರಲ್ ಕಾಲೇಜಿಗೆ ಕನ್ನಡ ಅಧ್ಯಾಪಕರಾಗಿ ನೇಮಿತರಾದ ವೆಂಕಣ್ಣಯ್ಯನವರು ಕ್ರಮೇಣ ಅಸಿಸ್ಟೆಂಟ್ ಪ್ರೊಫೆಸರ್ ಆದರು.  ಪ್ರೊಫೆಸರಾದರು.  1927ರಲ್ಲಿ ಮಹಾರಾಜ ಕಾಲೇಜಿನಲ್ಲಿ ಪ್ರೊಫೆಸರಾಗಿ ನೇಮಕವಾದ ಬಳಿಕ ಅವರು ಎಂಟು ವರ್ಷ ಆ ವಿಭಾಗದ ಭಾಗ್ಯವನ್ನು ಬೆಳೆಸಿದರು.  ಅದಕ್ಕೆ ಕೀರ್ತಿಯನ್ನು ತಂದುಕೊಟ್ಟರು.  ಅದನ್ನು ಸಾಹಿತ್ಯಸ್ಪೂರ್ತಿಯ ನೆಲೆಯನ್ನಾಗಿ ಮಾಡಿದರು.  1939ರ ಫೆಬ್ರವರಿ 24ರಂದು ತೀರಿಕೊಂಡರು.

ವೆಂಕಣ್ಣಯ್ಯನವರು ಕನ್ನಡವು ಆಧುನಿಕ ಜಗತ್ತಿನಲ್ಲಿ ಗರಿಗೆದರಬೇಕಾದ ದಿನಗಳಲ್ಲಿ ಕನ್ನಡ ಕೆಲಸದ ಕೇಂದ್ರವಾಗಿದ್ದರು.  1918ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕರ್ನಾಟಕ ಸಂಘವನ್ನು ಎ. ಆರ್. ಕೃಷ್ಣಶಾಸ್ತ್ರಿಗಳು ಪ್ರಾರಂಭಿಸಿದಾಗ ಅವರಿಗೆ ವೆಂಕಣ್ಣಯ್ಯನವರ ಬೆಂಬಲ ಸಂಪೂರ್ಣವಾಗಿತ್ತು.  ಇದೇ ಪ್ರಾಯಶಃ ಮೊಟ್ಟ ಮೊದಲನೆಯ ಕರ್ನಾಟಕ ಸಂಘ.  ಮರುವರ್ಷ ಪ್ರಬುದ್ಧ ಕರ್ನಾಟಕಪ್ರಾರಂಭವಾಯಿತು.  ಕೃಷ್ಣಶಾಸ್ತ್ರಿಗಳಿಗೆ ಮೈಸೂರಿಗೆ ವರ್ಗವಾದಾಗ ವೆಂಕಣ್ಣಯ್ಯನವರು ಸಂಘದ ಮತ್ತು ಪತ್ರಿಕೆಯ ನಿರ್ವಹಣೆಯನ್ನು ವಹಿಸಿಕೊಂಡರು.  ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದ ಆಚಾರ್ಯ ಶ್ರೀ ಅವರ ಇಂಗ್ಲಿಷ್ ಗೀತೆಗಳುವೆಂಕಣ್ಣಯ್ಯನವರು ಸಂಘವನ್ನು ನಿರ್ವಹಿಸುತ್ತಿದ್ದಾಗ ಪ್ರಕಟವಾಯಿತು.  ಡಿ.ವಿ.ಜಿ ಅವರ ವಸಂತ ಕುಸುಮಾಂಜಲಿಮತ್ತು ನಿವೇದನಗಳೂ ಈ ಕಾಲದ ಪ್ರಕಟಣೆಗಳೇ.  ಅವರು ಮೈಸೂರು ಮಹಾರಾಜ ಕಾಲೇಜಿಗೆ ವರ್ಗವಾಗಿ ಹೋದ ನಂತರ ಅಲ್ಲಿನ ಕರ್ನಾಟಕ ಸಂಘದ ಮಾರ್ಗದರ್ಶನ, ಕಾರ್ಯನಿರ್ವಹಣೆ  ಬಹುಮಟ್ಟಿಗೆ ಅವರ ಪಾಲಿಗೆ ಬಂದವು.  ಪ್ರೊ. ಬಿ. ಎಂ. ಶ್ರೀ ಅವರು ಅಧ್ಯಕ್ಷರಾಗಿದ್ದರು.  ವಿದ್ಯಾರ್ಥಿ ಕವಿಗಳ ಕಾವ್ಯವಾಚನಕ್ಕೆ ಅವಕಾಶ ಮಾಡಿಕೊಟ್ಟ ವೆಂಕಣ್ಣಯ್ಯನವರು ಒಂದು ವಿಶಿಷ್ಟ ವಾತಾವರಣವನ್ನು ಸೃಷ್ಟಿಸಿದರು.  ಈ ಕಾರ್ಯಕ್ರಮಗಳಲ್ಲಿ ವಾಚನವಾದ ಆಯ್ದ ಕವನಗಳ ಸಂಕಲನವೂ ಪ್ರಕಟವಾದವು.  ಕಿರಿಯ ಕಾಣಿಕೆಮತ್ತು ತಳಿರು’  ಇವುಗಳಲ್ಲಿ ಪ್ರಮುಖವಾದವು.  ಕುವೆಂಪು, ಪು.ತಿ.ನ, ಜಿ. ಪಿ. ರಾಜರತ್ನಂ, ದಿನಕರ ದೇಸಾಯಿ, ತೀ.ನಂ.ಶ್ರೀ, ಎಂ. ವಿ. ಸೀತಾರಾಮಯ್ಯ ಮೊದಲಾದವರ ಕವನಗಳು ಮೊದಲು ದಾಖಲಾಗಿದ್ದು ಈ ಸಂಕಲನಗಳಲ್ಲಿ.    ಬಿ. ವೆಂಕಟಾಚಾರ್ಯರ ಸಾವಿನ ಸಮಸ್ಯೆ’, ಎ. ಎನ್. ಮೂರ್ತಿರಾಯರ ಆಷಾಡಭೂತಿಮತ್ತು ಅನಂತ ನಾರಾಯಣ ಶಾಸ್ತ್ರಿಗಳು ಶ್ರೀ ಹರ್ಷನ ನಾಟಕವನ್ನು ಅನುವಾದಿಸಿದ ನಾಗಾನಂದನಾಟಕ ಎಲ್ಲ ಈ ಕಾಲದಲ್ಲಿ ಪ್ರಕಟವಾದವು.  ಹಿರಿಯರೂ ಕನ್ನಡಕ್ಕಾಗಿ ಶ್ರಮಿಸಿದವರೂ ಆದ ಗಳಗನಾಥರಿಗೆ ಸನ್ಮಾನ ಮಾಡಿತು.  ಕುಮಾರವ್ಯಾಸ ಜಯಂತಿಯನ್ನು ವ್ಯವಸ್ಥೆ ಮಾಡಿ ಗದುಗಿನ ಭಾರತದ ಭಾಗಗಳ ವಾಚನಗಳನ್ನೂ ಏರ್ಪಡಿಸಿ ಹೊಸ ಹೆಜ್ಜೆ ಹಾಕಿತು.  ಮೈಸೂರಿನಲ್ಲಿ ನಡೆದ ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥೆ ಮಾಡಿತು.

ವೆಂಕಣ್ಣಯ್ಯನವರು ತಮ್ಮ ವಿದ್ಯಾರ್ಥಿಗಳ ಮೇಲೆ ಬೀರಿದ ಪ್ರಭಾವ ಗಾಢವಾದದ್ದು. ಅವರ ವಿದ್ಯಾರ್ಥಿಗಳೆಲ್ಲಾ ಅವರನ್ನು ಕುರಿತು ಮಾತನಾಡುವಾಗ, ಭಕ್ತಿ-ಪ್ರೀತಿಗಳಿಂದಲೇ ಮಾತನಾಡುತ್ತಿದ್ದರು.  ಅವರ ನಿರಾಡಂಬರವಾದ ಆದರೆ ಖಚಿತವಾದ, ಆಳವಾದ ವಿದ್ವತ್ತು ವಿದ್ಯಾರ್ಥಿಗಳ ಅಧ್ಯಯನವನ್ನು ರೂಪಿಸಿತು.  ಅವರ ಪ್ರೀತಿಯ ಪ್ರೋತ್ಸಾಹ ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಯನ್ನು ಪೋಷಿಸಿತು.  ಕುವೆಂಪು ತಮ್ಮ ಶ್ರೀ ರಾಮಾಯಣ ದರ್ಶನಂಮಹಾಕಾವ್ಯವನ್ನು ವೆಂಕಣ್ಣಯ್ಯನವರಿಗೆ ಪ್ರಿಯ ಗುರುಎಂದು ಸಂಬೋಧಿಸಿ ಅರ್ಪಿಸಿದುದು ಅವರು ಬೆಳೆಸಿದ ಎಲ್ಲ ವಿದ್ವತ್ತಿನ, ಸದಭಿರುಚಿಯ, ಸೃಜನ ಪ್ರತಿಭೆಯ ಕೃತಜ್ಞತಾಪೂರ್ವಕ ನಮಸ್ಕಾರವಾಗಿದೆ.

ವೆಂಕಣ್ಣಯ್ಯನವರು ಬರೆದದ್ದು ಹೆಚ್ಚಿಲ್ಲ.  ಐವತ್ತಮೂರನೆಯ ವರ್ಷ ನಡೆಯುತ್ತಿದ್ದಾಗಲೇ ಅವರು ತೀರಿಕೊಂಡರು.  ಅವರು ಕಾಲೇಜಿಗೆ ಪಾಠ ಹೇಳಲು ಪ್ರಾರಂಭ ಮಾಡುವ ಹೊತ್ತಿಗೆ ಮೂವತ್ತುಮೂರು ವರ್ಷ.  ಅವರಿಗೆ ಬರಹಕ್ಕೆ ಲಭ್ಯವಾದದ್ದು ಇಪ್ಪತ್ತೇ ವರ್ಷಗಳು.

ವೆಂಕಣ್ಣಯ್ಯನವರು ರವೀಂದ್ರನಾಥ ಠಾಕೂರರ ವಿಮರ್ಶಾ ಲೇಖನಗಳನ್ನು ಅನುವಾದಿಸಿದರುಇವುಗಳ ಸಂಗ್ರಹ ಪ್ರಾಚೀನ ಸಾಹಿತ್ಯ’, ‘ಶ್ರೀ ರಾಮಕೃಷ್ಣ ಲೀಲಾ ಪ್ರಸಂಗಬಂಗಾಳಿ ಕೃತಿಯ ಅನುವಾದ.  ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆಯನ್ನು ಎ.ಆರ್. ಕೃಷ್ಣಶಾಸ್ತ್ರಿಗಳೊಂದಿಗೆ ಬರೆದರು.  ರವೀಂದ್ರರ ಲೇಖನಗಳ ಅನುವಾದಗಳು ಪ್ರಬುದ್ಧ ಕರ್ನಾಟಕದಲ್ಲಿ 1923-24ರ ಸುಮಾರಿನಲ್ಲಿ ಪ್ರಕಟವಾದವು.  ಆಗ ಕನ್ನಡದಲ್ಲಿ ಸಾಹಿತ್ಯ ವಿಮರ್ಶೆಯ ಅಂಕುರಾರ್ಪಣವಾಗುತ್ತಿತ್ತು.  (ಡಿ.ವಿ.ಜಿ ಅವರ ಸಾಹಿತ್ಯ ಮತ್ತು ಜನಜೀವನ’ 1932ರಲ್ಲಿ ಪ್ರಕಟವಾಯಿತು. ಅದರಲ್ಲಿನ ಉಪನ್ಯಾಸಗಳು 1920, 22ರಲ್ಲಿ ನೀಡಿದವು.  ಮಾಸ್ತಿಯವರ ಸಾಹಿತ್ಯದಲ್ಲಿ ವಿಮರ್ಶೆ ಕಾರ್ಯ’ 1924ರಲ್ಲಿ ಪ್ರಕಟವಾಯಿತು).   ಸ್ವತಃ ಶ್ರೇಷ್ಠ ಕವಿ-ಕಾದಂಬರಿಕಾರ-ನಾಟಕಕಾರ-ಕತೆಗಾರನಾದ ಒಬ್ಬ ವಿಮರ್ಶಕನು ಶ್ರೇಷ್ಠ ಕೃತಿಗಳ ಅಧ್ಯಯನವನ್ನು ಹೀಗೆ ಒಂದೆಡೆ ತಂದುಕೊಟ್ಟಿದ್ದೇ  ಒಂದು ಉಪಕಾರ.  ಸಾಹಿತ್ಯವನ್ನು ಕುರಿತು, ಸಾಹಿತ್ಯದ  ಮೌಲ್ಯಮಾಪನವನ್ನು ಕುರಿತು ಬಹು ಖಚಿತವಾದ ಅಭಿಪ್ರಾಯಗಳ ಅನ್ವಯವನ್ನು ಕನ್ನಡದ ವಿದ್ಯಾರ್ಥಿಗಳು ಕಾಣುವಂತಾಯಿತು.  ಉದಾಹರಣೆಗೆ ಕಾಳಿದಾಸನ ಶಾಕುಂತಲನಾಟಕವನ್ನಾಗಲಿ, ‘ಕುಮಾರಸಂಭವವನ್ನಾಗಲಿ ಬಹುಮಟ್ಟಿಗೆ ಶೃಂಗಾರ ರಸ ಪ್ರಧಾನ ಕೃತಿಯಾಗಿ ಕಂಡು ಅದರ ಅಲಂಕಾರಗಳನ್ನು, ಭಾಷೆಯ ಸೊಗಸನ್ನು ಮುಖ್ಯವಾಗಿ ಕಾಣುತ್ತಿದ್ದ ದಿನಗಳಲ್ಲಿ ರವೀಂದ್ರರು ಈ ಕೃತಿಗಳನ್ನು ಒಂದು ಜೀವನದರ್ಶನದ ಅಭಿವ್ಯಕ್ತಿಯನ್ನಾಗಿ ಕಂಡದ್ದು ಆ ಕಾಲದ ವಿದ್ಯಾರ್ಥಿಗಳಿಗೆ ಹೊಚ್ಚ ಹೊಸಮಾರ್ಗವಾಗಿ ಕಂಡಿರಬೇಕು.  ತೀ.ನಂ.ಶ್ರೀ ಅವರು ಕಾಳಿದಾಸನ ನಾಟಕಗಳಲ್ಲಿ ದುರಂತವಸ್ತು ವಿನ್ಯಾಸಲೇಖನದಲ್ಲಿ (1939) ವೆಂಕಣ್ಣಯ್ಯನವರ ಪ್ರಾಚೀನ ಸಾಹಿತ್ಯದಿಂದ (ರವೀಂದ್ರರ ಲೇಖನವನ್ನು ಉತ್ಕೃಷ್ಟಎಂದು ಕರೆದು) ಕೆಲವು ವಾಕ್ಯಗಳನ್ನು ಉದ್ಧರಿಸುತ್ತಾರೆ.

ವೆಂಕಣ್ಣಯ್ಯನವರ ಸ್ವತಂತ್ರ ವಿಮರ್ಶಾ ಲೇಖನಗಳು ಬೇರೆ ಬೇರೆ ಪ್ರಕಟಣೆಗಳಲ್ಲಿ ಹಂಚಿ ಹೋಗಿದ್ದವು.  1959ರಲ್ಲಿ ಇವು ಕನ್ನಡ ಸಾಹಿತ್ಯ ಮತ್ತು ಇತರ ಲೇಖನಗಳುಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾದವು.  ವೆಂಕಣ್ಣಯ್ಯನವರ ಲೇಖನಗಳು ಎರಡು ಬಗೆಯವು ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದವು ಮತ್ತು ಬಿಡಿ ಕೃತಿಗಳಿಗೆ ಸಂಬಂಧಿಸಿದವು.  ಈ ಚಿಂತನೆಗಳೆಲ್ಲಾ ಅವರ ತರಗತಿಯಲ್ಲಿ ಮೂಡಿಬಂದಿದ್ದವು ಎಂಬುದನ್ನು ಚಿಂತಿಸಿದಾದಅಂದಿನ ಅವರ ವಿದ್ಯಾರ್ಥಿಗಳಾದ ಕುವೆಂಪು, ಡಿ.ಎಲ್.ಎನ್, ತೀನಂಶ್ರೀ, ಎಂ.ವಿ.ಸೀ ಮೊದಲಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೆಂಕಣ್ಣಯ್ಯನವರ ತರಗತಿಗಳ ಮಾರ್ಗದರ್ಶನದಿಂದ ಎಷ್ಟೊಂದು ಪ್ರಯೋಜನ ದೊರೆತಿದೆ ಎಂಬುದರ ಮಹತ್ವ ಅರಿವಾಗುತ್ತದೆ. 

ವೆಂಕಣ್ಣಯ್ಯನವರದು  ಶ್ರೀಮಂತ ವ್ಯಕ್ತಿತ್ವ.  ಅವರ ಔದಾರ್ಯ, ನಿರ್ಮಲ ಸ್ನೇಹಪರತೆ, ಸಣ್ಣತನ ಬಳಿಸುಳಿಯದ ಹಿರಿಮೆ, ಶಿಷ್ಯವಾತ್ಸಲ್ಯ, ಧಾರ್ಮಿಕ ಮನೋಧರ್ಮ, ಚಿತ್ತ ಸಂಯಮ ಇವನ್ನು ಹಲವರು ವಿವರಿಸಿದ್ದಾರೆ.  ಪ್ರೊ. ಎಂ. ವಿ. ಸೀತಾರಾಮಯ್ಯನವರು ಒಂದು ಕಡೆ ವೆಂಕಣ್ಣಯ್ಯನವರು ಸಂತರಲ್ಲ, ಸಂತ ಸದೃಶ್ಯರುಎಂದು ಹೇಳಿದ್ದಾರೆ.  ತಾವೇ ಕಷ್ಟದಲ್ಲಿದ್ದರೂ ತಾವೇ ಸಾಲ ಮಾಡಿಯಾದರೂ ಬಡವಿದ್ಯಾರ್ಥಿಗಳಿಗೆ, ಕಷ್ಟದಲ್ಲಿರುವ ಅಸಂಖ್ಯಾತರಿಗೆ ಅವರು ನೀಡಿದ ಪೋಷಣೆ ಕೊಡುಗೈ ದಾನ ಅಷ್ಟಿಷ್ಟಲ್ಲ.  ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಮ್ಮ ಸಾಹಿತ್ಯಲೋಕದ ಸಾರಸ್ವತರುಕೃತಿಯಲ್ಲಿ ವೆಂಕಣ್ಣಯ್ಯನವರಿಗೆ  ಅಷ್ಟೊಂದು ಜನರಿಗೆ ಅಷ್ಟೊಂದು ರೀತಿಯಲ್ಲಿ ಅವರು ಮಾಡುತ್ತಿದ್ದ ಸಹಾಯವನ್ನು ಹೇಗೆ  ತಾನೇ ನಿಭಾಯಿಸಲಿಕ್ಕೆ ಸಾಧ್ಯವಾಗಿತ್ತೋ ಎಂಬುದೇ ದೊಡ್ಡ ಅಚ್ಚರಿಎಂದು ಕೊಂಡಾಡಿದ್ದಾರೆ. 

ವೆಂಕಣ್ಣಯ್ಯನವರು ಪಾಠ ಹೇಳಲು ಪಾರಂಭಿಸಿದ, ಬರೆದ ಕಾಲ ಕನ್ನಡವು ನಿಷ್ಠ ಅಭಿಮಾನಿಗಳನ್ನೂ, ಅಧ್ಯಯನಶೀಲವನ್ನೂ ಬೇಡುತ್ತಿದ್ದ ಕಾಲ.  ಕನ್ನಡ ಭಾಷೆ ಮತ್ತು ಸಾಹಿತ್ಯಗಳಲ್ಲಿ ಅಭಿಮಾನ, ಅಧ್ಯಯನಗಳು ಒಂದಕ್ಕೊಂದು ಪೂರಕವಾಗಿ, ಅಭಿಮಾನವನ್ನು ಅಧ್ಯಯನಕ್ಕೆ ಗಟ್ಟಿಯಾದ ಆಧಾರವನ್ನು ಒದಗಿಸಬೇಕಾಗಿದ್ದ ಕಾಲ.  ಈ ಯುಗ ಬೇಡಿದಂತಹ ಸ್ವಭಾವದ, ಸಾಮರ್ಥ್ಯದ ಅನೇಕ ಹಿರಿಯರು ಕಾಣಿಸಿಕೊಂಡದ್ದು ಕನ್ನಡದ ಪುಣ್ಯ.  ಅಂತಹ ಹಿರಿಯರಲ್ಲಿ ವೆಂಕಣ್ಣಯ್ಯನವರು ಒಬ್ಬರು.  ಅವರ ವಿದ್ಯಾರ್ಥಿಗಳೆಲ್ಲಾ ಸ್ಮರಿಸಿಕೊಳ್ಳುತ್ತಿದ್ದಂತೆ, ಅವರು ಕೃತಿಗಳು ತೋರಿಸುವಂತೆ ಅವರದು ಸಂಶೋಧನಾ ಪ್ರವೃತಿ.  ಸಾಹಿತ್ಯ ಕೃತಿಯನ್ನು ಅದರ ಸಾಮಾಜಿಕ ಮತ್ತು ಚಾರಿತ್ರಿಕ ಸಂದರ್ಭದಲ್ಲಿ ಇಟ್ಟು ನೋಡುವವರುಆದರೆ ಕಡೆಗೆ ಅದರ ಸಾಹಿತ್ಯಸತ್ಯಕ್ಕೆ ಬೆಲೆ ಕೊಡುವವರು.  ಹತ್ತು ದೀಪ ಹೊತ್ತಿಸಿದ ಮೂಲದೀಪವಾದರು.

ನಮ್ಮ ಕಾಲದಲ್ಲಿ ನಾವು ಕನ್ನಡಕ್ಕೆ ಬಂದ  ವೈಭೋಗವನ್ನು ಕಾಣುವ ಸೌಭಾಗ್ಯವನ್ನು ಕರುಣಿಸಿದ ಈ ಮಹಾತ್ಮರಿಗೆ ನಮ್ಮ ಭಕ್ತಿಪೂರ್ವಕ ನಮನಗಳು. 

(ಆಧಾರ: ಎಲ್. ಎಸ್. ಶೇಷಗಿರಿರಾವ್ ಅವರ ವೆಂಕಣ್ಣಯ್ಯನವರ ಕುರಿತಾದ ಬರಹ, ಪ್ರೊ. ಜಿ. ವಿ. ಅವರ ಸಾಹಿತ್ಯಲೋಕದ ಸಾರಸ್ವತರುಕೃತಿ)

Tag: T. S. Venkannaiah

ಕಾಮೆಂಟ್‌ಗಳಿಲ್ಲ: