ಭಾನುವಾರ, ಸೆಪ್ಟೆಂಬರ್ 1, 2013

ಟೋನಿ ಗ್ರೇಗ್

ಟೋನಿ ಗ್ರೇಗ್
--ಚಂದ್ರಮೌಳಿ ಕಣವಿ (ಕ್ರಿಕೆಟ್ ವಿಶ್ಲೇಷಕರು)

ಟೋನಿ ಗ್ರೇಗ್ 1972ರಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದು ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದಾಗಿನಿಂದ ಅವರ ಆಟದ ವೈಖರಿ ಬಗ್ಗೆ ಓದುತ್ತಾ, ವೀಕ್ಷಕ ವಿವರಣೆ ಕೇಳುತ್ತಾ ಬೆಳೆದ ನಾನು, 1996ರ ವಿಶ್ವಕಪ್‌ನ ಪಂದ್ಯವೊಂದು ಬೆಂಗಳೂರಿನಲ್ಲಿ ನಡೆದಾಗ ಅವರನ್ನು ಭೇಟಿಯಾಗಿ ಮಾತನಾಡಿದ್ದೆ. ಆಗ ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಟಿ.ವಿ. ವೀಕ್ಷಕ ವಿವರಣೆ ಕೊಠಡಿ ಬಹಳ ಚಿಕ್ಕದಿತ್ತಲ್ಲದೆ, ಕೊಠಡಿಯ ಮಧ್ಯೆ ಮೇಲುಗಡೆ ಉದ್ದನೆಯ ಹಲಗೆಯೊಂದು ಅಡ್ಡವಾಗಿ ನೇತುಬಿದ್ದಿತ್ತು. ಆರು ಅಡಿ ಆರು ಇಂಚು ಎತ್ತರದ ಗ್ರೇಗ್ ಒಳಗೆ ಬಂದಾಗ ಆ ಹಲಗೆ ಅವರ ತಲೆಗೆ ತಾಗಿತು. ನೆತ್ತಿಯಲ್ಲಿ ಗಾಯವಾಯಿತು. ತಕ್ಷಣ ಅಲ್ಲೇ ಇದ್ದ ನಾನು ಕೆಎಸ್‌ಸಿಎ ಕಚೇರಿಯೊಳಗೆ ಹೋಗಿ ಅಲ್ಲಿದ್ದ `ಟಿಂಚರ್' ಮತ್ತು ಹತ್ತಿಯನ್ನು ತಂದು ಕೊಟ್ಟೆ. ಅವರು ನನ್ನನ್ನು ನೋಡಿ ಮುಗುಳ್ನಕ್ಕು ಆತ್ಮೀಯತೆಯಿಂದ    `ಥ್ಯಾಂಕ್ಸ್' ಎಂದಿದ್ದರು.

ತಮ್ಮ ವಿಶಿಷ್ಟ ಶೈಲಿಯ ಆಟ, ದಿಟ್ಟ ಮತ್ತು ಛಲದ ನಾಯಕತ್ವದಿಂದಾಗಿ ಎಪ್ಪತ್ತರ ದಶಕದಲ್ಲಿ ಕ್ರಿಕೆಟ್ ಲೋಕದ ತಾರೆಯಾಗಿ ಹೊಳೆದ ಗ್ರೇಗ್ ನಂತರದ ದಿನಗಳಲ್ಲಿ ಕೆರ್ರಿ  ಪ್ಯಾಕರ್ ಜತೆಗೂಡಿ ವಿಶ್ವ ಸರಣಿಯ ಕ್ರಿಕೆಟ್ ಆರಂಭಿಸಿ ವಿವಾದದ ಕೇಂದ್ರಬಿಂದುವಾಗಿದ್ದರು.  ಕೋರ್ಟ್‌ನ ಮೆಟ್ಟಲೇರಿ ಹೋರಾಡಿ ಅದಕ್ಕೆ ಮಾನ್ಯತೆ ಪಡೆದು ಕ್ರಿಕೆಟ್ ಜಗತ್ತಿನಲ್ಲಿ ಕ್ರಾಂತಿಗೆ ಕಾರಣರಾದರು. ಆ ನಂತರ ಸಿಡ್ನಿಯಲ್ಲಿಯೇ ನೆಲೆಸಿದರು. ಕಳೆದ ಮೂರು ದಶಕಗಳಿಂದ ಗ್ರೇಗ್ ಆಸ್ಟ್ರೇಲಿಯಾದ `ಚಾನೆಲ್ 9'ನ ವೀಕ್ಷಕ ವಿವರಣೆಗಾರರ ತಂಡದಲ್ಲಿದ್ದು ಹೆಸರುವಾಸಿಯಾಗಿದ್ದುದೇ ಅಲ್ಲದೆ, ಕೆಲವು ವಿವಾದಗಳಿಗೂ ಸಿಲುಕಿದ್ದರು.

ಇಂಗ್ಲೆಂಡ್ ತಂಡ 1972-73ರಲ್ಲಿ ಭಾರತಕ್ಕೆ ಬಂದಿತ್ತು. ಆಗ ಮುಂಬೈನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ನಮ್ಮ ಜಿ.ಆರ್.ವಿಶ್ವನಾಥ್ ಶತಕ ಗಳಿಸಿದ್ದರು. ಅವರ ಅಂದಿನ ಆ ಮನಮೋಹಕ ಆಟದ ಶೈಲಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದ ಗ್ರೇಗ್ ಅವರು ಜಿಆರ್‌ವಿ ಶತಕ ಗಳಿಸುತ್ತಿದ್ದಂತೆಯೇ ಅವರನ್ನು ಎತ್ತಿ ಹಿಡಿದು ಅಭಿನಂದಿಸಿದ್ದನ್ನು ಮರೆಯಲು ಸಾಧ್ಯವೇ. 1974ರಲ್ಲಿ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ಪ್ರವಾಸದಲ್ಲಿತ್ತು. ಅದೊಂದು ಟೆಸ್ಟ್‌ನ ದಿನದ ಕೊನೆಯಲ್ಲಿ ಅಂಪೈರ್ `ಓವರ್' ಎಂದಿದ್ದರು. ಆಗ ಗ್ರೇಗ್ ಅವರು ಕಾಳಿಚರಣ್ ಅವರನ್ನು ರನೌಟ್ ಮಾಡಿ ವಿವಾದಕ್ಕೆ ಕಾರಣರಾಗಿದ್ದರು. 1976ರಲ್ಲಿ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್‌ಗೆ ಹೋಗಿತ್ತು. ಆಗ ಗ್ರೇಗ್ ‘We will make them grovel’ ಎಂದು  ಹೇಳಿಕೆ ನೀಡಿದಾಗ ಲಾಯ್ಡ ನಾಯಕತ್ವದ ವಿಂಡೀಸ್ ತಂಡ ಕುಪಿತಗೊಂಡಿತ್ತು. ಆ ಸಲ ವಿಂಡೀಸ್ 3-0ಯಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಸೇಡು ತೀರಿಸಿಕೊಂಡಿತ್ತು. ಆ ಸೋಲಿಗೆ ಗ್ರೇಗ್ ಹೇಳಿಕೆಯೇ ಕಾರಣ ಎಂಬ ವಾದ ಎಲ್ಲೆಡೆ ಕೇಳಿ ಬಂದಿತ್ತು.

ಗ್ರೇಗ್ ಹಲವು ಸಲ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮತ್ತು ಮಧ್ಯಮ ವೇಗದ ಬೌಲಿಂಗ್‌ನೊಂದಿಗೆ ತಂಡವನ್ನು ಗೆಲ್ಲಿಸಿದ್ದಾರೆ. ಜತೆಗೆ ಸಹಕರಿಸುವಂತಹ ಪಿಚ್ ಇದ್ದರೆ ಆಫ್ ಸ್ಪಿನ್ ಸಾಹಸವನ್ನೂ ಮಾಡುತ್ತಿದ್ದರು. 2008ರಲ್ಲಿ ಭಾರತದಲ್ಲಿ ಉದ್ಯಮಿ ಸುಭಾಶ್‌ಚಂದ್ರ ಅವರು ಐಸಿಎಲ್ ಆರಂಭಿಸಿದಾಗ ಅವರಿಗೆ ಟೋನಿ ಗ್ರೇಗ್ ಹೆಗಲು ನೀಡಿದ್ದರು. ಆಗಿನ್ನೂ ಐಪಿಎಲ್ ಶುರುವಾಗಿರಲಿಲ್ಲವೆನ್ನಿ. ಹೀಗಾಗಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಕಾರಣದಿಂದಲೇ ಗ್ರೇಗ್ ವೀಕ್ಷಕ ವಿವರಣೆ ನೀಡಲು ಭಾರತಕ್ಕೆ ಬರುವುದೂ ಕಡಿಮೆಯಾಯಿತು. ಗ್ರೇಗ್ ಅವರ ವೀಕ್ಷಕ ವಿವರಣೆಯಲ್ಲಿ ಆಟದ ಕುರಿತ ಅನನ್ಯವಾದ ತಾಂತ್ರಿಕ ಜ್ಞಾನ, ಬಿಲ್ ಲಾರಿ ಅವರೊಂದಿಗೆ ಅವರು ನಡೆಸುತ್ತಿದ್ದ ಲಘು ವಾಗ್ವಾದ, ಕಾರು ಕೀಗಳನ್ನು ಚುಚ್ಚಿ ಪಿಚ್ ವರದಿ ಮಾಡುತ್ತಿದ್ದ ಭಂಗಿ ಇತ್ಯಾದಿಗಳನ್ನು ಯಾರೂ ಮರೆಯುವಂತಿಲ್ಲ. ಇಂತಹ ವಿಭಿನ್ನ  ಸಾಧಕನನ್ನು ಕಳೆದುಕೊಂಡ ಕ್ರಿಕೆಟ್ ಲೋಕ ನಿಜಕ್ಕೂ ಬಡವಾಗಿದೆ.

ಕೃಪೆ: ಪ್ರಜಾವಾಣಿ

Tag: Toney Greig

ಕಾಮೆಂಟ್‌ಗಳಿಲ್ಲ: