ಭಾನುವಾರ, ಸೆಪ್ಟೆಂಬರ್ 1, 2013

ಆರ್. ಕೆ. ಶ್ರೀಕಂಠನ್‌

ಆರ್. ಕೆ. ಶ್ರೀಕಂಠನ್‌

ಸಂಗೀತ ಕಲಾನಿಧಿ, ಗಾಯಕ ಚೂಡಾಮಣಿ, ಗಾನ ಭಾಸ್ಕರ, ಶೃತಿ ಸಾಗರ, ನಾದನಿಧಿ, ಕಲಾ ಸಾಗರ, ಗಾನರತ್ನ, ಲಯಕಲಾ ನಿಪುಣ ಎಂಬಿತ್ಯಾದಿ ಬಿರುದಾಂಕಿತರು ವಿದ್ವಾನ್‌ ರುದ್ರಪಟ್ನಂ ಕೃಷ್ಣಶಾಸ್ತ್ರೀ ಶ್ರೀಕಂಠನ್‌.  ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಯೂ ಸಂದಿದೆ.  ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದ ಅತ್ಯಂತ ಹಿರಿಯ ಹೆಮ್ಮರ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯಾಭಿವ್ಯಕ್ತ ಮತ್ತು ಮಾಧುರ್ಯಕ್ಕೆ ಇನ್ನೊಂದು ಹೆಸರು ಆರ್‌.ಕೆ. ಶ್ರೀಕಂಠನ್‌. ಲೆಕ್ಕಾಚಾರಗಳನ್ನೆಲ್ಲಾ ಧಾಟಿ ತಮ್ಮದೇ ಮನೋಧರ್ಮದ ಬಣ್ಣ ತುಂಬಿದ ವರ್ಣಶಿಲ್ಪಿ!  ಹಾಸನದ ಹಳ್ಳಿಯಿಂದ ಜಗತ್ತಿನಾದ್ಯಂತ ಮಿಡಿದ ದನಿ. ಕನ್ನಡ ನಾಡಿನ ಸಂಗೀತಗಾರರಲ್ಲಿ ಮೊದಲಿಗರು. ಅವರು ಸಂಗೀತ ಭಾಷೆಯನ್ನು ಮಾತೃಭಾಷೆ ಮಾಡಿಕೊಂಡವರು.  

ಮೈಸೂರು ಮಹಾರಾಜ ಕಾಲೇಜಿನಿಂದ ಕಲಾ ಪದವಿ ಪಡೆದ ಶ್ರೀಕಂಠನ್‌ ಅವರು ನಡೆದ ಹಾದಿಯಲ್ಲಿ ಹಲವು ಗುರುತುಗಳಿವೆ. ಆಕಾಶವಾಣಿಯಲ್ಲಿ ಅವರ 32 ವರ್ಷಗಳ ಸೇವೆ ಕನ್ನಡಿಗರ ಎದೆಗೂಡಿನಲ್ಲಿ ಮನೆ ಮಾಡಿದೆ. ಅವರು ಗಾನವಿಹಾರ' ಕಾರ್ಯಕ್ರಮದಲ್ಲಿ ಸಂಗೀತ ಗುರುವಾಗಿ ಲಕ್ಷಾಂತರ ಕೇಳುಗರಿಗೆ ಸಂಗೀತ ಪಾಠ ಮಾಡಿದವರು. ಪುರಂದರದಾಸರ ಕೃತಿಗಳಿಗೆ ಅವರು ಕೊಟ್ಟ ಸ್ವರೂಪ ಮಹತ್ವದ ಮೈಲುಗಲ್ಲು. ಕೆಸೆಟ್‌ ಮೂಲಕ ಮನೆ ಮನೆ ತಲುಪಿದವರು. ಪ್ರತಿಷ್ಠಿತ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯಲ್ಲಿ ಸದಸ್ಯರಾಗಿ ಕಾರ್ಯ ಮಾಡಿದವರು. ಕೇರಳದ ಸರ್ಕಾರಿ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಮದ್ರಾಸ್‌ ಸಂಗೀತಗಾರರ ಆರ್ಭಟದ ನಡುವೆ, ಹಿಂದೂಸ್ತಾನಿ ಸಂಗೀತದ ಅಲೆಯಲ್ಲಿ ಈಜಿ ಒಬ್ಬ ಪರಿಪೂರ್ಣ ಸಂಗೀತ ವಿದ್ವನ್ಮಣಿಯಾಗಿ ಹೊರಹೊಮ್ಮಿದವರು.

ಆರ್‌.ಕೆ. ಶ್ರೀಕಂಠನ್‌ ಅವರು ಹುಟ್ಟಿದ್ದು ಮಕರ ಸಂಕ್ರಾಂತಿಯ ದಿನ. 1920 ಜನವರಿ 14ರಂದು ಹಾಸನ ಜಿಲ್ಲೆಯ ಕಾವೇರಿ ತಟದ ರುದ್ರಪಟ್ಟಣದಲ್ಲಿ ಅವರ ಹುಟ್ಟು. ಕಳೆದ  ಜನವರಿ 20ಕ್ಕೆ ಅವರಿಗೆ ತೊಂಭತ್ನಾಲ್ಕು  ತುಂಬಿದ್ದವು.  ಈ ತೊಂಬತ್ತನಾಲ್ಕರಲ್ಲಿ ಅವರು ಸುಮಾರು 90 ವರ್ಷಗಳನ್ನು ಸಂಗೀತದಲ್ಲೇ ಜೀವಿಸಿದ್ದರು.  ಕಳೆದ2014ರ ಫೆಬ್ರುವರಿ 17ರಂದು ಅವರು ನಿಧನರಾಗುವುದಕ್ಕೆ ಕೆಲವು ತಿಂಗಳ ಹಿಂದೆ ಸಹಾ ಅವರು ಮೈಸೂರಿನಲ್ಲಿ ಪೂರ್ಣಪ್ರಮಾಣದ ಕಛೇರಿ ನಡೆಸಿಕೊಟ್ಟಿದ್ದರು.

ಆರ್‌.ಕೆ. ಶ್ರೀಕಂಠನ್‌ ಅವರ ಕುಟುಂಬದಲ್ಲಿ ವೇದ, ಸಂಸ್ಕೃತ, ಸಂಗೀತ, ಸಾಹಿತ್ಯ, ಲಾಲಿತ್ಯಗಳೇ ತುಂಬಿವೆ. ತಂದೆ ಆರ್‌. ಕೃಷ್ಣಶಾಸ್ತ್ರಿಗಳು ಬಹುಶೃತ ವಿದ್ವಾಂಸರು. ಗಮಕಿ, ಹರಿಕಥಾ ವಿದ್ವಾಂಸರು ಹಾಗೂ ಕವಿಗಳೂ ಕೂಡ. ಆರ್‌.ಕೆ. ಶ್ರೀಕಂಠನ್‌ ಅವರಿಗೆ ತಂದೆಯೇ ಮೊದಲ ಗುರು. ನಂತರ ಅಣ್ಣ  ಆರ್‌.ಕೆ. ವೆಂಕಟರಮಣ ಶಾಸ್ತ್ರಿ ಗುರುವಾದರು. ಅಣ್ಣನ ಆಶ್ರಯದಲ್ಲಿ ಶ್ರೀಕಂಠನ್‌ ಅಪಾರ ಜ್ಞಾನ ಸಂಪಾದನೆ ಮಾಡಿಕೊಂಡರು.

ಆರ್‌.ಕೆ. ಶ್ರೀಕಂಠನ್‌ ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬರುವ ವಿದ್ವಾಂಸರು. ವಾಲಾಜಪೇಟೆ ವೆಂಕಟರಮಣ ಭಾಗವತರು ತ್ಯಾಗರಾಜರ ನೇರ ಶಿಷ್ಯರು. ಮೈಸೂರು ಸದಾಶಿವರಾಯರು ಭಾಗವತರ ಶಿಷ್ಯರು. ರಾಯರ ಶಿಷ್ಯರು ವೀಣೆ ಶೇಷಣ್ಣ ಹಾಗೂ ಸುಬ್ಬಣ್ಣ. ಶೇಷಣ್ಣರಿಗೆ ಶ್ರೀಕಂಠನ್‌ ಅವರ ಅಣ್ಣ ವೆಂಕಟರಮಣ ಶಾಸ್ತ್ರೀ ಶಿಷ್ಯರು. ಅಣ್ಣನ ಶಿಷ್ಯರು ಆರ್‌.ಕೆ. ಶ್ರೀಕಂಠನ್‌. ಅವರ ಮೂಲ ಮೂಲಪುರುಷನಲ್ಲಿಗೇ ಹೋಗಿ ನಿಲ್ಲುತ್ತದೆ.

ನೀವು ಬಹಳ ಸಾಧಿಸಿದ್ದೀರಿ' ಎಂದು ಯಾರಾದರೂ ಶ್ರೀಕಂಠನ್‌ ಅವರಿಗೆ ಹೇಳಿದರೆ, ವಿಜ್ಞಾನಿ ಐಸಾಕ್‌ ನ್ಯೂಟನ್‌ ಹೇಳಿದ ಮಾತು ಹೇಳಿ ಚಕಿತಗೊಳಿಸುತ್ತಿದ್ದರು. “ನಾನೊಬ್ಬ ಪುಟ್ಟ ಮಗು. ವಿಜ್ಞಾನ ಸಾಗರದ ದಂಡೆಯಲ್ಲಿ ಕಲ್ಲುಗಳನ್ನು ಆಯ್ದುಕೊಂಡು ಆಟವಾಡುತ್ತಿದ್ದೇನೆ” ಎಂಬ ನ್ಯೂಟನ್ನನ ಈ ಮಾತು ನನಗೂ ಅನ್ವಯಿಸುತ್ತದೆ. ಸಂಗೀತದಿಂದ ದೊಡ್ಡವರು ಮಳೆ ತರಿಸಿದ್ದಾರೆ. ಸುರಿಯುವ ಮಳೆಯನ್ನು ತಡೆದು ನಿಲ್ಲಿಸಿದ್ದಾರೆ. ಕಗ್ಗಲ್ಲನ್ನು ಕರಗಿಸಿದ್ದಾರೆ. ನಾನೊಬ್ಬ ಪಾಮರ! ಇಂಥಾ ಮಹಾಕಾರ್ಯವನ್ನು ಮಾಡಬಲ್ಲೆನೆ ಎಂದು ಪ್ರಶ್ನಿಸುತ್ತಾ ಶ್ರೀಕಂಠನ್‌ ಧರೆಗಿಳಿದುಬಿಡುತ್ತಿದ್ದವರು.

ಕರ್ನಾಟಕ ಶಾಸ್ತ್ರೀಯ ಸಂಗೀತ ಪಿತಾಮಹ ಪುರಂದರ ದಾಸರ ಸಂಗೀತ ಬರೀ ಸಂಗೀತವಲ್ಲ. ಗುಣಾಕಾರ, ಭಾಗಾಕಾರಗಳ ಸ್ವರ ಸಂಯೋಜನೆಯಲ್ಲ.  ಅದೊಂದು ಮೌಲ್ಯ. ಆ ಮೌಲ್ಯವನ್ನು ಅರ್ಥ ಮಾಡಿಕೊಂಡವರು ಆರ್‌.ಕೆ. ಶ್ರೀಕಂಠನ್‌.  ಮಹಮದೀಯರ ದಾಳಿಯಿಂದ ಇಕ್ಕಟ್ಟಿಗೆ ಸಿಲುಕಿದ್ದ ಭಾರತೀಯ ಸನಾತನ ಧರ್ಮದ ಉಳಿವಿಗೆ ಪುರಂದರದಾಸರು ಸಾಮಾಜಿಕ ಬದಲಾವಣೆಯ ಅಸ್ತ್ರವಾಗಿ ಸರಳ ಸಂಗೀತವನ್ನು ಬಳಸಿದ್ದರು. ಇದು ಸಾಹಿತ್ಯ ಮನೋಧರ್ಮ ಸಂಗೀತವಾಗಿತ್ತು. ಇದನ್ನು ಅರ್ಥಮಾಡಿಕೊಂಡ ಶ್ರೀಕಂಠನ್‌ ಪುರಂದರದಾಸರ ನೂರಾರು ಕೀರ್ತನೆ, ದೇವರ ನಾಮಗಳಿಗೆ ಮಟ್ಟು ಹಾಕಿದ್ದಾರೆ. ಸ್ಕ್ರಿಪ್ಟ್‌ ಇಲ್ಲದ, ಕೇವಲ ಕರ್ಣ ಪರಂಪರೆಯಿಂದ ಬಂದ ಕೃತಿಗಳಿಗೆ ಅಂತಿಮ ರೂಪ ಕೊಟ್ಟಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಪುರಂದರದಾಸರ ಕೃತಿಗಳನ್ನೇ ಇಟ್ಟುಕೊಂಡು ಹಲವು ಕಚೇರಿ ಮಾಡಿದ್ದಾರೆ. ನಾರಾಯಣ ನಿನ್ನ ನಾಮದ ಸ್ಮರಣೆಯ' ಈ ದೇವರ ನಾಮವನ್ನು ಶ್ರೀಕಂಠನ್‌ ದನಿಯಲ್ಲೇ ಕೇಳಿದರೆ ಚೆನ್ನ!

ಶ್ರೀಕಂಠನ್‌ ಕೇವಲ ಕಚೇರಿ ಕೊಡುವ ಕಲಾವಿದ ಮಾತ್ರವಲ್ಲ. ಅವರೊಬ್ಬ ಶ್ರೇಷ್ಠ ಸಂಗೀತ ಗುರು. ನಿತ್ಯ ಕಚೇರಿಗಳಿಂದ ಮಿಂಚುವ ಕಾಲದಲ್ಲೂ, ಬೇಡಿಕೆಯ ಕಾಲದಲ್ಲೂ, ವಿದೇಶಗಳಿಗೆ ಹೋದಾಗಲೂ ಅವರು ವಿದ್ಯಾದಾನ ಮರೆತಿರಲಿಲ್ಲ. ಪಾಠ ಮಾಡಿ ತಾವು ಗಟ್ಟಿಯಾದರು. ನೂರಾರು ವಿದ್ಯಾರ್ಥಿಗಳನ್ನು ಬೆಳೆಸಿದರು. ಈ ಸಾಧನೆ ಅವರ ಅಳಿಸಲಾಗದ ಗುರುತು. ಇದಕ್ಕೆ  ಎಂ.ಎಸ್‌. ಶೀಲಾ, ಟಿ.ಎಸ್‌. ಸತ್ಯವತಿ ಹಾಗೂ ತಮ್ಮ ಮಗ ಆರ್‌.ಎಸ್‌. ರಮಾಕಾಂತ್‌ ಮುಂತಾದವರೇ ಸಾಕ್ಷಿ.

ಸಂಗೀತ ವಿಚಾರ ಸಂಕಿರಣಗಳಲ್ಲಿ, ಕಾರ್ಯಾಗಾರಗಳಲ್ಲಿ ಆರ್‌.ಕೆ. ಶ್ರೀಕಂಠನ್‌ ಇದ್ದಾರೆ ಎಂದರೆ ಜನ ತುಂಬಿ ತುಳುಕುತ್ತಿದ್ದರು. ಅಷ್ಟರ ಮಟ್ಟಿನ ಮೌಲ್ಯ ಅವರ ಮಾತಿನಲ್ಲಿರುತ್ತಿತ್ತು. ಎಲ್ಲವನ್ನೂ ಶಾಸ್ತ್ರಬದ್ಧವಾಗಿ, ಸಾಕ್ಷ್ಯ ಸಮೇತವಾಗಿ, ಉದಾಹರಣೆಗಳ ಜತೆಯಾಗಿ ಉಣಬಡಿಸುತ್ತಿದ್ದರು. ವಿಚಾರ ಮಂಡನೆ ಕಬ್ಬಿನ ಜಲ್ಲೆಯನ್ನು ಅರೆದು, ಬಸಿದು ಸಿಹಿಹಾಲು ಕೊಡುವ ರೀತಿಯಲ್ಲಿ ಇರುತ್ತಿತ್ತು.

ಸಂಗೀತಕ್ಕೆ ಅತೀಂದ್ರಿಯ ಶಕ್ತಿ ಇದೆ ಎಂಬುದನ್ನು ಶ್ರೀಕಂಠನ್‌ ಬಲವಾಗಿ ನಂಬುತ್ತಿದ್ದರು. ಸುಸ್ವರ ಆಲಿಸಿದ ಖಗ ಮೃಗ ಪಕ್ಷಿಗಳು ತಲೆದೂಗುತ್ತವೆ ಎಂದರೆ ರೋಗ ವಾಸಿ ಮಾಡುವ ಗುಣ ಸಂಗೀತಕ್ಕಿದೆ. ಬಹಳ ಸರಳವಾಗಿ ಲಯವಿನ್ಯಾಸದ ಸಂಗೀತಕ್ಕೆ ರೋಗ ಗುಣಪಡಿಸುವ ಶಕ್ತಿ ಇದೆ ಎಂದು ಶ್ರೀಕಂಠನ್‌ ಸದಾ ಹೇಳುತ್ತಿದ್ದರು.

ತಮ್ಮ 14ನೇ ವಯಸ್ಸಿನಲ್ಲಿ ವೇದಿಕೆ ಹತ್ತಿದ ಶ್ರೀಕಂಠನ್‌ ಇತ್ತೀಚಿನವರೆಗೂ  ದಣಿದಿರಲಿಲ್ಲ. ಹಲವು ಘಟ್ಟಗಳನ್ನು ಮುಟ್ಟಿ ಬಂದಿದ್ದರು. ಹೊಗಳಿಕೆಗೆ ಹಿಗ್ಗಲಿಲ್ಲ. ತೆಗಳಿಕೆಗೆ ಕುಗ್ಗಲಿಲ್ಲ. ಶಾಂತಮೂರ್ತಿಯಾಗಿ ತಮ್ಮ ಸ್ವರಸಾಗರದಿಂದ ವಿಶ್ವವನ್ನು ಗೆದ್ದರು. ಸೌಂಧರ್ಯದ ಅನುಭೂತಿ ಮಾಡಿಕೊಂಡಿದ್ದರು. ಪ್ರಶಸ್ತಿ, ಮನ್ನಣೆಗಳನ್ನೂ ಮೀರಿ ಎತ್ತರಕ್ಕೆ ತಲುಪಿದರು.

ತಮ್ಮ ಕೊನೆಯ ದಿನಗಳವರೆವಿಗೆ ಸಂಗೀತವನ್ನೇ ತಪಸ್ಸಾಗಿಸಿಕೊಂಡಿದ್ದ ಈ ಮಹಾನುಭಾವರು ಫೆಬ್ರುವರಿ 17, 2014ರಂದು ಈ ಲೋಕವನ್ನಗಲಿದರು.

ಈ ಮಹಾನ್ ಸಂಗೀತದ ಆತ್ಮಕ್ಕೆ ನಮ್ಮ ಸಾಷ್ಟಾಂಗ ನಮನ. 


ಮಾಹಿತಿ ಕೃಪೆ: ಯೋಗೇಶ್ ಮಾರೇನಹಳ್ಳಿ,  http://yogeshmarenahalli.blogspot.com

Tag: R. K Srikantan

ಕಾಮೆಂಟ್‌ಗಳಿಲ್ಲ: