ಸೋಮವಾರ, ಸೆಪ್ಟೆಂಬರ್ 2, 2013

ಬರಗೂರು ರಾಮಚಂದ್ರಪ್ಪ

ಬರಗೂರು ರಾಮಚಂದ್ರಪ್ಪ

'ಬ್ರಹ್ಮಪುತ್ರ, ಗಂಗಾನದಿಗಳಷ್ಟೆ ಶ್ರೇಷ್ಠವಲ್ಲ, ನಮ್ಮೂರಿನ ಹಳ್ಳ- ಕೊಳ್ಳಗಳೂ ಶ್ರೇಷ್ಠ. ಶ್ರೀಗಂಧ ಮಾತ್ರವಲ್ಲ, ನಮ್ಮೂರಿನ ಜಾಲಿ ಮರವೂ ಶ್ರೇಷ್ಠ. ಕೋಗಿಲೆ ಅಷ್ಟೇ ಅಲ್ಲ, ನಮ್ಮೂರಿನ ಕಾಗೆಯೂ ನನಗೆ ಶ್ರೇಷ್ಠವೇ ಆಗಿದೆ`. ಈ  ಬರಗೂರು ರಾಮಚಂದ್ರಪ್ಪನವರ ಮಾತುಗಳು  ಅವರ ಅಂತರಾಳದ ಒಂದು ನೋಟ. ತಳ ಮಟ್ಟದ ಜನರ ನೋವುಗಳಿಗೆ ಸದಾ ತುಡಿಯುವ, ಚಿಂತಿಸುವ ಮನಸ್ಸು ಅವರದು.  ಅವರನ್ನು ಜನ ಗುರುತಿಸುವುದು ಬಂಡಾಯ ವ್ಯಕ್ತಿತ್ವದವರಾಗಿಬಂಡಾಯ ಸಾಹಿತಿಯಾಗಿ, ಬಂಡಾಯದ ಮಾತುಗಾರರಾಗಿ.  ಈ ಕುರಿತು ಬರಗೂರರು ಹೇಳುತ್ತಾರೆ ಬಂಡಾಯವೆಂದರೆ ಹೊಡಿ, ಬಡಿ, ಕೊಲ್ಲು ಎಂದಲ್ಲ.  ಬಂಡಾಯವೆಂಬುದು ನನ್ನ ಪ್ರಕಾರ ಸಿದ್ಧಾಂತ.  ಯಾವುದೇ ಒಂದು ಅನಿವಾರ್ಯ ಪರಿಸ್ಥಿತಿ ಒದಗಿದಾಗ ಅದಕ್ಕೆ ಅಗತ್ಯವಾದ ಪ್ರತಿಕ್ರಿಯೆ ನೀಡದೆ ಸುಮ್ಮನೆ ಮೂಖನಾಗಿರುವುದು ನನಗೆ ಸಾಧ್ಯವಿಲ್ಲ.  ಹಾಗೆ ಸುಮ್ಮನಿರುವುದು ನನಗೆ ಸಮ್ಮತವೂ ಅಲ್ಲ”.

ನಾವು ಬರಗೂರರ ಅಭಿಪ್ರಾಯಗಳನ್ನು ಒಪ್ಪದಿರಬಹುದು ಅಥವಾ ಬಿಡಬಹುದು.  ಆದರೆ ಅವರ ಕನ್ನಡ ಪ್ರೀತಿ, ಕನ್ನಡದ ಹೋರಾಟಗಳು, ಕನ್ನಡ ಕಾಳಜಿಗಳು, ಕನ್ನಡಕ್ಕಾಗಿ ಮಾಡಿದ ಕೆಲಸವನ್ನು ತೆಗೆದು ಹಾಕಲು ಸಾಧ್ಯವಿಲ್ಲ.

ಬರಗೂರು ರಾಮಚಂದ್ರಪ್ಪನವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಪಾಟಿ ಚೀಲ ಹಿಡಿದು ಕೆಂಪು ಬಸ್ಸಿನ ಹಿಂದೆ ಓಡುತ್ತಿದ್ದ ಬರಗೂರರು, ತುಮಕೂರು, ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ನಾಡಿನಲ್ಲಿ ಹೊಸ ಆಲೋಚನೆ, ಚಿಂತನೆಗಳಿಗೆ ಕಾರಣರಾದವರು. 

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಬರಗೂರರು  ಸಲ್ಲಿಸಿದ ಸೇವೆ ಗಣನೀಯವಾದ್ದದ್ದು. ಸಾಹಿತ್ಯದಷ್ಟೆ ಸಿನೆಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನೆಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ಕೂಡ ವಿಭಿನ್ನ ಹಾದಿ ಹಿಡಿದವರು. ಬರಗೂರರ ಚಿತ್ರಗಳು ಬಡವರ, ದಲಿತರನ್ನು ಧ್ವನಿಸುವ ಮೂಲಕ ಭಾರತೀಯ ಸಿನೆಮಾ ರಂಗದ ಚರಿತ್ರೆಯ ಪುಟಗಳಾಗಿ ಮಿಂಚಿವೆ. ಅವರು ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಅವರೊಂದಿಗೆ ಆವಿನಾಭಾವ ಸಂಬಂಧ ಹೊಂದಿದ್ದರು.  ಅವರ ಸಿನಿಮಾ ನಿರ್ದೇಶನ, ಹಾಡುಗಳು, ಕಥೆ, ಚಿತ್ರಕಥೆ ಇವೆಲ್ಲಾ ಕಲಾತ್ಮಕ ಹಾಗೂ ಜನಮಾನಸಗಳನ್ನು ತನ್ನದೇ ಆದ ರೀತಿಯಲ್ಲಿ ಸೆಳೆದಿವೆ.

ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ಇವುಗಳಲ್ಲಿ ಬರಗೂರರು ದಕ್ಷರಾಗಿ ಕೆಲಸಮಾಡಿದ್ದಾರೆ.  ಕನ್ನಡ ಪರ ಹೋರಾಟ ಮತ್ತು ಚಿಂತನೆಗಳಲ್ಲಿ ಅವರು ಎಂದೂ ಹಿಂದೆ ಬೀಳದವರು.  ಕನ್ನಡ ಪರ ಕಾರ್ಯಕ್ರಮಗಳು, ಕನ್ನಡದ ಸಾಮಾನ್ಯ ಜನತೆ, ಕನ್ನಡತನವನ್ನು ಬಿತ್ತುವ ಕೆಲಸ ಅವರಿಗೆ ಎಂದೆಂದೂ ಪ್ರಿಯ.  ಹೀಗಾಗಿ ಕನ್ನಡ ಪರ ಆಸಕ್ತರಿಗೆ ಅವರು ಎಂದೆಂದೂ ಪ್ರಿಯರು.  ಹಾಗೆಂದ ಮಾತ್ರಕ್ಕೆ ಅವರು ಎಲ್ಲರನ್ನೂ ಪ್ರಿಯವಾಗಿಸಲು ಬಣ್ಣ ಬಣ್ಣದ ಮಾತುಗಳನ್ನಾಡುವವರಲ್ಲ.  ಹೀಗಾಗಿ ಅವರ ಬಂಡಾಯ ಮನೋಧರ್ಮದ ಮಾತುಗಳು ಎಲ್ಲ ಜನರ ವೈಯಕ್ತಿಕ ಪ್ರೀತಿಗಳನ್ನೂ, ನಿಲುವುಗಳನ್ನೂ ಆಗಾಗ ಕೆದಕುತ್ತದೆ.  ಅವರ ಮಾತುಗಳಿಗೆ ಹಲವು ಬಣ್ಣಗಳನ್ನು ಹಚ್ಚಿ ಅವರು ಹೀಗೆಂದರು, ಹೀಗೆಂದರು, ಅವರನ್ನು ಎಡಬಿಡಂಗಿ ಅಂದರು, ಮತ್ತೊಬ್ಬರು ಪ್ರಶಸ್ತಿಗೆ ಯೋಗ್ಯರಲ್ಲ ಎಂದರು, ಇನ್ನೊಬ್ಬರು ಏಕೆ ವಿಶ್ವಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಬಾರದು ಎಂದರು ಇತ್ಯಾದಿ ವಾಗ್ವಾದಗಳು ಪ್ರತಿನಿತ್ಯ ಪತ್ರಿಕೆಗಳಲ್ಲಿ ಕಾಣಸಿಗುತ್ತವೆ.   ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ಅವರು ಎಲ್ಲರಿಗೂ ಪ್ರಿಯರು ಆದರೆ, ಎಲ್ಲವನ್ನೂ ತಮ್ಮ ಬಂಡಾಯದ ಸಿದ್ಧಾಂತಗಳ ಆಳವಾದ ನಿಲುವಿನ ಮೂಸೆಯಲ್ಲಿಟ್ಟು ಕನ್ನಡದ ಕಾಳಜಿಗಳಲ್ಲಿ ಅಳೆಯುವ ತಮ್ಮ ಮೂಲಭೂತ ಗುಣವನ್ನು ಅವರು ಬಿಟ್ಟುಕೊಡಲು ತಯಾರಿಲ್ಲ. 

ಜಾಗತೀಕರಣವೆಂಬ ಭ್ರಮೆಯಲ್ಲಿ ಕಳೆದು ಹೋಗುತ್ತಿರುವ ವಿಶ್ವವನ್ನು ಅವರು ಮನನೀಯವಾಗಿ ಗುರುತಿಸುತ್ತಾರೆ.  “ ಕೈಗಾರಿಕೀಕರಣ ಕಾಲದಲ್ಲಿದ್ದ ಜನರ ಕನಸುಗಳೇ ಬೇರೆ. ಜಾಗತೀಕರಣ ಕಾಲದ ಕನಸುಗಳೇ ಬೇರೆ. ಈಗಲೂ ಹಿಂದಿನ ಕನಸುಗಳೇ ಇರಬೇಕೆಂದು ನಾನು ಹೇಳುತ್ತಿಲ್ಲ. ನಮಗೆ ಆರೋಗ್ಯಕರ ಮನೋಧರ್ಮವನ್ನು ಬೆಳೆಸುವ ಕನಸುಗಳು ಬೇಕು; ಆ ಕನಸುಗಳು ಸಾಕಾರಗೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯುವುದು, ತಕ್ಕಮಟ್ಟಿನ ಉದ್ಯೋಗ ಪಡೆಯುವುದು, ಬದುಕಲಿಕ್ಕೆ ಬೇಕಿರುವಷ್ಟು ಸಂಬಳ ಪಡೆಯುವುದು, ಮನೆ ಕಟ್ಟಿಸುವುದು, ಕುಟುಂಬದಲ್ಲಿ ನೆಮ್ಮದಿ ಕಾಯ್ದುಕೊಳ್ಳುವುದು- ಈ ಕೆಲವು, ಕೈಗಾರಿಕೀಕರಣ ಕಾಲದ ಕನಸುಗಳು. ಇವು  ‘ಸುಖಮುಖಿಯಾದ' ಕನಸುಗಳು.

ಆದರೆ ಜಾಗತೀಕರಣ ಹುಟ್ಟುಹಾಕುತ್ತಿರುವುದು `ಭೋಗಮುಖಿಯಾದ' ಕನಸುಗಳು. ಬದುಕಲಿಕ್ಕೆ ಮಾತ್ರ ಸಂಬಳ ಸಾಲದು, ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬೇಕು. ವೈಭೋಗದ ಜೀವನಕ್ಕೆ ವಿಲಾಸದ ವಸ್ತುಗಳು ಬೇಕು. ಇದೇ ಜೀವನ ವಿಧಾನವಾಗಬೇಕು - ಹೀಗೆ ಭೋಗ ಬದುಕನ್ನು ಬಯಸುವ ಜಾಗತೀಕರಣ ಅರ್ಥಾತ್ ಖಾಸಗೀಕರಣ, ಜೀವನದ ಆದ್ಯತೆ ಮತ್ತು ಆದರ್ಶಗಳನ್ನೂ ಬದಲಿಸುತ್ತಿದೆ. ಖಾಸಗಿ ಬಂಡವಾಳಗಾರರ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡುವ ದೃಷ್ಟಿಯಿಂದಲೇ ಮನೋಧರ್ಮವನ್ನು ಬದಲಾಯಿಸಲಾಗುತ್ತಿದೆ.

ಬದುಕಿನ ಬದಲಾವಣೆಯೆಂದರೆ ಮೇಲ್ಪದರದ ಬದಲಾವಣೆ ಎಂದಾಗುತ್ತಿದೆ. `ಮೇಲ್ಪದರ' ಎನ್ನುವುದು ಸಾಮಾಜಿಕ, ಆರ್ಥಿಕ ಮೇಲ್ಪದರವೂ ಹೌದು; ತೆಳು ಬದಲಾವಣೆಯ ಸ್ವರೂಪವೂ ಹೌದು. ಹೀಗಾಗಿ ಕೈಗಾರಿಕೀಕರಣ ಕಾಲದ ‘ವಿಕಾಸ ಜೀವನ'ವು ಖಾಸಗೀಕರಣ ಕಾಲದಲ್ಲಿ ‘ವಿಲಾಸ ಜೀವನ'ವಾಗುತ್ತಿದೆ. ಖಾಸಗೀಕರಣದ ‘ಕೆನೆಪದರ'ವಾದ ಕಾರ್ಪೊರೇಟ್ ವಲಯವು ಭೋಗವನ್ನೇ ಸುಖವೆಂದು ಬಿಂಬಿಸುತ್ತಿದೆ. ವಾಸ್ತವವಾಗಿ ಭೋಗವೇ ಬೇರೆ, ಸುಖವೇ ಬೇರೆ. ಆದರೆ ಭೋಗದ ಬೆನ್ನು ಹತ್ತಿದವರು ಸುಖಕ್ಕೆ ಬೆನ್ನು ತೋರಿಸುತ್ತಾರೆಂಬ ಸತ್ಯವನ್ನು ಕಾರ್ಪೊರೇಟ್ ವಲಯ ಹೂತುಹಾಕುತ್ತಿದೆ.”

ಬರಗೂರರ ಸಾಹಿತ್ಯದ ಹಾದಿಯಲ್ಲಿನ ಕೆಲವು ಕೃತಿಗಳನ್ನು ನೆನೆಸಿಕೊಳ್ಳುವುದಾದರೆ ಒಂದು ಊರಿನ ಕತೆಗಳು’, ‘ಕನ್ನಡಾಭಿಮಾನ’, ‘ಕಪ್ಪು ನೆಲದ ಕೆಂಪು ಕಾಲು’, ‘ಮರಕುಟಿಗ’, ‘ರಾಜಕಾರಣಿ’, ‘ಸಾಹಿತ್ಯ’, ‘ಸುಂಟರಗಾಳಿ’, ‘ಸೂತ್ರ’, ‘ಕಾಂಟೆಸ್ಸಾ ಕಾವ್ಯ’, ‘ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ’, ‘ನೆತ್ತರಲ್ಲಿ ನೆಂದ ಹೂ’, ‘ಗುಲಾಮನ ಗೀತೆ’, `ಸಿನಿಮಾ : ಒಂದು ಜನಪದ ಕಲೆ`, ‘ಮರ್ಯಾದಸ್ಥ ಮನುಷ್ಯರಾಗೋಣಮುಂತಾದವು ತಕ್ಷಣ ನೆನಪಿಗೆ ಬರುತ್ತವೆ. ಬರಗೂರರ ಸುಂಟರಗಾಳಿಕಥಾಸಂಕಲನಕ್ಕೆ  ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.  ಕಳೆದ ವರ್ಷದ ಪಂಪ ಪ್ರಶಸ್ತಿ’,  ‘ನಾಡೋಜಪ್ರಶಸ್ತಿ ಹಾಗೂ ಹಲವಾರು ರಾಜ್ಯಮಟ್ಟದ, ಸಂಘ ಸಂಸ್ಥೆಗಳ  ಗೌರವಗಳು ಅವರಿಗೆ ಸಂದಿವೆ.

ಯಾವುದೇ ವ್ಯಾಪಾರೀ ಮಾಧ್ಯಮದ ಸರಕಿಲ್ಲದಿದ್ದರೂ ಉತ್ತಮ ಸಾಂಸ್ಕೃತಿಕ ಮೌಲ್ಯಗಳಿಂದ ಜನಪ್ರೀತಿಗಳಿಸಿ ಕಳೆದ ವರ್ಷ ಶತದಿನೋತ್ಸವ ಆಚರಿಸಿದ ಭಾಗೀರತಿಚಿತ್ರವೇ ಅಲ್ಲದೆ  ಒಂದು ಊರಿನ ಕಥೆ’, ‘ಬೆಂಕಿ’, ‘ಸೂರ್ಯ’,  ‘ಕೋಟೆ’, ‘ಕ್ಷಾಮ’, ‘ಶಾಂತಿ’, ‘ತಾಯಿ’, ‘ಏಕಲವ್ಯ’, ‘ಶಬರಿ’, ‘ಹಗಲು ವೇಷ’, ಭೂಮಿತಾಯಿಮುಂತಾದವು ಬರಗೂರರ ಚಿತ್ರಗಳು.  ಇವಲ್ಲದೆ ಬರಗೂರರ ಕಥೆ ಮತ್ತು ಹಾಡುಗಳು ಇತರ ನಿರ್ದೇಶಕರ ಚಲನಚಿತ್ರಗಳಲ್ಲಿ ಖ್ಯಾತಿಗಳಿಸಿವೆ.


ಹೀಗೆ ಹಲವು ರೀತಿಯಲ್ಲಿ ಕನ್ನಡದಲ್ಲಿ ಕ್ರಿಯಾಶೀಲರಾಗಿರುವ ಬರಗೂರು ರಾಮಚಂದ್ರಪ್ಪನವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಹೇಳುತ್ತ ಅವರ ಸೃಜನಶೀಲತೆ ಉತ್ತಮ ರೀತಿಯಲ್ಲಿ ಸದಾ  ಸಕ್ರಿಯವಾಗಿ ಪ್ರಕಾಶಿಸುತ್ತಿರಲಿ ಎಂದು ಹಾರೈಸೋಣ.

Tag: Baragooru Ramachandrappa, Baragur Ramachandrappa

ಕಾಮೆಂಟ್‌ಗಳಿಲ್ಲ: