ಸೋಮವಾರ, ಸೆಪ್ಟೆಂಬರ್ 2, 2013

ಫ್ರೀದಾ ಪಿಂಟೋ

ಫ್ರೀದಾ ಪಿಂಟೋ

ಡ್ಯಾನಿ ಬೋಯೆ ಅವರ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರವಾದ ‘ಸ್ಲಂಡಾಗ್ ಮಿಲಿಯನೇರ್’ ಚಿತ್ರದ ಮೂಲಕ  ದಿಡೀರ್ ಅಂತರರಾಷ್ಟ್ರೀಯ ತಾರೆಯಾದವರು ನಮ್ಮ ಮಂಗಳೂರಿನ ಮೂಲದ ಫ್ರೀದಾ ಪಿಂಟೋ.  ಮುಂದೆ ವಿಶ್ವಪ್ರಸಿದ್ಧರಾದ  ವುಡಿ ಅಲೆನ್ ಅವರ ‘ಯು ವಿಲ್ ಮೀಟ್ ಎ  ಟಾಲ್ ಡಾರ್ಕ್ ಸ್ಟ್ರೇಂಜರ್’,  ಜುಲಿಯನ್ ಸ್ಕ್ನಾಬೆಲ್ ಅವರ ‘ಮಿರಲ್’, ವೈಜ್ಞಾನಿಕ ಕಲ್ಪನಾ ಚಿತ್ರ ‘ದಿ ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಫ್ರೀದಾ ಇಂದು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ.

ಮಂಗಳೂರಿನ ಕ್ಯಾಥೊಲಿಕ್ ಕುಟುಂಬಕ್ಕೆ ಸೇರಿದ ಸಿಲ್ವಿಯಾ ಪಿಂಟೋ ಮತ್ತು ಫ್ರೆಡ್ರಿಕ್ ಪಿಂಟೋ ಅವರ ಮಗಳಾಗಿ  ಫ್ರೀದಾ ಪಿಂಟೋ ಅಕ್ಟೋಬರ್ 18, 1984ರ ವರ್ಷದಲ್ಲಿ ಮುಂಬೈನಲ್ಲಿ ಜನಿಸಿದರು.  ಓದಿ ಪದವಿ ಪಡೆದದ್ದು ಮುಂಬೈನ ಸೇಂಟ್ ಗ್ಸೇವಿಯರ್ ಕಾಲೇಜಿನಲ್ಲಿ.  ಸ್ಲಂ ಡಾಗ್ ಮಿಲಿಯನೇರ್ ನಟನೆಗೆ ಮುಂಚಿತವಾಗಿ ಅವರು ‘ಜೀ ಇಂಟರ್ನ್ಯಾಷನಲ್ ಏಶಿಯಾ ಪೆಸಿಫಿಕ್’ ಚಾನೆಲ್ಲಿನಲ್ಲಿ ಪ್ರವಾಸ ಕುರಿತಾದ ಕಾರ್ಯಕ್ರಮವೊಂದನ್ನು  ನಡೆಸಿಕೊಟ್ಟಿದ್ದರು.  ಬಾಲ್ಯದಿಂದ ನಟಿಯಾಗಬೇಕೆಂದು ಕನಸು ಕಟ್ಟಿದ್ದ ಫ್ರೀದಾ ಸುಮಾರು ಆರು ತಿಂಗಳ ಕಾಲ ‘ಸ್ಲಂ ಡಾಗ್ ಮಿಲಿಯನೇರ್’ ತಂಡದ ಆಡಿಶನ್ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು.   ಇಂತಹ ದಿನಗಳಲ್ಲಿ ಚಿತ್ರತಂಡದಿಂದ ಮತ್ತೊಂದು ಕರೆ ಬಂದಾಗ ಇದು ಮತ್ತೊಂದು ಆಡಿಷನ್ ಟೆಸ್ಟ್  ಎಂದು ಹೋದ ಆಕೆಗೆ  ಚಿತ್ರದ ತಾರೆಯಾಗಿ ಆಯ್ಕೆಯಾಗಿರುವ ಅಚ್ಚರಿಯುತ ಸಂತಸ  ಕಾದಿತ್ತು”.  

ಡೆಸರ್ಟ್ ಡ್ಯಾನ್ಸರ್, ನೈಟ್ ಆಫ್ ಕಪ್ಸ್ ಮುಂತಾದವು ಫ್ರೀದಾ ಅವರ ಮುಂದಿನ ಚಿತ್ರಗಳು.   ‘ಇಮ್ಮಾರ್ಟಲ್ಸ್‘ ಅವರ ಇತ್ತೀಚೆಗೆ ತೆರೆಕಂಡ  ಚಿತ್ರ.    ಭಾರತೀಯ ಚಲನಚಿತ್ರಗಳಲ್ಲಿ ಏಕೆ ಅಭಿನಯಿಸಿಲ್ಲ ಎಂಬುದಕ್ಕೆ ಅವರ ಉತ್ತರ ಮಾರ್ಮಿಕವಾಗಿದೆ.  “ಒಂದು ಕಾಲದಲ್ಲಿ ಭಾರತೀಯ ಚಲನಚಿತ್ರಗಳಲ್ಲಿ ಅಭಿನಯಿಸಬೇಕು ಎಂಬ ಎಲ್ಲ ರೀತಿಯ ಪ್ರಯತ್ನಮಾಡಿ,  ಸೋತು, ನಾನು ಪಾಶ್ಚಿಮಾತ್ಯ ದೇಶಗಳತ್ತ ಹೊರಟು ಬಂದೆ.  ಇದುವರೆಗೆ  ನನಗೆ ಭಾರತದ ನಿರ್ಮಾಪಕರು ಹೇಳಿರುವ ಕಥಾನಕಗಳು ಮನಮುಟ್ಟುವಂತದ್ದಾಗಿಲ್ಲ. ನಾನು ಭಾರತೀಯ ಚಿತ್ರಗಳಲ್ಲಿ ಅಭಿನಯಿಸದಿರುವುದರಿಂದ ನನ್ನ ದೇಶದಲ್ಲೇ ನಾನು ಪ್ರಸಿದ್ಧಿಪಡೆದಿಲ್ಲ  ಎಂಬುದು ನನ್ನನ್ನು ಮೊದಮೊದಲು ದುಃಖಕ್ಕೀಡುಮಾಡುತ್ತಿತ್ತು.  ವಿದೇಶೀ  ಚಿತ್ರಗಳಲ್ಲಿ ಸಾಕಷ್ಟು ಜ್ಞಾನ ಮತ್ತು ಪರಿಣತಿ ಗಳಿಸಿ ಒಂದು ದಿನ ಭಾರತದಲ್ಲಿ ನನ್ನದೇ ಆದ ಚಿತ್ರಗಳನ್ನು ಮೂಡಿಸುವ ಆಶಯ ಹೊತ್ತಿದ್ದೇನೆ” ಎನ್ನುತ್ತಾರೆ ಫ್ರೀದಾ.

ಸ್ಲಂಡಾಗ್ ಮಿಲಿಯನೇರ್ ಚಿತ್ರದಲ್ಲಿ ಸಹನಟನಾಗಿದ್ದ ದೇವ್ ಪಟೇಲ್ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ  ಫ್ರೀದಾ ಪಿಂಟೋ,  ಅವರೊಂದಿಗೆ ಲಾಸೆಂಜಲಿಸ್ ನಿವಾಸಿಯಾಗಿದ್ದಾರೆ. ಟೈಟಾನಿಕ್ ಪ್ರಖ್ಯಾತಿಯ ಲಿಯನಾರ್ಡೋ ಡಿ ಕಾಪ್ರಿಯೋ ಅವರೊಂದಿಗೆ ನಟಿಸಬೇಕೆಂಬುದು ಅವರ ಬಹುದಿನದ ಕನಸು.  

ಬಹುತೇಕ ಪ್ರಖ್ಯಾತ ಸಿನಿಮಾ ತಾರೆಯರಂತೆ ಫ್ರೀದಾ ಪಿಂಟೋ  ಸಹಾ ಸಮಾಜೋದ್ಧಾರದ ಕಾರ್ಯಗಳಲ್ಲಿ ತೊಡಗಿದ್ದು ,ಪ್ರಸಿದ್ಧ ಟೆನ್ನಿಸ್ ದಂಪತಿಗಳಾದ ಆಂಡ್ರಿ ಆಗಾಸಿ – ಸ್ಟೆಫಿ ಗ್ರಾಫ್ ಅವರ ‘ಅಗಾಸಿ ಫೌಂಡೇಶನ್’ ರಾಯಭಾರಿಯಾಗಿ  ಬಡಮಕ್ಕಳ ಅಭ್ಯುದಯಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದ್ದಾರೆ.

ಫ್ರೀದಾ ಪಿಂಟೋ ಅವರು ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಸಾಧನೆ ಮಾಡುವಂತಾಗಲಿ, ಅವರಿಂದ ನಮ್ಮ ದೇಶಕ್ಕೆ ಕೀರ್ತಿ ದೊರಕಲಿ, ಅವರ ಬದುಕು ಸಂತಸದಿಂದ ತುಂಬಿರಲಿ ಎಂದು ಶುಭ ಹಾರೈಸೋಣ.

Tag: Frieda Pinto

ಕಾಮೆಂಟ್‌ಗಳಿಲ್ಲ: